ಕಾರವಾರದಲ್ಲಿ ಎಮ್ .ಇ.ಎಸ್. ಹುಚ್ಚಾಟ- ಸಾಹಿತ್ಯ ಪರಿಷತ್ ಖಂಡನೆ

34

ಕಾರವಾರ :- ಬೆಳಗಾವಿಗೆ ಸೀಮಿತವಾಗಿದ್ದ ಎಮ್.ಇ.ಎಸ್ ಇದೀಗ ಕಾರವಾರದಲ್ಲಿ ಲೋಕಸಭೆಗೆ ನಾಮಪತ್ರ ಸಲ್ಲಿಸುವ ಜೊತೆ ನಗರದಲ್ಲಿ ನಡೆಸಿದ ಮೆರವಣಿಗೆಯಲ್ಲಿ ಎಂಇಎಸ್ (M.E.S)ಕಾರ್ಯಕರ್ತರು ಕಾರವಾರ, ನಿಪ್ಪಾಣಿ, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು. ಸಂಯುಕ್ತ ಮಹಾರಾಷ್ಟ್ರ ರಚನೆಯಾಗಬೇಕು ಎಂದು ಘೋಷಣೆ ಕೂಗಿದರು. ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ
ಮಹಾರಾಷ್ಟ್ರ ಏಕೀಕರಣ ಸಮಿತಿಯ ಖಾನಾಪುರ ಘಟಕದ ಎಂಇಎಸ್ ಅಭ್ಯರ್ಥಿಯಾಗಿ ನಿರಂಜನ ಸರ್ದೇಸಾಯಿ ಹಾಗೂ ರಣಜಿತ್ ಪಾಟೀಲ ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯಲು ನಾಮಪತ್ರ ಸಲ್ಲಿಸಿದ್ದಾರೆ.ಈ ಮೂಲಕ ಗಡಿ ಜಿಲ್ಲೆಯಲ್ಲಿ ಮೊದಲ ಬಾರಿ ಸ್ಪರ್ಧೆಗಿಳಿದಿದೆ.

ಎಂ.ಇ.ಎಸ್. ನ ನಿರಂಜನ ದೇಸಾಯಿ ಹೇಳಿಕೆ ಖಂಡಿಸಿದ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ.

ಲೋಕಸಭಾ ಚುನಾವಣೆಯಲ್ಲಿ (Loksabha election) ನಾಮ ಪತ್ರ ಸಲ್ಲಿಸುವ ವೇಳೆ ಎಂ.ಇ.ಎಸ್.ನ ನಿರಂಜನ ದೇಸಾಯಿಯವರು ಆಡಿರುವ ನಾಡ ವಿರೋಧಿಯಾದ ಹೇಳಿಕೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ತೀವ್ರವಾಗಿ ಖಂಡಿಸಿದ್ದಾರೆ.

ಚುನಾವಣೆಯ ವೇಳೆ ಜಾತಿ, ಧರ್ಮ, ಗಡಿ, ನುಡಿ ಮುಂತಾದ ಭಾವನಾತ್ಮ ವಿಚಾರಗಳನ್ನು ಹೇಳಬಾರದೆಂದು ನೀತಿ ಸಂಹಿತೆಯಿದ್ದರೂ ಅಭ್ಯರ್ಥಿಯಾಗಿರುವ ನಿರಂಜನ ದೇಸಾಯಿಯವರು ಕಾರವಾರ, ಜೋಯಿಡಾ ಹಾಗೂ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಬಹಿರಂಗ ಹೇಳಿಕೆ ನೀಡಿರುವುದು ಚುನಾವಣಾ ನಿಯಮ ಉಲ್ಲಂಘನೆಯಾಗಿರುತ್ತದೆ. ಚುನಾವಣಾ ಆಯೋಗ ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ವಾಸರೆ ಒತ್ತಾಯಿಸಿದ್ದಾರೆ.

