ವಿದ್ಯುತ್ ಶಾರ್ಟ ಸರ್ಕ್ಯೂಟ್ ಗೆ ಸಂಪೂರ್ಣ ಸುಟ್ಟುಹೋದ ಮನೆ -ಲಕ್ಷಾಂತರ ರುಪಾಯಿ ನಷ್ಟ

Kumta :-ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿಹೊತ್ತಿಕೊಂಡು ಸಂಪೂರ್ಣ ಸುಟ್ಟುಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತಂಡ್ರಕುಳಿಯಲ್ಲಿ ನಡೆದಿದೆ.ರಮೇಶ ಅಂಬಿಗ ಎಂಬುವವರಿಗೆ ಸೇರಿರುವ ಮನೆ ಇದಾಗಿದ್ದು , ಬೆಂಕಿಯಿಂದಾಗಿ ಮನೆ ಸಂಪೂರ್ಣ ಸುಟ್ಟುಹೋಗಿದ್ದು ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಂದಾಜು ಐದು ಲಕ್ಷಕ್ಕೂ ಹೆಚ್ಚು ನಷ್ಟವಾಗಿದ್ದು
ಕುಮಟಾ ಹಾಗೂ ಅಂಕೋಲಾದಿಂದ ಆಗಮಿಸಿದ ಅಗ್ನಿಶಾಮ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.
ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕುಮಟಾ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇಸ್ಪೀಟ್ ಅಡ್ಡೆ ಮೇಲೆ ದಾಳಿ: 8 ಜನರ ಬಂಧನ
Kumta:- ಕುಮಟಾ ರೈಲ್ವೆ ಸ್ಟೇಷನ್ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜೂಜಾಟ ಆಡುತ್ತಿದ್ದಾಗ ಕುಮಟಾ ಪೊಲೀಸರು ದಾಳಿ ನಡೆಸಿ 9, 100 ರು. ನಗದು ಹಣ ಹಾಗೂ ಜೂಜಾಟಕ್ಕೆ ಬಳಸಿದ್ದ ವಸ್ತುಗಳ ಸಮೇತ 8 ಜನರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಕುಮಟಾ ರೈಲ್ವೆ ಸ್ಟೇಷನ್ ಶೆಡ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಅಂದರ್ ಬಾಹರ ಆಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, 9, 100 ನಗದು ಹಣ, ಇಸ್ಪೀಟ್ ಕಾರ್ಡ್ ಗಳೊಂದಿಗೆ 8 ಜನ ಆರೋಪಿತರನ್ನು ಬಂಧಿಸಲಾಗಿದೆ.
ಮಾಜಿ ಶಾಸಕಿ ರೂಪಾಲಿ ರಸ್ತೆ ಪ್ರತಿಭಟನೆಗೆ ಸೈಲ್
ತಿರುಗೇಟು

Karwar :- ಕಾರವಾರ ಹಬ್ಬುವಾಡ ಮುಖ್ಯರಸ್ತೆಯನ್ನು ಐದು ಕೋಟಿ ವೆಚ್ಚದಲ್ಲಿ ಪ್ರಾರಂಭಿಸಿ ಮುಕ್ತಾಯಗೊಳಿಸಿದ್ದ ಮಾಜಿ ಶಾಸಕಿ ರೂಪಾಲಿ ನಾಯ್ಕ, ಈಗ ರಸ್ತೆ ಮಧ್ಯೆ ನಿಂತು ತನ್ನ ರಸ್ತೆ ಎಲ್ಲಿ ಹೋಯಿತು, ಎಂದು ಅಧಿಕಾರಿಗಳನ್ನು ದೂರವಾಣಿ ಮೂಲಕ ಪ್ರಶ್ನಿಸುತ್ತಿರುವುದು ಏಕೆ? ಎಂದು ಶಾಸಕ ಸತೀಶ್ ಸೈಲ್ ಪ್ರಶ್ನಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಸ್ತೆ ಕಾಮಗಾರಿಯನ್ನು ತನ್ನದೇ ಅವಧಿಯಲ್ಲಿ ಪೂರ್ವ ನಿಗದಿಯಂತೆ ಸಂಪೂರ್ಣಗೊಳಿಸಿ ಉದ್ಘಾಟಿಸಿದ್ದರೆ ಪ್ರತಿಭಟನೆ ಇರುತ್ತಿರಲಿಲ್ಲ ಎಂದಿದ್ದಾರೆ.
