ಕಾರವಾರ :- ಕಾರವಾರ ತಾಲೂಕಿನ ಮಲ್ಲಾಪುರ ಗ್ರಾ.ಪಂ.ವ್ಯಾಪ್ತಿಯ ಮಲ್ಟಿಯಲ್ಲಿ ವಾಸವಾಗಿರುವ ಕೈಗಾದ ಸಿಬ್ಬಂದಿಯೋರ್ವರ ಪುತ್ರ ರವಿವಾರದಂದು ತನ್ನ ಸ್ನೇಹಿತರೊಂದಿಗೆ ಕಾಳಿನದಿಯಲ್ಲಿ ಈಜಾಡಲು ತೆರಳಿ ನಾಪತ್ತೆಯಾಗಿದ್ದು ಇಂದು ಆತನ ಶವ ಕಾಳಿ ನದಿಯಲ್ಲಿ ದೊರೆತಿದೆ.
8ನೇ ತರಗತಿಯಲ್ಲಿ ಓದುತ್ತಿದ್ದ ನಿಶಾಂತ್ (14) ಎಂಬ ಬಾಲಕ ತನ್ನಿಬ್ಬರು ಸ್ನೇಹಿತರೊಂದಿಗೆ ಈಜಾಡಲು ಕಾಳಿನದಿಗೆ ತೆರಳಿದ್ದ. ಈ ವೇಳೆ ಈಜಾಡಲು ತೆರಳಿದ್ದ ಮೂವರಲ್ಲಿ ಇಬ್ಬರು ಹಿಂದೆ ಬಂದಿದ್ದರು.ಓರ್ವ ಮಾತ್ರ ಮರಳಿ ಬಂದಿರಲಿಲ್ಲ. ತದನಂತರ ಘಟನೆಯ ಮಾಹಿತಿಯನ್ನು ಬಾನುವಾರ ಸಂಜೆ ಮಲ್ಲಾಪುರ ಪೊಲೀಸ್ ಠಾಣೆಗೆ ತಿಳಿಸಲಾಗಿದೆ.ಸೋಮವಾರ ಬೆಳಿಗ್ಗೆಯಿಂದಲೇ ಕಾಳಿನದಿಯಲ್ಲಿ ಬಾಲಕನ ಹುಡುಕಾಟಕ್ಕೆ ತೀವ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಬೋಟಿನಲ್ಲಿ ಮಲ್ಲಾಪುರದಿಂದ ಕೆರವಡಿಯವರೆಗೆ ತೀವ್ರ ಶೋಧ ಕಾರ್ಯ ನಡೆಸಿದ್ದರೂ ಬಾಲಕನ ಸುಳಿವು ದೊರೆಯದ ಕಾರಣ, ಪೊಲೀಸ್ ಇಲಾಖೆಯವರು ನೌಕಾದಳದ ಈಜು ಪರಿಣಿತರನ್ನು ಕರೆಸಿದ್ದರು. ತೀವ್ರ ಶೋಧದ ನಂತರ ಇಂದು ಆತನ ಶವ ಪತ್ತೆಯಾಗಿದೆ.