ಮುಂಡಗೋಡು-ಸ್ನಾನಕ್ಕೆ ತೆರಳಿದವನು ನೀರಿನಲ್ಲಿ ಮುಳಗಿ ಸಾವು.

ಮುಂಡಗೋಡು :- ಸ್ನಾನ ಮಾಡಲು ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಮದ ತುರ್ಮನೆ ಕೆರೆಯಲ್ಲಿ ಇಳಿದವನೋರ್ವ ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾನೆ.
ಚಿಗಳ್ಳಿಯ ಸುರೇಶ ಮಲ್ಲೇಶಪ್ಪ ಪವಾರ (45) ಮೃತ ವ್ಯಕ್ತಿ. ರೈತಾಪಿ ಕೆಲಸ ಮಾಡಿಕೊಂಡಿದ್ದ ಈತ
ನಿನ್ನೆ ಸ್ನಾನಕ್ಕೆಂದು ತುರ್ಮನೆ ಕೆರೆಗೆ ಹೋದವನು ಮರಳಿ ಬಂದಿರಲಿಲ್ಲ. ಇಂದು ಈತನ ಮೃತದೇಹ ಪತ್ತೆಯಾಗಿದೆ.
ಗ್ರಾಮಗಳ ಅಭಿವೃದ್ಧಿ ನನ್ನ ಗುರಿ- ರೂಪಾಲಿ ಎಸ್.ನಾಯ್ಕ.

ಕಾರವಾರ:- ನಾನು ಗ್ರಾಮಗಳ ಅಭಿವೃದ್ಧಿಗಾಗಿ ಇರುವ ಜನ ಸೇವಕಿ, ಜನಸೇವೆಗೆ ನಾನು ಸದಾ ಸಿದ್ಧ, ಗ್ರಾಮಗಳ ಅಭಿವೃದ್ಧಿಯ ಮೂಲಕ ಯುವ ಜನತೆಯ ಚಿತ್ತ ಗ್ರಾಮಗಳತ್ತ ಹೊರಳುವಂತೆ ಮಾಡಬೇಕಾಗಿದೆ. ಅದಕ್ಕಾಗಿ ರಸ್ತೆಗಳ ಅಭಿವೃದ್ಧಿ ನಡೆಯುತ್ತಿದೆ ಎಂದು ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ಶ್ರೀಮತಿ ರೂಪಾಲಿ ಎಸ್. ನಾಯ್ಕ ಅವರು ಹೇಳಿದರು.
ಕಾರವಾರ ತಾಲ್ಲೂಕಿನ ಅಸ್ನೋಟಿ, ಹಣಕೋಣ, ಘಾಡಸಾಯಿ ಹಾಗೂ ಚೆಂಡಿಯಾ ಗ್ರಾಮಗಳಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಅಸ್ನೋಟಿ ಗ್ರಾಮ ಪಂಚಾಯತಿ ಹೊಸಾಳಿ ಮಾರಿಂಗಣಿ ತೊರ್ಲೆಬಾಗ್ ರಸ್ತೆ ನಿರ್ಮಾಣ ಅಂದಾಜು ಮೊತ್ತ 60 ಲಕ್ಷ ರೂ ಕಾಮಗಾರಿ, ಅಸ್ನೋಟಿ ಗ್ರಾಮ ಪಂಚಾಯತಿ ಅರವಾದಿಂದ ಪಂಟಲಬಾಗ್ ರಸ್ತೆ ಅಂದಾಜು ಮೊತ್ತ 60 ಲಕ್ಷ ರೂ. ನಿರ್ಮಾಣ ಕಾಮಗಾರಿ, ಅಸ್ನೋಟಿ ಮುಖ್ಯ ರಸ್ತೆಯಿಂದ ಕಾಮಾಕ್ಷಿ ದೇವಸ್ಥಾನಕ್ಕೆ ಹೋಗುವ ರಸ್ತೆ ಅಂದಾಜು ಮೊತ್ತ 55 ಲಕ್ಷ ರೂ. ರಸ್ತೆ ನಿರ್ಮಾಣ ಕಾಮಗಾರಿ, ಹಣಕೋಣ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಟೆಗಾಳಿ ಬಂದರ ರಸ್ತೆ ಅಂದಾಜು ಮೊತ್ತ 125 ಲಕ್ಷ ರೂ. ನಿರ್ಮಾಣ ಕಾಮಗಾರಿ, ಹಣಕೋಣ ಗ್ರಾಮ ಪಂಚಾಯತ್ ಸಾತೇರಿ ದೇವಸ್ಥಾನ ರಸ್ತೆ ಅಂದಾಜು ಮೊತ್ತ 150 ಲಕ್ಷ ರೂ. ರಸ್ತೆ ನಿರ್ಮಾಣ ಕಾಮಗಾರಿ, ಹಣಕೋಣ ಸಕಲವಾಡ ರಸ್ತೆ ಅಂದಾಜು ಮೊತ್ತ 55 ಲಕ್ಷ ರೂ. ನಿರ್ಮಾಣ ಕಾಮಗಾರಿ, ಘಾಡಸಾಯಿ ಗ್ರಾಮ ಪಂಚಾಯತಿಯ ಹಳಗೆಜೂಗ ರಸ್ತೆಯ ಅಂದಾಜು ಮೊತ್ತ 55 ಲಕ್ಷ ರೂ. ನಿರ್ಮಾಣ ಕಾಮಗಾರಿ, ಘಾಡಸಾಯಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಘಾಡಸಾಯಿ ಪರತಾಳೆ ರಸ್ತೆಯ ಅಂದಾಜು ಮೊತ್ತ 55 ಲಕ್ಷ ರೂ. ನಿರ್ಮಾಣ ಕಾಮಗಾರಿ, ಘಾಡಸಾಯಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಬ್ರಾಯಿ ಉಳಗಾ ಕಾತ್ನೆಡೋಲ್ ರಸ್ತೆ ಅಂದಾಜು ಮೊತ್ತ 200ಲಕ್ಷ ರೂ. ಕಾಮಗಾರಿ, ಚೆಂಡಿಯಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಚೆಂಡಿಯಾ ರಸ್ತೆ ಅಂದಾಜು ಮೊತ್ತ 80 ಲಕ್ಷ ರೂ. ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.
ನಮ್ಮಲ್ಲಿಯ ಯುವ ಜನತೆ ಉದ್ಯೋಗಕ್ಕಾಗಿ ಬೇರೆ ಬೇರೆ ಕಡೆ ವಲಸೆ ಹೋಗುತ್ತಾರೆ. ಇದರಿಂದ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ಹೀಗಾಗಿ ಹಿರಿಯರು ಸಂಚಾರಕ್ಕೂ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆ ಹಲವು ಗ್ರಾಮಗಳು ರಸ್ತೆಯಿಂದ ವಂಚಿತವಾಗಿದ್ದವು. ತಮ್ಮ ಅವಧಿಯಲ್ಲಿ ಹಲವೆಡೆ ಮೊದಲ ಬಾರಿ ರಸ್ತೆಯನ್ನು ಮಾಡಲಾಗಿದೆ. ಗ್ರಾಮಗಳ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನಿಸುವುದಾಗಿ ಶ್ರೀಮತಿ ರೂಪಾಲಿ ಎಸ್.ನಾಯ್ಕ ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ, ಭಾರತೀಯ ಜನತಾ ಪಕ್ಷ ಕಾರವಾರ ಗ್ರಾಮೀಣ ಮಂಡಲ ಅಧ್ಯಕ್ಷರಾದ ಸುಭಾಷ್ ಗುನಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಜ.5 ರಂದು ಜೊಯಿಡಾದಲ್ಲಿ ಗೆಡ್ಡೆ-ಗೆಣಸು ಮೇಳ.

ಸತತ ಏಳು ವರ್ಷ ಯಶಸ್ವಿಯಾಗಿ ನಡೆದ ಜೊಯಿಡಾದ ‘ಗೆಡ್ಡೆಗೆಣಸು’ ಮೇಳದ ಸಂಭ್ರಮ ಮತ್ತೆ ಬಂದಿದೆ. ತಾಲ್ಲೂಕಿನ ಕುಣಬಿ ಅಭಿವೃದ್ಧಿ ಸಂಘ ಹಾಗೂ ಕುಂಬಾರವಾಡದ ಕಾಳಿ ರೈತ ಉತ್ಪಾದಕರ ಕಂಪನಿ ಸಹಯೋಗದಲ್ಲಿ ಜ. 5ರಂದು ಬೆಳಿಗ್ಗೆ 10ಕ್ಕೆ ಉದ್ಘಾಟನೆಯಾಗಲಿದೆ.
