Uttrakannada:ಸಾಮಾಜಿಕ ಜಾಲತಾಣದಲ್ಲಿ ಭಾರತದ ಧ್ವಜಕ್ಕೆ ಅವಮಾನ Poster: ನಿಜವಾಗಿ ಆಗಿದ್ದೇನು?

261

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮತ್ತು ಕುಮಟಾ ದಲ್ಲಿ ಈದ್ ಆಚರಣೆಯ ಮೆರವಣಿಗೆ ವೇಳೆ ಭಾರತ ಧ್ವಜಕ್ಕೆ ಮುಸ್ಲೀಮರು ಅವಮಾನ ಮಾಡಿದ್ದಾರೆ ಧ್ವಜದಲ್ಲಿ ಮುಸ್ಲೀಮರ ಮಸೀದಿ ಚಿತ್ರ ಹಾಕಿ ಉರ್ದುವಿನಲ್ಲಿ ಬರೆದು ಮೆರವಣಿಗೆಯಲ್ಲಿ ಪ್ರದರ್ಶಿಸಿದ್ದಾರೆ ಎಂದು ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದರು.
ಆದ್ರೆ ಬಂಧನವಾಗಿ ಟೇಷನ್ ಬೇಲ್ ನಲ್ಲಿಯೇ ಕೆಲವರನ್ನು ಬಿಡಲಾಗಿದೆ. ಹಾಗಿದ್ರೆ ಇವರು ನಿಜವಾಗಿಯೂ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರಾ ಎಂದು ಪ್ರಶ್ನೆ ಕೇಳಿದ್ರೆ ಕಾನೂನಾತ್ಮಕವಾಗಿ ಇಲ್ಲ. ಹೌದು ನೋಡುವ ಕಣ್ಣು ಕೆಂಪಾಗಿದ್ದರೇ ಕಾಣುವುದೆಲ್ಲಾ ಹಳದಿ ಎನ್ನುವಂತೆ ಆಗಿದೆ ಈ ಪ್ರಕರಣದಲ್ಲಿ.

ಏನಪ್ಪ ಇವ ಮುಸ್ಲಿಂ ಪರವಿದ್ದಾನೆ ಎಂದು ನೀವು ಅಂದುಕೊಳ್ಳಬಹುದು .ತಪ್ಪು ಯಾರೇ ಮಾಡಿದರೂ ಅದು ತಪ್ಪು .ಆದ್ರೆ ತಪ್ಪೇ ಮಾಡದೇ ತಪ್ಪಿತಸ್ತರು ಎನ್ನುವುದೇ ಅಪರಾಧ. ಒಬ್ಬ ಪತ್ರಕರ್ತನಾದವನಿಗೆ ಓದುವುದು,ತಿಳಿದುಕೊಳ್ಳುವುದು ಮುಖ್ಯ.ಜೊತೆಗೆ ಸತ್ಯ ಹೊರತೆಗೆಯುವುದೂ ಸಹ ಮುಖ್ಯ. ಪತ್ರಕರ್ತನಾದವನು ಜಾತಿ ಧರ್ಮ ಮೀರಿರಬೇಕು. ಹೀಗಾಗಿ ಇರುವ ವಾಸ್ತವವನ್ನು ಓದುಗರ ಗಮನಕ್ಕೆ ತರುತಿದ್ದೇನೆ.

