Sirsi |ಶಿರಸಿಯಲ್ಲಿ ಹಾರಾಡಿದ ಲಘು ವಿಮಾನ -ಜನರ ಆತಂಕಕ್ಕೆ ಜಿಐಎಸ್ ಸ್ಪಷ್ಟನೆ!
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ(sirsi) ಹಾಗೂ ಯಲ್ಲಾಪುರ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಅತ್ಯಂತ ಕಡಿಮೆ ಎತ್ತರದಲ್ಲಿ ವಿಮಾನಗಳು ಹಾರಾಟ ನಡೆಸುತ್ತಿರುವುದು ಸ್ಥಳೀಯರಲ್ಲಿ ಕುತೂಹಲ ಹಾಗೂ ಆತಂಕ ಮೂಡಿಸಿದೆ. ಬೇಡ್ತಿ–ಹಿರೇವಡ್ಡತ್ತಿ ನದಿ ಜೋಡಣೆ ಯೋಜನೆಯ ಸಮೀಕ್ಷೆ ನಡೆಯುತ್ತಿದೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ವ್ಯಕ್ತವಾಗಿತ್ತು. ಆದರೆ, ಈ ವಿಮಾನ ಹಾರಾಟಕ್ಕೂ ಯಾವುದೇ ನದಿ ಜೋಡಣೆ ಯೋಜನೆಗೂ ಸಂಬಂಧವಿಲ್ಲ. ದೇಶಾದ್ಯಂತ ನಡೆಯುತ್ತಿರುವ ಖನಿಜ ಅನ್ವೇಷಣೆಗೆ ಸಂಬಂಧಿಸಿದ ವೈಮಾನಿಕ ಭೂಭೌತಿಕ ಸಮೀಕ್ಷೆಯ ಭಾಗವಾಗಿದೆ ಎಂದು ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ (ಜಿಎಸ್ಐ) ಸ್ಪಷ್ಟಪಡಿಸಿದೆ.
ಖನಿಜ ನಿಕ್ಷೇಪಗಳನ್ನು ಪತ್ತೆಹಚ್ಚಲು ಅನುಕೂಲವಾಗುವಂತೆ ಭೂಗರ್ಭದ ರಚನೆಗಳನ್ನು ಅಧ್ಯಯನ ಮಾಡುವ ಉದ್ದೇಶದಿಂದ ಈ ಸಮೀಕ್ಷೆ ಕೈಗೊಳ್ಳಲಾಗಿದೆ. ಈ ಸಂಬಂಧ ಜಿಲ್ಲಾ ಪೊಲೀಸ್ ಇಲಾಖೆಯೂ ಸಂಬಂಧಪಟ್ಟ ಸಂಸ್ಥೆಯಿಂದ ಮಾಹಿತಿ ಸಂಗ್ರಹಿಸಿದೆ. ವಿಮಾನಗಳು ಮಂಗಳೂರು ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಇತರ ಭಾಗಗಳಲ್ಲಿಯೂ ಸಮೀಕ್ಷೆ ನಡೆಯುವ ಸಾಧ್ಯತೆಯಿದೆ.
ನದಿ ಜೋಡಣೆ ಸಮೀಕ್ಷೆ ಎಂಬ ಆತಂಕ!
ಶಿರಸಿ ಹಾಗೂ ಯಲ್ಲಾಪುರ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಕಳೆದ ಕೆಲ ದಿನಗಳಿಂದ ವಿಮಾನಗಳು ನೆಲಮಟ್ಟದಿಂದ ಅತ್ಯಂತ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸುತ್ತಿವೆ. ಇದರಿಂದ ಬೇಡ್ತಿ–ಹಿರೇವಡ್ಡತ್ತಿ ನದಿ ಜೋಡಣೆ ಯೋಜನೆಯ ಸರ್ವೆ ನಡೆಯುತ್ತಿದೆಯೇ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಮೂಡಿತ್ತು.
ಆದರೆ, ಇದು ಯಾವುದೇ ನಿರ್ದಿಷ್ಟ ನದಿ ಜೋಡಣೆ ಅಥವಾ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಸಮೀಕ್ಷೆಯಲ್ಲ. ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ಭೂವೈಜ್ಞಾನಿಕ ಸಮೀಕ್ಷೆಯಾಗಿದೆ ಎಂದು ಸಂಬಂಧಪಟ್ಟ ಸಂಸ್ಥೆ ಸ್ಪಷ್ಟಪಡಿಸಿದೆ.
