ಕಾರವಾರ: ಕಾರವಾರದ ಕ್ರಿಮ್ಸ್ ಮೆಡಿಕಲ್ ಕಾಲೇಜು ಯಾವ ರೀತಿ ಹದಗೆಟ್ಟು ಹೋಗಿದೆ ಎಂದರೇ ಇಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ(Super Speciality Hospital )ಕಾರವಾರ (karwar) ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಕ್ರಿಮ್ಸ್) (krims)ಸಮಸ್ಯೆ ಆಲಿಸಲು ಹೋದ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರೇ ದಂಗಾಗಿ ಹೋಗಿದ್ದಾರೆ.
ಕಾಲೇಜಿನ ಟೆಂಡರ್ ನೋಡಿಕೊಳ್ಳುವ ಅಧಿಕಾರಿ ಯಾರು ಎಂದು ಕೇಳಿದರೆ ಗುತ್ತಿಗೆ ಸಿಬ್ಬಂದಿಯನ್ನು ತೋರಿಸುತ್ತಾರೆ ಅಲ್ಲಿನ ವೈದ್ಯರು. ವಿಭಾಗಗಳ ಮುಖ್ಯಸ್ಥರು ಯಾರು ಎಂದರೇ ಯಾರೂ ಅಧಿಕೃತ ಇರಲಿಲ್ಲ. ಕೆಲ ವೈದ್ಯರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ನಿರ್ದೇಶಕ ದೂರಿದರೆ, ಈಗಿನ ನಿರ್ದೇಶಕರ ನೇಮಕಾತಿಯೇ ಅಕ್ರಮ ಎಂದು ವಿದ್ಯಾರ್ಥಿ, ಹಿರಿಯ ವೈದ್ಯರು ದಾಖಲೆ ಯನ್ನ ಸಚಿವರ ಮುಂದೆ ಒದಗಿಸಿ ಶಾಕ್ ನೀಡಿದ್ದಾರೆ.
ಹೀಗೆ ಕ್ರಿಮ್ಸ್ (KRIMS) ಚಿತ್ರ-ವಿಚಿತ್ರ ಆಡಳಿತಕ್ಕೆ ಸಚಿವರು, ಶಾಸಕ, ಜಿಲ್ಲಾಧಿಕಾರಿ ದಂಗಾಗಿ ಹೋಗಿದ್ದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಹೋರಾಟ ನಡೆಯುತ್ತಿದೆ. ಆ ಹಿನ್ನೆಲೆಯಲ್ಲಿ ಮೊದಲು ಕಾರವಾರದ ಕ್ರಿಮ್ಸ್ ಅನ್ನು ಮೇಲ್ದರ್ಜೆಗೇರಿಸಬೇಕು ಎಂದು ಸಚಿವ ಮಂಕಾಳ ವೈದ್ಯ KRIMS ವೈದ್ಯರು, ಆಡಳಿತ ಸಿಬ್ಬಂದಿ ಸಭೆ ಕರೆದಿದ್ದರು. ಆದರೇ KRIMS Medical College ನಲ್ಲಿ ಹೊಸ ಸೇವೆ ಬರುವುದಿರಲಿ, ಇದ್ದ ಸೇವೆಯನ್ನೇ ಹಾಳು ಮಾಡಿರುವ ಆತಂಕಕಾರಿ ಸಂಗತಿಗಳು ಹೊರಬಿದ್ದಿವೆ.
ಕಾಲೇಜಿನ ವೈದ್ಯರೊಬ್ಬರು ಸಭೆಯಲ್ಲಿಯೇ ದಾಖಲೆ ಒದಗಿಸಿ ಅಕ್ರಮ ನೇಮಕಾತಿ ಬಯಲು ಮಾಡಿದರು. ಹಲ್ಲಿನ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಹುದ್ದೆಗೆ ಅರ್ಹರಿದ್ದರೂ ನಿಯಮ ಉಲ್ಲಂಘಿಸಿ 38 ವರ್ಷ ಮೀರಿದ ವೈದ್ಯೆಯನ್ನು ನೇಮಕ ಮಾಡಲಾಗಿತ್ತು. ನೇಮಕ ಆದ ವೈದ್ಯೆ ಕೂಡ ಅದನ್ನು ಒಪ್ಪಿಕೊಂಡರು. ಅಲ್ಲಿಂದ ಕ್ರಿಮ್ಸ್ ಒಂದೊಂದೇ ಅಕ್ರಮಗಳು ಹೊರಬರಲು ಶುರುವಾಯಿತು.
