ಕಾರವಾರ: ದಿ ನ್ಯೂ ಇಂಡಿಯನ್ ಎಕ್ಸ್ ಪ್ರಸ್ ಉತ್ತರ ಕನ್ನಡ ಜಿಲ್ಲಾ ವರದಿಗಾರರಾದ ಸುಭಾಷ್ ಚಂದ್ರ ಎನ್.ಎಸ್ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅತ್ಯುತ್ತಮ ಮಾನವೀಯ ವರದಿಗಳಿಗೆ ನೀಡುವ ಪಟೇಲ್ ಭೈರಹನುಮಯ್ಯ ಪ್ರಶಸ್ತಿಗೆ ಸುಭಾಷ್ ಚಂದ್ರ ಅವರನ್ನು ಆಯ್ಕೆ ಮಾಡಲಾಗಿದೆ.
ಕಳೆದ 21 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು, ಮೂಲತಃ ಬೆಳಗಾವಿ ಜಿಲ್ಲೆಯ ಖಾನಾಪುರದವರು.
ಬೆಂಗಳೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು, ಪದವಿಯವರೆಗೂ ಕನ್ನಡದಲ್ಲೇ ಶಿಕ್ಷಣ ಪಡೆದಿದ್ದರು. 2000ರಲ್ಲಿ ಕನ್ನಡ ವಿದ್ಯುನ್ಮಾನ ಕ್ಷೇತ್ರದ ಮೂಲಕ ಮಾಧ್ಯಮ ರಂಗಕ್ಕೆ ಪಾದಾರ್ಪಣೆ ಮಾಡಿದರು.
ಈಟಿವಿ ಕನ್ನಡದಲ್ಲಿ ಹೈದರಾಬಾದ್‌ನಲ್ಲಿ ನಿರೂಪಕರಾಗಿ ಆಯ್ಕೆಯಾಗಿದ್ದ ಅವರು, ಕಾರ್ಯನಿರ್ವಹಿಸಿದ್ದು ವರದಿಗಾರರಾಗಿ.
ನಂತರದಲ್ಲಿ 2003ರಲ್ಲಿ ಪ್ರಥಮ ಬಾರಿಗೆ ವಿಜಯ ಟೈಮ್ಸ್ ಬೆಂಗಳೂರಿನಲ್ಲಿ ವರದಿಗಾರರಾಗಿ ಸೇರ್ಪಡೆಗೊಂಡು, ಅರಣ್ಯ, ಪರಿಸರ, ವಿದ್ಯುತ್, ಲೋಕಾಯುಕ್ತಕ್ಕೆ ಸಂಬಂಧಿಸಿದ ಸಾಕಷ್ಟು ವರದಿಗಳನ್ನು ಬರೆದರು.
2007ರಲ್ಲಿ ಹುಬ್ಬಳ್ಳಿಯಲ್ಲಿ ಇಂಡಿಯನ್ ಎಕ್ಸ್ ಪ್ರಸ್ ನ ಬ್ಯೂರೋ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ, ನಂತರ ಬಳ್ಳಾರಿ ಯಲ್ಲಿ ಕಾರ್ಯನಿರ್ವಹಿಸಿ 2020 ಕ್ಕೆ ಕಾರವಾರಕ್ಕೆ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತಿದ್ದಾರೆ.
ಪರಿಸರ ವರದಿಯಲ್ಲಿ ಸಿದ್ದ ಹಸ್ತರು.
ಹೈಕೋರ್ಟ್, ಪರಿಸರ, ವೈಜ್ಞಾನಿಕ ಮತ್ತು ರಾಜಕೀಯ ವರದಿಗಾರಿಕೆಗಾಗಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಬೆಂಗಳೂರು ವರದಿಗಾರರಾಗಿ ಸೇವೆ ಸಲ್ಲಿಸಿರುವ ಇವರು ಪರಿಸರ ಸಂಬಂಧಿಸಿದ ವರದಿ ಮಾಡುವಲ್ಲಿ ಸಿದ್ದ ಹಸ್ತರು.
ಆನೆಗಳ ಸಾವಿನ ಕುರಿತಂತೆ ಪ್ರಕಟವಾಗಿದ್ದ ಅವರ ಸರಣಿ ವರದಿಗೆ ಸಂಬಂಧಿಸಿ ಈಗಲೂ ಸುಮೊಟೊ ಪ್ರಕರಣ ಪಿಐಎಲ್ ಹೈಕೋರ್ಟ್ನಲ್ಲಿದೆ. ಇದಲ್ಲದೇ ಇವರ ಅನೇಕ ಪರಿಸರ ವರದಿಗಳು ಸಮಾಜದಲ್ಲಿ ಹಲವು ಬದಲಾವಣೆ ತರುವಲ್ಲಿ ಮುಖ್ಯ ಪಾತ್ರ ವಹಿಸಿದೆ.
ಪ್ರಶಸ್ತಿಗಳು.
ಬಳ್ಳಾರಿ ಜಿಲ್ಲೆಯ ಉಜಿನಿ ಪೀಠದಿಂದ ‘ಸಧರ್ಮ ಪ್ರಸಾರ ರತ್ನ’ ಪ್ರಶಸ್ತಿಯನ್ನು ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಪಡೆದಿರುವ ಸುಭಾಷ್ ಚಂದ್ರ ಅವರಿಗೆ 2019ರಲ್ಲಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಕೂಡ ದೊರೆತಿದೆ. ಇದರೊಂದಿಗೆ ಅನೇಕ ಗೌರವ- ಸಮ್ಮಾನಗಳಿಗೂ ಅವರು ಭಾಜನರಾಗಿದ್ದಾರೆ.