BREAKING NEWS
Search

ಕಳಚೆ ಭೂ ಕುಸಿತ ಪ್ರದೇಶಕ್ಕೆ ಸಚಿವ ಸಿ.ಸಿ ಪಾಟೀಲ್ ಭೇಟಿ-ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಜನರ ಆಗ್ರಹ.

511

ಕಾರವಾರ :- ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಳಕೇಬೈಲ್‌ನಲ್ಲಿ ಭೂ ಕುಸಿತದಿಂದಾಗಿ ರಾಜ್ಯ ಹೆದ್ದಾರಿ ಕುಸಿದ ಹಾಗೂ ಕಳಚೆಯಲ್ಲಿ ಭೂ ಕುಸಿತದಿಂದಾಗಿ ತೋಟ, ಮನೆ ಕಳೆದುಕೊಂಡ ಪ್ರದೇಶಕ್ಕೆ ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್ ಇಂದು ಭೇಟಿ ಮಾಡಿ ಪರಿಶೀಲನೆ ನಡೆಸಿದರು. ಕಳಚೆಯಲ್ಲಿ ಗ್ರಾಮಸ್ಥರು ತಮ್ಮನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಈ ಸಂದರ್ಭದಲ್ಲಿ ಮನವಿ ನೀಡಿದರು.

ಸರ್ವ ಋತು ರಸ್ತೆ ನಿರ್ಮಿಸಿ

ಕಳಚೆ ಗ್ರಾಮದಲ್ಲಿ ಭೂ ಕುಸಿತ ದೃಶ್ಯ.

ಹೆದ್ದಾರಿ ಕುಸಿತದಿಂದಾಗಿ ರಸ್ತೆ ಸಂಪರ್ಕ ಕಡಿದು ಹೋಗಿದ್ದು, ತಾತ್ಕಾಲಿಕ ರಸ್ತೆಯಲ್ಲಿ ಬಸ್, ಭಾರಿ ವಾಹನ ಸಂಚರಿಸಲು ಅಸಾಧ್ಯವಾಗಿದೆ. ಭವಿಷ್ಯದಲ್ಲಿ ಇಲ್ಲಿ ರಸ್ತೆ ನಿರ್ಮಿಸಿದರೂ ಮುಂದೊಂದು ದಿನ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಹೀಗಾಗಿ ಮಲವಳ್ಳಿಯಿಂದ ಪದ್ಮಾಪುರ ಮೂಲಕ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆಯನ್ನು ಸರ್ವ ಋತು ರಸ್ತೆಯನ್ನಾಗಿ ಪರಿವರ್ತಿಸಬೇಕು. ಈ ರಸ್ತೆ ಅಂಕೋಲಾ ಮತ್ತು ಯಲ್ಲಾಪುರದ ಲಿಂಕ್ ರಸ್ತೆಯಾಗಿ ಮಾರ್ಪಡಿಸಿ, ತುರ್ತಾಗಿ ಹುಟ್ಟರ್ತೆ, ಬಾಸಲದ ಬಳಿ ರಸ್ತೆಯ ಪರ್ಯಾಯ ರಸ್ತೆಯನ್ನು ಶೀಘ್ರವಾಗಿ ನಿರ್ಮಿಸಿ ಬಸ್ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ತರು ಸಚಿವರಿಗೆ ಒತ್ತಾಯಿಸಿದರು.

ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ,ಮುಖ್ಯಮಂತ್ರಿ ಕೂಡ ಈ ಭಾಗದ ಅಭಿವೃದ್ಧಿಯ ಕುರಿತು ಗಮನ ಹರಿಸಿದ್ದಾರೆ. ನೀವು ಹೇಳಿದ ಅಭಿವೃದ್ಧಿ ಕಾರ್ಯವನ್ನು ಮಾಡುತ್ತೇವೆ ಎಂದು ಹೇಳಿದರು.
ನಂತರ ಕಳಚೆ ಭೂಕುಸಿತ ಪ್ರದೇಶಕ್ಕೆ ತೆರಳಿದ ಸಚಿವರು, ಭೂಕುಸಿತ ಪ್ರದೇಶಗಳನ್ನು ಪರಿಶೀಲಿಸಿ ಕಳಚೆಯ ಅನಂತ ಗಾಂವ್ಕರ್ ಮಾನಿಗದ್ದೆ ಇವರ ಮನೆಯಲ್ಲಿ ಗ್ರಾಮಸ್ಥರ ಸಭೆ ನಡೆಸಿ, ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು.

ಪುನರ್ವಸತಿ ಕಲ್ಪಿಸುವುದಾದರೆ ಎಲ್ಲ ಮೂಲ ಸೌಕರ್ಯಗಳನ್ನು ಕಲ್ಪಿಸಿ. ಹಾಗಿದ್ದರೆ ಮಾತ್ರ ನಾವು ಈ ಸ್ಥಳ ಬಿಟ್ಟು ಬರುತ್ತೇವೆ. ಇಲ್ಲವಾದರೆ ಇಲ್ಲಿಯೇ ಬದುಕುತ್ತೇವೆ, ಇಲ್ಲಿಯೇ ಸಾಯುತ್ತೇವೆ ಎಂದು ಗ್ರಾಮಸ್ಥರು ಸಚಿವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್ ಇಲ್ಲಿನ ಎಲ್ಲ ಪರಿಸ್ಥಿತಿಯ ಅರಿವು ಮುಖ್ಯಮಂತ್ರಿಗಳಿಗಿದೆ. ಇಲ್ಲಿನ ಜನರ ಪುನರ್ ವಸತಿ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ. ಯಾವ ರೀತಿ ಮಾಡಬೇಕೆಂಬುದನ್ನು ಸರ್ಕಾರ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತದೆ ಎಂದರು.

ನಂತರ ಜಿಲ್ಲೆಯ ಪ್ರವಾಹ ಪರಿಸ್ಥಿತಿ ಹಾನಿ ಹಾಗೂ ತೆಗೆದುಕೊಳ್ಳಬೇಕಾದ ಕ್ರಮದ ಕುರಿತು ಕಾರವಾರ ಪಿ.ಡಬ್ಲು.ಡಿ ಯ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದ ಸಚಿವರು ಇಲ್ಲಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೇಂದ್ರದಿಂದ ತಜ್ಞರ ಸಮಿತಿ ಬಂದು ಭೂಮಿ ಕುಸಿತದ ಸಮೀಕ್ಷೆ ನಡೆಸಬೇಕು ಅದರ ನಂತರ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!