ಕಾರವಾರ ಜ.6 : ಕಾರವಾರ ನಗರಸಭೆ ವ್ಯಾಪ್ತಿಯಲ್ಲಿ ಜ 9 ರಿಂದ ಮುಂದಿನ ಆದೇಶದವರೆಗೆ ರವಿವಾರದ ಸಂತೆಯನ್ನು ರದ್ದುಪಡಿಸಿದ್ದು, ಸಂತೆ ವ್ಯಾಪಾರದ ಉದ್ದೇಶಕ್ಕಾಗಿ ಹೊರ ಊರಿನ ವ್ಯಾಪಾರಸ್ಥರು ರವಿವಾರ ದಿನದಂದು ನಗರಕ್ಕೆ ಬರತಕ್ಕದಲ್ಲ. ಸಾರ್ವಜನಿಕರ ಅನುಕೂಲಕ್ಕೋಸ್ಕರ ರವಿವಾರದ ಸಂತೆಯನ್ನು ಸೋಮವಾರ ಮುಂದೂಡಲಾಗಿದ್ದು, ವ್ಯಾಪಾರಸ್ಥರು ಎಂ.ಜಿ. ರಸ್ತೆ ಹೊರತುಪಡಿಸಿ ನಗರದ ಹೊರಭಾಗದ ಕಾಜುಭಾಗ, ಕೋಡಿಭಾಗ, ಬಿಣಗಾ, ಬೈತಖೋಲ್, ಬಾಂಡಿಶಿಟ್ಟಾ ಇತ್ಯಾದಿ ಕಡೆಗಳಲ್ಲಿ ಕುಳಿತು ವ್ಯಾಪಾರ ಮಾಡಬಹುದಾಗಿದೆ. ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಸಹಕರಿಸಬೇಕೆಂದು ಪೌರಾಯುಕ್ತ ಆರ್ ಪಿ.ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಡಳಿತದ ಆದೇಶದಲ್ಲಿ ಏನಿದೆ?
ಕರ್ನಾಟಕ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಜಿಲ್ಲೆಯಲ್ಲಿಯೂ ಸಹ ಕೋವಿಡ್ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಜಿಲ್ಲಾಡಳಿತವು ಸರ್ಕಾರದ ಆದೇಶ ಸಂ: ಕಂಇ 158 ಟಿಎನ್ ಆರ್ 2020, ದಿನಾಂಕ: 05-01-2022 ರಡಿ ಪ್ರದತ್ತವಾದ ಅಧಿಕಾರದ ಮೇರೆಗೆ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿರುತ್ತದೆ.
ಈಗಾಗಲೇ ಸರ್ಕಾರವು ನಿಗದಿಪಡಿಸಿದಂತೆ ವಾರಾಂತ್ಯದ ಕರ್ಪ್ಯೂ ಅವಧಿಯಲ್ಲಿ ಯಾವುದೇ ಸಂತೆಗಳನ್ನು ನಡೆಸುವುದನ್ನು ನಿರ್ಬಂಧಿಸಲಾಗಿರುತ್ತದೆ.
ವಾರಾಂತ್ಯದಲ್ಲಿ ಸಂತೆ ಇರುವಂತಹ ಪ್ರದೇಶಗಳಲ್ಲಿ ಆಯಾ ಸ್ಥಳೀಯ ಆಡಳಿತಗಳು ವಾರದ ದಿನಗಳಲ್ಲಿ ಸಂತೆಯನ್ನು ಸಾಕಷ್ಟು ಸ್ಥಳಾವಕಾಶ ಇರುವ ಪ್ರದೇಶಗಳಲ್ಲಿ ನಿಗದಿತ ಅವಧಿಗೆ ಸೀಮಿತಗೊಳಿಸಿ ನಿಗದಿಪಡಿಸಿ ಕೋವಿಡ್ ಸಮುಚಿತ ವರ್ತನೆಯನ್ನು ಪಾಲಿಸುವ ಷರತ್ತಿಗೊಳಪಟ್ಟು ಸಂತೆಯನ್ನು ನಡೆಸಬಹುದಾಗಿರುತ್ತದೆ. ಸಂತೆಯ ದಿನಾಂಕ ಹಾಗೂ ಅವಧಿಯನ್ನು ಸ್ಥಳೀಯ ಆಡಳಿತಗಳು ಮುಂಚಿತವಾಗಿ ಪ್ರಕಟಿಸುವುದು.
ಜಿಲ್ಲೆಯಲ್ಲಿ ಜಾತ್ರೆಗಳಿಗೆ ಸಂಬಂಧಿಸಿದಂತೆ ತಾಲೂಕಾಡಳಿತವು ಕೋವಿಡ್ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು.
ರಾಜ್ಯ ಮತ್ತು ಹೊರರಾಜ್ಯಗಳಿಗೆ ಧಾರ್ಮಿಕ ಮತ್ತು ಇತರೆ ಉದ್ದೇಶಕ್ಕೆ ಸ್ಥಳಗಳಿಗೆ ತೆರಳುವ ವ್ಯಕ್ತಿಗಳು ಅವರ ಪ್ರಯಾಣವನ್ನು ಮುಂದೂಡುವುದು ಸೂಕ್ತವಾಗಿರುತ್ತದೆ. ಒಂದು ವೇಳೆ ಹೋಗಲೇಬೇಕಾದಲ್ಲಿ ಸ್ಥಳೀಯ ಆಡಳಿತಕ್ಕೆ ಅವರ ಹೆಸರು ಹಾಗೂ ಪ್ರಯಾಣದ ಪೂರ್ಣ ಮಾಹಿತಿಯನ್ನು ನೀಡಿ ಹೋಗತಕ್ಕದ್ದು, ಹೊರರಾಜ್ಯದಿಂದ ಮರಳಿ ಬರುವಾಗ 72 ಗಂಟೆಯೊಳಗಿನ ಕೋವಿಡ್ RTPCR ನೆಗಟಿವ್ ವರದಿಯನ್ನು ಹೊಂದಿರುವುದು ಕಡ್ಡಾಯವಾಗಿದ್ದು ಹಾಗೂ ಹೋಮ್ ಕ್ವಾರೆಂಟೈನ್ ಗೆ ಒಳಪಡತಕ್ಕದ್ದು.
ಈ ಮೇಲಿನ ಸೂಚನೆಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ರ ವಿಭಾಗ 51 ರಿಂದ 60 ರನ್ವಯ, ಭಾರತೀಯ ದಂಡ ಸಂಹಿತೆ ಸೆಕ್ಷನ್ 188 ರನ್ವಯ ಹಾಗೂ ಸಾಂಕ್ರಾಮಿಕ ರೋಗ ಕಾಯ್ದೆ 2020 ರ ವಿಭಾಗ 4, 5 ಮತ್ತು 10 ರಂತೆ ಕ್ರಮಗಳನ್ನು ಜರುಗಿಸಲಾಗುವುದು