ರಾಜ್ಯದ ಪ್ರಸಿದ್ಧ ಶಂಕರಾಚಾರ್ಯ ಪೀಠದಲ್ಲೊಂದಾದ ಸ್ವರ್ಣವಲ್ಲೀ ಮಠದ 55ನೇ ನೂತನ ಯತಿಗಳಿಗೆ ಸನ್ಯಾಸ ದೀಕ್ಷೆ:ನಾಮಕರಣ

172

ಶ್ರೀಸ್ವರ್ಣವಲ್ಲೀ( ಶಿರಸಿ): ಶಂಕರಾಚಾರ್ಯರ ಪರಂಪರೆಯ ಶ್ರೀ ಸೋಂದಾ ಸ್ವರ್ಣವಲ್ಲೀ‌ ಮಹಾ‌ಸಂಸ್ಥಾನಕ್ಕೆ ಉತ್ತರಾಧಿಕಾರಿಗಳಾಗಿ 55ನೇ ನೂತನ ಯತಿಗಳಾಗಿ‌ ಬ್ರಹ್ಮಚಾರಿ ವಿದ್ವಾನ್ ನಾಗರಾಜ್ ಭಟ್ಟ ಗಂಗೆಮನೆ ಅವರು ಗುರುವಾರ ಸನ್ಯಾಸ ಗ್ರಹಣ‌ ಮಾಡಿದರು.

ಸ್ವರ್ಣವಲ್ಲೀ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಹಾಗೂ ಸನ್ಯಾಸ ಗ್ರಹಣದ ವಿಧಿ ವಿಧಾನಗಳ ನಡೆದವು.

ಕಳೆದ ಫೆ.18 ರಿಂದ ನಡೆಯುತ್ತಿದ್ದ ಶಿಷ್ಯ ಸ್ವೀಕಾರ ಮಹೋತ್ಸವದ ಕಾರ್ಯಕ್ರಮಗಳ ಕೊನೇಯ ದಿನವಾದ ಶೋಭನ ಸಂವತ್ಸರದ ಮಾಘ ಶುಕ್ಲ ತ್ರಯೋದಶಿ ಗುರುವಾರ ಬೆಳಿಗ್ಗೆ 10ರಿಂದ 10:30ರ ಅವಧಿಯಲ್ಲಿ ನೂತನ ಶ್ರೀಗಳಿಗೆ ಸನ್ಯಾಸ ದೀಕ್ಷೆ ನೀಡಲಾಯಿತು.

ಮುಂಜಾನೆ 5ರಿಂದಲೇ ವಿವಿಧ ಧಾರ್ಮಿಕ ಹಾಗೂ ಕಾಯ ಶೋಧನ ಕಾರ್ಯಗಳು ಶ್ರೀಮಠದಲ್ಲಿ ನಡೆದವು.

ಬೆಳಿಗ್ಗೆ 9-40 ರ ಸುಮಾರಿಗೆ ಶ್ರೀಮಠದಿಂದ ಸುಮಾರು ಒಂದು‌ ಕಿಲೋಮೀಟರ್ ದೂರದ ಶಾಲ್ಮಲಾ‌ ನದಿಯತ್ತ ಜಲಾಶಯಗಮನ ಮಾಡಲಾಯಿತು. ಬಳಿಕ ನೂತನ ಉತ್ತರಾಧಿಕಾರಿಗಳು ಸ್ನಾನ ಪೂರ್ಣಗೊಳಿಸಿ ಮೇಲ್ಮುಖವಾಗಿ ಜನಿವಾರ ತೆಗೆದು, ಶಿರದ ಮೇಲಿ‌ನ ಆರು‌ ಕೂದಲನ್ನು ಹರಿದು, ಸಂಸಾರದ ಬಂಧ ಸಹಿತ, ಸರ್ವಸ್ವವನ್ನೂ ತ್ಯಾಗ ಮಾಡಿ ಏಳು ಹೆಜ್ಜೆ ಇಟ್ಟರು.

ಪ್ರಪಂಚ ಬಂಧನ ಬಿಟ್ಟು ಸಚ್ಚಿದಾನಂದ ಸ್ವರೂಪಿಯಾದ ಅವರಿಗೆ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಕಾಷಾಯ ವಸ್ತ್ರ ನೀಡಿದರು.

ಇದೇ ಶುಭ ಘಳಿಗೆಯಲ್ಲಿ ಸಾವಿತ್ರೀ ಪ್ರವೇಶ, ಪ್ರೇಶೋಚ್ಛಾರಣೆ, ಬ್ರಹ್ಮ ದಂಡದ ಧಾರಣೆ ಕೂಡ ಮಾಡಲಾಯಿತು.

ಸ್ವಾಮಿಗಳ ಪೂರ್ವಾಶ್ರಮದ ತಂದೆತಾಯಿ

10-30 ರ ಸುಮಾರಿಗೆ ಶಾಲ್ಮಾಲಾ ನದಿ (shalmala river) ತಟದಲ್ಲಿ‌ ನೂತನ ಯತಿಗಳು ಭೂ ಸ್ಪರ್ಷ ಮಾಡಿದರು. ಅಲ್ಲಿಂದ ಪಂಚ ವಾದ್ಯಗಳ, ವೈದಿಕರ ವೇದ ಘೋಷ, ನಾಲ್ಕು ಸಾವಿರಕ್ಕೂ ಅಧಿಕ ಮಾತೆಯರಿಂದ ಪೂರ್ಣ ಕುಂಭ ಸ್ವಾಗತದ ಮೂಲಕ ನೂತನ ಯತಿಗಳನ್ನು, ಸ್ವರ್ಣವಲ್ಲೀ ಹಾಗೂ ಇತರ ಮಠಗಳ ಯತಿಗಳನ್ನು ಶ್ರೀಮಠಕ್ಕೆ ಬರ ಮಾಡಿಕೊಳ್ಳಲಾಯಿತು.

ಶ್ರೀಮಠದಲ್ಲಿ‌ ಆಡಳಿತ‌ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ, ಕೇಂದ್ರ ಮಾತೃ ಮಂಡಳಿ ಪ್ರಮುಖರು ಮಠದ ಆವರಣದಲ್ಲಿ ಸಾಂಪ್ರದಾಯಿಕ‌ವಾಗಿ ಸ್ವಾಗತಿಸಿದರು.

ಶ್ರೀಮಠಕ್ಕೆ ಆಗಮಿಸಿದ ಬಳಿಕ ಆರಾಧ್ಯ ದೇವರ ದರ್ಶನ ಪಡೆದು ಗುರುಮೂರ್ತಿ ಭವನಕ್ಕೆ ತೆರಳಿದರು. ಬಳಿಕ ಶಂಖ ಸ್ನಾನ, ಪ್ರಣವ ಮಹಾ ವಾಕ್ಯೋಪದೇಶ ನೀಡಿ ನೂತನ ಶ್ರೀಗಳಿಗೆ ಶ್ರೀಆನಂದಬೋಧೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಎಂದು ನಾಮಕರಣವನ್ನು ಸ್ವರ್ಣವಲ್ಲೀ ಶ್ರೀಗಳು‌ ಮಾಡಿದರು.

ಪರ್ಯಂಕಶೌಚ, ಯೋಗ‌ಪಟ್ಟ, ಬ್ರಹ್ಮವಿದಾಶೀರ್ವಚನ ನಡೆಸಲಾಯಿತು.
ನಾಡಿನ ಹೆಸರಾಂತ ಯತಿಗಳಾದ ಎಡತೋರೆ ಶ್ರೀಶಂಕರ ಭಾರತೀ‌ ಮಹಾ ಸ್ವಾಮೀಜಿ, ಹರಿಹರ ಪುರದ ಶ್ರೀಸ್ವಯಂಪ್ರಕಾಶ ಸಚ್ಚಿದಾನಂದ ಸ್ವರೂಪಿ‌ ಮಹಾ ಸ್ವಾಮೀಜಿ,‌ ಬೆಂಗಳೂರಿನ‌ ಕೂಡ್ಲಿ ಶೃಂಗೇರಿ‌ ಮಠದ ವಿದ್ಯಾ ವಿಶ್ವೇಶ್ವರ ಭಾರತೀ ‌ಮಹಾ‌ ಸ್ವಾಮೀಜಿ, ಹೋಳೆ‌ನರಸೀಪುರದ ಶ್ರೀಪ್ರಕಾಶಾನಂದೇಂದ್ರ ಮಹಾ ಸ್ವಾಮೀಜಿ , ಶ್ರೀಮನ್ನೆಲಮಾವು ಮಠದ ಶ್ರೀಮಾಧವಾನಂದ‌ ಭಾರತೀ‌‌ ಮಹಾ‌ ಸ್ವಾಮೀಜಿ, ತುರುವೇಕೇರೆಯ ಶ್ರೀಪ್ರಣವಾನಂದ ತೀರ್ಥ ಸ್ವಾಮೀಜಿ ಹಾಗೂ ಹಲವು ವಿದ್ವಾಂಸರು ಮೂವತ್ತು ಸಾವಿರಕ್ಕೂ ಅಧಿಕ ಭಕ್ತ ಶಿಷ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!