Shivamogga| ಸಾಲಮಾಡಿದ ಅಡಿಕೆ ವರ್ತಕನ ಸಿನಿಮೀಯ ರೀತಿ ಕಿಡ್ನಾಪ್ ! ನಂತರ ಆಗಿದ್ದೇನು?
ಶಿವಮೊಗ್ಗ (shivamogga) ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಅಡಿಕೆ ವ್ಯಾಪಾರಕ್ಕೆ ಪಡೆದುಕೊಂಡಿದ್ದ ಹಣವನ್ನು ವಾಪಸ್ ನೀಡಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೋರ್ವನನ್ನು ಇಬ್ಬರು ಬಲವಂತವಾಗಿ ಅಪಹರಿಸಿ, ಹಲ್ಲೆ ನಡೆಸಿ, ನಂತರ ಅದೇ ಸ್ಥಳಕ್ಕೆ ತಂದು ಬಿಟ್ಟಿರುವ ಘಟನೆ ತಾಲೂಕಿನ ತೂದೂರಿನಲ್ಲಿ ನಡೆದಿದೆ. ಹಳ್ಳಿಬೈಲ್ ನ ಸುಧೀರ್ ಎಂಬುವವರೇ ಅಪಹರಣಕ್ಕೆ ಒಳಗಾದ ವ್ಯಕ್ತಿಯಾಗಿದ್ದಾರೆ.
ಘಟನೆ ಏನು?
ಹಳ್ಳಿಬೈಲ್ ನ ಸುಧೀರ್ ಅವರು ಈ ಹಿಂದೆ ವ್ಯಕ್ತಿಯೊಬ್ಬರಿಂದ ಅಡಿಕೆ ವ್ಯಾಪಾರಕ್ಕೆ ಸಂಬಂಧಿಸಿದಂತೆ ಹಣವನ್ನು ಸಾಲವಾಗಿ ಪಡೆದಿದ್ದರು. ಆದರೇ ಕಾರಣಾಂತರಗಳಿಂದ ಅವರು ಹೇಳಿದ ಸಮಯಕ್ಕೆ ಹಣವನ್ನು ಹಿಂದಿರುಗಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಗಸ್ಟ್ 21 ರಂದು ಸುಧೀರ್ ಅವರು ತೂದೂರಿನ ಹೋಟೆಲ್ ಒಂದರ ಮುಂಭಾಗದಲ್ಲಿ ನಿಂತಿದ್ದಾಗ, ಇಬ್ಬರು ವ್ಯಕ್ತಿಗಳು ಕಪ್ಪು ಬಣ್ಣದ ಥಾರ್ ಕಾರಿನಲ್ಲಿ ಬಂದಿದ್ದಾರೆ. ಬಂದವರೇ ಸುಧೀರ್ ಅವರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬಲವಂತವಾಗಿ ಕಾರಿನೊಳಗೆ ಕೂರಿಸಿಕೊಂಡಿದ್ದಾರೆ.ಕಾರಿನಲ್ಲಿ ಸ್ವಲ್ಪ ದೂರ ಅವರ ಮೇಲೆ ಹಲ್ಲೆ ಮಾಡುತ್ತಲೇ ಕರೆದೊಯ್ದು, ನಂತರ ವಾಪಸ್ ಬಂದು ಅದೇ ಸ್ಥಳದಲ್ಲಿ ಬಿಟ್ಟು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆಯ ಸಂಪೂರ್ಣ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಕುರಿತು ಮಾಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ಸ್ವೀಕರಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

