ಉತ್ತರ ಕನ್ನಡ : ದಕ್ಷಿಣ ಭಾರತದ ಜಾಗೃತ ಶಕ್ತಿಪೀಠಗಳಲ್ಲಿ ಒಂದಾಗಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆ ಮಾರ್ಚ್ 15 ರಿಂದ 23ರ ವರೆಗೆ ಜರುಗಲಿದೆ.
ಇಂದು ದೇವಾಲಯದಲ್ಲಿ ನಡೆದ ಜಾತ್ರಾ ಮುಹೂರ್ತ ನಿಗದಿ ಸಭೆಯಲ್ಲಿ ಅರ್ಚಕ ರಾಮಕೃಷ್ಣ ಭಟ್ಟ ಕೆರೆಕೈ ಜಾತ್ರೆಯ ದಿನಾಂಕ ಘೋಷಿಸಿದರು. ಪ್ಲವನಾಮ ಸಂವತ್ಸರದ ಫಾಲ್ಗುಣ ಶುಕ್ಲ ದ್ವಾದಶಿಯಂದು ಜಾತ್ರೆ ಆರಂಭವಾಗಲಿದೆ.
ಜಾತ್ರೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ಅಜಯ ನಾಡಿಗ ಮುಹೂರ್ತ ದೀಪ ಬೆಳಗಿದರು. ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಲಾಯಿತು.
ಜ.26 ರಿಂದ ಜಾತ್ರಾ ವಿಧಿವಿಧಾನ
ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದ ಪೂರ್ವ ವಿಧಿ–ವಿಧಾನಗಳು ಜ.26 ರಿಂದ ಪ್ರಾರಂಭವಾಗಲಿವೆ. ಜ.26 ರಂದು ದೇವಿಯ ಪ್ರತಿಷ್ಠಾ ಮಂಟಪ ಕಳಚುವುದು, ಫೆ.22 ರಂದು ಪೂರ್ವದಿಕ್ಕಿಗೆ ಮೊದಲ ಹೊರಬೀಡು, ಫೆ.25ರಂದು ಉತ್ತರ ದಿಕ್ಕಿಗೆ 2ನೇ ಹೊರಬೀಡು, ಮಾ.1 ರಂದು ಪೂರ್ವ ದಿಕ್ಕಿಗೆ 3ನೇ ಹೊರಬೀಡು, ಮಾ.4ರಂದು ರಥ ಕಟ್ಟಲು ಮರ ಕಡಿಯಲು ಹೋಗುವುದು, ಅದೇ ದಿನ ಉತ್ತರ ದಿಕ್ಕಿಗೆ 4ನೇ ಹೊರಬೀಡು, ಮಾ.8 ರಂದು ರಥದ ಮರ ತರುವುದು, ಅದೇ ದಿನ ರಾತ್ರಿ ಪೂರ್ವದಿಕ್ಕಿಗೆ ಅಂಕೆಯ ಹೊರಬೀಡು ನಡೆಯಲಿದೆ. ಮಾ.9 ರಂದು ಅಂಕೆ ಹಾಕುವುದು, ದೇವಿಯ ವಿಸರ್ಜನೆ ನಡೆಯಲಿದೆ.
ಮಾರ್ಚ್ 15ರ ಮಧ್ಯಾಹ್ನ 12.21 ರಿಂದ 12.33ರ ಒಳಗೆ ಗಂಟೆಯಿಂದ ದೇವಿಯ ರಥದ ಕಲಶದ ಪ್ರತಿಷ್ಠೆ ಹಾಗೂ ರಾತ್ರಿ 11.18 ರಿಂದ 11.27ರವರೆಗೆ ಸಭಾ ಮಂಟಪದಲ್ಲಿ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ ನಡೆಯಲಿದೆ. ಮಾರ್ಚ್ 16 ರಂದು ಬೆಳಿಗ್ಗೆ 7.04 ಗಂಟೆಯಿಂದ ದೇವಿಯ ರಥಾರೋಹಣ ನಡೆಯಲಿದ್ದು, 8.36ರ ಗಂಟೆಯೊಳಗೆ ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಜರುಗುವುದು. ಮಾ.17 ರಿಂದ ಭಕ್ತಾದಿಗಳ ಸೇವೆಗೆ ಅವಕಾಶವಿದೆ.
ಮಾರ್ಚ್ 23 ರಂದು ಬೆಳಿಗ್ಗೆ 9.33 ಗಂಟೆಗೆ ಜಾತ್ರೆ ಮುಕ್ತಾಯವಾಗಲಿದೆ. ಯುಗಾದಿಯಂದು ದೇವಿಯ ಪುನರ್ ಪ್ರತಿಷ್ಠೆ ನಡೆಯಲಿದೆ.