ಬೇಳೂರು ಸುಬ್ಬಾರಾವ್ ಮನೆಯಲ್ಲಿ ಚಿಗುರೊಡೆದ “ಒಂದು ಮಾವಿನ ಮಿಡಿ” ಕಥೆ.

1144

ಮಲೆನಾಡು ಭಾಗದಲ್ಲಿ ಮಾವಿನ ಮಿಡಿ ಎಂದರೇ ಎಲ್ಲರ ಬಾಯಲ್ಲೂ ನೀರೂರುತ್ತದೆ. ಒಂದು ಕಾಲದಲ್ಲಿ ಮನೆಯಲ್ಲಿ ಉಪ್ಪು ಹೇಗೆ ಇರುತ್ತದೆಯೋ, ಹಾಗೆಯೇ ಮಾವಿನ ಉಪ್ಪಿನಕಾಯಿಗಳು ಎಲ್ಲೆಡೆ ಕಾಣಸಿಗುತ್ತಿತ್ತು.

ದಿ.ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕಾಲದಲ್ಲಿ ಮಾವಿನ ಗಿಡಗಳನ್ನು ರಸ್ತೆಯ ಪಕ್ಕದಲ್ಲಿ ನೆಡೆಸುತಿದ್ದರು. ಇದರಿಂದಾಗಿ ಅದೆಷ್ಟೋ ಜನರಿಗೆ ಮಾವಿನ ಫಸಲಿನ ಕಾಲದಲ್ಲಿ ಜೀವನ ನಿರ್ವಹಣೆಗೆ ದಾರಿಯಾಗುತಿತ್ತು.

ಆದರೇ ಈಗ ಕಾಲ ಬದಲಾಗಿದೆ. ಹಿಂದೆ ಗುಡ್ಡ ಬೆಟ್ಟ ಸೇರಿದಂತೆ ರಸ್ತೆಗಳ ಪಕ್ಕದಲ್ಲಿದ್ದ ಮಾವಿನಮರಗಳು ನಮ್ಮ ಬದುಕಿಗಾಗಿ ಜೀವ ಬಲಿ ಕೊಟ್ಟಿದೆ. ಆದರೇ ಮಲೆನಾಡಿನ ಮಾವಿನಕಾಯಿ ರುಚಿ ಬಲ್ಲ ಅದೆಷ್ಟೋ ಜನರು, ಇಂತಹ ಅಪರೂಪದ ಮಲೆನಾಡಿನ ಮಾವಿನ ತಳಿಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸಿದ್ದಾರೆ.

ಇಂತಹ ಸಾಲಿನಲ್ಲಿ ಯಾವುದೇ ಪ್ರತಿಪಲಾಕ್ಷೆ ನಿರೀಕ್ಷಿಸದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬೇಳೂರು ಗ್ರಾಮದ ಸುಬ್ಬಾರಾವ್ ರವರು ಕೂಡ ಒಬ್ಬರು .

ಇಂದು ಅವರು ಬೆಳಸಿ ರಕ್ಷಿಸಿದ ಮಾವಿನ ತಳಿಗಳ ಬಗ್ಗೆ ಇಂದಿನ ನಮ್ಮ “ನೆಲದ ಕಥೆ” ಪ್ರಾರಂಭಿಸುತಿದ್ದೇನೆ.

ಸುಬ್ಬಾರಾವ್ ಗೆ ಈಗ 84 ವರ್ಷ ಮೂಲತಹಾ ಸಾಗರ ತಾಲೂಕಿನ ಬ್ರಾಹ್ಮಣ ಹವ್ಯಕ ಜನಾಂಗದ ಸಂಪ್ರದಾಯಿಕ ಕುಟುಂಬದವರು.
ಹವ್ಯಕರಲ್ಲಿ ಊಟಕ್ಕೆ ವಿಶೇಷ ಸ್ಥಾನವಿದೆ. ಅನ್ನಹಾಕಿದ ಬಾಳೆಎಲೆಯಲ್ಲಿ “ಕಳಶ”ದಂತೆ ಮಾವಿನ ಉಪ್ಪಿನಕಾಯಿ ಇರದಿದ್ದರೆ ಅಂದು ಆ ಭೂಜನ ಸಂಪೂರ್ಣ ವಾದಂತಲ್ಲ.

ಸುಬ್ಬಾರಾವ್ ರವರು ಕೂಡ ಮಾವಿನ ಮಿಡಿ ಉಪ್ಪಿನಕಾಯಿ ಪ್ರಿಯರು. ಹೀಗಾಗಿ ರುಚಿ ಬಲ್ಲ ಇವರು ಮುಂದಿನ ದಿನಗಳಲ್ಲಿ ಕಾಣಸಿಗದ ಪಶ್ಚಿಮ ಘಟ್ಟದ 150 ವಿವಿಧ ತರದ ಮಾವಿನ ಗಿಡಗಳನ್ನು ರಕ್ಷಿಸಿ ಬೆಳೆಸಿದ್ದಾರೆ. ಇದರಲ್ಲಿ ಮುಖ್ಯವಾದ 15 ಜೀರಿಗೆ ಮತ್ತು ಅಪ್ಪೆ ಎನ್ನುವ ಮಲೆನಾಡಿನ ಪ್ರಸಿದ್ಧ ಉಪ್ಪಿನಕಾಯಿಗೆ ಹಾಗೂ ಹಣ್ಣಿಗೆ ಬಳಸುವ ವಿಶಿಷ್ಟ ತಳಿಗಳು ಸಂರಕ್ಷಿಸಿ ಬೆಳಸಲಾಗಿದೆ.

ಸುಬ್ಬರಾವ್ ರವರ ಮನೆಯ ಹಿತ್ತಲ “ಕಣಜ”ದಲ್ಲಿ ಏನದೆ?

ಸುಬ್ಬಾರಾವ್ ರವರು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸಿಗುವ ಜೀರಿಗೆ,ಅಪ್ಪೆ ಮಿಡಿಯ ಸಸಿಗಳನ್ನು ಪೋಷಣೆ ಮಾಡಿದ್ದಾರೆ. ಕೆಲವು ಸಸಿಗಳಿಗೆ ಕಸೆ ಕಟ್ಟಿದ್ದಾರೆ, ಇನ್ನು ಕೆಲವು ಸಸಿಗಳು ಮನೆಯಂಗಳದಲ್ಲಿ ಬೋನ್ಸಾಯ್ ರೂಪಪಡೆದರೆ , ಇರುವ ಅಲ್ಪ ಜಾಗದಲ್ಲಿ ನೂರಾರು ಸಸಿಗಳು ಇವರ ಪೋಷಣೆಯಲ್ಲಿ ಜೀವನ ಕಟ್ಟಿಕೊಂಡಿದೆ. ತಾವು ಎಲ್ಲಿ ಮಾವಿನ ಸಸಿ ಸಂಗ್ರಹಿಸಿದ್ದಾರೋ ಆ ಊರಿನ ಹೆಸರನ್ನು ಅವರು ಅವುಗಳಿಗೆ ಇಟ್ಟಿರುವುದು ವಿಶೇಷವಾಗಿದೆ.

ಜೀರಿಗೆ ಮಿಡಿಯ ತಳಿಗಳು:-

ದೊಂಬೆ ಸರ ಜೀರಿಗೆ ,ಬರಿಗೆ ಜೀರಿಗೆ ,ಕಪ್ಪಳ್ಳಿ ಜೀರಿಗೆ,ಬಾಗಿಜೀರಿಗೆ ,ಚೀನಿತೋಟದ ಜೀರಿಗೆ, ಗೆಣಸಿನಕುಣಿ ಜೀರಿಗೆ,ಗೇಣಿ ತೋಟ ಜೀರಿಗೆ ಹೀಗೆ ಹತ್ತು ಹಲವು ಜೀರಿಗೆ ತಳಿಗಳ ಸಂಗ್ರಹವಿದೆ.

ಅಪ್ಪೆಮಿಡಿ ತಳಿಗಳು:-

ಕೊಪ್ಪೆ ಅಪ್ಪೆ, ಕಬ್ಬಳ್ಳಿ ಅಪ್ಪೆ,ಕಲ್ಲುಕೊಟರು ಅಪ್ಪೆ,ಕಂಚಪ್ಪೆ, ಕರ್ಪೂರದ ಅಪ್ಪೆ
ಸಾಲುಗೊತ್ತಿಗೆ ಅಪ್ಪೆ ,ಮೆಣಸಿನಕೊಡ್ಲು ಅಪ್ಪೆ ,ಚೂಪಣ್ಣಿ ಅಪ್ಪೆ (ಸಿಹಿ ಹಣ್ಣಿನ ಅಪ್ಪೆ ) ಸಕ್ಕರೆ ಗುತ್ತಿ (ಬೆಂಗಳೂರು ಹಾಗೂ ತುಮಕೂರು ಭಾಗದಲ್ಲಿ ಸಿಗುತ್ತೆ.ಅಡಿಕೆಗಿಂತ ಸಣ್ಣವಾಗಿ ಇರುತ್ತದೆ. ಎಲೆ-ಅಡುಕೆ ತರ ಅಗೆದು ಇದರ ರಸ ಹೀರಿ ಗೊರಟೆ ಉಗುಯಬೇಕು.ಅತ್ಯಂತ ಸಿಹಿ ಹಣ್ಣು ಇದು ) ಆಪಲ್ ರಾಜ್ (ಕುಂಕುಮದ ಕಲ್ಲರ್ ಒಳಭಾಗ ಇರುವ ಹಣ್ಣು ಇದು ಬಲು ಅಪರೂಪವಾಗಿದ್ದು ಅತೀ ಸಿಹಿಯಾಗಿರುತ್ತದೆ. )

ಮಾವಿನ ಸಸಿಗಳು.

ಜೀರಿಗೆ ಮತ್ತು ಅಪ್ಪೆ ತಳಿಗಳ ವಿಶೇಷ ಹೀಗಿದೆ.

ಜೀರಿಗೆ ಮಿಡಿ ಎಂದರೇ ಜೀರಿಗೆಯಂತೆ ಪರಿಮಳ ಇರುವ ಮಾವಿನ ಗಿಡ.ಇದರ ಎಲೆ ,ಕಾಯಿ ಅತೀ ಪರಿಮಳವಿರುತ್ತದೆ.ಮಾವಿನಕಾಯಿ ತೊಟ್ಟು ಮುರಿದರೆ ಅದರಿಂದ ಆಸಿಡ್ ನಂತಿರುವ ಅಂಶಗಳು ಚಿಮ್ಮುತ್ತವೆ ,ಇದರ ಸೊನೆಯನ್ನು ಸಂಗ್ರಹಿಸಿ ವರ್ಷಗಟ್ಟಲೇ ಇಟ್ಟು ಪದಾರ್ಥಗಳನ್ನು ಮಾಡುತ್ತಾರೆ. ಜೀರಿಗೆ ಮಾವಿನಕಾಯಿಗಳು ಉಪ್ಪಿನಕಾಯಿ ತೆಯಾರಿಕೆಗೆ ಹೇಳಿಮಾಡಿಸಿದ ತಳಿ. ಬಹುಕಾಲ ಕೆಡದಂತೆ ಸಂಗ್ರಹಿಸಿಡಬಹುದು. ಇದರಿಂದ ಉಪ್ಪಿನಕಾಯಿ ಮಾಡಿದರೆ ಅತೀ ಮರಿಮಳವಿರುತ್ತದೆ.ಮಲೆನಾಡು ಭಾಗದಲ್ಲಿ ಇದರ ಕಾಯಿಯಿಂದ ನೀರುಗೊಜ್ಜು ,ಮಂದಾನಗೊಜ್ಜು ,ಸಿಹಿ ಉಪ್ಪಿನಕಾಯಿ ಸಹ ಮಾಡುತ್ತಾರೆ.

ಬೆಳೆದು ನಿಂತ ಅಪರೂಪದ ಮಾವಿನ ಮರಗಳು

ಅಪ್ಪೆ ಮಿಡಿ ಸಹ ಉಪ್ಪಿನಕಾಯಿ ಮಾಡುವುದಕ್ಕೆ ಅತೀ ಸೂಕ್ತ .ಜೀರಿಗೆಯಂತೆ ಪರಿಮಳವಿಲ್ಲದಿದ್ದರೂ ಉಪ್ಪಿನಕಾಯಿಯ ರಾಣಿ ಎಂದು ಹೇಳಬಹುದು. ಇದರ ಕಾಯಿ ,ಹಣ್ಣು ಪದಾರ್ಥಗಳನ್ನು ಮಾಡಲು ಹೇಳಿಮಾಡಿಸಿದಂತಿದೆ. ಬಹುಕಾಲ ಕೆಡದಂತೆ ಇಡಲು ಇದು ಯೋಗ್ಯವಾಗಿದೆ.

ಈ ಮಾವಿನ ಗಿಡ ಹಾಗೂ ಹಣ್ಣುಗಳ ಪ್ರಯೋಜನವೇನು?

ಪ್ರತಿಯೊಬ್ಬರೂ ಯಾವುದೇ ಪದಾರ್ಥ ಉಪಯೋಗಿಸುವಾಗ ಅದರ ಪ್ರಯೋಜನ ಏನು ಎಂದು ಕೇಳುವುದು ಸಾಮಾನ್ಯ . ಹೌದು ಇದರ ಪ್ರಯೋಜನ ಕೇಳಿದರೆ ನೀವು ಹುಬ್ಬೇರಿಸದೇ ಇರಲಾರಿರಿ.
ಹೌದು ಮಾವಿನಕಾಯಿಯಲ್ಲಿ ನಾರಿನ ಅಂಶ ,ಸಕ್ಕರೆ ಅಂಶ ಹೆಚ್ಚಿದೆ. “ಸಿ” ವಿಟಮಿನ್ ಹೇರಳವಾಗಿದೆ.

ಎಲ್ಲಾರೋಗ ನಿವಾರಣೆಗೆ ವಿಟಮಿನ್ “ಸಿ” ಅಂಶ ಶಕ್ತಿಯನ್ನು ಹೆಚ್ಚಿಸುತ್ತದೆ.ದೇಹದಲ್ಲಿ ಬೇಡದೇ ಇರುವ ಕೊಬ್ಬಿನ ಅಂಶವನ್ನು ತೆಗೆದುಹಾಕುಲು ಮಾವಿನ ಹಣ್ಣಿನ ನಾರಿನಾಂಶ ಪ್ರಮುಖ ಪಾತ್ರ ವಹಿಸುತ್ತದೆ.

ರಾಸಾಯನಿಕವಾಗಿ ಕಾರ್ಬೋ ಹೈಡ್ರೆಡ್ ,ಅಮೈನೂ ಯಾಸಿಡ್ (ಲೈಸೀನ್, ವ್ಯಾಲಿನ್ ,ಆರ್ಜಿನೈನ್ ,ಪಿನೈಯಲ್ ಎಲನಿನ್ ,ನಿಥೀಯೋನಿನ್ ) ಫೈಬರ್ ಅಂಶ ಗಳು ಇವುಗಳಲ್ಲಿ ಇವೆ.

ಮಾವಿನ ಮಿಡಿಯ ಸೊನೆಯಲ್ಲಿ ಬ್ಯಾಕ್ಟೀರಿಯ ಇರುವುದಿಲ್ಲ. ಹಾಗಾಗಿ ಈ ಸೊನೆಯನ್ನು ಸಂಗ್ರಹಿಸಿ ಹಳೆಯ ಮಾವಿನ ಮಿಡಿಗೆ ಹಾಕಿದಲ್ಲಿ ತಾಜವಾಗುತ್ತದೆ.

ಮಾವಿನ ಹಣ್ಣಿನಲ್ಲಿ ಓಮೆಗಾ “3” ಓಮೆಗಾ” 6″ ಅಂಶಗಳು ಹೆಚ್ಚಾಗಿವೆ . ಇವು ಮನುಷ್ಯನ ವೀಕ್ ನೆಸ್ ,ಎಲಬು ಸಂಬಂಧಿ ರೋಗಗಳಿಗೆ ರಾಮಭಾಣವಾಗಿದೆ.

ಆದರೇ ಹೈಬ್ರೀಡ್ ಅಥವಾ ಕಸಿ ಮಾಡಿದ ಸಸಿಗಳಲ್ಲಿ ನಾರಿನಾಂಶ ಕಮ್ಮಿ ಇರುತ್ತದೆ.

ಮಾವಿನ ಗಿಡದ ಕುಡಿ ಎಲೆಗಳು ದ್ವನಿ ವರ್ಧಕವಾಗಿದ್ದು , ಕೂದಲು ಕಪ್ಪಾಗಿಯೇ ಇರಲು ಹಾಗೂ ಯವ್ವನತ್ವಕ್ಕೆ ಆಯುರ್ವೇಧ ಶಾಸ್ತ್ರದಲ್ಲಿ ಬಳಕೆ ಇದೆ. ಮಾವಿನ ಬೇರು ಜ್ವರ ನಿವಾರಣೆಗೆ ವಿವಿಧ ಗಿಡಮೂಲಿಕೆಯೊಂದಿಗೆ ಬಳಸಲಾಗುತ್ತದೆ.
ಬಾಯಿ ದುರ್ಗಂಧ ಮುಕ್ತಿಗೂ ಸಹ ಜೀರಿಗೆ,ಅಪ್ಪೆ ಮಿಡಿಗಳನ್ನು ತಿನ್ನುವುದರಿಂದ ಹೋಗಲಾಡಿಸಬಹುದು.

ತಾವು ಬೆಳಸಿದ ತೋಟದಲ್ಲಿ ಬೇಳೂರು ಸುಬ್ಬಾರಾವ್ .

ಸಂಶೋಧನೆ ನಡೆಯಬೇಕಿದೆ.

ಮಾವಿನ ಹಣ್ಣುಗಳ ಬಗ್ಗೆ ಹೆಚ್ಚು ಸಂಶೋಧನೆಗಳು ನಡೆಯುತ್ತಿವೆ. ಆದರೇ ಪಶ್ಚಿಮ ಘಟ್ಟದ ಬಲು ಅಪರೂಪದ ಈ ಮಾವಿನ ತಳಿಗಳ ಬಗ್ಗೆ ಹೆಚ್ಚು ಸಂಶೋಧನೆಗಳು ನಡೆದಿಲ್ಲ. ಹೀಗಾಗಿ ಇದರ ಉಪಯೋಗ ಹಾಗೂ ಮಹತ್ವ ಬಾಹ್ಯ ಜಗತ್ತಿಗೆ ಅಷ್ಟಾಗಿ ತಿಳಿದಿಲ್ಲ .

ಅರಣ್ಯ ಹಾಗೂ ತೋಟಗಾರಿಕೆ ಇಲಾಖೆಯವರು ಈ ವಿಶೇಷ ತಳಿಗಳನ್ನು ಉಳಿಸಿ ಬೆಳಸಬೇಕಿದೆ.

ಬೇಳೂರು ಸುಬ್ಬಾರಾವ್ ರವರು ಮುಂದಿನ ತಲೆಮಾರಿಗೆ ಈ ತಳಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ತಮ್ಮ ಅಂಗಳದಲ್ಲಿ ಮಾವಿನ ಮಿಡಿಗಳ ತಳಿಯ ಪಾರ್ಕ ನಿರ್ಮಿಸುವ ಕನಸು ಹೊತ್ತಿದ್ದಾರೆ. ಇದಲ್ಲದೇ ತಮಗೆ ತಿಳಿದ ಮಾಹಿತಿಯನ್ನು ಅವರು ಇತರರಿಗೂ ಹಂಚುವ ಮೂಲಕ ಮಲೆನಾಡು ಭಾಗದ ಅಳವಿನಂಚಿನಲ್ಲಿ ಇರುವ ಈ ಅಪರೂಪದ ಮಾವಿನ ಗಿಡಗಳನ್ನು ರಕ್ಷಿಸಿಕೊಂಡು ಬರುತಿದ್ದಾರೆ. ಈ ಇಳಿ ವಯಸ್ಸಿನಲ್ಲೂ ಬತ್ತದ ಇವರ ಉತ್ಸಾಹಕ್ಕೆ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.

ಪತ್ನಿಯೊಂದಿಗೆ ಸುಬ್ಬಾರಾವ್ .

ಅಧ್ಯಯನಕಾರರಿಗೆ ಹಾಗೂ ಮಾವಿನ ತಳಿಗಳನ್ನು ರಕ್ಷಿಸುವ ಉತ್ಸಾಹ ಹೊಂದಿದ ಜನರು ಇವರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು . ಈ ನಿಟ್ಟಿನಲ್ಲಿ ಅವರ ಮೊಬೈಲ್ ಸಂಖ್ಯೆ – +919740864168 ಅನ್ನು ಓದುಗರಿಗೆ ನೀಡಿದ್ದೇವೆ. ಅವರಿಗೆ ಕಿರಿಕಿರಿಯಾಗದಂತೆ ಆಸಕ್ತರು ಮಾಹಿತಿ ಪಡೆದುಕೊಳ್ಳಬಹುದು.

ಲೇಖನ:- ಶುಭಾನವೀನ್ ಸಾಗರ್.
ಚಿತ್ರಗಳು:- ಉದಯ್ ಸಾಗರ್. ಶಿವಮೊಗ್ಗ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!