ಈದ್ ಮೆರವಣಿಗೆಯಲ್ಲಿ ಕೇಸರಿ,ಬಿಳಿ ಹಸಿರಿನ ಬಣ್ಣದ ಧ್ವಜದಲ್ಲಿ ಅರ್ಧಚಂದ್ರ ಹಾಕಿ, ಉರ್ದು ಬರವಣಿಗೆ ಬರೆಸಿ ಮೆರವಣಿಗೆ ಮಾಡಿದ್ದರು. ಇದು ರಾಷ್ಟ್ರಧ್ವಜದ ಅವಮಾನವೇ ಅಲ್ಲ ಎನ್ನುತ್ತದೆ ಭಾರತದ ಧ್ವಜ ಸಂಹಿತೆ. ದ್ವಜ ಸಂಹಿತೆಯಲ್ಲಿ ಧ್ವಜ ಹೇಗಿರಬೇಕು, ಎಷ್ಟು ಎತ್ತರ ಇರಬೇಕು ,ಅಶೋಕ ಚಕ್ರ ಹೇಗಿರಬೇಕು ಎಷ್ಟು ಅಳತೆ ಇರಬೇಕು ಎಂಬ ನಿಯಮವಿದೆ. ಅದಲ್ಲದೇ ಭಾರತದ ಧ್ವಜ ಹೀಗಿದ್ದರೆ ಮಾತ್ರ ಅದು ರಾಷ್ಟ್ರ ಧ್ವಜ ಎಂದು ಕರೆಸಿಕೊಳ್ಳುತ್ತದೆ. ಈ ನಿಯಮಗಳೇ ಇಲ್ಲದೇ ಬಣ್ಣ ಗಳನ್ನು ಮಾತ್ರ ಬಳಸಿಕೊಂಡು ಮೆರವಣಿಗೆ ಮಾಡಿದ್ದಕ್ಕೆ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದು ಹಾಸ್ಯಾಸ್ಪದ. ಇದಲ್ಲದೇ ಟೇಷನ್ ಬೇಲ್ ನಲ್ಲೇ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದವರಿಗೆ ಬೇಲ್ ಕೊಡಲು ಹೇಗೆ ಸಾಧ್ಯ? ಯಾರನ್ನ ಮೆಚ್ಚಿಸಲು ಹೊರಟರಾ ಅಥವಾ ಕೋಮು ದ್ವೇಶ ಹರಡದಂತೆ ತಡೆಯಲು ಪೊಲೀಸರೇ ಈ ಕ್ರಮ ಕೈಗೊಂಡರೇ ಎಂಬುದನ್ನ ಅವರೇ ಹೇಳಬೇಕು.

ಒಂದುವೇಳೆ ಉರ್ದು ಅಕ್ಷರದಲ್ಲಿ ಬರೆದು ಕೇಸರಿ ,ಬಿಳಿ ,ಹಸಿರು ಬಣ್ಣ ಬಳಸಿದ್ದಕ್ಕೆ ಮುಸ್ಲಿಂ ಯುವಕರಿಗೆ ಶಿಕ್ಷೆ ಕೊಡುವುದಾದರೇ, ರಾಷ್ಟ್ರಧ್ವಜದ ಬಣ್ಣ ಬಳಸಿ ಅಶೋಕ ಚಕ್ರದ ಬದಲು ಹಸ್ತ ಲಾಂಛನ ಬಳಸಿದ ಕಾಂಗ್ರೆಸ್ ಪಕ್ಷದವರಿಗೂ , ರಾಷ್ಟ್ರ ಧ್ವಜದ ಬಣ್ಣದಲ್ಲಿ ಹೂವಿನ ಎಸಳಿಟ್ಟ ತೃಣಮೂಲ ಕಾಂಗ್ರೆಸ್ ಗೂ ಶಿಕ್ಷೆಯಾಗಬೇಕಲ್ಲವೇ? ಈ ಪಕ್ಷದ ಧ್ವಜ ಹಾದಿ ಬೀದಿಯಲ್ಲಿ ,ಮೆರವಣಿಗೆಯಲ್ಲಿ ರಾರಾಜಿಸುವುದಿಲ್ಲವೇ?.

ಇವೆಲ್ಲವನ್ನು ಬಿಟ್ಟು ಈದ್ ಮೆರವಣಿಗೆಯಲ್ಲಿ ಧ್ವಜದ ಬಣ್ಣ ಬಳಸಿ ಸಂಭ್ರಮಿಸಿದವರಿಗೆ ಏಕೆ ರಾಷ್ಟ್ರ ದ್ವಜದ ಅವಮಾನದ ಪಟ್ಟ!. ವಿಷಯ ತಿಳಿಯದವರಿಗಾಗಿ ರಾಷ್ಟ್ರ ಧ್ವಜ ಹೇಗಿರಬೇಕು ಎಷ್ಟು ಅಳತೆ ಇದ್ದರೇ ಹೇಗಿರಬೇಕು ಎಂಬ ಬಗ್ಗೆ ಅಲ್ಪ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ರಾಷ್ಟ್ರ ಧ್ವಜದ ಅಳತೆ ಪಟ್ಟಿ ಕೆಳಗಿನಂತಿದೆ.

ರಾಷ್ಟ್ರ ಧ್ವಜ ಹೇಗಿರುತ್ತೆ?

ಭಾರತದ ರಾಷ್ಟ್ರೀಯ ಧ್ವಜವನ್ನು ಅಧಿಕೃತವಾಗಿ ಭಾರತದ ಧ್ವಜ ಸಂಹಿತೆಯಲ್ಲಿ ಮೇಲಿನ ಫಲಕದ ಬಣ್ಣವು ಭಾರತ ಕೇಸರಿ ಮತ್ತು ಕೆಳಗಿನ ಫಲಕವು ಹಸಿರು ಬಣ್ಣದ್ದಾಗಿರುತ್ತದೆ. ಮಧ್ಯದ ಫಲಕವು ಬಿಳಿಯಾಗಿರಬೇಕು, ಬೇರಿಂಗ್ ಅದರ ಮಧ್ಯದಲ್ಲಿ 24 ಸಮಾನ ಅಂತರದ ಕಡ್ಡಿಗಳೊಂದಿಗೆ ಕಡು ನೀಲಿ ಬಣ್ಣದಲ್ಲಿ ಅಶೋಕ ಚಕ್ರದ ವಿನ್ಯಾಸವಿರುತ್ತದೆ.
ಇದು ಭಾರತದ ಅಧಿಕೃತ ಧ್ವಜವಾದಾಗ 22 ಜುಲೈ 1947 ರಂದು ನಡೆದ ಭಾರತದ ಸಂವಿಧಾನ ಸಭೆಯ ಸಭೆಯಲ್ಲಿ ಪ್ರಸ್ತುತ ರೂಪದಲ್ಲಿ ಅಂಗೀಕರಿಸಲಾಯಿತು .
ರಾಷ್ಟ್ರಧ್ವಜವು ಆಯತಾಕಾರದ ಆಕಾರದಲ್ಲಿರಬೇಕು. ಧ್ವಜವು ಯಾವುದೇ ಗಾತ್ರದಲ್ಲಿರಬಹುದು ಆದರೆ ಧ್ವಜದ ಎತ್ತರಕ್ಕೆ (ಅಗಲ) ಉದ್ದದ ಅನುಪಾತವು 3:2 ಆಗಿರಬೇಕು.

ಭಾರತದ ಧ್ವಜ ಸಂಹಿತೆ, 2002 ರ ಡಿಸೆಂಬರ್ 30, 2021 ರ ಆದೇಶದ ಪ್ರಕಾರ ತಿದ್ದುಪಡಿ ಮತ್ತು ಪಾಲಿಸ್ಟರ್ ಅಥವಾ ಯಂತ್ರ ನಿರ್ಮಿತ ಧ್ವಜದಿಂದ ಮಾಡಿದ ರಾಷ್ಟ್ರಧ್ವಜವನ್ನು ಅನುಮತಿಸಲಾಗಿದೆ. ಈಗ, ರಾಷ್ಟ್ರಧ್ವಜವು ಕೈಯಿಂದ ನೂಲುವ ಮತ್ತು ಕೈಯಿಂದ ನೇಯ್ದ ಅಥವಾ ಯಂತ್ರದಿಂದ ತಯಾರಿಸಲ್ಪಟ್ಟ ಅಂದರೇ ಹತ್ತಿ / ಪಾಲಿಯೆಸ್ಟರ್ / ಉಣ್ಣೆ / ರೇಷ್ಮೆ ಖಾದಿ ಯಲ್ಲಿ ಮಾಡಿರಬೇಕು ಎನ್ನುವುದಿದೆ.

ಹೀಗೆ ಧ್ವಜ ಸಂಹಿತೆಯಲ್ಲಿ ಸಾಕಷ್ಟು ಮಾಹಿತಿಯನ್ನ ನೀಡಲಾಗಿದೆ. ಇನ್ನು ಬಣ್ಣದ ಬಗ್ಗೆ ಹೇಳುವುದಾದರೇ
ತ್ರಿವರ್ಣ ಧ್ವಜದಲ್ಲಿ ಮೇಲೆ ಇರುವ ಕೇಸರಿ ಬಣ್ಣ ಧೈರ್ಯ, ಪರಿತ್ಯಾಗ ಮತ್ತು ದೇಶದ ಒಳಿತಿಗಾಗಿ ನಡೆಯುವ ಬಲಿದಾನಗಳ ಸಂಕೇತವಾಗಿದೆ.

