ಕಾರವಾರ :- ಹೋಳಿ ಹಬ್ಬ ಹಿನ್ನಲೆಯಲ್ಲಿ ಮುಂಜಾನೆಯಿಂದ ಸಂಜೆ ವರೆಗೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತೀರದಲ್ಲಿ ಸೋಮವಾರ ಸಂಪೂರ್ಣ ನಿರ್ಬಂಧ ಹೇರಲಾಗಿದೆ ಎಂದು ಕಾರವಾರದ ಸಹಾಯಕ ಕಮೀಷಿನರ್ ವಿದ್ಯಾಶ್ರೀ ಚಂದರಗಿ ಮಾಹಿತಿ ನೀಡಿದ್ದಾರೆ.
ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು , ಕರೋನಾ ಅಲೆ ಹೆಚ್ಚಾದ ಹಿನ್ನಲೆಯಲ್ಲಿ ಜಿಲ್ಲೆಯ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರ, ಗೋಕರ್ಣ ಕಡಲತೀರ,ಮುರಡೇಶ್ವರ ಕಡಲತೀರದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಜನ ಗುಂಪು ಸೇರುವುದು ,ಸಮುದ್ರದಲ್ಲಿ ಸ್ನಾನ ಮಾಡುವುದಕ್ಕೆ ನಿರ್ಬಂಧ ಹೇರಲಾಗಿದೆ.
ಆದೇಶ ಉಲ್ಲಂಘಿಸಿದವರಿಗೆ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಹಾಗೂ ಸಾಂಕ್ರಾಮಿಕ ರೋಗ ತಡೆ ಕಾಯ್ದೆ 1897 ಮತ್ತು ಭಾರತೀಯ ದಂಡ ಸಂಹಿತೆ 188 ಅಡಿ ಉಲ್ಲಂಘನೆ ವಿರುದ್ಧ ಕ್ರಮಕ್ಕೆ ಸೂಚನೆ ಮಾಡಲಾಗಿದ್ದು , ಕಡಲ ತೀರದಲ್ಲಿ ಸೋಮವಾರ ಸಾರ್ವಜನಿಕರು ಬಾರದಂತೆ ಪೊಲೀಸ್ ಬಿಗಿ ವ್ಯವಸ್ಥೆಗೆ ಸೂಚನೆ ನೀಡಲಾಗಿದೆ ಎಂದರು.
ಸೋಮವಾರ ಹೋಳಿ ಹಬ್ಬದ ಹಿನ್ನಲೆಯಲ್ಲಿ ಕರಾವಳಿ ಭಾಗದಲ್ಲಿ ಸಮುದ್ರ ಸ್ನಾನ ಮಾಡುವ ಪದ್ಧತಿ ಇರುವುದರಿಂದ ಕಡಲತೀರದಲ್ಲಿ ಅತೀ ಹೆಚ್ಚು ಜನರು ಸೇರುತ್ತಾರೆ.
ಇದಲ್ಲದೇ ಸರಣಿ ರಜೆ ಹಿನ್ನಲೆಯಲ್ಲಿ ಪ್ರವಾಸಿಗರು ಸಹ ಕರಾವಳಿ ಭಾಗದಲ್ಲಿ ಬರುವುದರಿಂದ ಜನ ದಟ್ಟಣೆ ಹೆಚ್ಚಾಗುವುದರಿಂದ ಕರೋನಾ ಹೆಚ್ಚುವ ಆತಂಕ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದು , ಸೋಮವಾರ ಮಾತ್ರ ಈ ನಿರ್ಬಂಧ ಇರುವುದಾಗಿ ಸಹಾಯಕ ಕಮಿಷಿನರ್ ತಿಳಿಸಿದ್ದಾರೆ.