ಪಹರೆ ವೇದಿಕೆಯಿಂದ ಸ್ವಚ್ಛತಾ ಸಂಭ್ರಮ- ನಟ ಅರುಣ್ ಸಾಗರ್, ಕವಿತಾ ಮಿಶ್ರ ಇದೇ ಶನಿವಾರ ಕಾರವಾರಕ್ಕೆ.

882

ಕಾರವಾತ :-ನಿರಂತರ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಪಹರೆ ವೇದಿಕೆ 6 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ನಗರದ ಕಡಲತೀರದಲ್ಲಿ ಜ.23ರಂದು ಸಂಜೆ 6 ಗಂಟೆಗೆ ಸಮಾರಂಭವನ್ನು ಹಮ್ಮಿಕೊಂಡಿದೆ.

ಮಯೂರವರ್ಮ ವೇದಿಕೆ ಹಿಂಭಾಗದ ಫುಡ್ ಕೋರ್ಟ ಬಳಿ ಸಂಜೆ 6 ಗಂಟೆಗೆ ನಡೆಯಲಿರುವ ಈ ಸಮಾರಂಭದಲ್ಲಿ ಕೃಷಿ ಸಾಧಕಿ ಕವಿತಾ ಮಿಶ್ರಾ, ಕಲಾ ನಿರ್ದೇಶಕ, ಚಿತ್ರನಟ ಅರುಣ ಸಾಗರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕಾರವಾರದ ಶಾಸಕಿ ರೂಪಾಲಿ ಎಸ್.ನಾಯ್ಕ ಕಾರ್ಯಕ್ರಮ ಉದ್ಘಾಟಿಸಲಿದ್ದು ನಗರಸಭೆ ಅಧ್ಯಕ್ಷ ನಿತಿನ್ ಪಿಕಳೆ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಪಹರೆ ವೇದಿಕೆ ಅಧ್ಯಕ್ಷ ನಾಗರಾಜ್ ನಾಯ್ಕ ತಿಳಿಸಿದರು.

ಇಂದು ಕಾರವಾರದ ಪತ್ರಿಕಾಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು
ದೂರದ ಊರುಗಳಿಂದ ಬಂದು ಸ್ವಚ್ಛತೆಯಲ್ಲಿ ನಿರಂತರವಾಗಿ ತೊಡಗಿಕೊಂಡ ಪಹರೆ ಸದಸ್ಯರನ್ನು ಸಮಾರಂಭದಲ್ಲಿ ಸತ್ಕರಿಸಿ ಗೌರವಿಸಲಾಗುವುದು.

ಪಹರೆ ಏರ್ಪಡಿಸಿದ್ದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.

ಜ.23ರಂದು ಬೆಳಗ್ಗೆ 6.30ರಿಂದ ಕಾಳಿ ಸಂಗಮದಲ್ಲಿ ಸ್ವಚ್ಛತಾ ಅಭಿಯಾನ ನಡೆಯಲಿದೆ. ಈ ಅಭಿಯಾನದಲ್ಲಿ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದರು .

ಪಹರೆಯ ಬಗ್ಗೆ:-

ಜ.3.2015ರಲ್ಲಿ ಅಂದಿನ ಜಿಲ್ಲಾಧಿಕಾರಿ ಉಜ್ವಲಕುಮಾರ್ ಘೋಷ್ ಅವರಿಂದ ಉದ್ಘಾಟನೆಗೊಂಡ ಪಹರೆ ವೇದಿಕೆ ನಿರಂತರವಾಗಿ 316ನೇ ವಾರ ಅಂದರೆ 6 ವರ್ಷಗಳನ್ನು ಪೂರೈಸಿ ಮುಂದಡಿ ಇಟ್ಟಿದೆ.

ಪಹರೆ ವೇದಿಕೆ ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಹೀಗೆ ಸರ್ವಧರ್ಮ ಸಮನ್ವಯವಾಗಿದೆ. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಇದ್ದರೂ ಪಹರೆ ಮಾತ್ರ ರಾಜಕೀಯದಿಂದ ದೂರವಾಗಿಯೇ ತನ್ನ ಕಾರ್ಯ ನಡೆಸಿಕೊಂಡು ಬಂದಿದೆ.

ಪಹರೆ ವೇದಿಕೆಯ ಸ್ವಚ್ಛತಾ ಅಭಿಯಾನದಲ್ಲಿ ಪದ್ಮಶ್ರೀ ಸಾಲುಮರದ ತಿಮ್ಮಕ್ಕ, ಪದ್ಮಶ್ರೀ ಇಬ್ರಾಹಿಂ ಸುತಾರ್, ಪದ್ಮಶ್ರೀ ಸುಕ್ರಿ ಗೌಡ, ಪದ್ಮಶ್ರೀ ತುಳಸಿ ಗೌಡ, ಮುರುಘಾ ಶರಣರು, ಸುರೇಶ ಹೆಬ್ಳೀಕರ್, ಜಿಲ್ಲಾಧಿಕಾರಿ, ವಿವಿಧ ಅಧಿಕಾರಿಗಳು ಪಾಲ್ಗೊಂಡು ಬೆನ್ನುತಟ್ಟಿದ್ದಾರೆ.

