ಕೆಮಿಕಲ್ ತಂದ ಪ್ರಾಣ ಸಂಕಟ-ಯಲ್ಲಾಪುರದಲ್ಲಿ ಹಳ್ಳದ ನೀರು,ಗದ್ದೆ ಅರಣ್ಯಕ್ಕೆ ಹೊತ್ತಿದ ಬೆಂಕಿ-ಲಕ್ಷಾಂತರ ರುಪಾಯಿ ಹಾನಿ.

1870

ಕಾರವಾರ :- ಚಾಲಕನ ಅಜಾಗರೂಕತೆಯಿಂದಾಗಿ ರಾಸಾಯನಿಕ ತುಂಬಿದ ಟ್ಯಾಂಕರ್ ಪಲ್ಟಿಯಾಗಿ ಅನಾಹುತ ಸಂಭವಿಸಿದ ಘಟನೆ ಯಲ್ಲಾಪುರ ತಾಲ್ಲೂಕಿನ ಆರತಿಬೈಲ್ ಘಟ್ಟದ ತಿರುವಿನಲ್ಲಿ ಇಂದು ನಡೆದಿದೆ.
ಟ್ಯಾಂಕರ್ ನಲ್ಲಿ ಇದ್ದ ಕೆಮಿಕಲ್ ಹಳ್ಳದಲ್ಲಿ ಹರಿದು ಬೆಂಕಿ ತಗುಲಿ ರೈತರ ತೋಟ ಗದ್ದೆಗಳಿಗೆ ಹಾಗೂ ಅರಣ್ಯಕ್ಕೆ ಹಾನಿಯಾಗಿದೆ.
ಟ್ಯಾಂಕರ್ ಬೆಂಕಿಯಿಂದ ಸಂಪೈರ್ಣ ಸುಟ್ಟು ಹೋಗಿದ್ದು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಘಟನೆ ನಡೆದಿದ್ದು ಹೇಗೆ? ಕೆಮಿಕಲ್ ಏನು?

ಪೇಂಟ್‌ಗೆ ಬಳಸುವ ‘ಪೆಂಜೈನ್’ ರಾಸಾಯನಿಕವನ್ನು ಮಂಗಳೂರಿನಿಂದ ಮುಂಬೈಗೆ ಟ್ಯಾಂಕರ್‌ನಲ್ಲಿ ಸಾಗಿಸಲಾಗುತ್ತಿತ್ತು. ಕಡಿದಾದ ತಿರುವಿನಲ್ಲಿ ಟ್ಯಾಂಕರ್ ಚಾಲಕನ ಅಜಾಗರೂಕತೆ ಯಿಂದ ಪಲ್ಟಿಯಾಗಿ ಟ್ಯಾಂಕ್ ಗೆ ಘಾಸಿಯಾಗಿದೆ. ಇದರಿಂದ ಸೋರಿದ ರಾಸಾಯನಿಕವು ಪಕ್ಕದ ಹಳ್ಳ ಹಾಗೂ ಕಾಲುವೆಗಳಲ್ಲಿ ಹರಿದಿದೆ.

ಇದಕ್ಕಿದ್ದಂತೆ ಈ ಕೆಮಿಕಲ್ ಗೆ ಬೆಂಕಿ ತಗುಲಿದ್ದು ಹಳ್ಳವೇ ಹೊತ್ತಿ ಉರಿದಿದೆ. ಬೆಂಕಿ ಟ್ಯಾಂಕರ್‌ಗೂ ತಗುಲಿದೆ. ಹಳ್ಳದ ಭತ್ತದ ಗದ್ದೆ, ಪಂಪ್ ಸೆಟ್ ಸುಟ್ಟು ಕರಕಲಾಗಿವೆ. ತೋಟದಲ್ಲಿದ್ದ ಗಿಡಗಳಿಗೂ ಬೆಂಕಿ ತಗುಲಿದೆ.

ಸದ್ದು ಮಾಡಿದ ಶಬ್ದ ! ಮನೆಬಿಟ್ಟು ಬಂದ ಊರಿನವರು!

ಟ್ಯಾಂಕರ್ ಅಪಘಾತವಾಗುತ್ತಿದ್ದಂತೆ, ಸೋರಿದ ರಾಸಾಯನಿಕಕ್ಕೆ ಬೆಂಕಿ ತಗುಲಿದ ಸದ್ದು ಒಂದೆರಡು ಕಿಲೋಮೀಟರ್‌ವರೆಗೂ ಕೇಳಿಸಿದೆ. ಮನೆಗಳಲ್ಲಿದ್ದ ಜನ ಗಾಬರಿಯಿಂದ ಹೊರ ಬಂದು ನೋಡಿದರೆ ಹಳ್ಳ ಹೊತ್ತಿ ಉರಿಯುತ್ತಿರುವ ದೃಶ್ಯ ಕಂಡು ಬಂದು ಕಂಗಾಲಾಗಿದ್ದಾರೆ.

ತಕ್ಷಣದಲ್ಲಿ ಸುತ್ತಮುತ್ತಲ ಮನೆಯ ಜನರು ಸುರಕ್ಷತೆಗಾಗಿ ಮನೆ ಬಿಟ್ಟು ಹೊರ ಬಂದಿದ್ದಾರೆ.

