BREAKING NEWS
Search

ಕದಂಬ ನೌಕಾನೆಲೆಯಲ್ಲಿ ಐ.ಎನ್.ಎಸ್ ವಿಕ್ರಾಂತ್ ಯಶಸ್ವಿ ನಿಲುಗಡೆ-ವಿಶೇಷ ಏನುಗೊತ್ತಾ?

184

ಕಾರವಾರ: ಕಾರವಾರದ ಕದಂಬ ನೌಕಾನೆಲೆಗೆ ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಎಂದೇ ಹೆಗ್ಗುರುತಿಗೆ ಪಾತ್ರವಾಗಿರುವ ಐ.ಎನ್.ಎಸ್. ವಿಕ್ರಾಂತ್ ಕದಂಬ ನೌಕಾನೆಲೆಯ ಜಟ್ಟಿಗೆ (ಬರ್ತಿಂಗ್ ಜಾಗ) ಮೊದಲಬಾರಿ ಯಶಸ್ವಿಯಾಗಿ ಇಂದು ನಿಲುಗಡೆಯಾಗುವ ಮೂಲಕ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಿದೆ.

ದೇಶದ ಅತೀ ದೊಡ್ಡ ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ ವಿಶೇಷ ಏನು? ಕಾರವಾರದಲ್ಲಿ ನಿಲುಗಡೆ ಏಕೆ?

ಕೊಚ್ಚಿಯ ಹಡಗು ಕಾರ್ಖಾನೆಯಲ್ಲಿ 2000 ತಂತ್ರಜ್ಞರು, 13 ವರ್ಷಗಳಿಂದ ಹಗಲುರಾತ್ರಿ ಕಣ್ಣಲ್ಲಿ ಕಣ್ಣಿಟ್ಟು ಕಟ್ಟಿದ ಯುದ್ಧನೌಕೆ ‘ಐಎನ್‌ಎಸ್‌ ವಿಕ್ರಾಂತ್‌’ ದೇಶೀಯವಾಗಿ ನಿರ್ಮಾಣಗೊಂಡಿತು. 40 ಸಾವಿರ ಟನ್‌ ತೂಕದ 23 ಸಾವಿರ ಕೋಟಿ ಹಣ ವ್ಯಯಿಸಿ ಯುದ್ಧವಿಮಾನ ವಾಹಕ ನೌಕೆಯನ್ನು ಸ್ವದೇಶಿ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಿಸುವ ಮೂಲಕ ವಿಶ್ವದ 6 ಪ್ರಮುಖ ರಾಷ್ಟ್ರಗಳ ಸಾಲಿಗೆ ಭಾರತ ಸೇರಿದೆ.ಈ ಹಿಂದೆ ಅಮೆರಿಕ, ರಷ್ಯಾ, ಚೀನಾ, ಫ್ರಾನ್ಸ್‌, ಇಂಗ್ಲೆಂಡ್‌, ಇಟಲಿ ಮಾತ್ರವೇ ಈ ಸಾಧನೆಗೈದಿದ್ದವು.
ಈ ಹಡಗಿನ ಉದ್ದ- 262 ಮೀಟರ್‌ ಆದರೇ ಅಗಲ- 62 ಮೀಟರ್‌,ಎತ್ತರ- 59 ಮೀಟರ್‌ , 18 ಮಹಡಿಗಳು ಇದರಲ್ಲಿ ಇದ್ದು 2,400 ವಿಭಾಗಗಳು ಇವೆ.ಒಂದೇ ಬಾರಿಗೆ 1600 ನೌಕಾ ಸಿಬ್ಬಂದಿಯನ್ನು ಐಎನ್‌ಎಸ್‌ ವಿಕ್ರಾಂತ್‌ನಲ್ಲಿ ನಿಯೋಜಿಸಬಹುದಾಗಿದೆ. ಮಿಗ್‌- 29 ಕೆ, ಕಮೋವ್‌- 31 ಹೆಲಿಕಾಪ್ಟರ್‌ಗಳು, ಅಮೆರಿಕ ನಿರ್ಮಿತ ಎಫ್‌-18ಎ ಸೂಪರ್‌ ಹಾರ್ನೆಟ್‌, ಫ್ರಾನ್ಸ್‌ ನಿರ್ಮಿತ ರಫೇಲ್‌ (ಎಂ) ಯುದ್ಧ ವಿಮಾನಗಳು ,ಫೈಟರ್‌ ಜೆಟ್‌ ಎಂಎಚ್‌- 60 ರೋಮಿಯೊ ಮಲ್ಟಿರೋಲ್‌ ಹೆಲಿಕಾಪ್ಟರ್‌ಗಳು ಕಾರ್ಯನಿರ್ವಹಿಸುತಿದ್ದು 32 ಮಧ್ಯಮ ಶ್ರೇಣಿಯ ಮೇಲ್ಮೈಯಿಂದ ಚಿಮ್ಮುವ ವಾಯು ಕ್ಷಿಪಣಿಗಳು ಮತ್ತು ಎಕೆ- 630 ಫಿರಂಗಿ ಗನ್‌ಗಳೂ ವಿಕ್ರಾಂತ್‌ ಬತ್ತಳಿಕೆಯಲ್ಲಿದೆ.

