ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಗೋಕರ್ಣ ಸುತ್ತ ಮುತ್ತಲಿನ ಪರಿಸರದಲ್ಲಿ ನಡೆದ ಮನೆ ಕಳ್ಳತನ,ಶಾಲೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ 8 ಜನ ಆರೋಪಿಗಳನ್ನು ಗೋಕರ್ಣದಲ್ಲಿ ಬಂಧಿಸಿದ ಪೊಲೀಸರು ಲಕ್ಷಾಂತರ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅಂಕೋಲಾ ತಾಲೂಕಿನ ಬೊಬ್ರವಾಡ ಗ್ರಾಮದ ನಿವಾಸಿ ಪ್ರಶಾಂತ ಕಿಶೋರ ನಾಯ್ಕ (23)
ತೆಂಕಣಕೇರಿ ನಿವಾಸಿ ಹರ್ಷ ನಾಗೇಂದ್ರ ನಾಯ್ಕ (22) ಕೇಣಿ ನಿವಾಸಿ ರಾಹುಲ್ ಕೃಷ್ಣಾನಂದ ಬಂಟ (22) ಶಿರಕುಳಿ ನಿವಾಸಿ ಗಣೇಶ ಮಾರುತಿ ನಾಯ್ಕ (24) ಶಿರಸಿ ಕಸ್ತೂರ್ಬಾ ನಗರ ನಿವಾಸಿಗಳಾದ ಶ್ರೀಕಾಂತ ಗಣಪತಿ ದೇವಾಡಿಗ (27) ನಿಹಾಲ ಗೋಪಾಲಕೃಷ್ಣ ದೇವಳಿ (26) ಸಂದೀಪ ಹನುಮಂತ ಮರಾಠಿ (25) ಮತ್ತು ಬಂಗಾರದ ಆಭರಣಗಳನ್ನು ಖರೀದಿಸುತ್ತಿದ್ದ ಶಿರಸಿ ಬನವಾಸಿ ರಸ್ತೆಯ ಅಶೋಕ ರಾಯ್ಕರ್ (40) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರು ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 5, ಅಂಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 11 ಹಾಗೂ ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2 ಪ್ರಕರಣಗಳು ಸೇರಿದಂತೆ ಒಟ್ಟು 18 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.
19 ಲಕ್ಷ ಮೌಲ್ಯದ ಸ್ವತ್ತು ವಶ

ಬಂಧಿತ ಆರೋಪಿಗಳಿಂದ 351 ಗ್ರಾಂ ಬಂಗಾರದ ಆಭರಣ, 1 ಕೆ.ಜಿ ಬೆಳ್ಳಿ ಆಭರಣ, 5 ಗ್ಯಾಸ್ ಸಿಲೆಂಡರ್, 8 ಮೊಬೈಲ್ ಪೋನ್ ಗಳು, 3 ಬೈಕುಗಳು 1 ಏರ್ ಗನ್ ಸೇರಿದಂತೆ 19 ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ್, ಭಟ್ಕಳ ಡಿ.ವೈ.ಎಸ್. ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ಕುಮಟಾ ಸಿ.ಪಿ.ಐ ಶಿವಪ್ರಕಾಶ ನಾಯ್ಕ, ಗೋಕರ್ಣ ಪಿ.ಎಸ್.ಐ ನವೀನ್ ನಾಯ್ಕ, ಅಂಕೋಲಾ ಪಿ.ಎಸ್. ಐ ಪ್ರವಿಣಕುಮಾರ್ ಮತ್ತು ಗೋಕರ್ಣ, ಅಂಕೋಲಾ ಪೊಲೀಸ್ ಠಾಣೆ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಇತ್ತೀಚಿನ ದಿನಗಳಲ್ಲಿ ಹೆಚ್ಚಿರುವ ಕಳ್ಳತನದ ಪ್ರಕರಣಗಳ ಆರೋಪಿಗಳನ್ನು ಪತ್ತೆ ಹೆಚ್ಚಿಸುವಲ್ಲಿ ಕೋವೀಡ್ ಸಂಬಂಧಿಸಿದ ಸೇವೆಗಳ ನಡುವೆಯೂ ನಮ್ಮ ಪೊಲೀಸ್ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ,
ಆರೋಪಿಗಳೆಲ್ಲ ಯುವಕರೇ ಆಗಿದ್ದು ಅಪರಾಧ ಮಾಡಿದವರು ಯಾರೂ ಹೆಚ್ಚಿನ ಕಾಲ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ಪಾಠವಾಗಬೇಕು.ಪೊಲೀಸ್ ಸಿಬ್ಬಂದಿಗಳ ಕಾರ್ಯ ಅಭಿನಂದನಾರ್ಹವಾಗಿದ್ದು ಸೂಕ್ತ ಬಹುಮಾನ ಘೋಷಿಸುತ್ತಿದ್ದೇವೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹೇಳಿದರು.