ಗೋವಾ,ಉತ್ತರ ಕನ್ನಡ ಪ್ರವಾಸ ಬರುವವರಿಗೆ ನಿರ್ಬಂಧ-ಎರಡು ಡೋಸ್ ಪಡೆದರೆ ಮಾತ್ರ ಎಂಟ್ರಿ!

3571

ಕಾರವಾರ/ಗೋವಾ:- ಓಮಿಕ್ರಾನ್ ಭೀತಿ ಹಿನ್ನಲೆಯಲ್ಲಿ ರಾಜ್ಯದ ಗಡಿ ಜಿಲ್ಲೆ ಉತ್ತರ ಕನ್ನಡದಲ್ಲಿ ಕಠಿಣ ನಿಯಮ ಜಾರಿಗೆ ತರಲಾಗಿದೆ.ಇದರ ಜೊತೆಗೆ ಗಡಿಯಲ್ಲಿ ಗೋವಾ ಸರ್ಕಾರವೂ ನಿಯಮ ಕಠಿಣ ಗೊಳಿಸಿದ್ದು ಪ್ರವಾಸಿಗರ ಸ್ವರ್ಗ ಉತ್ತರ ಕನ್ನಡ ಹಾಗೂ ಗೋವಾಕ್ಕೆ ತೆರಳುವವರು ಕಡ್ಡಾಯವಾಗಿ ಕರೋನಾ ನಿಯಮ ಪಾಲಿಸಬೇಕಿದೆ.

ಗಡಿ ಜಿಲ್ಲೆ ಉತ್ತರ ಕನ್ನಡ ದಲ್ಲಿ ಏನು ಹೊಸ ನಿಯಮ?

ರೂಪಾಂತರ ವೈರೆಸ್ ಓಮಿಕ್ರಾನ್ ವ್ಯಾಪಿಸುವ ಆತಂಕ ಎದುರಾದ ಕಾರಣ ಗಡಿ ಜಿಲ್ಲೆಗಳಲ್ಲಿ ಕಟ್ಟು ನಿಟ್ಟಿನ ತಪಾಸಣೆಗೆ ರಾಜ್ಯ ಸರ್ಕಾರ ಸೂಚಿಸಿದ ಬೆನ್ನಲ್ಲೆ ಗೋವಾ-ಕರ್ನಾಟಕ ಗಡಿ ಜಿಲ್ಲೆ ಉತ್ತರ ಕನ್ನಡ ದಲ್ಲೂ ಹಲವು ನಿಯಮಗಳನ್ನು ಕಠಿಣವಾಗಿ ಜಾರಿಗೆ ತರಲಾಗಿದೆ.ಕಾರವಾರ ತಾಲ್ಲೂಕಿನ ಮಾಜಾಳಿ, ಭಟ್ಕಳ ಹಾಗೂ ಅನಮೋಡ ತಪಾಸಣಾ ಕೇಂದ್ರಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದ್ದಾರೆ.
ಮಹಾರಾಷ್ಟ್ರ, ಗೋವಾ, ತಮಿಳುನಾಡು, ಕೇರಳ ಮುಂತಾದ ವಿವಿಧ ರಾಜ್ಯಗಳಿಂದ ಬರುವ ಪ್ರವಾಸಿಗರ ಬಳಿ ಆರ್.ಟಿ.‍ಪಿ.ಸಿ.ಆರ್ ನೆಗೆಟಿವ್ ಪ್ರಮಾಣಪತ್ರ, ಕೋವಿಡ್ ಲಸಿಕೆಯ ಎರಡು ಡೋಸ್ ಪಡೆದಿರುವುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಿದ್ದು ಅಂತವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.ಅಲ್ಲದೇ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ರೆಸಾರ್ಟ್, ಹೋಂ ಸ್ಟೇ, ದೇವಸ್ಥಾನಗಳಿಗೆ ಬರುವ ಹೊರ ಜಿಲ್ಲೆಗಳ, ಹೊರ ರಾಜ್ಯಗಳ ಪ್ರವಾಸಿಗರನ್ನು ಪರಿಶೀಲಿಸಬೇಕು. ಅವರ ಸಂಪರ್ಕಕ್ಕೆ ಬರುವವರ ಆರೋಗ್ಯವನ್ನು 10 ದಿನಗಳಿಗೊಮ್ಮೆ ತಪಾಸಣೆ ಮಾಡಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚು ವಿದ್ಯಾರ್ಥಿಗಳು ಗುಂಪುಗೂಡಿ ಸೇರುವಂತಹ ಕಾರ್ಯಕ್ರಮ ನಡೆಸದಂತೆ ಆದೇಶಿಸಿದ್ದಾರೆ.ಜಿಲ್ಲೆಯ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ, ಕೇರಳದಿಂದ ಬಂದಿರುವ ವಿದ್ಯಾರ್ಥಿಗಳು 15 ದಿನಗಳ ಒಳಗಿನ ಪ್ರಯಾಣದ ಹಿನ್ನೆಲೆಯ ಹೊಂದಿದ್ದರೆ ಅವರನ್ನು ಕೂಡಲೇ ಆರೋಗ್ಯ ಪರೀಕ್ಷೆಗೆ ಒಳಪಡಿಸಬೇಕು ಎಂದೂ ಉತ್ತರ ಕನ್ನಡ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನಿರ್ದೇಶನ ನೀಡಿದ್ದಾರೆ.

