Bhatkal |ನಕಲಿ ದಾಖಲೆ ನೀಡಿ ಆರೋಪಿಗಳಿಗೆ ಜಾಮೀನು ನೀಡುತಿದ್ದ ವ್ಯಕ್ತಿ ಬಂಧನ
ಕಾರವಾರ :-ನ್ಯಾಯಾಲಯಕ್ಕೆ ನಕಲಿ ಆಧಾರ್ ಕಾರ್ಡ್ ಮತ್ತು ಪಹಣಿ ಪತ್ರಗಳನ್ನು ಸಲ್ಲಿಸಿ ಆರೋಪಿಗಳಿಗೆ ಜಾಮೀನು ಕೊಡಿಸುತ್ತಿದ್ದ ಜಾಲದ ಪ್ರಮುಖ ಆರೋಪಿಯನ್ನು ಭಟ್ಕಳ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Bhatkal| ಚಿತ್ತರಂಜನ್ ಹತ್ಯೆಗೆ 30 ವರ್ಷ -ಇನ್ನೂ ಮುಗಿಯದ ಹತ್ಯೆ ತನಿಖೆ
ಕಳೆದ ಜೂನ್ 30, 2025 ರಂದು ಭಟ್ಕಳದ(bhatkal) ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಭಟ್ಕಳ ಗ್ರಾಮೀಣ ಠಾಣೆಯ ಕ್ರೈಂ ನಂಬರ್ 56/2025 ರ ಆರೋಪಿಗಳಿಗೆ ಜಾಮೀನು ನೀಡಲು ಕೆಲವು ವ್ಯಕ್ತಿಗಳು ಬಂದಿದ್ದರು. ಅವರು ಸಲ್ಲಿಸಿದ್ದ ಆಧಾರ್ ಕಾರ್ಡ್ ಮತ್ತು ಪಹಣಿ ಪತ್ರಗಳನ್ನು ನ್ಯಾಯಾಲಯದ ಶೂರಿಟಿ ಮ್ಯಾನೇಜ್‌ಮೆಂಟ್ ಸಿಸ್ಟಮ್’ ಮೂಲಕ ಪರಿಶೀಲಿಸಿದಾಗ, ಅವು ನಕಲಿ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿತ್ತು. ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದನ್ನು ಅರಿತ ಆರೋಪಿಗಳು ನ್ಯಾಯಾಲಯದ ಆವರಣದಿಂದ ಪರಾರಿಯಾಗಿದ್ದರು. ಈ ಸಂಬಂಧ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಂಗಳೂರಿನಲ್ಲಿ ಸೆರೆಸಿಕ್ಕ ಆರೋಪಿ
ಈ ಗಂಭೀರ ವಂಚನೆ ಪ್ರಕರಣದ ಬೆನ್ನುಹತ್ತಿದ ಪೊಲೀಸರು, ಏಪ್ರಿಲ್ 15, 2026 ರಂದು ಮಂಗಳೂರಿನ ಮರೋಳಿ ನಿವಾಸಿ ಮಹೇಶ ಬಿ. ಮೋಹನ ನಾಯಕ ಎಂಬಾತನನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿದ್ದಾರೆ. ದಸ್ತಗಿರಿ ನಿಯಮಗಳನ್ನು ಪಾಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಭಟ್ಕಳ ನಗರ ಪೊಲೀಸ್ ನಿರೀಕ್ಷಕರಾದ ದಿವಾಕರ ಪಿ.ಎಂ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ನವೀನ್ ಎಸ್. ನಾಯ್ಕ ಸಿಬ್ಬಂದಿಗಳಾದ ದಿನೇಶ ನಾಯಕ ಮತ್ತು ಮಹಾಂತೇಶ ಹಿರೇಮಠ ಪಾಲ್ಗೊಂಡಿದ್ದರು.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ ತಂಡದ ಸಮಯಪ್ರಜ್ಞೆ ಮತ್ತು ಕರ್ತವ್ಯನಿಷ್ಠೆಯನ್ನು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಶ್ಲಾಘಿಸಿದ್ದಾರೆ. ಈ ಜಾಲದಲ್ಲಿ ಇನ್ನು ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.