ಇದರ ರನ್‌ ವೇ 262 ಮೀಟರ್‌ಗಳಷ್ಟು ಉದ್ದವಿದ್ದು, ಬರೋಬ್ಬರಿ 2 ಫುಟ್ಬಾಲ್‌ ಮೈದಾನಗಳಿಗಿಂತ ಅಗಲವಿದೆ. ನೌಕಾಪಡೆ ಪ್ರಕಾರ, ಈ ರನ್‌ ವೇಯಲ್ಲಿ 2 ಒಲಿಂಪಿಕ್‌ ಈಜುಕೊಳಗಳನ್ನು ನಿರ್ಮಿಸಬಹುದಾದಷ್ಟು ದೊಡ್ಡದಿದೆ.
2500 ಕಿ.ಮೀ. ಉದ್ದದ ವಿದ್ಯುತ್‌ ಕೇಬಲ್‌ ವಿಕ್ರಾಂತ್‌ನ ಒಡಲೊಳಗಿದೆ. ಇದರ ಅಡುಗೆಮನೆಯಲ್ಲಿ ಒಂದೇ ದಿನದಲ್ಲಿ 4,800 ಜನರಿಗೆ ಅಡುಗೆ ಸಿದ್ಧಪಡಿಸಬಹುದು. 1 ಗಂಟೆಯಲ್ಲಿ 3 ಸಾವಿರ ಚಪಾತಿ ಮಾಡುವ, ಇಡ್ಲಿ ಬೇಯಿಸುವ ಅತ್ಯಾಧುನಿಕ ಮೆಷಿನ್‌ಗಳಿವೆ.

ಈ ನೌಕೆ ಗಂಟೆಗೆ 33 ಕಿ.ಮೀ. ವೇಗದಲ್ಲಿ ಚಲಿಸಿ, ಒಂದೇ ಬಾರಿಗೆ 7,500 ನಾಟಿಕಲ್‌ ಮೈಲು ಕ್ರಮಿಸಬಲ್ಲದು. 250 ಟ್ಯಾಂಕರ್‌ಗಳಷ್ಟು ಇಂಧನ ಇದರಲ್ಲಿರುತ್ತದೆ.
ಸಿಬ್ಬಂದಿಗಳ ಆರೋಗ್ಯ ಹದಗೆಡದಂತೆ ನೋಡಿಕೊಳ್ಳಲು 16 ಬೆಡ್‌ಗಳ ಆಸ್ಪತ್ರೆ ಕೂಡ ಇದೆ. ಇನ್ನು ಈ ಹಡಗು ಐ.ಎನ್.ಎಸ್ ವಿಕ್ರಮಾಧಿತ್ಯಗಿಂತ ದೊಡ್ಡದಾಗಿದ್ದು ಸಾಮರ್ಥ್ಯ ಕೂಡ ಹೆಚ್ಚಿನದ್ದಾಗಿದೆ.

ಕಾರವಾರದಲ್ಲಿ ನಿಲುಗಡೆ ಏಕೆ?

