Navy | ಕನ್ನಡವಾಣಿ ವರದಿಗೆ ನೌಕಾದಳದ ಸ್ಪಷ್ಟೀಕರಣ- ಪ್ರಕಟಣೆಯಲ್ಲಿ  ಏನಿದೆ.?

ಕಾರವಾರ ಕದಂಬ ನೌಕಾನೆಲೆ ಮತ್ತು ಭಾರತೀಯ ನೌಕಾಪಡೆ ಕಾರವಾರ ಕದಂಬ ನೌಕಾನೆಲೆ ಮತ್ತು ಭಾರತೀಯ ನೌಕಾಪಡೆ
ಕಾರವಾರ ಕದಂಬ ನೌಕಾನೆಲೆ ಮತ್ತು ಭಾರತೀಯ ನೌಕಾಪಡೆ

Navy | ಕನ್ನಡವಾಣಿ ವರದಿಗೆ ನೌಕಾದಳದ ಸ್ಪಷ್ಟೀಕರಣ- ಪ್ರಕಟಣೆಯಲ್ಲಿ  ಏನಿದೆ.?

ಕಾರವಾರ :- ಕಾರವಾರದ ಕದಂಬ ನೌಕಾನೆಲೆಯಲ್ಲಿ ( Karwar Naval base) ವಿಕ್ರಮಾಧಿತ್ಯ ಹಡಗಿನಲ್ಲಿ ವಸ್ತುಗಳ ಖರೀದಿಯಲ್ಲಿ ಬ್ರಷ್ಟಾಚಾರ ! ಎಂಬ ಶಿರೋ ನಾಮದೊಂದಿಗೆ ಹಡಗಿಗೆ ಪೂರೈಕೆ ಮಾಡುವ ಜಿನಸಿ ಹಾಗೂ ಮಾಂಸಗಳ ಸರಬರಾಜಾಗುವ ಕುರಿತು ಬ್ರಷ್ಟಾಚಾರದ ಆರೋಪ ಕುರಿತು ಕನ್ನಡವಾಣಿ.ನ್ಯೂಸ್ ವರದಿ ಬಿತ್ತರಿಸಿತ್ತು. ಈ ವರದಿಯನ್ನ ಪರಿಗಣಿಸಿದ ಭಾರತೀಯ ನೌಕಾದಳ ಸ್ಪಷ್ಟೀಕರಣ ನೀಡಿದೆ.

ನೌಕಾದಳದ ಸ್ಪಷ್ಟೀಕರಣದಲ್ಲಿ ಏನಿದೆ?

ಕನ್ನಡವಾಣಿ.ನ್ಯೂಸ್ ವರದಿಯನ್ನ ಖಂಡಿಸಿರುವ ನೌಕಾದಳ ಆಂಕರ್ ದ ಫ್ಯೂಚರ್ ಎಂಬ ಶಿರೋ ನಾಮದಡಿ   ಏಷ್ಯಾದ ಅತಿದೊಡ್ಡ ನೌಕಾನೆಲೆಯನ್ನು ನೌಕಾಪಡೆ ಮತ್ತು ಕಾರವಾರ ಹೇಗೆ ನಿರ್ಮಿಸುತ್ತಿವೆ ಎಂಬ ಉಪನಾಮದೊಂದಿಗೆ ಸ್ಪಷ್ಟೀಕರಣ ನೀಡಿದೆ.

Advertisement

ಕಾರವಾರವು ಭಾರತದ ಪ್ರಮುಖ ಸಮುದ್ರ ಪ್ರವೇಶದ್ವಾರವಾಗಿ ವೇಗವಾಗಿ ರೂಪುಗೊಳ್ಳುತ್ತಿದ್ದು, ಏಷ್ಯಾದ ಅತಿದೊಡ್ಡ ನೌಕಾನೆಲೆಯಾಗುವತ್ತ ಸಾಗುತ್ತಿರುವ ಬೃಹತ್ ಮೂಲಸೌಕರ್ಯ ಯೋಜನೆಗೆ ನೆಲೆಯಾಗಿದೆ.

ಇದು ಕೇವಲ ಇದು ಸೇನಾ ನೆಲೆಯಲ್ಲ. ಬದಲಾಗಿ, ರಾಷ್ಟ್ರೀಯ ರಕ್ಷಣೆಯ ಕ್ಷೇತ್ರದಲ್ಲಿ ವಿಸ್ತರಣೆಗೆ ಹೆಚ್ಚಿನ ಅವಕಾಶ, ದೃಢವಾದ ಸಾಂಸ್ಥಿಕ ಪಾರದರ್ಶಕತೆ ಮತ್ತು ಸ್ಥಳೀಯ ಸಹಭಾಗಿತ್ವವನ್ನು ಒಳಗೊಂಡ ಬೃಹತ್ ನೌಕಾ ಯೋಜನೆ ಮುಂದುವರೆಯುತ್ತಿದೆ.

ಜಾಗತಿಕ ಮಹತ್ವ ಹೊಂದಿರುವ ಯಾವುದೇ ಯೋಜನೆಯಂತೆ, ನೌಕಾನೆಲೆಯ ಆಡಳಿತಾತ್ಮಕ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಕೆಲವು ಪರಿಶೀಲಿಸದ ವರದಿಗಳು ಮತ್ತು ಸ್ಥಳೀಯ ಮಟ್ಟದ ಆರೋಪಗಳು ಕೇಳಿಬಂದಿವೆ. ಭಾರತೀಯ ನೌಕಾಪಡೆಯು ಈ ಸವಾಲುಗಳನ್ನು ಸೂಕ್ಷ್ಮವಾಗಿ ಗಮನಿಸಿದೆ.

ಪರಿಶೀಲಿಸದ ಆರೋಪಗಳು ದೇಶ ನಿರ್ಮಾಣದ ಈ ಐತಿಹಾಸಿಕ ಪಯಣವನ್ನು ಮಸುಕಾಗಿಸಲು ಅವಕಾಶ ನೀಡದೆ, ರಕ್ಷಣಾ ವ್ಯವಸ್ಥೆಯು ವಾಸ್ತವಾಂಶಗಳನ್ನು ಸ್ಪಷ್ಟಪಡಿಸುತ್ತಿದೆ. ನ್ಯಾಯಸಮ್ಮತ ಸಾರ್ವಜನಿಕ ಹೊಣೆಗಾರಿಕೆ ಮತ್ತು ಸಂಘಟಿತ ಬಾಹ್ಯ ತಪ್ಪುಮಾಹಿತಿಯ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರುತಿಸುವ ನಿಲುವನ್ನು ಅದು ಹೊಂದಿದೆ ಎಂದು ಅದು ಹೇಳಿದೆ.

ಇದನ್ನೂ ಓದಿ:-Karwar| ಕರಾವಳಿ ಉತ್ಸವದಲ್ಲಿ ಪರೋಕ್ಷವಾಗಿ ಕನ್ನಡಿಗರ ಕ್ಷಮೆ ಕೇಳಿದ ಸೋನು ನಿಗಮ್

ಸ್ವಾವಲಂಬಿ ಸ್ಥಳೀಯ ರಕ್ಷಣಾ ವ್ಯವಸ್ಥೆಗೆ ಉತ್ತೇಜನ.

ವಿಶಾಲ ಹಿಂದೂ ಮಹಾಸಾಗರ ಪ್ರದೇಶದ ಭದ್ರತೆಯನ್ನು ಖಚಿತಪಡಿಸುವಂತಹ ಕಾರ್ಯತಂತ್ರದ ಮಹತ್ವದ ರಕ್ಷಣಾ ಕೇಂದ್ರವು ಸ್ಥಳೀಯ ವ್ಯವಸ್ಥೆಯಿಂದ ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ.ಕಾರವಾರದಲ್ಲಿ ನಿಯೋಜಿಸಲಾಗಿರುವ ಸಾವಿರಾರು ನೌಕಾಪಡೆ ಸಿಬ್ಬಂದಿ ಹಾಗೂ ಅತ್ಯಾಧುನಿಕ ನೌಕಾ ಹಡಗುಗಳ ಅಗತ್ಯಗಳನ್ನು ಪೂರೈಸಲು, ಸ್ಥಳೀಯ ಪೂರೈಕೆದಾರರು, ದೇಶೀಯ ತಯಾರಕರು ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು (MSMEs) ಹೆಚ್ಚಿನ ಪ್ರಮಾಣದಲ್ಲಿ ಒಳಗೊಳ್ಳುವ ನಿಟ್ಟಿನಲ್ಲಿ ನೌಕಾಪಡೆಯು ವ್ಯಾಪಕ ಹಾಗೂ ವ್ಯವಸ್ಥಿತ ಕ್ರಮಗಳನ್ನು ಕೈಗೊಂಡಿದೆ. ಇದರ ಮೂಲಕ ನೌಕಾನೆಲೆಯ ಸ್ಥಳೀಯ ಪೂರೈಕೆ ಮತ್ತು ಸೇವಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದೆ.ಪ್ರಾದೇಶಿಕ ಉದ್ಯಮಗಳು ಅತ್ಯಾಧುನಿಕ ಸಾಗರ ಎಂಜಿನಿಯರಿಂಗ್ ಸೇವೆಗಳಿಂದ ಹಿಡಿದು ಅಗತ್ಯ ಲಾಜಿಸ್ಟಿಕ್ಸ್‌ ಮತ್ತು ಪೂರೈಕೆಗಳವರೆಗೆ ವಿವಿಧ ವಸ್ತುಗಳು ಹಾಗೂ ಸೇವೆಗಳನ್ನು ಒದಗಿಸುವಂತಹ ಸುಧಾರಿತ ಮತ್ತು ಸಕ್ರಿಯ ಸ್ಥಳೀಯ ವ್ಯವಸ್ಥೆಯನ್ನು ರೂಪಿಸುವುದು ಇದರ ಪ್ರಮುಖ ಗುರಿಯಾಗಿದೆ.ದೂರದ ಕೈಗಾರಿಕಾ ಕೇಂದ್ರಗಳ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗುವ ಬದಲು, ಈ ಸ್ಥಳೀಯ ವ್ಯವಸ್ಥೆಯು ಕಾರವಾರದ ಉದ್ಯಮಿಗಳು, ನುರಿತ ಕಾರ್ಮಿಕರು ಮತ್ತು ಸಣ್ಣ ಉದ್ಯಮಗಳಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುತ್ತಿದೆ.

ಸ್ಥಳೀಯ ಉದ್ಯಮಗಳನ್ನು ತನ್ನ ಪೂರೈಕೆ ಸರಪಳಿಯೊಂದಿಗೆ ಸಂಪರ್ಕಿಸುವ ಮೂಲಕ, ನೌಕಾಪಡೆಯು ಪ್ರಾದೇಶಿಕ ವ್ಯಾಪಾರ ಮತ್ತು ಕೈಗಾರಿಕೆಗಳ ಸಾಮರ್ಥ್ಯ, ಕಾರ್ಯಾಚರಣಾ ದಕ್ಷತೆ ಹಾಗೂ ವಾಣಿಜ್ಯ ವೃತ್ತಿಪರತೆಯನ್ನು ಕ್ರಮಬದ್ಧವಾಗಿ ಹೆಚ್ಚಿಸಲು ಸಹಾಯ ಮಾಡುತ್ತಿದೆ.ವಿಶ್ವಮಟ್ಟದ ನೌಕಾಪಡೆಯ ನಿರ್ವಹಣೆಗೆ ಅಗತ್ಯವಿರುವ ದೊಡ್ಡ ಪ್ರಮಾಣದ ಹಣಕಾಸಿನ ವೆಚ್ಚದ ಒಂದು ಭಾಗ ನೇರವಾಗಿ ಸ್ಥಳೀಯ ಆರ್ಥಿಕತೆಗೆ ಹರಿದುಬರುವಂತೆ ಇದು ಮಾಡುತ್ತದೆ. ಇದರ ಮೂಲಕ ಕಾರವಾರವು ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಸ್ವಾವಲಂಬಿ ರಕ್ಷಣಾ ಕೈಗಾರಿಕಾ ಕೇಂದ್ರವಾಗಿ ರೂಪುಗೊಳ್ಳುವ ಗುರಿಯನ್ನು ಹೊಂದಿದೆ.

ಬಹುಹಂತದ ಪರಿಶೀಲನೆ: ಗುಣಮಟ್ಟದಲ್ಲಿ ರಾಜಿಯಿಲ್ಲ, ಸಂಪೂರ್ಣ ಪಾರದರ್ಶಕತೆ

ಖರೀದಿ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಇತ್ತೀಚಿನ ಮಾತುಗಳು ಮತ್ತು ಆರೋಪಗಳ ಹಿನ್ನೆಲೆಯಲ್ಲಿ, ನೌಕಾಪಡೆಯ ಆಡಳಿತ ವ್ಯವಸ್ಥೆಯು ಹಣಕಾಸಿನ ನಿರ್ವಹಣೆಯಲ್ಲಿ ಕಟ್ಟುನಿಟ್ಟಾದ ವ್ಯವಸ್ಥೆಯನ್ನು ಹೊಂದಿದೆ.

ನೌಕಾಪಡೆಯಲ್ಲಿ ಖರೀದಿ ಪ್ರಕ್ರಿಯೆಯನ್ನು ನೋಡಿಕೊಳ್ಳಲು ಈಗಾಗಲೇ ಅಸ್ತಿತ್ವದಲ್ಲಿರುವ ವ್ಯವಸ್ಥೆಯಿದ್ದು, ನಡೆಯುವ ಪ್ರತಿಯೊಂದು ವಹಿವಾಟನ್ನೂ ಪರಿಶೀಲಿಸಲಾಗುತ್ತದೆ. ಎಲ್ಲಾ ವಹಿವಾಟುಗಳು ಪಾರದರ್ಶಕವಾಗಿ ಹಾಗೂ ನಿಯಮಾನುಸಾರ ನಡೆಯುವಂತೆ ಈ ವ್ಯವಸ್ಥೆ ಖಚಿತಪಡಿಸುತ್ತದೆ.

ಯಾವುದೇ ಒಬ್ಬ ವ್ಯಕ್ತಿಗೆ ಸಂಪೂರ್ಣ ನಿರ್ಣಯಕೈಗೊಳ್ಳುವ ಅಧಿಕಾರ ಇರುವುದಿಲ್ಲ. ಅಗತ್ಯವನ್ನು ಗುರುತಿಸುವ ಆರಂಭಿಕ ಹಂತದಿಂದ ಹಿಡಿದು ಪೂರೈಕೆದಾರರನ್ನು ಆಹ್ವಾನಿಸುವುದು, ಬಿಲ್‌ಗಳ ಪ್ರಕ್ರಿಯೆ ಮತ್ತು ಅಂತಿಮವಾಗಿ ಹಣ ಪಾವತಿಸುವವರೆಗೆ ಪ್ರತಿಯೊಂದು ಹಂತವೂ ಹಲವು ಸ್ವತಂತ್ರ ಸಾಂಸ್ಥಿಕ ಪರಿಶೀಲನಾ ಹಂತಗಳ ಮೂಲಕ ಸಾಗುತ್ತದೆ.ಇದಲ್ಲದೆ, ನೌಕಾಪಡೆಯ ಹಡಗುಗಳು ಅತ್ಯಂತ ಸೂಕ್ಷ್ಮ ಮತ್ತು ಅಪಾಯದ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಹೀಗಾಗಿ ಉಪಕರಣಗಳ ವಿಶ್ವಾಸಾರ್ಹತೆ ನೇರವಾಗಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದೆ. ಈ ಕಾರಣದಿಂದ ನಿಗದಿತ ಮಾನದಂಡಗಳು ಮತ್ತು ಗುಣಮಟ್ಟದ ಪಾಲನೆಯಲ್ಲಿ ಯಾವುದೇ ರಾಜಿಗೆ ಅವಕಾಶವಿಲ್ಲ.ಕಳಪೆ ಗುಣಮಟ್ಟದ ವಸ್ತುಗಳು ಅಥವಾ ವಸ್ತುಗಳನ್ನ ಸ್ವೀಕರಿಸುವ ವಿಚಾರದಲ್ಲಿ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅನುಸರಿಸಲಾಗುತ್ತದೆ. ಸೂಕ್ಷ್ಮ ತಂತ್ರಜ್ಞಾನದ ಅನಧಿಕೃತ ಹರಡುವಿಕೆ, ಅನುಮತಿಯಿಲ್ಲದ ಮಾಹಿತಿ ಸೋರಿಕೆ ಅಥವಾ ಸಾರ್ವಜನಿಕ ಸಂಪನ್ಮೂಲಗಳ ದುರ್ಬಳಕೆಗೆ ಕಾರಣವಾಗಬಹುದಾದ ಯಾವುದೇ ಸಾಧ್ಯತೆಯನ್ನು ತಡೆಯಲು ಕಟ್ಟುನಿಟ್ಟಾದ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಜಾರಿಗೊಳಿಸಲಾಗಿದೆ ಎಂದು ಅದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ:-Navy | ನೌಕಾನೆಲೆಯ ನಾವಿಕ ನ ಹನಿಟ್ರ್ಯಾಪ್ -ದೇಶದ ರಹಸ್ಯ ಮಾರಿದವನ ಬಂಧನ

ಪರಿಶೀಲಿಸಬಹುದಾದ ದಾಖಲೆಗಳು ಮತ್ತು ಸಾಕ್ಷ್ಯಾಧಾರಗಳೊಂದಿಗೆ ಸಲ್ಲಿಸಲಾಗುವ ಯಾವುದೇ ನಿರ್ದಿಷ್ಟ ದೂರನ್ನು ಅಸ್ತಿತ್ವದಲ್ಲಿರುವ ನ್ಯಾಯಾಂಗ ಮತ್ತು ಲೆಕ್ಕಪರಿಶೋಧನಾ ವ್ಯವಸ್ಥೆಗಳ ಮೂಲಕ ವ್ಯವಸ್ಥಿತವಾಗಿ ಪರಿಶೀಲಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ತಳಮಟ್ಟದ ಅಭಿವೃದ್ಧಿ: ಸ್ಥಳೀಯರನ್ನು ಜೊತೆಯಾಗಿ ಕರೆದೊಯ್ಯುವುದು

ಕಾರವಾರ ನೌಕಾನೆಲೆಯ ವಿಸ್ತರಣೆಯ ನಿಜವಾದ ಕೇಂದ್ರಬಿಂದು ಅದರ ಮಾನವಕೇಂದ್ರಿತ ದೃಷ್ಟಿಕೋನವಾಗಿದೆ. ಈ ಅಭಿವೃದ್ಧಿಯ ಪಯಣದಲ್ಲಿ ಸ್ಥಳೀಯ ಪ್ರದೇಶಗಳನ್ನು ಜೊತೆಯಾಗಿ ಕರೆದೊಯ್ಯಲು ನೌಕಾಪಡೆಯು ಪ್ರತಿದಿನವೂ ಉದ್ದೇಶಪೂರ್ವಕ ಹಾಗೂ ನಿರಂತರ ಪ್ರಯತ್ನಗಳನ್ನು ನಡೆಸುತ್ತಿದೆ.

ಯೋಜನೆಯ ರೂಪುರೇಷೆ ಸಿದ್ಧಪಡಿಸುವವರು ತಮ್ಮ ದೃಷ್ಟಿಕೋನವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ.ಸುತ್ತಮುತ್ತಲಿನ ಗ್ರಾಮಗಳು ಹಾಗೂ ಪಟ್ಟಣವು ಈ ಅಭಿವೃದ್ಧಿಯ ಪಯಣದಲ್ಲಿ ನೌಕಾಪಡೆಯೊಂದಿಗೆ ಜೊತೆಯಾಗಿ ಸಾಗಬೇಕು ಮತ್ತು ಈ ಐತಿಹಾಸಿಕ ಕಾರ್ಯತಂತ್ರದ ಅಭಿವೃದ್ಧಿಯಿಂದ ನೇರವಾಗಿ ಪ್ರಯೋಜನ ಪಡೆಯಬೇಕು.

ಸ್ಥಳೀಯ ಸಮುದಾಯಗಳಿಗೆ ಈಗಾಗಲೇ ಗಮನಾರ್ಹ ಮತ್ತು ವಿವಿಧ ರೀತಿಯ ಸಾಮಾಜಿಕ ಹಾಗೂ ಆರ್ಥಿಕ ಪ್ರಯೋಜನಗಳು ದೊರೆಯುತ್ತಿವೆ. ಅವುಗಳಲ್ಲಿ

ನಾಗರಿಕ ಮೂಲಸೌಕರ್ಯ:
ದೂರದ ಕರಾವಳಿ ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ವ್ಯವಸ್ಥೆ, ವಿಶ್ವಾಸಾರ್ಹ ವಿದ್ಯುತ್ ವಿತರಣಾ ಜಾಲ ಹಾಗೂ ಶುದ್ಧ ನೀರಿನ ಸೌಲಭ್ಯಗಳಲ್ಲಿ ವೇಗವಾಗಿ ಸುಧಾರಣೆ ಮಾಡಲಾಗುತ್ತಿದೆ.

ಯುವ ಸಬಲೀಕರಣ:
ವಿಶೇಷ ಅಗ್ನಿವೀರ್ ನೇಮಕಾತಿ ಅಭಿಯಾನಗಳ ಮೂಲಕ ಸ್ಥಳೀಯ ಯುವಕರಿಗೆ, ಅದರಲ್ಲೂ ವಿಶೇಷವಾಗಿ ಸಾಂಪ್ರದಾಯಿಕ ಮೀನುಗಾರಿಕೆ ಸಮುದಾಯಗಳಿಗೆ ಸೇರಿದ ಯುವಜನರಿಗೆ ಉತ್ತಮ ಹಾಗೂ ಪ್ರತಿಷ್ಠಿತ ಉದ್ಯೋಗ ಮತ್ತು ವೃತ್ತಿ ಅವಕಾಶಗಳು ಲಭ್ಯವಾಗುತ್ತಿವೆ.

ಸಮುದಾಯ ಕಲ್ಯಾಣ:
ನೌಕಾಪಡೆಯ ವತಿಯಿಂದ ನಿಯಮಿತವಾಗಿ ವೈದ್ಯಕೀಯ ಶಿಬಿರಗಳು, ಶೈಕ್ಷಣಿಕ ಜಾಗೃತಿ ಕಾರ್ಯಕ್ರಮಗಳು ಹಾಗೂ ಸ್ಥಳೀಯ ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ವಿವಿಧ ರೀತಿಯ ಸಂಪರ್ಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇವುಗಳ ಮೂಲಕ ಜಿಲ್ಲೆಯ ಜನರ ಜೀವನಮಟ್ಟವನ್ನು ಸುಧಾರಿಸಲು ಪ್ರಯತ್ನಿಸಲಾಗುತ್ತಿದೆ.

ಕರಾವಳಿ ಭದ್ರತೆ:
ಭಾರತೀಯ ನೌಕಾಪಡೆ, ಭಾರತೀಯ ಕರಾವಳಿ ರಕ್ಷಣಾ ಪಡೆ ಹಾಗೂ ನಾಗರಿಕ ಆಡಳಿತದ ನಡುವೆ ನಿರಂತರ ಸಮನ್ವಯದೊಂದಿಗೆ ‘ಸಾಗರ ಕವಚ’ದಂತಹ ಜಂಟಿ ಅಭ್ಯಾಸಗಳನ್ನು ನಡೆಸಲಾಗುತ್ತಿದೆ. ಇದರಿಂದ ಸಮುದ್ರವನ್ನು ಅವಲಂಬಿಸಿರುವ ಮೀನುಗಾರರು ಹಾಗೂ ಇತರ ಕರಾವಳಿ ಸಮುದಾಯಗಳ ಸುರಕ್ಷತೆ ಮತ್ತು ರಕ್ಷಣೆಯನ್ನು ಖಚಿತಪಡಿಸುವುದರ ಜೊತೆಗೆ, ಅವರ ಆರ್ಥಿಕ ಸ್ಥಿರತೆಯನ್ನೂ ಬಲಪಡಿಸಲು ಸಹಾಯವಾಗುತ್ತಿದೆ.

ಅಭಿವೃದ್ಧಿಯ ಈ ನಿರಂತರ ಪಯಣವು ಈ ಪ್ರದೇಶವನ್ನು ಅಸ್ಥಿರಗೊಳಿಸಲು ಬಯಸುವವರ ಪ್ರಮುಖ ಗುರಿಯನ್ನಾಗಿ ಮಾಡಿದೆ.ಜನರನ್ನು ಉದ್ದೇಶಪೂರ್ವಕವಾಗಿ ತಪ್ಪುದಾರಿಗೆಳೆಯಲು ಮತ್ತು ದೇಶದ ಅಭಿವೃದ್ಧಿಯ ಪಯಣವನ್ನು ಹಿಮ್ಮೆಟ್ಟಿಸಲು ಕೆಲವು ದುಷ್ಕರ್ಮಿಗಳು ಇಂತಹ ಸುದ್ದಿಗಳು ಹಾಗೂ ಸುಳ್ಳು ನಿರೂಪಣೆಗಳನ್ನು ಹರಡುತ್ತಿದ್ದಾರೆ ಎಂದು ಭದ್ರತಾ ಸಂಸ್ಥೆಗಳು ಗಮನಿಸಿವೆ.