ಕಾರವಾರ, ದಾಂಡೇಲಿ, ಜೋಯಿಡಾದಲ್ಲಿದ್ದ ಮರಾಠಿ ಭಾಷಾ ಶಾಲೆಗಳನ್ನು ಕರ್ನಾಟಕ ಸರಕಾರ ಮುಚ್ಚಿದೆ ಎಂದು ನಿರಂಜನ ದೇಸಾಯಿ ಹೇಳಿರುವುದು ಅವರ ತಿಳಿವಳಿಕೆಯ ಕೊರತೆಯಾಗಿದೆ. ಮರಾಠಿ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಪ್ರೌಢ ಶಿಕ್ಷಣ ಹಾಗೂ ಕಾಲೇಜು ಗಳಲ್ಲಿ ಸಮಸ್ಯೆಯಾಗುತ್ತಿತ್ತು. ಕಾರಣ ಮರಾಠಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಯಿತು. ಹಾಗೂ ಈ ಭಾಗದ ಮರಾಠಿ ಭಾಷಿಕರು ಕನ್ನಡವನ್ನು ನಾಡ ಭಾಷೆಯಾಗಿ ಪ್ರೀತಿಸಿ ಕನ್ನಡ ಮಾಧ್ಯಮದಲ್ಲೇ ಅಭ್ಯಾಸ ಮಾಡಲಾರಂಭಿಸಿದ ಹಿನ್ನೆಲೆಯಲ್ಲಿ, ಮರಾಠಿ ಶಾಲೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಅಂಥಹ ಶಾಲೆಗಳು ಬಂದ್ ಆಗಿವೆ. ಇದರಲ್ಲಿ ಯಾರ ದುರಾಲೋಚನೆಯೂ ಇಲ್ಲ. ( ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿರುವ ಕನ್ನಡ ಶಾಲೆಗಳೂ ಮುಚ್ಚಿಕೊಳ್ಳುತ್ತಿವೆ) ವಾಸ್ತವಾಂಶ ತಿಳಿಯದೇ ನಿರಂಜನ ದೇಸಾಯಿ ಜನರೊಳಗೆ ಭಾವನಾತ್ಮಕ ಪ್ರಚೋದನೆ ನೀಡುವಂತಹ ಹೇಳಿಕೆ ಕೊಡುವುದು ಸಮಂಜಸವಲ್ಲ.

ಇನ್ನು ಕಾರವಾರ, ಹಳಿಯಾಳ, ಜೋಯಿಡಾದ ಯಾರೊಬ್ಬರೂ ಕೂಡಾ ತಮ್ಮನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಹೇಳುತ್ತಿಲ್ಲ. ಇಲ್ಲಿರುವ ಎಲ್ಲರೂ ಕನ್ನಡದ ನೆಲಕ್ಕೆ ನಿಷ್ಠರಾಗಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ನಿರಂಜನ ದೇಸಾಯಿ ನಮ್ಮ ಜಿಲ್ಲೆಗೆ ಬಂದು ಜಾತಿ ಹಾಗೂ ಭಾಷಿಕರ ನಡುವೆ ಸಂಘರ್ಷ ಹುಟ್ಟಿಸುವ ಹಾಗೂ ಮನಸ್ಸು ಕೆಡಿಸುವ ಮಾತನಾಡಿದ್ದು ನಾಡ ದ್ರೋಹದ ಕೆಲಸವಾಗಿದೆ.

ಗಡಿಭಾಗಗಳು ಅಭಿವೃದ್ಧಿಯಾಗಿಲ್ಲವೆಂದರೆ ಆ ಬಗ್ಗೆ ಸರಕಾರದ ಗಮನಕ್ಕೆ ತರಲಿ. ಹೋರಾಟ ಮಾಡಲಿ. ಆದರೆ ಅದೇ ವಿಚಾರಕ್ಕೆ ಈ ನೆಲವನ್ನೇ ಮಹಾರಾಷ್ಟ್ರಕ್ಕೆ ಸೇರಿಸಿ ಎಂದು ಹೇಳುವುದು ಅಪ್ರಬುದ್ದತೆಯ ವಿಚಾರವಾಗುತ್ತದೆ. ‘ಕನ್ನಡ ಭಾಷಾ ವಿಧೆಯಕ’ ಕನ್ನಡ, ಕನ್ನಡಿಗ, ಕರ್ನಾಟಕಕ್ಕೆ ಬಲವಾಗಿ ನಿಂತಿದ್ದು, ಈ ವಿಧೇಯಕದ ಬಗ್ಗೆ ಅಪಪ್ರಚಾರ ಸರಿಯಲ್ಲ. ಯಾವುದೇ ಕಾರಣಕ್ಕೂ ನಮ್ಮ ನಾಡಿನ ಒಂದಿಂಚು ಜಾಗವನ್ನೂ ಯಾರಿಗೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಚುನಾವಣೆ ಬಂದಾಗ ಗಡಿ ಪ್ರದೇಶದ ಅಭಿವೃದ್ಧಿಯಾಗಿಲ್ಲ ಎನ್ನುವ ಇವರು ಗಡಿ ಪ್ರದೇಶಗಳ ಅಭಿವೃದ್ಧಿಯ ಬಗ್ಗೆ ಎಷ್ಟು ಹೋರಾಟ ಮಾಡಿದ್ದಾರೆ ಎಂಬುದನ್ನು ತಿಳಿಸಲಿ. ಭಾಷೆ, ಜಾತಿ ಹಾಗೂ ಗಡಿಯ ಹೆಸರು ಹೇಳಿ ಸಂಘರ್ಷ ಸೃಷ್ಟಿಸಲು ಪ್ರಯತ್ನಿಸಿದರೆ ನಾವೂ ಕೂಡಾ ಸುಮ್ಮನಿರುವುದಿಲ್ಲ.