ವಿಷಯ ತಿಳಿಯುತ್ತಿದ್ದಂತೆಯೇ ಸಾರ್ವಜನಿಕರು ಸಭಾಭವನದ ಬಾಗಿಲ ಬಳಿ ಜಮಾಯಿಸಿದರು. ಕಾಲೇಜಿನಲ್ಲಿ ನಿರ್ದೇಶಕರ ಅಂಧಾ ದರ್ಬಾರ ನಡೆಯುತ್ತಿದೆ ಎಂದು ಆಕ್ರೋಶವನ್ನೂ ವ್ಯಕ್ತಪಡಿಸಿದರು.
ಹಿರಿಯ ವೈದ್ಯರಿಗೆ ಮಾನ್ಯತೆಯನ್ನೇ ಕೊಡದೆ ಕಿರುಕುಳ ನೀಡಲಾಗುತ್ತಿದೆ. 21 ವಿಭಾಗಕ್ಕೆ ಮುಖ್ಯಸ್ಥರಿದ್ದರೂ, ಅವರಿಗೆ ಮುಖ್ಯಸ್ಥರು ಎಂಬ ಪ್ರಮಾಣ ಪತ್ರವನ್ನೇ ಕೊಟ್ಟಿಲ್ಲ ಎಂದು ಸಭೆಗೆ ಆಗಮಿಸಿದ್ದ ಎಲ್ಲ ಮುಖ್ಯಸ್ಥರು ದೂರಿದರು.

ನಿರ್ದೇಶಕ ಹುದ್ದೆಗೆ ಅರ್ಜಿ ಹಾಕಿದ್ದರು ಎಂಬ ಕಾರಣಕ್ಕೆ ಗುರಿಯಾಗಿಸಿ ಅವಮಾನಿಸುತ್ತಿದ್ದಾರೆ. ಬೇಕಾದವರಿಗೆ ಎಲ್ಲ ಅವಕಾಶ ಕಲ್ಪಿಸುತ್ತಾರೆ. ರಜಾ ಅರ್ಜಿ ಕೊಡುವುದಕ್ಕೂ ಹಿರಿಯ ವೈದ್ಯರು ನಿರ್ದೇಶಕರ ಕಚೇರಿ ಬಾಗಿಲು ಕಾಯಬೇಕು. ವಿಭಾಗದ ಕೆಲಸಕ್ಕೆ ಕಂಪ್ಯೂಟರ್, ಪ್ರಿಂಟರ್ಗೆ ಬೇಡಿಕೆ ಕೊಟ್ಟು ಒಂದು ವರ್ಷವಾದರೂ ಕೊಡದೆ ಸತಯಾಸಿದ್ದಾರೆ. ವೈದ್ಯರಾಗಿ ಮುಂದುವರಿಯುವುದಕ್ಕೂ ಕಿರಿಕಿರಿ ಕೊಡುತ್ತಾರೆ ಎಂದು ವೈದ್ಯರು ಮುಕ್ತವಾಗಿ ದೂರಿದರು.
ಮೂರು ವರ್ಷಗಳಿಂದ ಇಬ್ಬರು ವೈದ್ಯರು ಕೆಲಸ ಮಾಡದೆ ವೇತನ ಪಡೆಯುತ್ತಿದ್ದಾರೆ ಎಂಬ ಸಂಗತಿಯೂ ಸಭೆಯಲ್ಲಿ ಹೊರಬಿದ್ದಿತು. ನಿರ್ದೇಶಕರ ವಿರುದ್ಧ ಸಂದೀಪ ಎನ್ನುವ ಹಿರಿಯ ವಿದ್ಯಾರ್ಥಿ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದನು. ಇದೇ ಕಾರಣಕ್ಕೆ, ಅರ್ಹತೆ ಇದ್ದರೂ ತನ್ನನ್ನು ನೇಮಕಾತಿ ಮಾಡಿಕೊಳ್ಳುತ್ತಿಲ್ಲ ಎಂದು ಸಂದೀಪ ದಾಖಲೆ ಸಮೇತ ಸಾಬೀತು ಮಾಡಿದರು.
ಸಚಿವರು ಹೇಳಿದ್ದೇನು?