ಧ್ವಜದ ಮಧ್ಯೆ ಇರುವ ಬಿಳಿ ಬಣ್ಣ ಸತ್ಯ, ಶಾಂತಿ ಮತ್ತು ಶುದ್ಧತೆಯ ಸಂಕೇತವಾಗಿದೆ. ಆ ಮೂಲಕ ಶುದ್ಧ ಮನಸ್ಸಿನವರೊಡನೆ ನಿತ್ಯವೂ ಸತ್ಯ ಶಾಂತಿಗಳೊಂದಿಗೆ ನಮ್ಮನ್ನು ಬೆಳಕಿನೆಡೆಗೆ ಕೊಂಡೊಯ್ಯುವ ಸತ್ಯ ಮಾರ್ಗದ ಸಂಕೇತ ಬಿಳಿ.

ಕೆಳಗೆ ಇರುವ ಹಸಿರು ಬಣ್ಣ ಪ್ರಗತಿಯ ಸಂಕೇತವೂ ಹೌದು. ಜೊತೆಗೆ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಅವಿನಾಭಾವ ಸಂಬಂಧವನ್ನು ತಿಳಿಸುತ್ತದೆ. ವಿಶಾಲವಾದ ಈ ಪ್ರಕೃತಿಯಲ್ಲಿ ಮನುಷ್ಯ ಅತಿಥಿಯಷ್ಟೇ. ಹಾಗಾಗಿ ಪ್ರಕೃತಿಯೊಡನೆ ಬೆರೆತು ಹಚ್ಚ ಹಸಿರಿನ ಒಡಲಿಗೆ ತೊಂದರೆ ಉಂಟು ಮಾಡದೆ ಅದರ ಅಸ್ತಿತ್ವವನ್ನು ಕಾಪಾಡಿಕೊಂಡು ಬರಬೇಕು. ಜೊತೆಗೆ ಪ್ರಕೃತಿಯಲ್ಲಿರುವ ಸಕಲ ಜೀವರಾಶಿಯ ಜೊತೆ ಮನುಷ್ಯ ಬಾಂಧವ್ಯದಿಂದ ಇರಬೇಕು ಎನ್ನುವುದನ್ನು ಸೂಚಿಸುತ್ತದೆ.
ಇನ್ನು ರಾಷ್ಟ್ರಧ್ವಜದಲ್ಲಿರುವ ಚಕ್ರವು ಧರ್ಮವನ್ನು ಪ್ರತಿನಿಧಿಸಿದರೆ ಆ ಚಕ್ರದ ಮಧ್ಯೆ ಇರುವ 24 ಗೆರೆಗಳು ವಿವಿಧ ಆಚರಣೆ, ಸಂಸ್ಕೃತಿ, ವಿವಿಧತೆಯಂತಹ ಬಹುತ್ವವನ್ನು ಪ್ರತಿನಿಧಿಸುತ್ತದೆ.

ಹಾಗಿದ್ರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಈದ್ ಮೆರವಣಿಗೆಯಲ್ಲಿ ಬಳಸಿದ ಬಣ್ಣಗಳು ಏನು ಹೇಳುತ್ತವೆ ಎಂಬುದನ್ನ ಅವಲೋಕನ ಮಾಡಿದರೇ ಸಾಕು ಎನಿಸುತ್ತದೆ. ಕೆಲವರ ಕೆಟ್ಟತನವನ್ನು ದ್ವೇಷಿಸಲು ಹೋಗಿ ಇಡೀ ಸಮುದಾಯವನ್ನು ದೂಷಿಸಿ ಮಾಡಿದ್ದೆಲ್ಲಾ ತಪ್ಪು ಎನ್ನುವುದು ಎಷ್ಟು ಸರಿ. ಅವರೂ ನಮ್ಮ ದೇಶದ ಪ್ರಜೆಗಳೇ ಅಲ್ಲವೇ ? ಸಂವಿಧಾನ ಎಲ್ಲರಿಗೂ ಸಮಾನ ಹಕ್ಕು ಕೊಟ್ಟಿದೆ. ಎಲ್ಲರನ್ನೂ ಗೌರವಿಸೋಣ , ತಪ್ಪು ಗ್ರಹಿಕೆಗಳು ಜನರ ಮನಸ್ಸನ್ನು ಒಡೆಯುತ್ತವೆ. ತಿಳುವಳಿಕೆ ಜ್ಞಾನ ಉತ್ತಮ ವ್ಯಕ್ತಿಯನ್ನು ರೂಪಿಸುತ್ತದೆ. ” ಜೈ ಭಾರತ್”
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!