2017ರಿಂದಲೇ ನಡೆಯುತ್ತಿದೆ ರಾಷ್ಟ್ರೀಯ ಸಮೀಕ್ಷೆ
ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆಯ (GSI) ದೂರಸಂವೇದಿ ಮತ್ತು ವೈಮಾನಿಕ ಸಮೀಕ್ಷಾ ವಿಭಾಗದ ವತಿಯಿಂದ ರಾಷ್ಟ್ರೀಯ ವೈಮಾನಿಕ ಭೂಭೌತಿಕ ನಕ್ಷೆ ತಯಾರಿಕಾ ಕಾರ್ಯಕ್ರಮದ (NAGMP) ಅಡಿಯಲ್ಲಿ ಈ ಸಮೀಕ್ಷೆ ನಡೆಯುತ್ತಿದೆ.Sirsi | ಉರುಳಿಗೆ ಸಿಲುಕಿ ಚಿರತೆ ಸಾವು; ಕಿಡಿಗೇಡಿಗಳ ಕೃತ್ಯಕ್ಕೆ ವನ್ಯಜೀವಿ ಬಲಿ!
ರಾಷ್ಟ್ರೀಯ ಖನಿಜ ಅನ್ವೇಷಣಾ ಅಭಿವೃದ್ಧಿ ಟ್ರಸ್ಟ್ನ ಆರ್ಥಿಕ ನೆರವಿನೊಂದಿಗೆ 2017ರಿಂದ ದೇಶದ 21 ಬ್ಲಾಕ್ಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದ ಕೆಲವು ಜಿಲ್ಲೆಗಳನ್ನು ಒಳಗೊಂಡಂತೆ ಒಟ್ಟು 56,664 ಚದರ ಕಿಲೋಮೀಟರ್ ಪ್ರದೇಶದಲ್ಲಿ ಸಮೀಕ್ಷೆ ಕೈಗೊಳ್ಳಲಾಗಿದೆ.
ಈ ವರ್ಷದ ಫೆಬ್ರವರಿಯಿಂದ ಮಂಗಳೂರು ವಿಮಾನ ನಿಲ್ದಾಣವನ್ನು ಕೇಂದ್ರವಾಗಿಟ್ಟುಕೊಂಡು ಸಮೀಕ್ಷೆ ಆರಂಭಿಸಲಾಗಿದೆ. ಉತ್ತರ ಕನ್ನಡದ ಜತೆಗೆ ಧಾರವಾಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಾವಣಗೆರೆ, ದಕ್ಷಿಣ ಕನ್ನಡ, ಬೆಳಗಾವಿ ಹಾಗೂ ಹಾಸನ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿಯೂ ಸಮೀಕ್ಷೆ ನಡೆಯುತ್ತಿದೆ.
ವಿಮಾನದಲ್ಲಿ ಅತ್ಯಾಧುನಿಕ ಸೆನ್ಸರ್ ಬಳಕೆ
ಈ ವೈಮಾನಿಕ ಸಮೀಕ್ಷೆಯಲ್ಲಿ ಮ್ಯಾಗ್ನೆಟಿಕ್, ಗ್ರೇಡಿಯೊಮೆಟ್ರಿಕ್ ಹಾಗೂ ರೇಡಿಯೊಮೆಟ್ರಿಕ್ ಸಂವೇದಕಗಳನ್ನು ಬಳಸಲಾಗುತ್ತಿದೆ. ಇವುಗಳ ಮೂಲಕ ಭೂಮಿಯ ಕಾಂತೀಯ ಗುಣಲಕ್ಷಣಗಳು ಮತ್ತು ವಿಕಿರಣ ಸಂಬಂಧಿತ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.Sirsi |ಹೆದ್ದಾರಿ ಅಗಲೀಕರಣ -ಆರು ವರ್ಷವಾದರೂ ಕೆಡವಿದ ಬಸ್ ನಿಲ್ದಾಣ ಕಟ್ಟುವುದನ್ನೇ ಮರೆತರು!
ಈ ದತ್ತಾಂಶಗಳ ಸಹಾಯದಿಂದ ಭೂಮಿಯ ಆಳದಲ್ಲಿರುವ ಭೂವೈಜ್ಞಾನಿಕ ರಚನೆಗಳು, ಖನಿಜ ಸಂಪನ್ಮೂಲಗಳ ಸಾಧ್ಯತೆ ಹಾಗೂ ನಿಕ್ಷೇಪಗಳಿರುವ ಪ್ರದೇಶಗಳನ್ನು ಗುರುತಿಸಲು ಸಾಧ್ಯವಾಗಲಿದೆ.
ವಿವಿಧ ಭೂವೈಜ್ಞಾನಿಕ ದತ್ತಾಂಶಗಳೊಂದಿಗೆ ವೈಮಾನಿಕ ಸಮೀಕ್ಷೆಯ ಮಾಹಿತಿಯನ್ನು ಸಂಯೋಜಿಸುವ ಮೂಲಕ ದೇಶದ ಖನಿಜ ಸಂಪನ್ಮೂಲಗಳ ಅನ್ವೇಷಣೆಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶ ಹೊಂದಲಾಗಿದೆ.
80 ಮೀಟರ್ ಎತ್ತರದಲ್ಲಿ ವಿಮಾನ ಹಾರಾಟ
ಈ ಯೋಜನೆಯಡಿ ವಿಮಾನಗಳು ನೆಲಮಟ್ಟದಿಂದ ಸುಮಾರು 80 ಮೀಟರ್ ಎತ್ತರದಲ್ಲಿ ಹಾರಾಟ ನಡೆಸಲಿವೆ. ಸಮೀಕ್ಷೆಯಲ್ಲಿ 300 ಮೀಟರ್ ಅಂತರದ ಸಮಾನಾಂತರ ಮಾರ್ಗಗಳನ್ನು ಅನುಸರಿಸಿ ಕಾಂತೀಯ ಹಾಗೂ ಸ್ಪೆಕ್ಟ್ರೋಮೆಟ್ರಿಕ್ ದತ್ತಾಂಶ ಸಂಗ್ರಹಿಸಲಾಗುತ್ತದೆ.
ಒಟ್ಟು 2,07,768 ಲೈನ್ ಕಿಲೋಮೀಟರ್ ಸಮೀಕ್ಷಾ ದತ್ತಾಂಶ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಯೋಜನೆ ಪೂರ್ಣಗೊಂಡ ಬಳಿಕ ಸಂಗ್ರಹಿಸಿದ ಮಾಹಿತಿಯನ್ನು ಖನಿಜ ಅನ್ವೇಷಣಾ ಸಂಸ್ಥೆಗಳು, ಸಂಶೋಧನಾ ವಿಜ್ಞಾನಿಗಳು ಹಾಗೂ ಇತರ ಪಾಲುದಾರರಿಗೆ ಉಚಿತವಾಗಿ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದು ಜಿಐಎಸ್ ತಿಳಿಸಿದೆ.Sirsi | ಕುಮಟಾ-ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ -ಜನರಿಗೆ ಧೂಳು,ಕೆಸರು ಹೊಂಡದ ಕೊಡಿಗೆ ಕೊಟ್ಟ ಕೇಂದ್ರಸರ್ಕಾರ !
ಖನಿಜ ನಿಕ್ಷೇಪಗಳ ಪತ್ತೆಗೆ ಅನುಕೂಲ
ಈ ಸಮೀಕ್ಷೆಯಿಂದ ಖನಿಜ ಅನ್ವೇಷಣೆಯಲ್ಲಿ ತೊಡಗಿರುವ ಸಂಸ್ಥೆಗಳಿಗೆ ದೇಶದಾದ್ಯಂತ ಏಕರೂಪದ ಮೂಲಭೂತ ಭೂಭೌತಿಕ ದತ್ತಾಂಶ ಲಭ್ಯವಾಗಲಿದೆ. ಖನಿಜ ನಿಕ್ಷೇಪಗಳಿರುವ ಸಂಭಾವ್ಯ ಪ್ರದೇಶಗಳನ್ನು ಗುರುತಿಸುವುದು, ಭೂಗರ್ಭದ ರಚನೆಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ಮುಂದಿನ ಸಂಶೋಧನೆಗೆ ಸೂಕ್ತ ಪ್ರದೇಶಗಳನ್ನು ಆಯ್ಕೆ ಮಾಡುವುದು ಈ ಸಮೀಕ್ಷೆಯ ಪ್ರಮುಖ ಉದ್ದೇಶವಾಗಿದೆ.Sirsi |ಹೆದ್ದಾರಿ ಅಗಲೀಕರಣ -ಆರು ವರ್ಷವಾದರೂ ಕೆಡವಿದ ಬಸ್ ನಿಲ್ದಾಣ ಕಟ್ಟುವುದನ್ನೇ ಮರೆತರು!
ಒಟ್ಟಿನಲ್ಲಿ, ಶಿರಸಿ ಹಾಗೂ ಯಲ್ಲಾಪುರ ಭಾಗಗಳಲ್ಲಿ ನಡೆಯುತ್ತಿರುವ ತಗ್ಗು ಎತ್ತರದ ವಿಮಾನ ಹಾರಾಟದ ಬಗ್ಗೆ ಸಾರ್ವಜನಿಕರಲ್ಲಿ ಮೂಡಿದ್ದ ಅನುಮಾನಗಳಿಗೆ ಜಿಐಎಸ್ ಸ್ಪಷ್ಟನೆ ನೀಡಿದೆ. ಇದು ಬೇಡ್ತಿ ನದಿ ಜೋಡಣೆ ಯೋಜನೆಯ ಸಮೀಕ್ಷೆಯಲ್ಲ, ಖನಿಜ ಸಂಪನ್ಮೂಲಗಳ ಅನ್ವೇಷಣೆಗೆ ನಡೆಯುತ್ತಿರುವ ರಾಷ್ಟ್ರೀಯ ವೈಮಾನಿಕ ಸಮೀಕ್ಷೆಯಾಗಿದೆ.






