Bisleri | ಬಿಸ್ಲರಿ ನೀರಿನಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ FSSAI ನಿಂದ ಕಾನೂನು ಕ್ರಮಕ್ಕೆ ಸೂಚನೆ
ಬೆಂಗಳೂರು :- ಬಿಸ್ಲರಿ ಎಂದರೇ ಅದು ನೀರು ಎನ್ನುವ ಮಟ್ಟಕ್ಕೆ ತನ್ನ ಬ್ರಾಂಡ್ ಬೆಳಸಿಕೊಂಡಿದೆ ಬಿಸ್ಲರಿ ಕಂಪನಿ. ದೇಶದ ಮೊದಲ ಪ್ಯಾಕೇಟ್ ಡ್ರಿಂಕಿಂಗ್ ವಾಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಪ್ಯಾಕೇಟ್ ಡ್ರಿಂಕಿಂಗ್ ವಾಟರ್ ಇದೀಗ ಕುಡಿಯಲು ಯೋಗ್ಯವಲ್ಲ ಎಂಬ ವರದಿಯನ್ನು FSSAI ನೀಡಿದೆ.
ಏನಿದು ವರದಿ?
ಬಿಸ್ಲೆರಿ ಇಂಟರ್‌ನ್ಯಾಶನಲ್ ಆವರಣದಿಂದ ‘ಪ್ಯಾಕೇಜ್ಡ್ ಕುಡಿಯುವ ನೀರು (ಖನಿಜಯುಕ್ತ ನೀರನ್ನು ಹೊರತುಪಡಿಸಿ)’ ಮಾದರಿಯನ್ನು ನಿಯಂತ್ರಕ ಪರೀಕ್ಷೆಗಾಗಿ ಸಂಗ್ರಹಿಸಲಾಗಿತ್ತು. ಈ ಮಾದರಿಯು ನಿಗದಿತ ಬ್ರೋಮೇಟ್ ಮಿತಿಯನ್ನು ಪಾಲಿಸಲು ವಿಫಲವಾದ ಕಾರಣ ಅದನ್ನು ಅಸುರಕ್ಷಿತ ಎಂದು ಘೋಷಿಸಲಾಗಿತ್ತು. ಇದನ್ನು ಪ್ರಶ್ನಿಸಿ ಕಂಪನಿಯು ಮೇಲ್ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ, ಹೆಚ್ಚಿನ ಪರೀಕ್ಷೆಗಾಗಿ ಮಾದರಿಯನ್ನು ರೆಫರಲ್ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿನ ಪರೀಕ್ಷೆಯಲ್ಲೂ ನೀರಿನಲ್ಲಿ ‘ಪಾಲಿನ್ಯೂಕ್ಲಿಯರ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು’ ಇರುವುದು ಪತ್ತೆಯಾಗಿದ್ದು, ಎರಡನೇ ಪ್ರಯೋಗಾಲಯವೂ ನೀರು ಅಸುರಕ್ಷಿತ ಎಂದು ವರದಿ ನೀಡಿದೆ.
ಅಂತಾರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ (ಐಎಆರ್ಸಿ) ಮತ್ತು ಯುಎಸ್ ಇಪಿಎ (ಯುಸ್ ಇಪಿಎ) ಸೇರಿದಂತೆ ಜಾಗತಿಕ ಆರೋಗ್ಯ ಮತ್ತು ಪರಿಸರ ಸಂಸ್ಥೆಗಳು ಬ್ರೋಮೇಟ್ ಹಾಗೂ ಪಿಎಹೆಚ್ (PAHs) ಎರಡನ್ನೂ ಕ್ಯಾನ್ಸರ್ ಕಾರಕ ಅಂಶಗಳೆಂದು ವರ್ಗೀಕರಿಸಿವೆ. ಪ್ರಯೋಗಾಲಯದ ವರದಿಗಳು ಕಾಯ್ದೆಯ ಉಲ್ಲಂಘನೆಯನ್ನು ದೃಢಪಡಿಸಿದ ಹಿನ್ನೆಲೆಯಲ್ಲಿ ಬಿಸ್ಲೆರಿ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಲಾಗಿದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.
ಬಿಸ್ಲರಿಯ ಯಾವ ಘಟಕ ದಲ್ಲಿ ತಪಾಸಣೆ!
