ಬೆಂಗಳೂರು: ತೀವ್ರ ಅನಾರೋಗ್ಯ ಬಳಲುತ್ತಿದ್ದ ಮಾಜಿ ಶಿಕ್ಷಣ ಸಚಿವ, ತಿಪಟೂರು ಮಾಜಿ ಶಾಸಕ ಬಿ.ಸಿ ನಾಗೇಶ್ (BC Nagesh) ಅವರಿಂದು ನಿಧನರಾಗಿದ್ದಾರೆ.
67 ವರ್ಷದ ಬಿ.ಸಿ ನಾಗೇಶ್ ಅವರು ಕಳೆದ ಒಂದು ವರ್ಷದಿಂದ ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದರು. ಎರಡು ಸಲ ಆಪರೇಷನ್ ಕೂಡ ಆಗಿತ್ತು. ಬೆಂಗಳೂರಿನಲ್ಲೇ ಮಗಳ ಮನೆಯಲ್ಲಿದ್ದ ಅವರು ಮಂಗಳವಾರ (ಆ.18) ಕೊನೆಯುಸಿರೆಳೆದಿದ್ದಾರೆ. ಓರ್ವ ಮಗ ಹಾಗೂ ಮಗಳನ್ನು ಅಗಲಿದ್ದು, ನಾಳೆ (ಆ.19) ಹುಟ್ಟೂರು ತಿಪಟೂರಿನಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.
ಇದನ್ನೂ ಓದಿ:-Gokarna|ಗೋಕರ್ಣದಲ್ಲಿ ಮಹಿಳೆಯರೊಂದಿಗೆ ಪರಸ್ಪರ ವಿವಾಹ|ಏನಿದು ವಿಶೇಷ?
1959ರ ಜುಲೈ 1ರಂದು ಜನಿಸಿದ್ದ ಬಿ.ಸಿ. ನಾಗೇಶ್ ಅವರು ವಿದ್ಯಾರ್ಥಿ ಜೀವನದಲ್ಲೇ ABVP ಮೂಲಕ ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದರು. ಆನಂತರ ತಮ್ಮ ರಾಜಕೀಯ ಜೀವನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಪ್ರಾರಂಭಿಸಿದ್ದರು. 1984ರಲ್ಲಿ ಅಧಿಕೃತವಾಗಿ ಭಾರತೀಯ ಜನತಾ ಪಕ್ಷ ಸೇರ್ಪಡೆಯಾಗಿದ್ದರು. ಬಿಜೆಪಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರಲ್ಲದೇ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದರು.

ನಾಗೇಶ್ ಅವರು ಹಲವಾರು ವರ್ಷಗಳಿಂದ ಸಂಘದ ಪೂರ್ಣಕಾಲಿಕ ಕಾರ್ಯಕರ್ತರಾಗಿದ್ದವರು. ಅದಾದ ಬಳಿಕ 2008, 2018ರಲ್ಲಿ ತಿಪಟೂರು ಕ್ಷೇತ್ರದಿಂದ ಗೆದ್ದು ಎರಡು ಬಾರಿ ಶಾಸಕರಾಗಿದ್ದ ಅವರು 2023ರಲ್ಲಿ ಸೋಲನುಭವಿಸಿದ್ದರು. ನಂತರ ಬೊಮ್ಮಾಯಿ ಸರ್ಕಾರದಲ್ಲಿ 2021ರಿಂದ 2023ರವರೆಗೆ ಶಿಕ್ಷಣ ಸಚಿವರು ಆಗಿದ್ದರು.
