BREAKING NEWS
Search

ಕಾರವಾರದಲ್ಲಿ ಆಫ್ರಿಕಾ ಮೂಲದ ದೇವರಿಗೆ ಮದ್ಯದ ಅಭಿಷೇಕ,ಸಿಗರೇಟು ಸೇವೆ

171

ಕಾರವಾರ: ದೇವರ ದರ್ಶನಕ್ಕೆ ಹೋಗುವವರು
ಸಾಮಾನ್ಯವಾಗಿ ದೇವರಿಗೆ ಹೂವು ,ಹಣ್ಣು, ತೆಂಗಿನಕಾಯಿ ,ಕರ್ಪೂರ,ಅಗರಬತ್ತಿ ತೆಗೆದುಕೊಂಡು ಹೋಗುವುದು ಸಾಮಾನ್ಯ .ಆದರೆ ಇಲ್ಲೊಂದು ದೇವರು ಮಾತ್ರ ಉಳಿದೆಲ್ಲ ದೇವರಿಗಿಂತ ಸಂಪೂರ್ಣ ಭಿನ್ನ. ಮತ್ತೇರಿಸುವ ವೆರೈಟಿ -ವೆರೈಟಿ ಮದ್ಯದಿಂದಲೇ ಈ ದೇವರಿಗೆ ಅಭಿಷೇಕ, ಬೀಡಿ-ಸಿಗರೇಟ್‌ನಿಂದಲೇ ಇಲ್ಲಿ ಆರತಿ ಬೆಳಗಲಾಗುತ್ತದೆ.

ಅರೇ ದೇವರನ್ನು ಈರೀತಿಯೂ ಆರಾಧಿಸುತ್ತಾರ ಎಂದು ಆಶ್ಚರ್ಯ ಆಗಬಹುದು. ಹೌದು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೋಡಿಭಾಗದಲ್ಲಿ ನಡೆಯುವ ಖಾಪ್ರಿ ದೇವರ ಜಾತ್ರೆಯಲ್ಲಿ ದೇವರ ಪೂಜೆ ನಡೆಯುವುದೇ ಈ ವಿಶೇಷ ವಸ್ತುಗಳಿಂದ.

ಜಾತ್ರೆಗಳಲ್ಲಿ ದೇವರಿಗೆ ಹಣ್ಣು- ಹಂಪಲುಗಳನ್ನು ನೈವೇದ್ಯ ಮಾಡುತ್ತಾರೆ. ಹಾಲಿನ ಅಭಿಷೇಕ, ಎಣ್ಣೆ, ಬೆಣ್ಣೆಯ ನೈವೇದ್ಯ ಸಹ ಮಾಡಲಾಗುತ್ತದೆ. ಆದರೆ, ಈ ಖಾಪ್ರಿ ದೇವರ ಜಾತ್ರೆ ಮಾತ್ರ ವಿಭಿನ್ನವಾಗಿ ನಡೆಯುತ್ತದೆ. ಪ್ರತಿ ವರ್ಷ ಮಾರ್ಚ ತಿಂಗಳಲ್ಲಿ ನಡೆಯುವ ಈ ಜಾತ್ರೆಯಲ್ಲಿ ಸಾವಿರಾರು ಭಕ್ತರು ರಾಜ್ಯ ಹೊರ ರಾಜ್ಯದಿಂದ ಆಗಮಿಸಿ ಖಾಪ್ರಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಹರಕೆ ಕಟ್ಟಿಕೊಂಡು ಬಂದಂತಹ ಭಕ್ತರು ಸಿಗರೇಟು, ಕ್ಯಾಂಡಲ್‌ನಿಂದ ಆರತಿ ಮಾಡೋದರ ಜೊತೆಗೆ ಮದ್ಯದಿಂದಲೇ ದೇವರಿಗೆ ಅಭಿಷೇಕವನ್ನು ಮಾಡುತ್ತಾರೆ. ಇದರ ಜೊತೆ ದೇವರಿಗೆ ಕೋಳಿ,ಕುರಿ ಬಲಿಯನ್ನು ಕೊಟ್ಟು ರಕ್ತದ ನೈವೇದ್ಯ ಸಹ ಮಾಡುತ್ತಾರೆ.