ಇದಕ್ಕಿಂತ ಆತಂಕಕಾರಿ ಸಂಗತಿಯೆಂದರೆ, ತಳಮಟ್ಟದಲ್ಲಿ ಜನರನ್ನು ಗೊಂದಲಕ್ಕೀಡು ಮಾಡಲು ಎದುರಾಳಿಗಳಿಂದ ಸಂಘಟಿತ ರೀತಿಯಲ್ಲಿ ತಪ್ಪುಮಾಹಿತಿ ಹರಡುವ ಪ್ರಯತ್ನಗಳು ನಡೆಯುತ್ತಿದೆ.ಭೂ ಬಳಕೆ, ಜನರ ಸ್ಥಳಾಂತರ ಅಥವಾ ಪರಿಸರದ ಮೇಲಿನ ಪರಿಣಾಮಗಳ ಕುರಿತು ಸೃಷ್ಟಿಸಲಾದ ವದಂತಿಗಳನ್ನು ಗ್ರಾಮೀಣ ಸಮುದಾಯಗಳಲ್ಲಿ ನೇರವಾಗಿ ಹರಡುವ ಮೂಲಕ, ಇಂತಹ ದುಷ್ಕರ್ಮಿಗಳು ವಿವಿಧ ಪ್ರದೇಶಗಳಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಇದರ ಮೂಲಕ ಸರ್ಕಾರದಿಂದ ಕೈಗೊಳ್ಳಲಾಗುವ ಯಾವುದೇ ಉತ್ತಮ ಯೋಜನೆಯ ಬಗ್ಗೆಯೂ ಸಾರ್ವಜನಿಕರಲ್ಲಿ ಅನುಮಾನ ಮೂಡಿಸುವ ಉದ್ದೇಶ ಹೊಂದಲಾಗಿದೆ.

ರಚನಾತ್ಮಕ ಸಾರ್ವಜನಿಕ ಟೀಕೆ ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮವು ಆರೋಗ್ಯಕರ ಪ್ರಜಾಪ್ರಭುತ್ವದ ಪ್ರಮುಖ ಅಂಗಗಳಾಗಿವೆ ಎಂಬುದನ್ನು ಭಾರತೀಯ ನೌಕಾಪಡೆ ಒಪ್ಪಿಕೊಳ್ಳುತ್ತದೆ. ಆದರೆ ಸಾಮಾಜಿಕ ಸಂಘರ್ಷವನ್ನು ಉಂಟುಮಾಡಲು ಮತ್ತು ದೇಶದ ಅಭಿವೃದ್ಧಿಯ ಯೋಜನೆಗಳನ್ನು ತಡೆಯಲು ಮಾತ್ರ ಉದ್ದೇಶಿಸಿರುವ ಮಾಹಿತಿ ಕಾರ್ಯಾಚರಣೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ನೌಕಾಪಡೆ ಮನವಿ ಮಾಡಿದೆ.

ನಿಗದಿಪಡಿಸಲಾದ ನೀತಿಗಳು ಮತ್ತು ನಿಯಮಗಳಿಂದ ಯಾವುದೇ ರೀತಿಯ ತಪ್ಪುಗಳನ್ನ ಭಾರತೀಯ ನೌಕಾಪಡೆ ಸಹಿಸುವುದಿಲ್ಲ. ಯಾವುದೇ ಅಸಂಗತತೆ ಅಥವಾ ನಿಯಮ ಉಲ್ಲಂಘನೆ ನಡೆಯದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗಿದೆ.

ಯಾವುದೇ ರೀತಿಯ ನಿಯಮ ಉಲ್ಲಂಘನೆ ಅಥವಾ ಅಸಂಗತತೆ ಗಮನಕ್ಕೆ ಬಂದಲ್ಲಿ, ಅದಕ್ಕೆ ಸಂಬಂಧಿಸಿದ ವಿಶ್ವಾಸಾರ್ಹ ಮತ್ತು ದೃಢವಾದ ಸಾಕ್ಷ್ಯಾಧಾರಗಳೊಂದಿಗೆ ಸಂಬಂಧಪಟ್ಟ ನೌಕಾ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ನೌಕಾಪಡೆ ಪ್ರೋತ್ಸಾಹಿಸುತ್ತದೆ.

ಅಂತಹ ದೂರುಗಳು ಅಥವಾ ಅಕ್ರಮಗಳ ಕುರಿತು ಸಮರ್ಪಕ ಸಾಕ್ಷ್ಯಾಧಾರಗಳೊಂದಿಗೆ ಮಾಹಿತಿ ನೀಡಿದಲ್ಲಿ, ಸಂಬಂಧಪಟ್ಟ ನೌಕಾ ಅಧಿಕಾರಿಗಳು ಪರಿಶೀಲನೆ ನಡೆಸಿ ಅಗತ್ಯವಿರುವ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂದು ಸ್ಪಷ್ಟೀಕರಣ ನೀಡಿದೆ.

ಸ್ಪಷ್ಟೀಕರಣ ಬೆನ್ನಲ್ಲೇ ನೌಕಾದಳದ ವಿರುದ್ಧ ನಿರಾಶ್ರಿತರ ಆರೋಪ!