ಎಷ್ಟು ಹುಡುಕಿದರೂ 8 ತಿಂಗಳಲ್ಲಿ ಸೈಲ್ ಕೈಗೊಂಡ ಕಾಮಗಾರಿ ಕಾಣುತ್ತಿಲ್ಲ ಕೇವಲ ರೂಪಾಲಿ ನಾಯ್ಕ ಅವಧಿಯಲ್ಲಿ ಕೈಗೊಂಡ ಕಾಮಗಾರಿಯಲ್ಲಿ ಹಸ್ತಕ್ಷೇಪ ನಡೆಸಿದ್ದೇ ಸಾಧನೆ- ಬಿಜೆಪಿ ನಾಯಕರ ತಿರುಗೇಟು.
Karwar :- ಶಾಸಕರಾಗಿ 8 ತಿಂಗಳಾದರೂ ಒಂದು ಮೀಟರ್ ರಸ್ತೆ ನಿರ್ಮಿಸುವ ಯೋಗ್ಯತೆ ಇಲ್ಲದ ಸತೀಶ ಸೈಲ್ ಹಿಂದಿನ ಶಾಸಕಿ ರೂಪಾಲಿ ಎಸ್.ನಾಯ್ಕ ಅವರ ಅವಧಿಯಲ್ಲಿ ನಿರ್ಮಾಣವಾದ ರಸ್ತೆಯಲ್ಲಿ ರಾಜಕೀಯ ಮಾಡುತ್ತಿರುವುದು ಖಂಡನೀಯ ಎಂದು ಬಿಜೆಪಿ ಕಾರವಾರ ನಗರ ಮಂಡಳ ಅಧ್ಯಕ್ಷ ನಾಗೇಶ ಕುರ್ಡೇಕರ ಹಾಗೂ ಗ್ರಾಮೀಣ ಮಂಡಳ ಅಧ್ಯಕ್ಷ ಸುಭಾಷ ಗುನಗಿ ತಿಳಿಸಿದ್ದಾರೆ.
ರಸ್ತೆ ನಿರ್ಮಾಣ, ಡಿವೈಡರ್ ಅಳವಡಿಕೆ, ವಿದ್ಯುದ್ದೀಪ ಅಳವಡಿಕೆ, ಚರಂಡಿ ನಿರ್ಮಾಣ ಎಲ್ಲ ಯೋಜನೆ ರೂಪಿಸಿದವರು ಸಹಾಯಕ ಎಂಜಿನಿಯರ್ ಕಲ್ಪನಾ ವಾಗ್ಮೋರೆ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್ ಅವರೇ ಹೊರತೂ ರೂಪಾಲಿ ಎಸ್.ನಾಯ್ಕ ಅವರಲ್ಲ. ಸರ್ಕಾರದಿಂದ ರೂಪಾಲಿ ಎಸ್.ನಾಯ್ಕ ಹಣ ಮಂಜೂರು ಮಾಡಿಸಿದ್ದಾರೆ. ಹಾಗಿದ್ದರೆ ಅದೇ ಅಧಿಕಾರಿಗಳೇ ಈಗ ಡಿವೈಡರ್ ಅಳವಡಿಕೆ ಸಾಧ್ಯವಿಲ್ಲ ಎಂದು ಏಕೆ ಹೇಳುತ್ತಾರೆ. ಆಗ ಯೋಜನೆ ರೂಪಿಸಿದವರು ಈಗಲೂ ಇದ್ದಾರೆ. ಆಗ ಯೋಜನೆ ರೂಪಿಸುವಾಗ ಗೊತ್ತಿರಲಿಲ್ಲವೇ. ಅಥವಾ ಈಗ ಹೀಗೆ ಹೇಳಲು ಕಾರಣವೇನು ಎಂದು ಪ್ರಶ್ನಿಸಬೇಕಾಗಿದೆ.