ಪ್ರತಿ ವರ್ಷ ಜನವರಿಯಲ್ಲಿ ಮೇಳವು ಹಲವು ವೈಶಿಷ್ಟ್ಯಗಳಿಂದ ಕೂಡಿರುತ್ತದೆ.ಗೆಡ್ಡೆ, ಗೆಣಸುಗಳ ಪ್ರದರ್ಶನ ಮತ್ತು ಮಾರಾಟ, ಅವುಗಳಿಂದ ಸಿದ್ಧಪಡಿಸಿಲಾದ ರುಚಿಯಾದ ತಿನಿಸುಗಳು ಅಲ್ಲಿರುತ್ತವೆ. ಕುಣಬಿ ಬುಡಕಟ್ಟು ಸಮುದಾಯದವರು ವಿವಿಧ ಪಾರಂಪರಿಕವಾಗಿ ಬೆಳೆದ ವಿವಿಧ ಜಾತಿಯ ತಳಿಗಳ ಸಂರಕ್ಷಣೆಯ ಮಾಹಿತಿಯನ್ನು ಈ ವೇಳೆ ನೀಡಲಾಗುತ್ತದೆ.
ಮೇಳ ಆಯೋಜನೆಯ ಪೂರ್ವದಲ್ಲಿ ಕೇವಲ ಮನೆ ಬಳಕೆಗೆ ಸೀಮಿತವಾಗಿದ್ದ ಜೊಯಿಡಾದ ಗೆಡ್ಡೆ, ಗೆಣಸುಗಳನ್ನು ಇತ್ತೀಚೆಗೆ ಆದಾಯದ ಉದ್ದೇಶದಿಂದ ಬೆಳೆಯಲಾಗುತ್ತಿದೆ. ಹೊರ ರಾಜ್ಯಗಳಲ್ಲೂ ಪ್ರಸಿದ್ಧಿ ಪಡೆದಿದೆ.
ಪ್ರತಿ ವರ್ಷಕ್ಕೊಮ್ಮೆನಡೆಯುವ ಈ ಮೇಳಕ್ಕೆ ರಾಜ್ಯದ ಹಾಗೂ ನೆರೆಯ ರಾಜ್ಯಗಳ ಕೃಷಿ, ತೋಟಗಾರಿಕೆ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಸಂಶೋಧಕರು ಭೇಟಿ ನೀಡುತ್ತಾರೆ.
ಮೇಳ ಆಯೋಜನೆಯವರ್ಷದಿಂದಲೂ ರೈತರಿಗೆ ಸ್ಪರ್ಧೆಗಳಿದ್ದು ಗೆಡ್ಡೆ, ಗೆಣಸುಗಳ ಪ್ರಭೇದಗಳು, ಅವುಗಳ ಗಾತ್ರಕ್ಕೆ ಹಾಗೂ ಆಕಾರಕ್ಕೆ ಅನುಗುಣವಾಗಿ ಬಹುಮಾನಗಳನ್ನು ನೀಡಲಾಗುತ್ತದೆ.
ಈ ಬಾರಿ ಮೇಳದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ ಎಂ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಹೊನ್ನಪ್ಪಗೌಡ, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರೈಸ್ತರಾಜು.ಡಿ ಹಾಗೂ ಕೃಷಿ ವಿಜ್ಞಾನಿ ಬಾಲಚಂದ್ರ ಹೆಗಡೆ ಸಾಯಿಮನೆ ಭಾಗವಹಿಸಲಿದ್ದಾರೆ.
ಯಲ್ಲಾಪುರ- ರೈತ ಆತ್ಮಹತ್ಯೆ.
ಯಲ್ಲಾಪುರ – ಸಾಲಬಾಧೆಯಿಂದ ರೈತನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಲ್ಲಾಪುರ ತಾಲೂಕಿನ ಮುಡಸಾಲಿ ಗ್ರಾಮದಲ್ಲಿ ಇಂದು ನಡೆದಿದೆ.ಫಕ್ಕೀರಪ್ಪಗಂಗಪ್ಪ ಅಗಸಿಮನೆ ಮೃತಪಟ್ಟ ರೈತ.
ಈತ ಕೃಷಿಗಾಗಿ ಕರ್ನಾಟಕ ವಿಕಾಸ ಬ್ಯಾಂಕ್ ಹಾಗೂ ಕಾತೂರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಸಾಲ ಮಾಡಿದ್ದನು. ಬೆಳೆ ಸರಿಯಾಗಿ ಬರದೆ ಇರುವುದರಿಂದ ಸಾಲ ತೀರಿಸಲಾಗದೆ ಮನನೊಂದು ತಮ್ಮಗದ್ದೆಯ ಬಳಿಯ ಹಳ್ಳದ ಅಂಚಿನಲ್ಲಿದ್ದ ಮಾವಿನ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ.ಘಟನೆ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.