IMG 20261005 124606

ಕನ್ನಡವಾಣಿ .ನ್ಯೂಸ್ ದೇಶದ ಭದ್ರತೆಯ ಹಿತವನ್ನು ಇಟ್ಟುಕೊಂಡು ,ಪತ್ರಿಕೋಧ್ಯಮದ ಮೌಲ್ಯದ ಘನತೆ ಇಟ್ಟುಕೊಂಡು ವರದಿಯನ್ನ ಮಾಡುತ್ತದೆ. ನೌಕಾದಳದಿಂದ ಸ್ಪಷ್ಟೀಕರಣ ನೀಡಲಾಗಿದೆ. ಇದಕ್ಕೆ ನಮ್ಮ ಗೌರವ ಹಾಗೂ ಸ್ವಾಗತವಿದೆ. ಹಾಗೆಂದ ಮಾತ್ರಕ್ಕೆ ಸತ್ಯದ ಧ್ವನಿಯಾಗುವಾಗ ಇಂತಹ ಸವಾಲುಗಳು, ಜೀವಬೆದರಿಕೆಯಂತಹ ಘಟನೆಗಳು ಧ್ವನಿಯನ್ನ ಅಡಗಿಸಲು ಸಾಧ್ಯವಿಲ್ಲ. ಇನ್ನು ನೌಕಾನೆಲೆಯ ಅಭಿವೃದ್ಧಿಗಾಗಲೀ , ದೇಶದ ಹಿತಕ್ಕೆ ದಕ್ಕೆ ತರುವ ಕೆಲಸಕ್ಕೆ ಕನ್ನಡವಾಣಿ ಎಂದೂ ಕೈ ಹಾಕುವುದಿಲ್ಲ . ನ್ಯೂನ್ಯತೆಗಳನ್ನ ಎತ್ತಿಹಿಡಿದು ಸಮಾಜದ ಸ್ವಾಸ್ಯ ಕಾಪಾಡುವುದು ನಮ್ಮ ಹೊಣೆ .ಇದಕ್ಕೆ ನಾವು ಬದ್ಧರು.ನೌಕಾದಳ ತನ್ನ ತಪ್ಪನ್ನ ತಿದ್ದಿಕೊಳ್ಳಲಿ ಎಂಬುದಷ್ಟೇ ನಮ್ಮ ಉದ್ದೇಶ. ನೌಕಾದಳ ಸ್ಥಳೀಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ ಎಂಬುದನ್ನ ಸ್ಪಷ್ಟೀಕರಣ ನೀಡಿದೆ. ಆದರೇ ಇದು ಎಷ್ಟು ಸತ್ಯ ಎಂಬುದು ಕಾರವಾರದ ಜನತೆಗೆ ಗೊತ್ತು. ಸ್ಥಳೀಯರಿಗೆ ಎಷ್ಟು ಉದ್ಯೋಗ್ಯ ಕೊಟ್ಟಿದ್ದಾರೆ? ಎಂಬ ಆತ್ಮಾವಲೋಕನ ಮಾಡಿಕೊಳ್ಳಲಿ. ಇನ್ನು ನೌಕಾದಳದ ರಹಸ್ಯವನ್ನು ನೌಕಾದಳದಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳೇ ಹನಿಟ್ರಾಪ್ ,ಹಣಕ್ಕಾಗಿ ಮಾರಿಕೊಂಡು ಸಿಕ್ಕಿಬಿದ್ದ ಘಟನೆಯನ್ನ ನೌಕಾದಳದಲ್ಲಿ ವರದಿ ಇದೆ.ಈವರೆಗೂ ಆಬಗ್ಗೆ ತನಿಖೆ ನಡೆಯುತ್ತಿದೆ. ಹಾಗಿದ್ದರೇ ಯಾರು ದೇಶ ಬ್ರಷ್ಟರು? ಎಂಬುದನ್ನ ದೇಶಕ್ಕೆ ದ್ರೋಹ ಬಗೆಯುವವರು ,ಬ್ರಷ್ಟಾಚಾರಿಗಳು ಆತ್ಮಾವಲೋಕನ ಮಾಡಿಕೊಳ್ಳಲಿ. ನೌಕಾದಳದ ಕೆಲವು ಸಿಬ್ಬಂದಿಗಳು ಕಾರವಾರ ನಗರಭಾಗದಲ್ಲಿ ಜನರೊಂದಿಗೆ ನಡೆದುಕೊಳ್ಳವ ,ಗಲಾಟೆ ಮಾಡುವ ಕುರಿತು ನೌಕಾದಳದ ಗುಪ್ತಚರ ಇಲಾಖೆ ಗೆ ಗೊತ್ತಿಲ್ಲವೇ ? ಸ್ಥಳೀಯವಾಗಿ ಉತ್ತಮ ಸಂಬಂಧ ಇಟ್ಟುಕೊಳ್ಳಬೇಕಾದ್ದು ಅವರ ಧರ್ಮ ಕೂಡ. ಇನ್ನು ಭಾರತೀಯ ತಡರಕ್ಷಕ ದಳ ಕಾರವಾರದ ಕರಾವಳಿ ಭಾಗದಲ್ಲಿ  ಮುಳುಗುತಿದ್ದ ದೋಣಿಗಳನ್ನ ಎಷ್ಟು ರಕ್ಷಣೆ ಮಾಡಿವೆ? ಈ ಬಗ್ಗೆ ಒಮ್ಮೆ ಮೀನುಗಾರರನ್ನ ಕೇಳಿಬಿಡಿ. ಮೀನುಗಾರರ ಬಲೆಯನ್ನ ತುಂಡರಿಸುವ ,ಬೆದರಿಸುವ ಕಾಯಕ ಯಾವಾಗ ನಿಲ್ಲುತ್ತದ? ಮೀನುಗಾರರ ಬಳಿ ಮೀನು ಕಸಿದು ತೆಗೆದುಕೊಂಡು ಹೋಗುವವರು,ಹೆಲಿಕಾಪ್ಟರ್ ಮೂಲಕ ಹಗ್ಗ ಬಿಟ್ಟು ಮೀನು ಕೊಂಡೊಯ್ದ ಘಟನೆ ಸುದ್ದಿ ಆಗಿಲ್ಲವೇ? ಹೀಗೆ ಹೇಳುತ್ತಾ ಹೋದರೆ ಹಲವು ದೋಷಾರೋಪಣೆಗಳ ಪಟ್ಟಿ ಬೆಳೆಯುತ್ತದೆ.ನಮ್ಮ ಉದ್ದೇಶ ಬಿಳಿ ವಸ್ತ್ರ ಹಾಕುವ ನೌಕಾದಳದ ಆಡಳಿತವೂ ಸ್ಪಚ್ಛವಾಗಿರಲಿ ಎಂಬುದಷ್ಟೇ.

