BREAKING NEWS
Search

ದಾಂಡೇಲಿಯಲ್ಲಿ ಹಾರ್ನಬಿಲ್ ಹಬ್ಬ-296 ಪ್ರಭೇದಗಳ ಪಕ್ಷಿ ಹುಡುಕಿದ ಪಕ್ಷಿ ಪ್ರಿಯರು.

57

ಕಾರವಾರ: ಉತ್ತರಕನ್ನಡ ಕನ್ನಡ ಜಿಲ್ಲೆ ಪಶ್ಚಿಮ ಘಟ್ಟ ವಲಯವನ್ನು ಹೊಂದಿದ್ದು ಅನೇಕ ಪ್ರಭೇದದ ಪ್ರಾಣಿ ,ಪಕ್ಷಿಗಳ ಆವಾಸ ಸ್ಥಾನವಾಗಿದೆ. ಇದೀಗ ಪ್ರಾಣಿ,ಪಕ್ಷಿಗಳಿಗೆ ನೆರಳಾಗಿರುವ ದಾಂಡೇಲಿಯಲ್ಲಿ ಪಕ್ಷಿ ಪ್ರಿಯರು ಹೊಸ ಪಕ್ಷಿಗಳನ್ನು ಪತ್ತೆ ಮಾಡಿದ್ದಾರೆ.

ಕೆನರಾ ಅರಣ್ಯ ವೃತ್ತ ವ್ಯಾಪ್ತಿಯಲ್ಲಿ 296 ಪ್ರಭೇದಗಳ ಪಕ್ಷಿಗಳು ಇರುವುದು ಪತ್ತೆಯಾಗಿವೆ. ಶುಕ್ರವಾರ ಮತ್ತು ಶನಿವಾರ ಜಿಲ್ಲೆಯ 60 ಸ್ಥಳಗಳಲ್ಲಿ 60 ಪಕ್ಷಿ ತಜ್ಞರು ನಡೆಸಿದ ಪಕ್ಷಿಗಳ ಸಮೀಕ್ಷೆಯಲ್ಲಿ ಪತ್ತೆ ಮಾಡಿರುವ ಕುರಿತು ಅರಣ್ಯ ಇಲಾಖೆ ತಿಳಿಸಿದೆ.

ಪಕ್ಷಿಗಳ ಭಾವಚಿತ್ರ ಸಂಗ್ರಹಿಸಿ ಅದರ ಮೂಲಕ ಮಾಹಿತಿ ಕಲೆಹಾಕಿ, ಇ–ಬರ್ಡ್ ವೆಬ್‍ಸೈಟ್‍ನಲ್ಲಿ ಮಾಹಿತಿ ದಾಖಲಿಸಲಾಗಿದೆ. ಸಮೀಕ್ಷೆ ವರದಿಯನ್ನು ದಾಂಡೇಲಿಯಲ್ಲಿ ಹಾರ್ನಬಿಲ್ ಹಬ್ಬದಲ್ಲಿ ಪ್ರಕಟಿಸಲಾಯಿತು.

296 ಪ್ರಭೇದಗಳ ಪಕ್ಷಿಗಳು ಇದೇ ಮೊದಲ ಸಲ ಪತ್ತೆಯಾಗಿವೆಯೇ ಅಥವಾ ವಲಸೆ ಬಂದಿವೆಯೇ ಎಂಬುದು ಗೊತ್ತಾಗಬೇಕಿದೆ. ಒಂದೆರಡು ದಿನಗಳಲ್ಲಿ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ’ ಎಂದು ಕೆನರಾ ಅರಣ್ಯ ವೃತ್ತದ ಸಿಸಿಎಫ್ ಕೆ.ವಿ.ವಸಂತ ರೆಡ್ಡಿ ತಿಳಿಸಿದ್ದಾರೆ.

ಹಾರ್ನಬಿಲ್ ಹಬ್ಬ ಅದ್ದೂರಿ ಚಾಲನೆ:-

ಹಾರ್ನ್‌ಬಿಲ್ ಪಕ್ಷಿಗಾಗಿ ದಾಂಡೇಲಿ- ಜೊಯಿಡಾ ಪ್ರದೇಶ ಪ್ರಪಂಚದಲ್ಲಿಯೇ ಪ್ರಸಿದ್ಧಿ ಪಡೆದ ಸ್ಥಳಗಳಾಗಿವೆ. ಹಾರ್ನ್‌ಬಿಲ್ ಪಕ್ಷಿಗಳ ರಕ್ಷಣೆ ಅವುಗಳ ಸಂತತಿಯ ಹೆಚ್ಚಳ ಅತಿ ಅವಶ್ಯವಾಗಿದೆ. ಜನರಲ್ಲಿ ಪಕ್ಷಿಗಳ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಮತ್ತು ಅವುಗಳ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆಯ ಜತೆ ಸಾರ್ವಜನಿಕರ ಪಾತ್ರವೂ ಮುಖ್ಯವಾಗಿದೆ ಎಂದು ಬೆಂಗಳೂರಿನ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪ್ರಚಾರ) ಸ್ಮಿತಾ ಬಿಜೂರ ಹೇಳಿದರು.