ಏಷ್ಯಾದ ಅತೀ ದೊಡ್ಡ ನೌಕಾ ನೆಲೆ ಕಾರವಾರದ ಕದಂಬ ನೌಕಾನೆಲೆ. ಇಲ್ಲಿ ಈಗಾಗಲೇ 40 ಯುದ್ದ ಹಡಗುಗಳು ,ಸಬ್ ಮೆರಿನ್ ಗಳು ನಿಲ್ಲುವಷ್ಟು ವ್ಯವಸ್ಥೆ ಕಲ್ಪಿಸಲಾಗಿದೆ. ದೇಶದ ಮೊದಲ “ಟ್ರಾಲಿ ಷಿಪ್ಟಿಂಗ್ ಸಿಸ್ಟಮ್” ಅಂದರೇ ಹಡಗುಗಳನ್ನು ರಿಪೇರಿ ಮಾಡಲು ಸಮುದ್ರದಿಂದಲೇ ಮೇಲೆತ್ತಿ ದಡಕ್ಕೆ ತರುವ ತಂತ್ರಜ್ಞಾನ ಅಳವಡಿಸಲಾಗಿದೆ. ಸೀ ಬರ್ಡ ಸ್ಟೇಜ್ -1 ರಲ್ಲಿ ಮೂರು ಜಟ್ಟಿಗಳು ನಿರ್ಮಾಣಗೊಂಡಿದ್ದವು.ಆದರೇ ಸ್ಟೇಜ್ -2 ನಲ್ಲಿ ಮತ್ತೆ ಮೂರು ಜಟ್ಟಿಗಳನ್ನು ನಿರ್ಮಾಣ ಮಾಡಲಾಗಿದ್ದು ಎರಡು ಜಟ್ಟಿಯಲ್ಲಿ ಏಷ್ಯದ ಅತೀ ದೊಡ್ಡ ಯುದ್ಧ ಹಡಗು ನಿಲುಗಡೆ ಮಾಡಬಹುದಾಗಿದೆ. ಹೀಗಾಗಿಯೇ ವಿಕ್ರಮಾಧಿತ್ಯ ಹಾಗೂ ವಿಕ್ರಾಂತ್ ಯುದ್ದ ವಿಮಾನ ವಾಹಕಗಳಿಗೆ ಇಲ್ಲಿ ಸ್ಥಳಾವಕಾಶ ಮಾಡಿಕೊಡಲಾಗಿದೆ. ಈ ಹಿಂದೆ ವಿಕ್ರಾಂತ್ ಹಡಗು ಕೊಚ್ಚಿಯಲ್ಲಿಯೇ ಇದ್ದು ನಂತರ ಅರಬ್ಬಿ ಸಮುದ್ರದಲ್ಲಿ ಪರೀಕ್ಷಾರ್ಥ ಕಾರ್ಯಾಚರಣೆ ನಡೆಸಿತ್ತು. ಇದೀಗ ಕಾರವಾರದ ಕದಂಬ ನೌಕಾ ನೆಲೆಗೆ ಆಗಮಿಸಿ ಪರೀಕ್ಷಾರ್ಥ ನಿಲುಗಡೆಯನ್ನು ಯಶಸ್ಸಿಯಾಗಿ ಪೂರೈಸಿದ್ದು ಇನ್ನೂ ಒಂದು ತಿಂಗಳ ಕಾಲ ಇಲ್ಲಿಯೇ ಇರಲಿದ್ದು ನಂತರ ಇಲ್ಲಿ ಇಂಧನ ,ಆಹಾರ ತುಂಬಿಕೊಂಡು
ಪೂರ್ವ ಹಾಗೂ ಪಶ್ಚಿಮ ಕರಾವಳಿಯಲ್ಲಿ ಕಾರ್ಯಾಚರಣೆ ನಡೆಸಲಿದೆ.

ಏಷ್ಯದ ಅತೀ ದೊಡ್ಡ ನೌಕಾನೆಲೆ 2025 ಕ್ಕೆ ದೇಶಕ್ಕೆ ಸಮರ್ಪಣೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಗಾದಲ್ಲಿ ಕದಂಬ ನೌಕಾನೆಲೆಯು ಏಷ್ಯಾದಲ್ಲೇ ಅತೀ ದೊಡ್ಡ ನೌಕಾನೆಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿನ ಭೂ ಪ್ರದೇಶ ವೈರಿಗಳಿಗೆ ಚಿತ್ತ ಕಾಣದಂತೆ ಮಾಡಿ ಶತ್ರುಗಳ ಮೇಲೆ ಮುಗಿಬೀಳಲು ಸುವ್ಯವಸ್ಥಿತ ನೌಕಾ ತಾಣವಾಗಿ ಮಾರ್ಪಡುತಿದ್ದು ಇದೀಗ ನೌಕಾ ನೆಲೆಯಲ್ಲಿ ಎರಡನೇ ಹಂತದ ಕಾಮಗಾರಿಗಳು ಮುಕ್ತಾಯದ ಹಂತ ತಲುಪಿದೆ. ನೌಕಾ ದಳದ ಮಾಹಿತಿ ಪ್ರಕಾರ 2025 ರ ವೇಳೆಗೆ ದೇಶಕ್ಕೆ ಸಮರ್ಪಣೆಗೊಳ್ಳಲಿದೆ.
ಒಂದು ಲಕ್ಷ ಸಿಬ್ಬಂದಿಗಳಿಗೆ ವಸತಿ ನಿಲಯ ,ಕಚೇರಿ ಸಂಕೀರ್ಣ, ರಿಪೇರಿ ಯಾರ್ಡ ಗಳು ಈಗಾಗಲೇ ನಿರ್ಮಾಣದ ಅಂತಿಮ ಹಂತ ತಲುಪಿದ್ದು 2025 ರಲ್ಲಿ ವಿಶ್ವದ ಅತೀ ದೊಡ್ಡ ನೌಕಾನೆಲೆಯ ಪಟ್ಟಿಗೆ ಕಾರವಾರದ ಕದಂಬ ನೌಕಾನೆಲೆ ಸೇರ್ಪಡೆಗೊಳ್ಳಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!