2025ರ ಸೆಪ್ಟೆಂಬರ್‌ನಲ್ಲಿ ಗೋವಾದಲ್ಲಿರುವ ಉತ್ಪಾದನಾ ಘಟಕದಲ್ಲಿ ತಯಾರಿಸಲಾದ ಬ್ಯಾಚ್‌ಗೆ ಈ ಪ್ರಕರಣ ಸಂಬಂಧಿಸಿದೆ. FSSAI ಸಂಗ್ರಹಿಸಿದ್ದ ಆರು ಮಾದರಿಗಳಲ್ಲಿ ಐದು ಮಾದರಿಗಳು ಎಲ್ಲಾ ಮಾನದಂಡಗಳನ್ನು ಪೂರೈಸಿದೆ. ಆದರೆ, ಆರನೇ ಮಾದರಿಯಲ್ಲಿ ಬ್ರೋಮೇಟ್ (Bromate) ಪ್ರಮಾಣವು ನಿಗದಿಪಡಿಸಲಾದ ಮಿತಿಗಿಂತ ಹೆಚ್ಚಾಗಿ ಕಂಡು ಬಂದಿತ್ತು. ಕಂಪೆನಿ ಮೇಲ್ಮನವಿ ಸಲ್ಲಿಸಿದ ಬಳಿಕ, ಸಂಬಂಧಿತ ಮಾದರಿಯನ್ನು ಮರುಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿ ನಡೆಸಿದ ಪರೀಕ್ಷೆಯಲ್ಲಿ ಬ್ರೋಮೇಟ್ ಪ್ರಮಾಣ ನಿಗದಿತ ಮಿತಿಯೊಳಗಿರುವುದು ಕಂಡುಬಂದಿತ್ತು. ಆದರೆ, ಅದೇ ಮಾದರಿಯಲ್ಲಿ ಪಾಲಿಸೈಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು (PAHs) ಇರುವುದನ್ನು ಪತ್ತೆ ಮಾಡಲಾಗಿದೆ.
ಗೋವಾ ಮೂಲಕ ಕರ್ನಾಟಕಕ್ಕೂ ಪೂರೈಕೆ
ಗೋವಾ ಬಿಸ್ಲರಿ ಘಟಕದಿಂದ ಉತ್ತರ ಕನ್ನಡ ಜಿಲ್ಲೆಯ ಪ್ರದೇಶಗಳಿಗೂ ಈ ನೀರನ್ನು ಪೂರೈಕೆ ಮಾಡಲಾಗುತ್ತದೆ. ಗೋವಾ ಬಿಸ್ಲರಿ ಘಟಕದಿಂದ ಕಾರವಾರ,ಅಂಕೋಲ ಹಾಗೂ ಕರಾವಳಿ ಭಾಗಕ್ಕೆ ಈ ನೀರು ಪೂರೈಕೆಯಾಗಿದ್ದು ಈ ನೀರಿನಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇರುವುದನ್ನ FSSAI ದೃಢಪಡಿಸಿದೆ.
ಇತರ ಹಲವು ಆಹಾರ ಕಂಪನಿಗಳ ಮೇಲೂ ಎಫ್‌ಎಸ್‌ಎಸ್‌ಎಐ ದಾಳಿ
ಬಿಸ್ಲೆರಿ ಮಾತ್ರವಲ್ಲದೆ, ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಇತರ ಹಲವು ಕಂಪನಿಗಳ ವಿರುದ್ಧವೂ ಎಫ್‌ಎಸ್‌ಎಸ್‌ಎಐ ಕಠಿಣ ಕ್ರಮಕ್ಕೆ ಮುಂದಾಗಿದೆ.
ಕಾನೂನು ಕ್ರಮಕ್ಕೆ ಅನುಮತಿ: ವಸಂತ್ ಮಸಾಲಾ ಪ್ರೈವೇಟ್ ಲಿಮಿಟೆಡ್ (Vasant Masala Pvt Ltd), ಟಿಟ್-ಬಿಟ್ ಫುಡ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (Tit-Bit Foods India Pvt Ltd), ಮೀಮಾಂಸ ಇಂಡಸ್ಟ್ರೀಸ್ (Mimansa Industries) ಹಾಗೂ ಆಶಾ ಕನ್ಫೆಕ್ಷನರಿ (Asha Confectionery) ಸಂಸ್ಥೆಗಳ ವಿರುದ್ಧವೂ ಪ್ರಾಸಿಕ್ಯೂಷನ್‌ಗೆ ಪ್ರಾಧಿಕಾರ ಅನುಮತಿ ನೀಡಿದೆ.
- ಪರವಾನಗಿ ಅಮಾನತು: ನಿಗದಿತ ನಿಯಮಗಳು ಮತ್ತು ನಿಬಂಧನೆಗಳನ್ನು ಪಾಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಊರ್ಮಿ ಲೈಫ್‌ಸೈನ್ಸಸ್ ಎಲ್‌ಎಲ್‌ಪಿ (Urmi Lifesciences LLP) ಮತ್ತು ಗೌರ್ ಆಯುರ್ವೇದಿಕ್ ಸ್ಟೋರ್ (Gaur Ayurvedic Store) ಸಂಸ್ಥೆಗಳ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ.
- ಉತ್ಪನ್ನ ಹಿಂಪಡೆಯಲು ಆದೇಶ: ಆಶಾ ಕನ್ಫೆಕ್ಷನರಿ ಸಂಸ್ಥೆಯ ಪೂರ್ವ-ಪ್ಯಾಕ್ ಮಾಡಲಾದ ಚಾಕೊಲೇಟ್-ತುಂಬಿದ ಕುಕೀಸ್ (Chocolate-filled cookies) ಅಸುರಕ್ಷಿತವೆಂದು ಕಂಡುಬಂದಿರುವುದರಿಂದ, ತಕ್ಷಣವೇ ಮಾರುಕಟ್ಟೆಯಿಂದ ಅವುಗಳನ್ನು ಹಿಂಪಡೆಯುವಂತೆ (Product Recall) ಎಫ್‌ಎಸ್‌ಎಸ್‌ಎಐ ಆದೇಶಿಸಿದೆ.