ನಗರದ ಹಾರ್ನ್‌ಬಿಲ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಎರಡು ದಿನಗಳ ಹಾರ್ನಬಿಲ್ ಹಬ್ಬದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು

ಪ್ರಾಸ್ತಾವಿಕವಾಗಿ ಮಾತನಾಡಿದ ಹಳಿಯಾಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತಕುಮಾರ ಕೆ.ಸಿ., ದಾಂಡೇಲಿಯ ಅರಣ್ಯ ಪ್ರದೇಶದ ಭಾಗವನ್ನು ಹಾರ್ನ್‌ಬಿಲ್‌ ಸಂರಕ್ಷಿತ ಪ್ರದೇಶ ಎಂದು

ಕರೆಯಲಾಗುತ್ತದೆ. ಹಾರ್ನ್‌ಬಿಲ್ ಪಕ್ಷಿ ಪ್ರಭೇದದ ಪಕ್ಷಿಗಳು ಪರಿಸರಕ್ಕೆ ಹಾಗೂ ಮಾನವನ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುವುದನ್ನು ತಡೆಗಟ್ಟುತ್ತವೆ. 4 ಬಗೆಯ ಹಾರ್ನ್ ಬಿಲ್‌ಗಳು ದಾಂಡೇಲಿ-ಜೊಯಿಡಾ ಸುತ್ತಮುತ್ತಲೂ ಕಂಡು ಬರುತ್ತವೆ. ಅಪರೂಪದ ಈ ಪಕ್ಷಿಗಳ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ ಅರಣ್ಯ ಇಲಾಖೆಗೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ. ವಸಂತರೆಡ್ಡಿ ಮಾತನಾಡಿ, ರಾಜ್ಯ ಸರ್ಕಾರ ರಾಜ್ಯದ ವಿವಿಧೆಡೆ ಪ್ರಾಣಿ ಪಕ್ಷಿಗಳು ಇರುವ ಜಾಗಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಗೆ, ಪಕ್ಷಿಧಾಮಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಹೆಚ್ಚು ಆಸಕ್ತಿ ತೋರಿಸಿದೆ ಎಂದರು.

ಎಸಿಎಫ್ ಅರವಿಂದಾಕ್ಷರ ಉತ್ತರ ಕನ್ನಡ ವಿಭಾಗದಲ್ಲಿ ಜರುಗಿದ ಪಕ್ಷಿಗಳ ಪ್ರಭೇದಗಳ ಪರಿಣಿತರ ತಂಡಗಳ ಸರ್ವೆಯಲ್ಲಿ ಒಟ್ಟು 296 ಪಕ್ಷಿಗಳ ಪ್ರಭೇದಗಳನ್ನು ಗುರುತಿಸಲಾಗಿದೆ ಎಂದು ವರದಿ ವಾಚಿಸಿದರು. ಅರಣ್ಯ ಇಲಾಖೆಯಲ್ಲಿ ವಿಶೇಷ ಸೇವೆ ಸಲ್ಲಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಸಂತೋಷ ಗವಾಸ, ಆನಂದ, ಶಂಕರಾನಂದ, ಚಂದ್ರಕಾಂತ ಹುಂಡೆಕಾರ ಅವರನ್ನು ಸನ್ಮಾನಿಸಲಾಯಿತು.

ಮಾನಸಾ ವಾಸರೆ ಪ್ರಾರ್ಥಿಸಿದರು. ಎಸಿಎಫ್ ಸಂತೋಷ ಚವ್ಹಾಣ, ಮೇಘಾ ಪಾಟೀಲ, ಅರ್ಪಿತಾ ಹಾಗೂ ಕೆ.ಡಿ. ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ನಗರಸಭೆಯಿಂದ ಮುಖ್ಯ ರಸ್ತೆಯಲ್ಲಿ ಹಾರ್ನ್‌ಬಿಲ್‌ ಪಕ್ಷಿಯ ಪ್ರತಿಕೃತಿಯನ್ನು ಡೊಳ್ಳು ಕುಣಿತ, ಗೌಳಿ ಸಮುದಾಯ ನೃತ್ಯದ ಜತೆಗೆ ಮೆರವಣಿಗೆ ನಡೆಸಲಾಯಿತು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!