ನೆಲ, ಜಲ, ಪರಿಸರ ಕಾಳಜಿಃ-

ಪಹರೆ ವೇದಿಕೆ ನಗರದ ಸವಿತಾ ವೃತ್ತದಿಂದ ಕೋಡಿಬಾಗದ ಕಾಳಿ ರಿವರ್ ಗಾರ್ಡನ್ ತನಕ ರಸ್ತೆಯ ಡಿವೈಡರ್ ನಲ್ಲಿ 580 ಸಸಿಗಳನ್ನು ನೆಟ್ಟು ಬೆಳೆಸುತ್ತಿದೆ. ಟ್ರೀಗಾರ್ಡ ಅಳವಡಿಸಿ ನಗರಸಭೆ ಸಹಕಾರದಲ್ಲಿ ನೀರನ್ನು ಉಣಿಸಿ ನಿರ್ವಹಣೆ ಮಾಡುತ್ತಿದೆ.

ಸಸಿಗಳನ್ನು ನೆಟ್ಟು ಬೆಳೆಸುವ ಅಭಿಯಾನಕ್ಕೆ ದಾನಿಗಳು ಸಹಕಾರ ನೀಡಿದ್ದಾರೆ.
ಪಹರೆ ವೇದಿಕೆ ವಿಶೇಷ ಸಂದರ್ಭದಲ್ಲಿ ಲೇಡಿಸ್ ಬೀಚ್, ಕಾಳಿ ಮಾತಾ ದ್ವೀಪ, ಯಾಣ ಮತ್ತಿತರ ಕಡೆಗೆ ತೆರಳಿ ಸ್ವಚ್ಛತೆ ನಡೆಸಿದೆ.

ಗಂಗಾವಳಿ ಹಾಗೂ ವಿಭೂತಿ ನದಿಗೆ ಪೂಜೆ ಸಲ್ಲಿಸಿ, ಕೆರೆಗಳನ್ನು ಸ್ವಚ್ಛಗೊಳಿಸಿ ಜಲಮೂಲದ ಬಗ್ಗೆ ಜಾಗೃತಿ ಮೂಡಿಸಿದೆ.

ಸ್ವಚ್ಛತೆ, ಪರಿಸರ, ಸೇವೆಯನ್ನೇ ಧ್ಯೇಯವನ್ನಾಗಿಟ್ಟುಕೊಂಡ ಪಹರೆ ವೇದಿಕೆ ಯಶಸ್ವಿಯಾಗಿ ಮುಂದುವರಿಯುತ್ತಿದೆ.

ನ್ಯಾಯವಾದಿ ನಾಗರಾಜ ನಾಯಕ ಸಂಸ್ಥಾಪಕ ಅಧ್ಯಕ್ಷರಾಗಿದ್ದು, ಪ್ರಸ್ತುತ ಸದಾನಂದ ಮಾಂಜ್ರೇಕರ್ ಗೌರವಾಧ್ಯಕ್ಷರಾಗಿದ್ದಾರೆ.

ಕೂಲಿಕಾರ್ಮಿಕರು, ಜನಪ್ರತಿನಿಧಿಗಳು, ಉದ್ಯಮಿಗಳು, ವಕೀಲರು, ಪತ್ರಕರ್ತರು, ಉಪನ್ಯಾಸಕರು ಹೀಗೆ ವಿವಿಧ ವೃತ್ತಿಯಲ್ಲಿದ್ದವರು ಪಹರೆಯ ಕಾಯಂ ಸದಸ್ಯರು.

ಕವಿತಾ ಮಿಶ್ರಾ ರವರ ಬಗ್ಗೆ:-

ಸಾಫ್ಟವೇರ್ ಎಂಜಿನಿಯರ್ ಆಗಿದ್ದೂ ಕೃಷಿಯನ್ನು ನೆಚ್ಚಿಕೊಂಡು ರಾಯಚೂರಿನ ಕವಿತಾಳದಲ್ಲಿ ವಾಸಿಸುತ್ತಿರುವ ಕವಿತಾ ಮಿಶ್ರಾ ಗಂಧದ ಗಿಡಗಳನ್ನು ಬೆಳೆಸುವ ಮೂಲಕ ನಾಡಿನಾದ್ಯಂತ ಶ್ರೀಗಂಧದ ಕಂಪನ್ನು ಬೀರಿದ್ದಾರೆ. ಹಲವು ವಿಧದ ಬೆಳೆಗಳನ್ನು ಬೆಳೆದು, ಕೃಷಿಯಲ್ಲಿ ಅಗಾಧವಾದ ಸಾಧನೆ ಮಾಡಿ ರಾಷ್ಟ್ರ, ರಾಜ್ಯ ಮಟ್ಟದ ಪ್ರಶಸ್ತಿ ಪಡೆದಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಅಧ್ಯಕ್ಷ ನಾಗರಾಜ ನಾಯಕ,ಗೌರವಾಧ್ಯಕ್ಷ ಸದಾನಂದ ಮಾಂಜ್ರೇಕರ್,ಪದಾಧಿಕಾರಿಗಳಾದ ಅಜಯ ಸಾವುಕಾರ,ಪ್ರಕಾಶ ಕೌರ್,ಶಿವಾನಂದ ಶಾನಭಾಗ,ಖೈರುನ್ನಿಸಾ ಶೇಖ್ ಇನ್ನಿತರರು ಇದ್ದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!