ರಸ್ತೆ ಸುಸಜ್ಜಿತವಾಗಿ ನಿರ್ಮಾಣವಾಗಿದೆ. ಚರಂಡಿ ನಿರ್ಮಾಣಕ್ಕೂ ಹಣ ಇದೆ. ಚರಂಡಿ ಮೇಲೆ ಸ್ಲ್ಯಾಬ್ ಹಾಕಿದಲ್ಲಿ ರಸ್ತೆ ಅಗಲವಾಗಿ ಡಿವೈಡರ್ ಅಳವಡಿಕೆಗೆ ಯೋಗ್ಯವಾಗಲಿದೆ. ಜೊತೆಗೆ ಪುಟ್ ಪಾತ್ ಮಾಡುವ ಮೂಲಕ ಪಾದಚಾರಿಗಳ ಸಂಚಾರಕ್ಕೂ ಅನುಕೂಲ ಒದಗಿಸಬಹುದು. ಈಗ ಡಿವೈಡರ್ ಅಳವಡಿಸದೆ ಹಾಗೆ ಬಿಟ್ಟಿರುವ ಪರಿಣಾಮವಾಗಿಯೇ ಅಪಘಾತಗಳು ಉಂಟಾಗುತ್ತಿವೆ ಎನ್ನುವುದನ್ನು ಮನಗಾಣಬೇಕು.
ಅಪಘಾತ ರಹಿತವಾಗಿ ಚಾಲನೆ ಮಾಡಲು, ನಗರದ ಸೌಂದರ್ಯ ಹೆಚ್ಚಳ, ಸರಾಗ ಸಂಚಾರಕ್ಕಾಗಿ ನಗರ ಪ್ರದೇಶದಲ್ಲಿ ಈ ರೀತಿ ರಸ್ತೆ ಅಗಲೀಕರಣ ಮಾಡಿ, ಚರಂಡಿ ನಿರ್ಮಿಸಿ, ಡಿವೈಡರ್ ಅಳವಡಿಸಿ, ವಿದ್ಯುತ್ ದೀಪಗಳನ್ನು ಅಳವಡಿಸುವುದು ವೈಜ್ಞಾನಿಕ ವಿಧಾನ. ಈಗಾಗಲೆ ಅಂಕೋಲಾ, ಸದಾಶಿವಗಡಗಳಲ್ಲಿ ನಿರ್ಮಾಣವಾದ ರಸ್ತೆಯಿಂದ ಏನು ಸಮಸ್ಯೆ ಆಗಿದೆ ಎನ್ನುವುದನ್ನು ತಿಳಿದುಕೊಳ್ಳಲಿ. ಸದಾಶಿವಗಡದಲ್ಲೂ ರಾಜ್ಯ ಹೆದ್ದಾರಿಯಲ್ಲೇ ಡಿವೈಡರ್ ಅಳವಡಿಸಲಾಗಿದೆ. ಶಿರಸಿಯಲ್ಲೂ ರಾಜ್ಯ ಹೆದ್ದಾರಿಯಲ್ಲೇ ಡಿವೈಡರ್ ಅಳವಡಿಸಲಾಗಿದೆ ಎನ್ನುವುದು ಸ್ವತಃ ಗುತ್ತಿಗೆದಾರರಾಗಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಗಮನಕ್ಕೆ ಬರಲಿಲ್ಲವೇ.
ರೂಪಾಲಿ ಎಸ್.ನಾಯ್ಕ ಅವರು ಶಾಸಕರಾಗಿದ್ದಾಗ ಇಡಿ ಕಾರವಾರ ಅಂಕೋಲಾ ಕ್ಷೇತ್ರದಲ್ಲಿ ನಿರ್ಮಾಣವಾದ ಅದೆಷ್ಟೋ ಕಾಮಗಾರಿಗಳಿವೆ. ರಸ್ತೆಗಳಿವೆ. ಸೇತುವೆಗಳಿವೆ. ಸಮುದಾಯ ಭವನಗಳಿವೆ. ಕುಡಿಯುವ ನೀರಿನ ಯೋಜನೆಗಳಿವೆ ಮತ್ತಿತರ ಕಾಮಗಾರಿಗಳ ಸಂಖ್ಯೆ ದೊಡ್ಡದಿದೆ. ಆದರೆ ಸತೀಶ ಸೈಲ್ ಶಾಸಕರಾಗಿ 8 ತಿಂಗಳಾದರೂ ಯಾವ ಕಾಮಗಾರಿ ಮಾಡಿದ್ದಾರೆ ಎಂದು ಹುಡುಕಲು ಸತೀಶ ಸೈಲ್ ಅವರಿಂದಲೇ ಸಾಧ್ಯವಾಗುತ್ತಿಲ್ಲ. ಯಾರು ಹುಡುಕಿದರೂ ಯಾವ ಕಾಮಗಾರಿಯೂ ಸಿಗುತ್ತಿಲ್ಲ. ಒಂದೇ ಒಂದು ಕಾಮಗಾರಿ ಮಾಡದ ಹೆಗ್ಗಳಿಕೆ ಸತೀಶ ಸೈಲ್ ಅವರದ್ದಾಗಿದೆ. ಹಿಂದೆ ಸೈಲ್ ಶಾಸಕರಾಗಿದ್ದಾಗ ಒಂದೂವರೆ ವರ್ಷ ಎಲ್ಲಿದ್ದರು ಎಂದು ಮತ್ತೆ ಹೇಳಬೇಕಾಗಿಲ್ಲ. ಈಗ ಸೈಲ್ ಶಾಸಕರಾಗಿ ಇದ್ದೂ ಇಲ್ಲದಂತಾಗಿದೆ.
