Goa ದಲ್ಲಿ ಅಕ್ರಮ ಮದ್ಯ ತಯಾರಿಕೆಗೆ ಕರ್ನಾಟಕದಿಂದಲೇ ಸ್ಪಿರಿಟ್ ಪೂರೈಕೆ? ಹಾಲಿ ಸಚಿವರ ಹೆಸರು!
ಕಾರವಾರ: ಕರ್ನಾಟಕದಿಂದ ಗೋವಾಕ್ಕೆ(goa) ಅಕ್ರಮವಾಗಿ ಮದ್ಯಸಾರ ಸಾಗಾಟವಾಗುತ್ತಿರುವ ಆರೋಪ ಕೇಳಿಬಂದಿದ್ದು, ಈ ಜಾಲದಲ್ಲಿ ರಾಜ್ಯದ ಹಲವು ಸಕ್ಕರೆ ಕಾರ್ಖಾನೆಗಳ ಡಿಸ್ಟಿಲರಿ ಘಟಕಗಳು ಭಾಗಿಯಾಗಿವೆ ಎಂಬ ಗಂಭೀರ ಆರೋಪ ವ್ಯಕ್ತವಾಗಿದೆ. ಔಷಧ ತಯಾರಿಕೆಗೆ ಮದ್ಯಸಾರ ಪೂರೈಸುವ ನೆಪದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಗೋವಾಕ್ಕೆ ಎಕ್ಸ್ಟ್ರಾ ನ್ಯೂಟ್ರಲ್ ಆಲ್ಕೊಹಾಲ್ (ENA) ಸಾಗಾಟ ಮಾಡಲಾಗುತ್ತಿದೆ ಎಂಬ ಆರೋಪ ಅಬಕಾರಿ ಇಲಾಖೆಯ ಕಾರ್ಯವೈಖರಿಯನ್ನೇ ಪ್ರಶ್ನಿಸುವಂತಾಗಿದೆ.
ಗೋವಾ ಮದ್ಯಕ್ಕೆ ಕರ್ನಾಟಕದ ಸ್ಪಿರಿಟ್!
ಕರ್ನಾಟಕದಲ್ಲಿ ಮದ್ಯದ ಬೆಲೆ ಹೆಚ್ಚಿರುವುದರಿಂದ ಗೋವಾದಿಂದ ಅಗ್ಗದ ಮದ್ಯವನ್ನು ಅಕ್ರಮವಾಗಿ ರಾಜ್ಯಕ್ಕೆ ತರುವ ಪ್ರಕರಣಗಳು ಆಗಾಗ್ಗೆ ಬೆಳಕಿಗೆ ಬರುತ್ತಿವೆ. ಆದರೆ ಗೋವಾದಲ್ಲಿ ತಯಾರಾಗುವ ಅಕ್ರಮ ಮದ್ಯಕ್ಕೆ ಬೇಕಾದ ಮದ್ಯಸಾರವೇ ಕರ್ನಾಟಕದ ಸಕ್ಕರೆ ಕಾರ್ಖಾನೆಗಳಿಂದ ಪೂರೈಕೆಯಾಗುತ್ತಿದೆ ಎಂಬ ಆರೋಪ ಈಗ ಚರ್ಚೆಗೆ ಗ್ರಾಸವಾಗಿದೆ.Karwar | ವಿದೇಶಕ್ಕೆ ಅರಿಶಿನ ರಫ್ತು ಹೆಸರಿನಲ್ಲಿ ಉದ್ಯಮಿಗೆ ₹4.29 ಲಕ್ಷ ವಂಚನೆ; ಸೈಬರ್ ಠಾಣೆಯಲ್ಲಿ ಪ್ರಕರಣ
ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನಿಂದ ಸಕ್ಕರೆ ಉತ್ಪಾದಿಸಿದ ಬಳಿಕ ಉಳಿಯುವ ಮೊಲಾಸಸ್‌ನಿಂದ ವಿವಿಧ ಪ್ರಕ್ರಿಯೆಗಳ ಮೂಲಕ ಎಥನಾಲ್ ಹಾಗೂ ಎಕ್ಸ್ಟ್ರಾ ನ್ಯೂಟ್ರಲ್ ಆಲ್ಕೊಹಾಲ್ (ENA) ಉತ್ಪಾದಿಸಲಾಗುತ್ತದೆ. ಈ ENA ಅನ್ನು ಔಷಧ, ಸುಗಂಧ ದ್ರವ್ಯ ಸೇರಿದಂತೆ ವಿವಿಧ ಕೈಗಾರಿಕಾ ಉತ್ಪನ್ನಗಳ ತಯಾರಿಕೆಗೆ ಬಳಸಲಾಗುತ್ತದೆ.