ಆಫ್ರಿಕಾ ಮೂಲದ ಕ್ರಿಶ್ಚಿಯನ್ ವ್ಯಕ್ತಿ ದೈವವಾದ!

ಖಾಪ್ರಿ ದೇವರು ಆಫ್ರಿಕಾ ಮೂಲದ ವ್ಯಕ್ತಿ ಎಂಬ ಇತಿಹಾಸವಿದೆ. ಆಫ್ರಿಕಾ ದಿಂದ ಖಾಪ್ರಿ ಎಂಬ ವ್ಯಕ್ತಿಯೊಬ್ಬ 300 ವರ್ಷಗಳ ಹಿಂದೆ ಕಾರವಾರ ನಗರದ ಕಾಳಿ ಸಂಗಮ ಪ್ರದೇಶಕ್ಕೆ ಬಂದು ಇಲ್ಲಿಯೇ ನೆಲಸಿ ಹಿಂದೂ ದೇವರನ್ನ ಪೂಜಿಸುತ್ತಿದ್ದನಂತೆ. ಬಳಿಕ ಇದ್ದಕ್ಕಿದ್ದಂತೆ ಒಂದು ದಿನ ಕಣ್ಮರೆಯಾದನಂತೆ. ನಂತರ ಇಲ್ಲಿನ ಪರಸಪ್ಪ ಮನೆತನದವರಿಗೆ ಇದೇ ಜಾಗದಲ್ಲಿ ಕೆಲಸ ಮಾಡುವಾಗ ದೇವರ ಕಲ್ಲು ಗೋಚರವಾಗಿತ್ತಂತೆ. ನಂತರ ಕನಸ್ಸಿನಲ್ಲೂ ದೇವರು ಬಂದು ತನಗೆ ಕೋಳಿ ನೈವೇದ್ಯ ಮಾಡು ಎಂದು ಕೇಳಿಕೊಂಡಿದ್ದರಿಂದ, ನೈವೇದ್ಯ ಇಡುವ ಜೊತೆಗೆ ದೇವಸ್ಥಾನವನ್ನು ಕಟ್ಟಲಾಯಿತಂತೆ.

ನೂರಾರು ವರ್ಷಗಳಿಂದ ಈ ಜಾತ್ರೆಯ ಆಚರಣೆಯು ನಡೆಯುತ್ತಾ ಬಂದಿದ್ದು, ಪ್ರತಿ ವರ್ಷ ಇದೇ ರೀತಿ ದೇವರಿಗೆ ಫಲ-ಪುಷ್ಪ, ಹಣ್ಣು- ಕಾಯಿಯಯನ್ನು ಸಮರ್ಪಿಸುವ ಜೊತೆಗೆ ಸಾರಾಯಿ, ಸಿಗರೇಟ್, ಕುರಿ,ಕೋಳಿ ಅರ್ಪಿಸುತ್ತಾರೆ. ಅಲ್ಲದೇ ಹೆದ್ದಾರಿಗೆ ಹೊಂದಿಕೊಂಡೆ ಈ ದೇವರು ಇದ್ದು, ದೇವಸ್ಥಾನವಾದ ಬಳಿಕ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಸಹ ಕಡಿಮೆಯಾಗಿದೆ ಅನ್ನೋದು ಭಕ್ತರ ಮಾತು.

ವಿದೇಶಿ ಮೂಲದ ವ್ಯಕ್ತಿಯೊಬ್ಬ ತನ್ನ ಉತ್ತಮ ಗುಣದಿಂದ ಜನರ ಮನಸ್ಸಿನಲ್ಲಿ ನೆಲೆಯೂರಿ ದೈವದ ರೂಪ ಪಡೆದು ಇಂದಿಗೂ ಜನರ ಆರಾಧ್ಯ ದೈವವಾಗಿ ಪೂಜೆ ಗೊಳಗಾಗುತ್ತಿರುವುದು ವಿಶೇಷವಾದ್ರೆ,ಈ ದೈವಕ್ಕೆ ಹಣ್ಣುಕಾಯಿ ಬದಲು ಮದ್ಯ,ಸಿಗರೇಟು ನೀಡುವ ಮೂಲಕ ವಿಶಿಷ್ಟ ಸಂಪ್ರದಾಯ ಬೆಳದು ಬಂದಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!