ಖಾಸಗಿ ಶಾಲೆಗಳಿಗೆ ವಿದ್ಯಾರ್ಥಿಗಳ ಶುಲ್ಕ ತುಂಬುವ ಕುರಿತು ಇನ್ನೆರಡು ದಿನದಲ್ಲಿ ಘೋಷಣೆ : ಸಚಿವ ಸುರೇಶ್ ಕುಮಾರ್.

528

ಶಿವಮೊಗ್ಗ : ಕೊರೋನಾದಿಂದಾಗಿ ಪೋಷಕರು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದೆ. ಎಷ್ಟೋ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಿಗೆ ವೇತನ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಇಬ್ಬರ ಪರಿಸ್ಥಿತಿ ಮನಗಂಡು ಯಾರಿಗೂ ಹೊರೆಯಾಗದ ರೀತಿ ಪೋಷಕರು ಸಹ ಶುಲ್ಕ ಕಟ್ಟುವಂತೆ ಇನ್ನೆರಡು ದಿನದಲ್ಲಿ ಘೋಷಣೆ ಮಾಡುವುದಾಗಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಸರಕಾರಿ ಶಾಲೆಗಳಲ್ಲಿ ನಿರ್ಮಾಣವಾಗಿರುವ ಸ್ಮಾರ್ಟ್ ಕ್ಲಾಸ್ ತರಗತಿಗಳ ವೀಕ್ಷಣೆಗೆ ಆಗಮಿಸಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಸ್ಮಾರ್ಟ ಕ್ಲಾಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು ರಾಜ್ಯದ ಇತರೆಡೆಗಳಲ್ಲಿಯೂ ಸರಕಾರಿ ಶಾಲೆಗಳಲ್ಲಿ ಸ್ಮಾರ್ಟ್ ತರಗತಿ‌ ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.

ಇನ್ನು ಕುವೆಂಪು ರಂಗಮಂದಿರದಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕರು, ಪಿಯು‌ ಕಾಲೇಜಿನ ಪ್ರಾಂಶುಪಾಲರು ಹಾಗೂ ಶಾಲಾಭಿವೃದ್ದಿ ಸಮಿತಿ ಸದಸ್ಯರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಚಿವರು‌ ಭಾಗವಹಿಸಿದ್ದರು. ಈ ವೇಳೆ ಶಿಕ್ಷಕರು ಹಾಗೂ ಪ್ರಾಂಶುಪಾಲರು ಶೈಕ್ಷಣಿಕ ಚಟುವಟಿಕೆಗೆ ಕುರಿತಂತೆ ಹಲವು ವಿಷಯಗಳನ್ನು ಸಚಿವರ ಮುಂದೆ ವಿನಂತಿಸಿಕೊಂಡರು.

ಸಂವಾದದಲ್ಲಿ ಬಹುತೇಕ ಶಿಕ್ಷಕರು ಹಾಗೂ ಪ್ರಾಂಶುಪಾಲರು 8 ಮತ್ತು 9 ನೇ ತರಗತಿ ಹಾಗೂ ಪ್ರಥಮ ಪಿಯುಸಿ ತರಗತಿಗಳನ್ನು ಆರಂಭಿಸಲು ಕ್ರಮ ಕೈಗೊಳ್ಳುವಂತೆ ಸಚಿವರಲ್ಲಿ ಮನವಿ ಮಾಡಿದರು.

ಸದ್ಯ 10 ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳಿಗೆ ಕೇವಲ ಎರಡೂವರೆ ಗಂಟೆ ಮಾತ್ರ ತರಗತಿಗಳು ನಡೆಯುತ್ತವೆ. ಇಷ್ಟೇ ಅವಧಿ ಆದರೆ ಸಿಲೆಬಸ್ ಮುಗಿಸಲು ಕಷ್ಟವಾಗುತ್ತದೆ. ಹೀಗಾಗಿ 10 ಗಂಟೆಯಿಂದ 4.30 ರವರೆಗೆ ತರಗತಿ ನಡೆಸಲು ಅವಕಾಶ ನೀಡುವಂತೆ ಶಿಕ್ಷಕರು ಸಚಿವರಲ್ಲಿ‌ ಕೇಳಿಕೊಂಡರು.

8 ಮತ್ತು 9 ಹಾಗೂ ಪ್ರಥಮ ಪಿಯುಸಿ ತರಗತಿ ಆರಂಭ ಮಾಡುವ ಬಗ್ಗೆ ತಾಂತ್ರಿಕ ತಜ್ಞರ ಸಲಹೆ ಕೇಳಿದ್ದೇವೆ. ತಜ್ಞರ ಸಲಹೆ ಬಂದ ಬಳಿಕ ನಿರ್ಧರಿಸುತ್ತೇವೆ ಎಂದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!