ಹಿಂದಿನ ಶಾಸಕರಾದ ರೂಪಾಲಿ ಎಸ್.ನಾಯ್ಕ ಅವರು ದೇವಾಲಯಗಳಿಗೆ 11 ಕೋಟಿ ರೂಪಾಯಿ ವಿಶೇಷ ಅನುದಾನ ನೀಡಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಆ ಹಣವನ್ನೂ ಪೂರ್ತಿಯಾಗಿ ಕೊಡದೆ ದೇವಾಲಯದ ಆಡಳಿತ ಮಂಡಳಿಗೆ ತೊಂದರೆ ನೀಡುತ್ತಿದೆ.
ಒಂದು ವೇಳೆ ರಸ್ತೆಯನ್ನು ಈಗಿನ ಸ್ಥಿತಿಯಲ್ಲೇ ಬಿಟ್ಟರೆ ಮುಂದೆ ಆಗುವ ಎಲ್ಲ ಅಪಘಾತಗಳು, ಸಂಚಾರ ವ್ಯತ್ಯಯ ಎಲ್ಲದಕ್ಕೂ ಶಾಸಕ ಸತೀಶ ಸೈಲ್, ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಹಾಗೂ ಅವರ ತಂಡವೇ ಹೊಣೆಗಾರರಾಗಬೇಕು ಎಂದು ನಾಗೇಶ ಕುರ್ಡೇಕರ ಹಾಗೂ ಸುಭಾಷ ಗುನಗಿ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಟ್ಟಣ ಪಂಚಾಯ್ತಿಯನ್ನು ನಗರಸಭೆ ಸೇರಿಸಲು ಜಾಲಿ ಗ್ರಾಮದ ಜನರ ವಿರೋಧ ಪ್ರತಿಭಟನೆ.

Bhatkal :-ಪಟ್ಟಣ ಪಂಚಾಯ್ತಿಯನ್ನು ನಗರಸಭೆ ವ್ಯಾಪ್ತಿಗೆ ಸೇರಿಸಿ ಮೇಲ್ದರ್ಜೆಗೆ ಏರಿಸುವುದನ್ನು ವಿರೋಧಿಸಿ ಪಟ್ಟಣ ಪಂಚಾಯ್ತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಜಾಲಿಯಲ್ಲಿ ನಡೆದಿದೆ.
ಕೆಲವು ತಿಂಗಳ ಹಿಂದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಭಟ್ಕಳ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು.ಪತ್ರ ಬರೆದ ಹಿನ್ನಲೆಯಲ್ಲಿ ಭಟ್ಕಳ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸಲು ಮೌಕಿಕ ಸೂಚನೆ ದೊರೆತಿತ್ತು. ಈ ಬೆನ್ನಲ್ಲೇ ಕಳೆದ ಆರು ವರ್ಷದ ಹಿಂದೆ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದ್ದ ಜಾಲಿ ಪಟ್ಟಣ ಪಂಚಾಯ್ತಿಯನ್ನು ಸೇರ್ಪಡೆ ಗೊಳಿಸಲಾಗಿತ್ತು.ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಬೆನ್ನಲ್ಲೇ ಸ್ಥಳೀಯರಿಂದ ಜಾಲಿ ಪಟ್ಟಣ ಪಂಚಾಯ್ತಿಯನ್ನು ನಗರಸಭೆ ವ್ಯಾಪ್ತಿಯಿಂದ ಕೈ ಬಿಡಲು ಒತ್ತಾಯಿಸಿದ್ದು ಮನವಿ ಸಲ್ಲಿಸಿದರು.