IMG 20261005 131854
ನೌಕಾ ನೆಲೆಯ ಸೀಬರ್ಡ ನಿರಾಶ್ರಿತ ಗುತ್ತಿಗೆ ಆಧಾರದ ಕಾರ್ಮಿಕರು

ಇನ್ನು ನೌಕಾದಳದ ಬಗ್ಗೆ ಸೀ ಬರ್ಡ ನಿರಾಶ್ರಿತ ಕಾರ್ಮಿಕರು ಕಾರವಾರದಲ್ಲಿ ಮಾಧ್ಯಮ ಗೋಷ್ಟಿ ಮಾಡಿ ನೌಕಾದಳದ ಬಗ್ಗೆ ಧ್ವನಿ ಎತ್ತಿದ್ದು ಕೋರ್ಟಗೆ ಹೋಗುವ ಕುರಿತು ಹೇಳಿಕೆ ನೀಡಿದ್ದಾರೆ.

ಹೌದು ಕಾರವಾರದ ಕದಂಬ ನೌಕಾನೆಲೆಯಲ್ಲಿ ಗುತ್ತಿಗೆ ಕಾರ್ಮಿಕರನ್ನ ತಳಮಟ್ಟದಲ್ಲಿ ನೋಡಲಾಗುತಿದ್ದು ,ಮೂರು ತಿಂಗಳಿನಿಂದ ಸಂಬಳ ನೀಡದ ಬಗ್ಗೆ ಆರೋಪ ಮಾಡಿದ್ದಾರೆ. ಇದಲ್ಲದೇ ಕನಿಷ್ಟ ವೇತನವನ್ನೂ ಸಹ ನೀಡದೇ ತಿಂಗಳಿಗೆ 12 ಸಾವಿರ ಗುತ್ತಿಗೆ ಕಂಪನಿಗಳು ನೀಡುತ್ತಿರುವ ಆರೋಪ ಮಾಡಲಾಗಿದೆ.ಬೇಲಿಕೇರಿಯ ಸೀಬರ್ಡ ನಿರಾಶ್ರಿತರ ಅಸಂಘಟಿತ ಕೂಲಿಕಾರ್ಮಿಕರ ಸಂಘಟನೆ ಈ ಆರೋಪ ಮಾಡಿದ್ದು ,ಇದರ ಅಧ್ಯಕ್ಷ ಸುನೀಲ್ ನಾಯ್ಕ ಹೊನ್ನೆಕೇರಿಯವರು ಕಾರವಾರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ನೌಕಾನೆಲೆಯಲ್ಲಿ ಎನ್.ಎ.ಡಿ ಇಲಾಖೆಯಲ್ಲಿ ಒಟ್ಟು 256 ಸರ್ಕಾರಿ ಕಾಯಂ ಹುದ್ದೆಯಲ್ಲಿ ಎಲ್ಲವನ್ನೂ ಹೊರರಾಜ್ಯದವರಿಗೆ ನೀಡಿದ್ದಾರೆ. ಇದರಲ್ಲಿ ಒಂದೇ ಪಿನ್ ಕೋಡ್ ಅಂಚೆ ವಿಳಾಸ ಹೊಂದಿದ ಒಂದೇ ಊರಿನ 25 ಯುವಕರಿಗೆ ಖಾಯಂ ಉದ್ಯೋಗ  ನೀಡಲಾಗಿದೆ. ಈಮೂಲಕ ತಮಗೆ ಬೇಕಾದವರಿಗೆ ತಮ್ಮೂರಿನವರಿಗೆ ಉದ್ಯೋಗ ನೀಡಿದ್ದಾರೆ.ನೇಮಕಾತಿಯಲ್ಲಿ ಬ್ರಷ್ಟಾಚಾರ ಮಾಡಲಾಗಿದೆ ಎಂದು ಆರೋಪ ಮಾಡಿದ್ದು ,ಸೂಕ್ತ ದಾಖಲೆಯೊಂದಿಗೆ ಕೋರ್ಟ ಮೆಟ್ಟಿಲೇರುವುದಾಗಿ ತಿಳಿಸಿದ್ದು , ನೌಕಾದಳದ ಕಚೇರಿ ಎದುರು ಸ್ಥಳೀಯರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾ ಪ್ರಕಟಣೆಯ ದಾಖಲೆ ಇಲ್ಲಿದೆ:-

ಪತ್ರಿಕಾ ಪ್ರಕಟಣೆ ದಾಖಲೆ

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement