BREAKING NEWS
Search

ಉತ್ತರ ಕನ್ನಡ ಜಿಲ್ಲೆಯ ಇಂದಿನ ಪ್ರಮುಖ ಸುದ್ದಿಗಳು-ಎಲ್ಲಿ ಏನು?

896

ಚಿರಂಡಿಯಲ್ಲಿ ಸಿಲುಕಿದ್ದ ಹೋರಿಯನ್ನು ಒಂದು ಘಂಟೆಗೂ ಹೆಚ್ಚುಕಾಲ ಕಾರ್ಯಾಚರಣೆ ನಡೆಸಿ ರಕ್ಷಣೆ.

ಶಿರಸಿ ನಗರದ ಹುಲೇಕಲ್ ರಸ್ತೆಯ ಪೊಲೀಸ್ ವಸತಿ ನಿಲಯದ ಹತ್ತಿರದ ಗಟಾರದಲ್ಲಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುತಿದ್ದ ಹೋರಿಯನ್ನು ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್ ರವರ ತಂಡ ಒಂದು ಘಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಹೋರಿಯನ್ನು ಹಿಟಾಚಿ ಮುಕಾಂತರ ಮೇಲೆ ತೆಗೆದು ರಕ್ಷಿಸಿದ್ದಾರೆ. ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚಿಗೆ ವ್ಯಕ್ತಪಡಿಸಿದರು.

ಮರ ಕಡಿಯಲು ಅನುಮತಿ ನಿರಾಕರಣೆ-ಪಿಡಿಓ ಗೆ ತಳಿಸಿದ SDMC ಅಧ್ಯಕ್ಷ.

ಹಲ್ಲೆಗೊಳಗಾದ. PDO

ಮುಂಡಗೋಡು:- ಶಾಲೆಯ ಆವರಣದಲ್ಲಿ ಇರುವ ಮರಗಳ ಕಟಾವ್ ಗೆ ಅನುಮತಿ ನೀಡಲು ಅಧಿಕಾರ ಇಲ್ಲ ಎಂದು ಹಿಂಬರ ನೀಡಿದ ಪಿಡಿಓ ಗೆ ಉರ್ದು ಶಾಲೆಯ ಎಸ್.ಡಿ.ಎಮ್ .ಸಿ ಅಧ್ಯಕ್ಷ ಹಲ್ಲೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ನಂದಿಕಟ್ಟಾ ದಲ್ಲಿ ನಡೆದಿದೆ.ನಂದಿಕಟ್ಟ ಉರ್ದು ಕಿರಿಯ ಪ್ರಾಥಮಿಕ ಶಾಲಾ ಸಮಿತಿಯ ಅಧ್ಯಕ್ಷ ಗೌಸುಸಾಬ ಎಳ್ಳೂರ ಎಂಬವನೆ ಹಲ್ಲೆ ನಡೆಸಿದ ವ್ಯಕ್ತಿಯಾಗಿದ್ದು, ಪಿಡಿಒ ವೆಂಕಪ್ಪ ಲಮಾಣಿ ಹಲ್ಲೆಗೊಳಗಾದವರಾಗಿದ್ದಾರೆ. ಉರ್ದು ಶಾಲೆಯ ಆವರಣದ ಲ್ಲಿರುವ ನಾಲ್ಕು ಮರಗಳನ್ನು ಕಟಾವ್ ಮಾಡಲು ನೀರಾಕ್ಷೇಪಣ ಪತ್ರ ನೀಡುವಂತೆ ಗ್ರಾಮ ಪಂಚಾಯತಕ್ಕೆ ಅರ್ಜಿ ಸಲ್ಲಿಸಿದ್ದ ಆರೋಪಿ ಗೆ ನೀರಾಕ್ಷೇಪಣ ಪತ್ರವನ್ನು ಪಂಚಾಯತದಿಂದ ನೀಡಲು ಬರುವುದಿಲ್ಲ, ಅರಣ್ಯ ಇಲಾಖೆಯಿಂದ ಪಡೆದುಕೋಳ್ಳುವಂತೆ ಹಿಂಬರಹವನ್ನು ಪಂಚಾಯತ ಪಿಡಿಒ ವೆಂಕಪ್ಪ ಲಮಾಣಿ ನೀಡಿದ್ದರು. ಇದಕ್ಕೆ ಕುಪಿತಗೊಂಡು ಪಿಡಿಓ ಮೇಲೆ ಹಲ್ಲೆ ಮಾಡಿದ್ದರು.
ಘಟನೆ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ವಂತ ಹಣ ಹಾಕಿ ಸಾರ್ವಜನಿಕರಿಂದಲೇ ರಸ್ತೆ ದುರಸ್ತಿ- ರಾಜ್ಯ ಹೆದ್ದಾರಿಯಲ್ಲಿ ಭಾರಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಜಿಲ್ಲಾಡಳಿತಕ್ಕೆ ಆಗ್ರಹ.

ಮನವಿ ನೀಡುತ್ತಿರುವುದು.

ಕಾರವಾರ: ಸದಾಶಿವಗಡ ಔರಾದ್ ರಾಜ್ಯ ಹೆದ್ದಾರಿ 34 ರಲ್ಲಿ ಮೊದಲಿನಂತೆ ಎಲ್ಲ ಬಸ್ ಗಳ ಸಂಚಾರಕ್ಕೆ ಹಾಗೂ ಜಲ್ಲಿ, ಮರಳು ಸಾಗಾಟಕ್ಕೆ ಅನುಕೂಲ ಮಾಡಿಕೊಡುವಂತೆ ಜೊಯಿಡಾ ತಾಲ್ಲೂಕಿನ ಸ್ಥಳೀಯರು ಅಪರ ಜಿಲ್ಲಾಧಿಕಾರಿ ಎಚ್.ಕೆ ಕೃಷ್ಣಮೂರ್ತಿ ಅವರಿಗೆ ಗುರುವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.

ಕಳೆದ ಎರಡು ತಿಂಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಅಣಶಿ ಘಟ್ಟದಲ್ಲಿ ಗುಡ್ಡಕುಸಿತವಾಗಿ ಸಂಪೂರ್ಣ ಸಂಚಾರ ಬಂದಾಗಿತ್ತು.

ಬಳಿಕ ಸ್ಥಳೀಯರೇ ಗುಡ್ಡ ಕುಸಿತವಾದ ಭಾಗವನ್ನು ತೆರವುಗೊಳಿಸಿ ರಸ್ತೆ ನಿರ್ಮಾಣ ಮಾಡಿದ್ದು ಇದೀಗ ತಾತ್ಕಾಲಿಕವಾಗಿ ಬೆಳಿಗ್ಗೆಯಿಂದ ಸಂಜೆವರೆಗೆ ಮಾತ್ರ ಸಣ್ಣ ವಾಹನಗಳಿಗೆ ಓಡಾಡಲು ಅವಕಾಶ ಮಾಡಿಕೊಡಲಾಗಿದೆ.

ಆದರೆ ಕಾರವಾರ ಹಾಗೂ ಜೊಯಿಡಾ ಸುತ್ತಮುತ್ತಲಿನ ಭಾಗದ ಜನರು ನಿತ್ಯ ಒಂದಲ್ಲ ಒಂದು ಕಾರಣದಿಂದಾಗಿ ಓಡಾಟ ಮಾಡುವುದರಿಂದ ಈ ಸಮಯದಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ.

ಅಲ್ಲದೆ ಬಸ್ ಸಂಚಾರ ಕೂಡ ಮೊದಲಿನಂತೆ ಇರದೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಆದ್ದರಿಂದ ಈ ಮೊದಲಿನಂತೆ ಎಲ್ಲ ಬಸ್ ಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜೊತೆಗೆ ಗುಡ್ಡ ಕುಸಿತ ಭಾಗಗಳನ್ನು ಪರಿಶೀಲಿಸಿ ಸಣ್ಣ ಪುಟ್ಟ ತೊಂದರೆಗಳಿದ್ದಲ್ಲಿ ತಕ್ಷಣ ಸರಿಪಡಿಸಿ ಉಸುಕು ಜಲ್ಲಿಗಳನ್ನು ಕೊಂಡೊಯ್ಯೊಲು ಅವಕಾಶ ಮಾಡಿಕೊಡಬೇಕು. ಕಾರವಾರ ಭಾಗದಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳಿಗೆ ಜೊಯಿಡಾ ಭಾಗದಿಂದ ಜಲ್ಲಿ ಹಾಗೂ ಎಂ ಸ್ಯಾಂಡ್ ನ್ನು ಪಡೆಯುವುದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದ್ದು ಕೂಡಲೇ ಈ ಬಗ್ಗೆ ಅವಕಾಶ ಮಾಡಿಕೊಡಲು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಸಿದ್ದಾರೆ.

ಈ ವೇಳೆ ಗ್ರಾ.ಪಂ ಸದಸ್ಯ ಕೃಷ್ಣಾ ದೇಸಾಯಿ, ದಿಗಂಬರ ದೇಸಾಯಿ, ಪ್ರವೀಣ ನಾಯ್ಕ, ರತ್ನಾಕರ್ ದೇಸಾಯಿ, ಮಂಜುನಾಥ ಮುಕಾಶಿ, ಅನಂತ್ ಭಟ್, ರಾಮಚಂದ್ರ ಭಟ್ ಇನ್ನಿತರರು ಇದ್ದರು.

ಕೇಕ್ ಕತ್ತರಿಸಿ ವಿಭಿನ್ನ ರೀತಿಯಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ.

ಕಾರವಾರ :- ಕಾರವಾರ ನಗರಸಭೆಯಿಂದ ನಗರದ ಜಿಲ್ಲಾ ರಂಗಮಂದಿರದಲ್ಲಿ ಪೌರ ಕಾರ್ಮಿಕರ ದಿನಾಚರಣೆಯನ್ನು ಕೆಕ್ ಕತ್ತರಿಸಿ, ಪೌರಕಾರ್ಮಿಕರಿಗೆ ಸನ್ಮಾನ ಮಾಡುವ ಮೂಲಕ ವಿಭಿನ್ನವಾಗಿ ಗುರುವಾರ ಆಚರಣೆ ಮಾಡಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಪರ ಜಿಲ್ಲಾಧಿಕಾರಿ ಎಚ್. ಕೆ ಕೃಷ್ಣಮೂರ್ತಿ ಕಾರ್ಯಕ್ರಮಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಸ್ವಚ್ಚತೆ ಇರುವ ಕಡೆ ದೇವರು ಇರುತ್ತಾನೆ. ದೇವರು ಸಂತೋಷ ಪಡುವಂತಹ ಪುಣ್ಯದ ಕೆಲಸವನ್ನು ನಮ್ಮ ಪೌರ ಕಾರ್ಮಿಕರು ಮಾಡುತ್ತಿದ್ದಾರೆ.

ಇಂತವರ ಕಾರ್ಯದಿಂದಾಗಿ ದಿನ ಬೆಳಗಾದರೇ ನಗರದ ರಸ್ತೆಗಳು ಅಂದವಾಗಿ ಸ್ವಚ್ಛಂದವಾಗಿ ಕಾಣಲು ಸಾಧ್ಯವಾಗಿದೆ. ಇಂತಹ ಪೌರ ಕಾರ್ಮಿಕರಿಗೆ ಹೆಚ್ಚಿನ‌ ಗೌರವ ನೀಡಬೇಕು. ತಮ್ಮ ಆರೋಗ್ಯವನ್ನು ಲೆಕ್ಕಿಸದೆ ದುಡಿಯುವ ಕಾರ್ಮಿಕರ ಕಷ್ಟ ಸಂತೋಷಗಳಿಗೆ ನಾವು ಕೂಡ ಎಂದೆಂದು ಜೊತೆಯಾಗಿ ಇರುತ್ತೇವೆ ಎಂದು ಹೇಳಿದರು.
ಬಳಿಕ ಮಾತನಾಡಿದ ನಗರಸಭೆ ಉಪಾಧ್ಯಕ್ಷ ಪಿ.ಪಿ ನಾಯ್ಕ, ನಿತ್ಯ ನಗರ ಸ್ವಚ್ಚವಾಗಿರಬೇಕೆಂದರೇ ಪೌರ ಕಾರ್ಮಿಕರ ಮನಸ್ಸು ಕೂಡ ಸಂತೋಷವಾಗಿರಬೇಕಾಗುತ್ತದೆ.

ಅಂತಹ ವಾತಾವರಣ ಕಲ್ಪಿಸುವ ಜವಬ್ದಾರಿ ನಮಗೂ ಕೂಡ ಇದೆ. ಒಂದೊಮ್ಮೆ ಸ್ವಚ್ಚತೆಯೇ ನಡೆಯದಿದ್ದಲ್ಲಿ ನಗರ ಹೇಗಿರಬಹುದು ಎಂದು ಕಲ್ಪನೆಯೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಇದೇ ವೇಳೆ ನಗರಸಭೆ ಪೌರ ಕಾರ್ಮಿಕರಿಗೆ ಸನ್ಮಾನಿಸಲಾಯಿತು. ಕಾರ್ಯಕ್ತಮದಲ್ಲಿ ನಗರಸಭೆ ಪೌರಾಯುಕ್ತ ಆರ್.ಪಿ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಸಂಧ್ಯಾ ಬಾಡ್ಕರ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಎಂ. ನಾರಾಯಣ, ನಂದಾ ಸಾವಂತ್ ಇದ್ದರು.

ಸಾಂತ್ವನ ಸಹಾಯವಾಣಿ ಕೇಂದ್ರ ಮರುಸ್ಥಾಪಿಸಲು ಶಾಸಕಿ ರೂಪಾಲಿ ನಾಯ್ಕ ಮನವಿ.

ಬೆಂಗಳೂರು:- ದೌರ್ಜನ್ಯಕ್ಕೊಳಗಾಗುವ ಮಹಿಳೆಯರಿಗೆ ನೆರವಾಗುವ ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರಗಳನ್ನು ಪುನರ್ ಆರಂಭಿಸುವಂತೆ ಶಾಸಕರಾದ ಶ್ರೀಮತಿ ರೂಪಾಲಿ ಎಸ್.ನಾಯ್ಕ ಅವರ ಮನವಿಗೆ ಸ್ಪಂದಿಸಿದ ಮಹಿಳಾ ಮಕ್ಕಳ ಕಲ್ಯಾಣ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವ ಹಾಲಪ್ಪ ಅಚಾರ್, ಸಾಂತ್ವನ ಸಹಾಯವಾಣಿ ಕೇಂದ್ರಗಳನ್ನು ಕೂಡಲೇ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸರ್ಕಾರ ಸಾಂತ್ವನ ಸಹಾಯವಾಣಿ ಕೇಂದ್ರಗಳನ್ನು ಸ್ಥಗಿತಗೊಳಿಸಲು ದಿನಾಂಕ 24/04/2021ರಂದು ಆದೇಶ ಹೊರಡಿಸಿತ್ತು.

ಶಾಸಕಿ ರೂಪಾಲಿ ಎಸ್. ನಾಯ್ಕ ಅವರ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಸಚಿವ ಹಾಲಪ್ಪ ಆಚಾರ್ ಅವರು ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಮತ್ತು ಶಿರಸಿ ಸಾಂತ್ವನ ಸಹಾಯವಾಣಿ ಕೇಂದ್ರದ ಮರು ಪ್ರಾರಂಭಿಸುವುದು ಅತಿ ಅವಶ್ಯಕವಾಗಿದ್ದು ಅದನ್ನು ಕೂಡಲೆ ಆರಂಭಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇನ್ನು ಕಾರವಾರದಲ್ಲಿ ಸಖಿ ಮತ್ತು ಒನ್‌ಸ್ಟಾಪ್‌ ಸೆಂಟರ್ ಇರುವುದರಿಂದ ಸಾಂತ್ವನ ಸಹಾಯವಾಣಿ ಕೇಂದ್ರದ ಅವಶ್ಯಕತೆ ಕುರಿತು ಮರುಪರಿಶೀಲಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದು ,ತಮ್ಮ ಬೇಡಿಕೆಗೆ ಸ್ಪಂದಿಸಿದ ಸಚಿವರಿಗೆ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್. ನಾಯ್ಕ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಕರಾವಳಿ ಮೀನುಗಾರರ ಸಮಸ್ಯೆ ಕುರಿತು ಚರ್ಚೆ.

ಕಾರವಾರ/ಬೆಂಗಳೂರು:- ಕರಾವಳಿ ತೀರದ ಹಾಗೂ ಮೀನುಗಾರರ ಸಮಸ್ಯೆಗಳ ಕುರಿತು ಮೀನುಗಾರಿಕಾ ಸಚಿವ ಎಸ್. ಅಂಗಾರ ಅವರ ಕಚೇರಿಯಲ್ಲಿ ಕರಾವಳಿ ಶಾಸಕರಿಗೆ ಹಾಗೂ ಮೀನುಗಾರಿಕೆ ಮತ್ತು ಬಂದರು ಇಲಾಖೆ ಅಧಿಕಾರಿಗಳಿಗಾಗಿ ನಡೆದ ಸಭೆಯಲ್ಲಿ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ರೂಪಾಲಿ ಎಸ್. ನಾಯ್ಕ ಅವರು ಪಾಲ್ಗೊಂಡರು.

ಸಮುದ್ರ ಕೊರೆತವನ್ನು ತಡೆಯಲು ಈಗ ಸಮುದ್ರ ಪ್ರತಿಬಂಧಕಕ್ಕಾಗಿ ಕಲ್ಲುಗಳನ್ನು ಹಾಕಲಾಗುತ್ತಿದ್ದು, ಅದರ ಬದಲಾಗಿ ಹೊಸ ತಂತ್ರಜ್ಞಾನದ ಬಳಸಿ ಸಮುದ್ರ ಕೊರೆತ ತಡೆಯುವ ಕುರಿತು ಚರ್ಚೆ ನಡೆಸಿದರು. ಸಮುದ್ರದಲ್ಲಿ ಮೀನು ಹಿಡಿಯಲು ಹೋಗುವ ಮೀನುಗಾರರು ಗೋವಾ, ಕೇರಳ ರಾಜ್ಯಗಳಿಗೆ ಪ್ರವೇಶಿಸಿದಾಗ ಗಡಿ ಸಮಸ್ಯೆ ಅನುಭವಿಸುತ್ತಾರೆ. ಅದನ್ನು ತಪ್ಪಿಸಲು ಜಿಯೋ ಟ್ಯಾಗಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ ಮೀನುಗಾರರಿಗೆ ಮಾಹಿತಿ ಹೋಗುವ ಕುರಿತು ಕ್ರಮ ಕೈಗೊಳ್ಳವ ಕುರಿತು ಚರ್ಚೆ ನಡೆಸಲಾಯಿತು.

ಬೋಟ್‌ಗಳಿಗೆ ದ್ವಿಮುಖ ಸಂವಹನ ಯಂತ್ರ ಅಳವಡಿಕೆ ಕುರಿತು ಮತ್ತು ನಾಡದೋಣಿಗಳಿಗೆ ಸಮರ್ಪಕವಾಗಿ ಸೀಮೆ ಎಣ್ಣೆ ಪೂರೈಕೆಯ ಕುರಿತು ಹಾಗೂ ತುರ್ತು ಸಂದರ್ಭದಲ್ಲಿ ಮೀನುಗಾರರ ರಕ್ಷಣೆ ಮಾಡುವ ಕುರಿತು ಚರ್ಚಿಸಲಾಗಿದೆ ಎಂದು ಶಾಸಕಿ ರೂಪಾಲಿ ಎಸ್. ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕುಮಟಾ ಶಾಸಕರು, ಭಟ್ಕಳ ಶಾಸಕರು, ಉಡುಪಿ ಶಾಸಕರು, ಮೀನುಗಾರಿಕೆ ಮತ್ತು ಬಂದರು ಇಲಾಖೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಮಿಕರ ಮಕ್ಕಳ ವಿದೇಶದಲ್ಲಿ ಅಭ್ಯಾಸಕ್ಕೆ ಕಾರ್ಮಿಕ ಇಲಾಖೆಯಿಂದ ವೆಚ್ಚ ಭರಣ-ಶಿವರಾಮ್ ಹೆಬ್ಬಾರ್ .

ಬೆಂಗಳೂರು :- ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ಕಾರ್ಮಿಕ ಕಲ್ಯಾಣ ಸುರಕ್ಷಾ ಭವನದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸಭೆ ನಡೆಯಿತು.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ವಿದೇಶದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ನಡೆಸಲು ವಿಶೇಷ ಯೋಜನೆಯನ್ನು ಜಾರಿಗೊಳಿಸಿದ್ದು ವಿದ್ಯಾಭ್ಯಾಸ ಸಂಪೂರ್ಣ ವೆಚ್ಚವನ್ನು ಮಂಡಳಿ ಭರಿಸಲಿದೆ ಹಾಗೂ ಕಾರ್ಮಿಕರಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಸರ್ವೇ ಮಾಡುವುದಕ್ಕೆ ಇಂದಿನ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದರು.

ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಅನ್ನು ನೀಡಲು ತೀರ್ಮಾನಿಸದರು ಹಾಗೂ 100 ಶಿಶುಪಾಲನ ಕೇಂದ್ರವನ್ನು ಸ್ಥಾಪಿಸುವ ಯೋಜನೆಯನ್ನು ಪ್ರಾದೇಶಿಕವಾರು ಅನುಷ್ಠಾನಗೊಳಿಸುವುದರ ಕುರಿತು ಹಾಗೂ ಪುಡ್ ಕಿಟ್, ಸುರಕ್ಷಾ ಕಿಟ್, ನ್ಯೂಟ್ರಿಷನ್ ಕಿಟ್ ವಿತರಿಸುವ ಬಗ್ಗೆ ಮಂಡಳಿ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದರು.

2016 ರಿಂದ ಇಲ್ಲಿಯವರೆಗೂ ಬಾಕಿಯಿಂದ ಅರ್ಜಿಗಳನ್ನು ವಿಲೇವಾರಿ ಮಾಡಲು ಸಚಿವ ಶಿವರಾಮ ಹೆಬ್ಬಾರ್ ಅವರ ಆಯೋಜಿಸಿದ್ದ ” ಕಾರ್ಮಿಕ ಅದಾಲತ್ ” ಬಗ್ಗೆ ಮಂಡಳಿಯ ಸದಸ್ಯರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಕಾರ್ಮಿಕ ಅದಾಲತ್ ಮೂಲಕವಾಗಿ 71 ಕೋಟಿ ರೂಪಾಯಿಗಳ ಸೌಲಭ್ಯಗಳನ್ನು ಮಂಜೂರಿ ಮಾಡಲಾಗಿದೆ ಕಾರ್ಮಿಕ ಖಾತೆಗೆ ನೇರವಾಗಿ ಯೋಜನೆಯ ಸಹಾಯಧನವು ಜಮೆಯಾಗಲಿದೆ.

ಈ ಸಭೆಯಲ್ಲಿ ಕಾರ್ಮಿಕ ಆಯುಕ್ತರಾದ ಅಕ್ರಂ ಪಾಷಾ ಕಾರ್ಮಿಕ ಕಲ್ಯಾಣ ಮಂಡಳಿ ನಿರ್ದೇಶಕರಾದ ಶ್ರೀ ನಾಗನಾಥ, ಶ್ರೀ ಪ್ರಕಾಶ ಎಮ್ , ಶ್ರೀ ನಾಡಗೇರ್ ಹಾಗೂ ಶ್ರೀಮತಿ ಶಿವಾನಿ ಭಟ್ಕಳ , ಆರ್ಥಿಕ ಇಲಾಖೆ ಅಧಿಕಾರಿಗಳು, ಕೇಂದ್ರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿಯ ಪ್ರತಿನಿಧಿಗಳು ಕಾರ್ಮಿಕ ಸಂಘಟನೆಗಳ ಪ್ರಮುಖರು ಹಾಜರಿದ್ದರು.

ಫೋಟೋ ಸುದ್ದಿ:

ಭಟ್ಕಳದಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ದೇವಸ್ಥಾನ ಕೆಡವುದನ್ನು ವಿರೋಧಿಸಿ ಮನವಿ ಸಲ್ಲಿಕೆ.
ಯಲ್ಲಾಪುರದ ಸಾತೋಡಿ ಪಾಲ್ಸ್ ಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ರಸ್ತೆ ಸರಿಪಡಿಸುವಂತೆ ಸ್ಥಳೀಯರಿಂದ ಆಗ್ರಹ
ಸಿದ್ದಾಪುರ ದೊಡ್ಡಮನೆಯಲ್ಲಿ ಪೌಷ್ಠಿಕ ಆಹಾರ ಸೇವನೆ ಕುರಿತುಅರಿವು ಕಾರ್ಯಕ್ರಮ ನಿನ್ನೆ ನಡೆಯಿತು.

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಹಾಗೂ ದಾಂಡೇಲಿ ಭಾಗದಲ್ಲಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ರವರು ಜಲಸಾಹಸ ಕ್ರೀಡೆಗೆ ಅನುಮತಿ ನೀಡಿದ್ದು ಇಂದು ಪ್ರವಾಸಿಗರು ಕಡಲ ತೀರಕ್ಕೆ ಆಗಮಿಸಿ ಎಂಜಾಯ್ ಮಾಡಿದರು.

ಅಂಕೋಲಪಟ್ಟಣದ ಕೋಟೇವಾಡದಲ್ಲಿರುವ ಹಿಂದು ಸ್ಮಶಾನ ಭೂಮಿಯಲ್ಲಿ ನಡೆದಿರುವ ಅತಿಕ್ರಮಣ ತೆರವುಗೊಳಿಸಲು ಸ್ಥಳೀಯ ಪುರಸಭೆ ಕ್ರಮ ಕೈಗೊಳ್ಳದಿರುವುದನ್ನು ವಿರೋಧಿಸಿ ಸ್ಮಶಾನ ಭೂಮಿ ರಕ್ಷಣಾ ಸಮಿತಿ ವತಿಯಿಂದ ಜಾಗಟೆ ಬಾರಿಸಿತ್ತ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಲಾಯಿತು.
ಭಟ್ಕಳದ ಆಜಾದ ನಗರದ ಕರಾಟೆ ಶಿಕ್ಷಕರಾದ ಅಮರ್ ಶಾ ಕರಾಟೆ ಶಾಖೆಯಲ್ಲಿ ಕಿಕ್ ಬಾಕ್ಸಿಂಗ್ ಟ್ರೈನಿಂಗ್ ಕ್ಯಾಂಪ್ ನ್ನು ಯಶಸ್ವಿಯಾಗಿ ನಡೆಸಲಾಯಿತು



ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!