ಮಾಸ್ಕ ಧರಿಸದವರ ವಿರುದ್ಧ ಪ್ರಕರಣ ದಾಖಲು!

ಉತ್ತರ ಕನ್ನಡ ಜಿಲ್ಲೆ ಪ್ರವಾಸೋಧ್ಯಮವೇ ಹೆಚ್ಚು ಇರುವುದರಿಂದ ರಾಜ್ಯ ,ಹೊರ ರಾಜ್ಯದಿಂದ ಪ್ರವಾಸಿಗರು ಬರುವ ಸಂಖ್ಯೆ ಸಹ ಹೆಚ್ಚಿದೆ. ಇದರಿಂದಾಗಿ ಸೋಂಕು ಮತ್ತಷ್ಟು ಹೆಚ್ವಾಗುವ ಭೀತಿ ಇದೆ. ಇದರ ಜೊತೆಗೆ ಡಿಸೆಂಬರ್ ತಿಂಗಳಲ್ಲಿ ಜಿಲ್ಲೆಗೆ ಪ್ರವಾಸ ಬರುವವರ ಸಂಖ್ಯೆ ಸಹ ಗಣನೀಯವಾಗಿ ಏರಿಕೆ ಕಾಣುವುದರಿಂದ ಸೋಂಕು ತಡೆಗಟ್ಟಲು ಹಿಂದೆ ಇದ್ದ ನಿಯಮಗಳನ್ನು ಕಠಿಣವಾಗಿ ಜಾರಿಗೆ ತರಲು ಪೊಲೀಸ್ ಇಲಾಖೆ ಮುಂದಾಗಿದೆ.

ಜಿಲ್ಲೆಯ ಬೀಚ್ ಗಳು,ದೇವಸ್ಥಾನ ದಲ್ಲಿ ಹೆಚ್ಚು ಜನ ಸೇರದಂತೆ ಹಾಗೂ ಸಾಮಾಜಿಕ ಅಂತರ ,ಮಾಸ್ಕ ಧರಿಸಲು ಕಡ್ಡಾಯ ಗೊಳಿಸಿದ್ದು ನಿಯಮ ಮೀರುವವರ ವಿರುದ್ಧ ಪೊಲೀಸ್ ಇಲಾಖೆ ದಂಡದ ಬಿಸಿ ಮುಟ್ಟಿಸಲು ಮುಂದಾಗಿದ್ದು ಹೆಚ್ಚಿನ ಸಿಬ್ಬಂದಿ ನೇಮಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಸುಮನ್ ಡಿ.ಪಿ ರವರು ಮಾಹಿತಿ ನೀಡಿದ್ದಾರೆ.

