Shikaripura | ಹೋರಿ ಬೆದರಿಸುವ ಸ್ಪರ್ಧೆ ವೇಳೆ ದುರಂತ: ಮೂವರು ಸಾವು
ಶಿಕಾರಿಪುರ: ದೀಪಾವಳಿ ಹಬ್ಬದ ಬಳಿಕ ಸಂಪ್ರದಾಯದಂತೆ ನಡೆಯುವ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಸಂಭವಿಸಿದ ಪ್ರತ್ಯೇಕ ದುರ್ಘಟನೆಗಳಲ್ಲಿ ಮೂವರು ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ (shikaripura)ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಕಲ್ಮನೆ ಗ್ರಾಮದಲ್ಲಿ ಗುರುವಾರ ನಡೆದ ಹೋರಿ ಹಬ್ಬವನ್ನು ಮನೆಯ ಬಾಗಿಲಲ್ಲಿ ನಿಂತು ವೀಕ್ಷಿಸುತ್ತಿದ್ದ ಈರಪ್ಪ (84) ಹಾಗೂ ಪಕ್ಕದ ಚುರ್ಚುಗುಂಡಿ ಗ್ರಾಮದ ಅರುಣ್ (48) ಎಂಬುವವರ ಮೇಲೆ ಓಡುತ್ತಿದ್ದ ಹೋರಿ ನುಗ್ಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇಬ್ಬರೂ ಮೃತಪಟ್ಟಿದ್ದಾರೆ.Shivamogga | ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆ ಸಾವು; ಆರೋಪಿ ಬಂಧನ – ಅರಣ್ಯ ಇಲಾಖೆ ಪತ್ರಿಕಾ ಪ್ರಕಟಣೆ
ಇನ್ನೊಂದು ದುರ್ಘಟನೆ ಹುಣಸೇಕೊಪ್ಪ ಗ್ರಾಮದ ಸಮೀಪ ಗುರುವಾರ ನಡೆದಿದೆ. ಹಿತ್ತಲ ಗ್ರಾಮದಲ್ಲಿ ಬುಧವಾರ ನಡೆದ ಹೋರಿ ಬೆದರಿಸುವ ಹಬ್ಬದಲ್ಲಿ ಭಾಗವಹಿಸಿದ್ದ ಅಶ್ರಫ್ (22) ಎಂಬ ಯುವಕ ಮೃತಪಟ್ಟಿದ್ದಾನೆ.
ಹಬ್ಬ ಮುಗಿಸಿ ವಾಪಸ್ ತೆರಳುತ್ತಿದ್ದ ಹೋರಿಯೊಂದು ಕೆರೆಗೆ ಬಿದ್ದು ಹೊರಬರಲಾಗದೆ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಅಶ್ರಫ್ ಹೋರಿಯನ್ನು ರಕ್ಷಿಸಲು ಕೆರೆಗೆ ಇಳಿದಿದ್ದಾರೆ. ಆದರೆ, ನೀರಿನಲ್ಲಿ ಮುಳುಗಿದ ಅವರನ್ನು ರಕ್ಷಿಸಲು ನಡೆಸಿದ ಪ್ರಯತ್ನ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇನ್ನು ಪಟ್ಟಣದಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯ ವೇಳೆ ಬಿದ್ದ ಹೋರಿಯೊಂದರ ಕಾಲು ಮುರಿದಿರುವುದಾಗಿಯೂ ತಿಳಿದುಬಂದಿದೆ.
ಸಾಂಪ್ರದಾಯಿಕ ಹಬ್ಬದ ಸಂಭ್ರಮದ ನಡುವೆ ಸಂಭವಿಸಿದ ಈ ಸರಣಿ ದುರ್ಘಟನೆಗಳು ಸ್ಥಳೀಯರಲ್ಲಿ ದುಃಖ ಮೂಡಿಸಿವೆ.