ಗೋವಾದಲ್ಲಿರುವ ಔಷಧ ಉತ್ಪಾದನಾ ಘಟಕಗಳಿಗೆ ENA ಪೂರೈಸುವ ನೆಪದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅದನ್ನು ಅಕ್ರಮ ಮದ್ಯ ತಯಾರಿಕೆಗೆ ಬಳಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
2017ರ ಕಾಯ್ದೆ ತಿದ್ದುಪಡಿಯಿಂದ ಅಕ್ರಮಕ್ಕೆ ಅವಕಾಶ?
ಹಿಂದೆ ಸಕ್ಕರೆ ಕಾರ್ಖಾನೆಗಳ ಡಿಸ್ಟಿಲರಿ ಘಟಕಗಳಲ್ಲಿ ಅಬಕಾರಿ ಇಲಾಖೆಯ ಸಿಬ್ಬಂದಿ ಮೇಲ್ವಿಚಾರಣೆ ನಡೆಸುತ್ತಿದ್ದರು. ಮದ್ಯಸಾರ ಕಾರ್ಖಾನೆಯಿಂದ ಹೊರಗೆ ಸಾಗಿಸಲು ಅಬಕಾರಿ ಇಲಾಖೆಯ ಅನುಮತಿ ಅಗತ್ಯವಿತ್ತು.
ಆದರೆ 2017ರಲ್ಲಿ ಕೈಗಾರಿಕಾ ನಿಯಂತ್ರಣ ಕಾಯ್ದೆಗೆ ಸಂಬಂಧಿಸಿದ ತಿದ್ದುಪಡಿಯ ನಂತರ ಸಕ್ಕರೆ ಕಾರ್ಖಾನೆಗಳ ಪ್ರಾಥಮಿಕ ಡಿಸ್ಟಿಲರಿ ಘಟಕಗಳಲ್ಲಿ ಅಬಕಾರಿ ಸಿಬ್ಬಂದಿಯ ಮೇಲ್ವಿಚಾರಣೆ ರದ್ದುಪಡಿಸಲಾಯಿತು.
ಇದರಿಂದಾಗಿ ENA ಸಾಗಾಟಕ್ಕೆ NOC ಹಾಗೂ GST ದಾಖಲೆಗಳ ಆಧಾರದಲ್ಲಿ ಅನುಮತಿ ಪಡೆಯುವ ವ್ಯವಸ್ಥೆ ಜಾರಿಯಲ್ಲಿದೆ. ಈ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ಒಂದೇ NOC ಅನ್ನು ನಕಲು ಮಾಡಿ ಹಲವು ಟ್ಯಾಂಕರ್‌ಗಳಲ್ಲಿ ಮದ್ಯಸಾರ ಸಾಗಿಸಲಾಗುತ್ತಿದೆ ಎಂಬ ಆರೋಪವಿದೆ.
ಒಂದು ಟ್ಯಾಂಕರ್‌ನಲ್ಲಿ 30 ಸಾವಿರ ಲೀಟರ್ ಮದ್ಯಸಾರ!
ಒಂದು ಟ್ಯಾಂಕರ್ ಲಾರಿಯಲ್ಲಿ ಸುಮಾರು 30 ಸಾವಿರ ಲೀಟರ್ ENA ಸಾಗಾಟ ಮಾಡಬಹುದಾಗಿದ್ದು, ಅದರ ಮೌಲ್ಯ ಸುಮಾರು 24 ಲಕ್ಷ ರೂಪಾಯಿ ಎಂದು ಅಬಕಾರಿ ಇಲಾಖೆ ವರದಿಯಲ್ಲಿ ತಿಳಿಸಲಾಗಿದೆ.
ಔಷಧ ಉತ್ಪಾದನಾ ಘಟಕಗಳಿಗೆ ಮದ್ಯಸಾರ ಸಾಗಾಟ ಮಾಡುವ ಹೆಸರಿನಲ್ಲಿ ನಕಲಿ NOC ಸೃಷ್ಟಿಸಿ ಗೋವಾಕ್ಕೆ ಟ್ಯಾಂಕರ್‌ಗಳ ಮೂಲಕ ಸಾಗಾಟ ಮಾಡಲಾಗುತ್ತಿದೆ ಎಂಬ ಆರೋಪವಿದೆ. ಈ ಅಕ್ರಮದಲ್ಲಿ ಕರ್ನಾಟಕ ಮತ್ತು ಗೋವಾ ರಾಜ್ಯಗಳ ಅಬಕಾರಿ ಇಲಾಖೆಯ ಕೆಲ ಅಧಿಕಾರಿಗಳ ಪಾತ್ರದ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.
ಸಚಿವರ ಟ್ಯಾಂಕರ್‌ಗಳೂ ವಶಕ್ಕೆ!
ಇತ್ತೀಚೆಗೆ ದಾವಣಗೆರೆ ಮೂಲದ ಪ್ರಭಾವಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಸೇರಿದವು ಎನ್ನಲಾದ ಎರಡು ಮದ್ಯಸಾರದ ಟ್ಯಾಂಕರ್‌ಗಳನ್ನು ಗೋವಾಕ್ಕೆ ತೆರಳುತ್ತಿದ್ದ ವೇಳೆ ದಾಂಡೇಲಿ ಮತ್ತು ಯಲ್ಲಾಪುರ ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.Karnataka | ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಜಾಹೀರಾತು ನಿಷೇಧಕ್ಕೆ ಚಿಂತನೆ; ಐಟಿ ಕಂಪನಿಗಳಲ್ಲಿ ಪ್ರತ್ಯೇಕ ಧೂಮಪಾನ ವಲಯ!
ಈ ಪೈಕಿ ಒಂದು ಟ್ಯಾಂಕರ್ ಬಿಡುಗಡೆಗೊಂಡಿದ್ದು, ಮತ್ತೊಂದು ಟ್ಯಾಂಕರ್ ಅನ್ನು ಜಪ್ತಿ ಮಾಡಲಾಗಿದೆ. ಒಟ್ಟು 44 ಲಕ್ಷ ರೂಪಾಯಿ ಮೌಲ್ಯದ ಮದ್ಯಸಾರ ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು ಪ್ರಕರಣ ಸಹ ದಾಖಲಾಗಿದೆ.ಇದಲ್ಲದೆ, ಮಾಜಿ ಸಚಿವರಿಗೆ ಸೇರಿದ ಟ್ಯಾಂಕರ್ ಸೇರಿದಂತೆ ಈವರೆಗೆ ಮೂರು ಪ್ರಕರಣಗಳಲ್ಲಿ ಒಟ್ಟು 57,58,923 ರೂಪಾಯಿ ಮೌಲ್ಯದ ಮದ್ಯಸಾರ ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಕ್ರಮ ತಡೆಯಲು ಸಚಿವರ ಖಡಕ್ ಸೂಚನೆ
ಕಾರವಾರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರು ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಗೋವಾಕ್ಕೆ ಅಕ್ರಮವಾಗಿ ಸಾಗಾಟವಾಗುತ್ತಿರುವ ENA ಟ್ಯಾಂಕರ್‌ಗಳನ್ನು ಪತ್ತೆಹಚ್ಚಿ, ವಶಕ್ಕೆ ಪಡೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅಕ್ರಮ ಸಾಗಾಟ ತಡೆಯುವಲ್ಲಿ ನಿರ್ಲಕ್ಷ್ಯ ತೋರಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಹಳೆಯ ವ್ಯವಸ್ಥೆ ಜಾರಿಗೆ ತರಲು ಒತ್ತಾಯ
ಗೋವಾದಿಂದ ಕರ್ನಾಟಕಕ್ಕೆ ಅಕ್ರಮ ಮದ್ಯ ಬರುವುದನ್ನು ತಡೆಯಲು ಗಡಿಯಲ್ಲಿ ತಪಾಸಣೆ ನಡೆಯುತ್ತಿದ್ದರೂ, ಕರ್ನಾಟಕದ ಸಕ್ಕರೆ ಕಾರ್ಖಾನೆಗಳಿಂದ ಗೋವಾಕ್ಕೆ ತೆರಳುವ ಮದ್ಯಸಾರದ ಟ್ಯಾಂಕರ್‌ಗಳ ಮೇಲೆ ಸಮರ್ಪಕ ನಿಗಾ ಇಲ್ಲ ಎಂಬ ಆರೋಪವಿದೆ.
ಪ್ರಭಾವಿಗಳ ಒತ್ತಡದಿಂದ ಅಕ್ರಮ ಸಾಗಾಟದ ಟ್ಯಾಂಕರ್‌ಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ. ಹೀಗಾಗಿ ಹಿಂದಿನಂತೆ ಡಿಸ್ಟಿಲರಿ ಘಟಕಗಳಲ್ಲಿ ಅಬಕಾರಿ ಇಲಾಖೆಯ ನೇರ ಮೇಲ್ವಿಚಾರಣೆ ವ್ಯವಸ್ಥೆಯನ್ನು ಮರುಜಾರಿಗೆ ತರಬೇಕು ಎಂಬ ಒತ್ತಾಯ ಅಬಕಾರಿ ಇಲಾಖೆಯದ್ದು Goa|ಗೋವಾ ಅಗ್ನಿ ದುರಂತ |ಬೆಂಗಳೂರು ಮೂಲದ ಯುವಕ ಸಾವು
ಒಟ್ಟಿನಲ್ಲಿ, ಗೋವಾದಲ್ಲಿ(goa) ಅಕ್ರಮ ಮದ್ಯ ತಯಾರಿಕೆಗೆ ಕರ್ನಾಟಕದಿಂದಲೇ ಮದ್ಯಸಾರ ಪೂರೈಕೆಯಾಗುತ್ತಿದೆ ಎಂಬ ಆರೋಪ ಗಂಭೀರವಾಗಿದ್ದು, ಇದರಿಂದ ಸರ್ಕಾರದ ತೆರಿಗೆ ಆದಾಯಕ್ಕೂ ನಷ್ಟವಾಗುವ ಸಾಧ್ಯತೆಯಿದೆ. ಈ ಅಕ್ರಮ ಜಾಲದ ಹಿಂದಿರುವವರು ಯಾರು? ನಕಲಿ ದಾಖಲೆಗಳ ಮೂಲಕ ಮದ್ಯಸಾರ ಸಾಗಾಟಕ್ಕೆ ಅವಕಾಶ ನೀಡುತ್ತಿರುವವರು ಯಾರು? ಅಬಕಾರಿ ಇಲಾಖೆ ನಿಯತ್ತಿನಿಂದ ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕಿದೆ.