ಮಾಜಾಳಿ ತಪಾಸಣಾ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ-ಹೈರಾಣಾದ ಪ್ರವಾಸಿಗರು.

ಕಾರವಾರದ ಮಾಜಾಳಿಯ ಗೋವಾ ಗಡಿಯಲ್ಲಿ ಸ್ಥಾಪಿಸಲಾಗಿರುವ ತಪಾಸಣಾ ಕೇಂದ್ರದಲ್ಲಿ ಸಿಬ್ಬಂದಿಯ ಕೊರತೆಯಿಂದ ಎಲ್ಲ ಪ್ರಯಾಣಿಕರ ತಪಾಸಣೆಗೆ ತೊಡಕಾಗಿದೆ. ಗೋವಾ ಮೂಲಕ ನೂರಾರು ಪ್ರಯಾಣಿಕರು ಏಕಕಾಲಕ್ಕೆ ರಾಜ್ಯ ಪ್ರವೇಶಿಸುತ್ತಾರೆ. ವಾಹನ ತಪಾಸಣೆಗೆ ಓರ್ವ ಪೊಲೀಸ್ ಸಿಬ್ಬಂದಿ ಮಾತ್ರ ಇದ್ದು , ಕಂದಾಯ ಇಲಾಖೆ ಯಿಂದ ಓರ್ವ ಸಿಬ್ಬಂದಿ ಮಾತ್ರ ಇದ್ದಾರೆ.
ಎಲ್ಲ ವಾಹನಗಳನ್ನು ನಿಲ್ಲಿಸುವಂತೆ ಸೂಚಿಸುವುದರಲ್ಲೇ ಪೊಲೀಸ್ ಸಿಬ್ಬಂದಿ ಹೈರಾಣವಾದರೇ ,ದಾಖಲೆ ಪರಿಶೀಲನೆಗೆ ಗಂಟೆಗಟ್ಟಲೇ ಸಮಯ ವ್ಯರ್ಥವಾಗುತಿದ್ದು ,ಬರುವ ಜನರಿಗೆ ತೊಂದರೆ ಉಂಟಾಗಿದೆ. ಹೀಗಾಗಿ ಹೆಚ್ಚಿನ ಸಿಬ್ಬಂದಿ ನೇಮಿಸಲು ಕ್ರಮ ಕೈಗೊಳ್ಳುಬೇಕೆಂದು ಜನರು ಆಗ್ರಹಿಸಿದ್ದಾರೆ.

ಗೋವಾ ದಲ್ಲೂ ಕಠಿಣ ನಿಯಮ.


ಕರ್ನಾಟಕ ದಿಂದ ಗೋವಾಕ್ಕೆ ಪ್ರವಾಸಕ್ಕೆ ಬರುವವರು ಕಡ್ಡಾಯವಾಗಿ ಎರಡು ಸುತ್ತಿನ ಲಸಿಕೆ ಪಡೆದಿರಬೇಕು. ಹಾಗೂ ಆಧಾರ್ ,ಲಸಿಕೆ ಪಡೆದ ಪ್ರಮಾಣಪತ್ರ ಇರಬೇಕು. ಅಂತವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಇನ್ನು ಒಂದು ಸುತ್ತಿನ ಲಸಿಕೆ ಪಡೆದವರು 74 ತಾಸಿನೊಳಗಿನ ಕೋವಿಡ್ ನೆಗಟೀವ್ ಪ್ರಮಾಣ ಪತ್ರ ಕಡ್ಡಾಯವಾಗಿದೆ. ಇನ್ನು ಟ್ರಕ್ ಗಳು ,ಮೀನಿನ ವಾಹನಗಳಿಗೆ ಅಲ್ಪ ಸಡಿಲಿಕೆ ಇದ್ದರೂ ಲಸಿಕೆ ಪ್ರಮಾಣ ಪತ್ರ ಕಡ್ಡಾಯವಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!