ಯಲ್ಲಾಪುರ/ಮುಂಡಗೋಡು:- ಲಾರಿಯಲ್ಲಿ ಅಡಿಕೆಯಿದೆ ಎಂದು ನಿಪ್ಪಾಣಿಯಿಂದ ಹಿಂಬಾಲಿಸಿಕೊಂಡು ಬಂದ ದರೋಡೆಕೋರರು, ಅಡಿಕೆ ಸಿಗದೇ ಲಾರಿ ಚಾಲಕನ ಬಳಿಯಿದ್ದ 22 ಸಾವಿರ ದೋಚಿಕೊಂಡು ಹೋದ ಘಟನೆಗೆ ಸಂಬಂಧಿಸಿದಂತೆ, ನಾಲ್ಕು ಜನ ಅಂತರರಾಜ್ಯ ದರೋಡೆಕೋರರನ್ನು ಯಲ್ಲಾಪುರ ಮತ್ತು ಮುಂಡಗೋಡು ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಇಂದು ಬಂಧಿಸಿದ್ದಾರೆ.
ರಾಜಸ್ಥಾನ ಜುಂಜುನು ಜಿಲ್ಲೆಯ ಮಹಿಪಾಲ್ ಲಕ್ಷ್ಮಣ ರಾಮ್ ಮೀನಾ(30), ಸಿಕರ್ ಜಿಲ್ಲೆಯ ರಾಕೇಶ್ ಚೋಟುರಾಮ ಮೋಹನಲಾಲ ವರ್ಮಾ(25), ಧಮೇಂದ್ರ ರಾಮಾಕಿಶನ್ ಟೈಲರ್(27), ರಾಹುಲ್ ಬ್ರಿಜಮೋಹನ ವರ್ಮಾ(23) ಬಂಧಿತ ಆರೋಪಿಗಳಾಗಿದ್ದಾರೆ.ಅಶೋಕ ಬೋಲುರಾಮ ಮೀನಾ ನಾಪತ್ತೆಯಾಗಿರುವ ಪ್ರಮುಖ ಆರೋಪಿಯಾಗಿದ್ದಾನೆ.
ಜುಲೈ 31ರಂದು ಯಲ್ಲಾಪುರ ತಾಲೂಕಿನ
ಮಂಚಕೇರಿ ಗ್ರಾಮದ ಅಬ್ದುಲ ಅಜಿಂ ಶೇಖ್
ಎಂಬುವರು ಲಾರಿಯನ್ನು ಚಾಲನೆ ಮಾಡಿಕೊಂಡು
ಹುಬ್ಬಳ್ಳಿಯಿಂದ ಶಿರಸಿಗೆ ಹೊರಟಿದ್ದರು.ಮಾರ್ಗ ಮಧ್ಯೆ ತಾಲೂಕಿನ ಕಾತೂರ ಸೇತುವೆ ಸಮೀಪದಲ್ಲಿ ಮೂತ್ರ ವಿಸರ್ಜನೆಗೆಂದು ಲಾರಿ ಚಾಲಕ ನಿಲ್ಲಿಸಿದ್ದರು. ಮೂತ್ರ ವಿಸರ್ಜನೆ ಮಾಡಿ ಮರಳಿ ಲಾರಿ ಹತ್ತುವಾಗ ಹಿಂದಿನಿಂದ ಬೊಲೇರೋ ವಾಹನದಲ್ಲಿ ಬಂದಿದ್ದ ನಾಲ್ಕು ಜನ ದರೋಡೆಕೋರರ ತಂಡವು, ಲಾರಿ ಚಾಲಕನಿಗೆ ಕೈ, ಬಾಯಿ ಕಟ್ಟಿ ಬೊಲೇರೋ ವಾಹನದಲ್ಲಿ ಅಪಹರಣ ಮಾಡಿಕೊಂಡು, ಹುಬ್ಬಳ್ಳಿಯ ವಿಮಾನ ನಿಲ್ದಾಣದ ಹತ್ತಿರ ಚಾಲಕನನ್ನು ಬಿಟ್ಟು ಹೋಗಿದ್ದರು.
ಲಾರಿ ಚಾಲಕನ ಬಳಿಯಿದ್ದ ₹22 ಸಾವಿರ ಹಣವನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು, ಗಟ್ಟೂರ ಬೈಪಾಸ್ ಹತ್ತಿರದ ಸಿಸಿ ಕ್ಯಾಮೆರಾ, ಮುಂಡಗೋಡದ ಮುಖ್ಯ ರಸ್ತೆಗಳಲ್ಲಿ ಇರುವ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಲಾರಿಯನ್ನು ಬೊಲೇರೋ ವಾಹನ ಹಿಂಬಾಲಿಸಿರುವುದು ತನಿಖೆ ವೇಳೆ ಕಂಡುಬಂದಿತ್ತು. ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿದಾಗ ಲಾರಿಯಲ್ಲಿ ಅಡಿಕೆ ತುಂಬಿರಬಹುದೆಂದು ಅಂದಾಜಿಸಿ ನಿಪ್ಪಾಣಿಯಿಂದ ಲಾರಿಯನ್ನು ಹಿಂಬಾಲಿಸಿರುವುದಾಗಿ ಹೇಳಿದ್ದಾರೆ.
ಆದರೆ ಲಾರಿಯಲ್ಲಿ ಅಡಿಕೆ ಇಲ್ಲದ ಕಾರಣ ಚಾಲಕ ಅಜೀಂ ಬಳಿಯಿದ್ದ ಹಣವನ್ನು ಮಾತ್ರ ದೋಚಿಕೊಂಡು ಪರಾರಿಯಾಗಿದ್ದಾರೆ.
ಬೊಲೇರೋ ವಾಹನವು ರಾಜಸ್ಥಾನದ ನೋಂದಣಿ ಹೊಂದಿದ್ದರಿಂದ ಮುಂಡಗೋಡ ಪೊಲೀಸರು ರಾಜಸ್ಥಾನಕ್ಕೆ ಹೋಗಿ ಆರೋಪಿಗಳನ್ನು ಬಂಧಿಸಲು ಮುಂದಾಗುತ್ತಿದ್ದಂತೆ, ಆರೋಪಿಗಳು ಪರಾರಿಯಾಗಿದ್ದರು.ನಂತರ ಬಿಜಾಪುರದ ದೇವರಹಿಪ್ಪರಗಿಯ ಪೊಲೀಸರು ಇದೇ ದರೋಡೆಕೋರರನ್ನು ಪ್ರಕರಣವೊಂದಕ್ಕೆ ಸಂಬಂಧಿ ಸಿದಂತೆ ಬಂಧಿಸಿದ್ದರು ಹೀಗಾಗಿ ಲಾರಿ ಚಾಲಕನ ಅಪಹರಣ ಆರೋಪಿಗಳನ್ನು ಮುಂಡಗೋಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.