ಅಷ್ಟಕ್ಕೂ ಮತ್ತೊಂದು ಗಂಭಿರವಾದ ಪ್ರಶ್ನೆಯೆಂದರೆ, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂ.ಇ.ಎಸ್.) ಗೆ ಕರ್ನಾಟಕದಲ್ಲಿ ಏನು ಕೆಲಸ?. ಅದು ಮಹಾರಾಷ್ಟ್ರದಲ್ಲಿ ಏಕೀಕರಣದ ಕೆಲಸ ಮಾಡಿಕೊಳ್ಳಲಿ. ಕರ್ನಾಟಕಕ್ಕೆ ಬಂದು ಜಾತಿ, ಭಾಷೆ ಹಾಗೂ ಗಡಿಯ ವಿಚಾರದಲ್ಲಿ ಸಂಘರ್ಷಕ್ಕೆ ಎಡೆ ಮಾಡಿಕೊಡುವ ಮಾತನಾಡುವುದು ಸರಿಯಲ್ಲ. ಕರ್ನಾಟಕದಲ್ಲಿ ಎಂ.ಇ.ಎಸ್. ನ್ನು ನಿಷೇಧಿಸಬೇಕು. ಕರ್ನಾಟಕದ ಚುನಾವಣೆಗಳಲ್ಲಿ ಎಂ.ಇ.ಎಸ್. ಹೆಸರಲ್ಲಿ ಚುನಾವಣೆ ನಡೆಸುವುದು, ನಾಮಪತ್ರ ಸಲ್ಲಿಸುವುದು, ಕರಪತ್ರ ಹಂಚುವುದಕ್ಕೆ ಅವಕಾಶ ನೀಡಬಾರದು. ಪ್ರತೀ ಬಾರಿ ನಾಡ ವಿರೋಧಿ ಚಟುವಟಿಕೆ ನಡೆಸುತ್ತಿರುವ ಎಂ.ಇ.ಎಸ್. ಹಾಗೂ ಆ ಸಂಘಟನೆಯಲ್ಲಿ ಗುರುತಿಸಿಕೊಳ್ಳುವವರ ಮೇಲೆ ನಿಯಮಾನುಸಾರ ಪ್ರಕರಣ ದಾಖಲಿಸಬೇಕು. ನಾಮಪತ್ರ ಸಲ್ಲಿಸುವ ವೇಳೆ ಕಾರವಾರ, ಜೋಯಿಡಾ, ಹಳಿಯಾಳವನ್ನು ಮಹಾರಾಷ್ಟ್ರಕ್ಕೇ ಸೇರಿಸಬೇಕು ಎಂದು ಹೇಳಿ ನುಡಿ ಹಾಗೂ ಗಡಿಯ ವಿಚಾರದಲ್ಲಿ ಪ್ರಚೋದನಕಾರಿ ಮಾತನಾಡಿರುವ ನಿರಂಜನ ದೇಸಾಯಿ ಸಲ್ಲಿರುವ ನಾಮಪತ್ರವನ್ನು ಅಸಿಂಧುಗೊಳಿಸಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಒತ್ತಾಯಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!