ತೋಟ,ಗದ್ದೆಗಳು ನಷ್ಟ

ಬಾಳೆಗದ್ದೆ ದೇವಸ್ಥಾನದ ಪಕ್ಕದಲ್ಲಿರುವ ಗೃಹರಕ್ಷಕ ಎಸ್.ಎಸ್.ಭಟ್ಟ ಅವರ, ಸುಮಾರು ಐದಾರು ಗುಂಟೆ ಹಚ್ಚ ಹಸಿರಾಗಿ ಬೆಳೆದಿದ್ದ ಭತ್ತದ ಗದ್ದೆ ಕೆಮಿಕಲ್ ನಿಂದ ಸಂಪೂರ್ಣ ಸುಟ್ಟು ಕರಕಲಾಗಿದೆ .ಇನ್ನು ಇವರ ಮನೆಯ ಬಾವಿಗೆ ಹಾಕಿದ ಪಂಪ್‌ಸೆಟ್ ಸುಟ್ಟು ಕರಕಲಾಗಿದೆ. ತೋಟದಲ್ಲಿದ್ದ ಒಂದು ಎಕರೆ ಪ್ರದೇಶದ ಅಡಿಕೆ ಮರ, ತೆಂಗಿನ ಮರ, ಮಾವು, ಹಲಸಿನ ಮರ, ಅಂಬೆ ಮರ ಮುಂತಾದ ಮರಗಳಿಗೆ ಬೆಂಕಿ ತಗುಲಿದೆ. ಮನೆಯ ಒಂದು ಪಾರ್ಶ್ವಕ್ಕೂ ಬೆಂಕಿ ತಗುಲಿದ್ದು, ತಕ್ಷಣ ಆರಿಸಲಾಗಿದೆ. ಇದೇ ರೀತಿ ಮಂಜುನಾಥ ಗೌಡ, ನಾರಾಯಣ ಭಟ್ಟ, ವಿಶ್ವನಾಥ ಭಟ್ಟ ಮುಂತಾದವರ ತೋಟ ಗದ್ದೆಗಳಿಗೂ ಹಾನಿಯಾಗಿದೆ.

ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತ.

ಅಪಘಾತವಾದ ಬೆಳಗ್ಗಿನ ಜಾವ 5.30ರಿಂದ 8 ಗಂಟೆಯವರೆಗೂ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಸಂಚಾರ ಸ್ಥಗಿತಗೊಳಿಸಲಾಗಿತ್ತು.

ಯಲ್ಲಾಪುರ, ಮುಂಡಗೋಡು, ಶಿರಸಿಯಿಂದ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸಪಟ್ಟು ಬೆಂಕಿ ಆರಿಸಿದ ನಂತರ ಸಂಚಾರ ವ್ಯವಸ್ಥೆ ಪುನರಾರಂಭಿಸಲಾಗಿದೆ.

ಸಧ್ಯ ಈ ಭಾಗದಲ್ಲಿ ಲಕ್ಷಾಂತರ ರುಪಾಯಿ ಹಾನಿಯಾಗಿದ್ದು ಅಪಘಾತ ಸ್ಥಳಕ್ಕೆ ಶಿರಸಿ ಡಿ.ಎಸ್.ಪಿ. ರವಿ ನಾಯ್ಕ ,ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಯಲ್ಲಾಪುರ ಪಿ.ಐ. ಸುರೇಶ್ ಯಳ್ಳೂರ್ ಮಾರ್ಗದರ್ಶನದಲ್ಲಿ, ಪಿ.ಎಸ್.ಐ ಪ್ರಿಯಾಂಕಾ ನ್ಯಾಮಗೌಡ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಪರಿಸ್ಥಿತಿ ತಹಬದಿಗೆ ತರಲು ನೆರವಾಗಿದ್ದು ಸದ್ಯ ಬೆಂಕಿ ನಂದಿಸಲಾಗಿದೆ.

ಕೆಮಿಕಲ್ ಸೈಟ್ ಎಫೆಕ್ಟ್ !


ಮೊದಲು ಯಾವ ಕೆಮಿಕಲ್ ಎಂದು ಅಗ್ನಿಶಾಮಕದಳದವರಿಗೂ ತಿಳಿದಿರಲಿಲ್ಲ. ಇದರಿಂದಾಗಿ ಹಳ್ಳಕ್ಕೆ ಹತ್ತಿದ ಬೆಂಕಿ ನಂದಿಸುವುದು ತಡವಾಯಿತು. ನಂತರ ಪೆಂಜೈನ್ ಎಂಬ ರಾಸಾಯನಿಕ ಎಂದು ತಿಳಿದು ಬಂದಿದೆ. ಆದರೇ ನೂರಾರು ಲೀಟರ್ ಕೆಮಿಕಲ್ ಹಳ್ಳ ಸೇರಿದೆ
ಈ ಹಳ್ಳವು ಕೈಗಾ ಭಾಗದ ಅರಣ್ಯ ವ್ಯಾಪ್ತಿಗೆ ಸೇರುತ್ತದೆ. ಈ ಭಾಗದಲ್ಲಿ ವನ್ಯಜೀವಿಗಳ ಆವಾಸ ಸ್ಥಾನವಾಗಿದ್ದು ರಾಸಾಯನಿಕ ತುಂಬಿದ ನೀರನ್ನು ವನ್ಯ ಮೃಗಗಳು ಹಾಗೂ ಸ್ಥಳೀಯ ಜನರು ಬಳಸಿದರೆ ಏನಾಗಬಹುದು ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಹೀಗಾಗಿ ಮಂಗಳೂರಿನಿಂದ ತಜ್ಞರನ್ನು ಕರೆಸಲಾಗುತ್ತಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!