ಕಾರವಾರ ಕ್ರಿಮ್ಸ್ ಅವ್ಯವಸ್ಥೆಯನ್ನು ಆದಷ್ಟು ಬೇಗನೆ ಸರಿಪಡಿಸಿಕೊಳ್ಳಬೇಕು. ಇನ್ನೊಂದು ತಿಂಗಳಿನಲ್ಲಿ ಪುನಃ ಸಭೆ ನಡೆಸುತ್ತೇವೆ,ಅಷ್ಟರೊಳಗೆ ಸಮಸ್ಯೆ ಬಗೆಹರಿಸಲು ಕ್ರಮ ಜರುಗಿಸದಿದ್ದರೆ ನಿರ್ದೇಶಕರು, ಸಂಬಂಧಪಟ್ಟ ಅಧಿಕಾರಿಗಳು ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಎಚ್ಚರಿಸಿದರು.
ಸಭೆಯ ಸಂದರ್ಭದಲ್ಲಿ ಹಲವು ವೈದ್ಯರು ಸಮಸ್ಯೆಗಳ ಬಗ್ಗೆ ದೂರು ನೀಡಿದರು. ಕ್ರಿಮ್ಸ್ ನಿರ್ದೇಶಕ ಡಾ.ಗಜಾನನ ನಾಯಕ ವಿರುದ್ಧವೇ ಬಹುತೇಕ ದೂರುಗಳು ಸಲ್ಲಿಕೆಯಾದವು.
ವಿಭಾಗ ಮುಖ್ಯಸ್ಥ ಹುದ್ದೆಗೆ ಆದೇಶ ನೀಡುತ್ತಿಲ್ಲ. ಅಗತ್ಯವಿರುವ ಸಲಕರಣೆಗಳನ್ನು ಖರೀದಿಸಲು ಒಪ್ಪಿಗೆ ಸಿಗುತ್ತಿಲ್ಲ. ನಿರ್ದೇಶಕರು ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಡಾ.ಹೇಮಗಿರಿ, ಡಾ.ಸವಿತಾ ರವರು ಸಚಿವರ ಮುಂದೆ ಸಮಸ್ಯೆ ಯನ್ನು ತಿಳಿಸಿದರು.
ಇನ್ನು ಸಂಸ್ಥೆಯಲ್ಲೇ ಹಿರಿಯರಾಗಿರುವ ತನಗೆ ಯಾವುದೇ ಸಭೆಗೆ ಆಹ್ವಾನಿಸುತ್ತಿಲ್ಲ. ಅನಗತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ಡಾ.ಪೂರ್ಣಿಮಾ ಆರೋಪಿಸಿದರು.
ದೂರುಗಳ ಕುರಿತು ನಿರ್ದೇಶಕ ಡಾ.ಗಜಾನನ ನಾಯಕ ಸಮಜಾಯಿಷಿ ನೀಡಲು ಮುಂದಾದರೂ ಸಚಿವರು, ಶಾಸಕ ಸತೀಶ ಸೈಲ್ ಅದಕ್ಕೆ ಅವಕಾಶ ನೀಡಲಿಲ್ಲ. ಸಂಸ್ಥೆಯಲ್ಲಿನ ಅವ್ಯವಸ್ಥೆಗಳ ಕುರಿತು ಅಸಮಾಧಾನ ಹೊರಹಾಕಿದರು.
ಆಸ್ಪತ್ರೆಗೆ ಎಂ.ಆರ್.ಐ ಸ್ಕ್ಯಾನಿಂಗ್ ಯಂತ್ರದ ಅಗತ್ಯವಿದೆ. ನರರೋಗ ತಜ್ಞರು, ಪ್ಲಾಸ್ಟಿಕ್ ಸರ್ಜರಿ ಮಾಡಬಲ್ಲ ನುರಿತ ವೈದ್ಯರ ನೇಮಕಾತಿ ಆಗಬೇಕಿದೆ ಎಂದು ವೈದ್ಯ ಡಾ.ಮಧುಕರ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಂಕಾಳ ವೈದ್ಯ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಪಾದಯಾತ್ರೆ ಆರಂಭವಾಗಿದೆ. ಕ್ರಿಮ್ಸ್ ಸೌಲಭ್ಯ ಹೆಚ್ಚಿಸಿ ಇದನ್ನೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಪರಿವರ್ತಿಸಬೇಕಾಗಿದೆ. ಸಂಸ್ಥೆಗೆ ಎಂ.ಆರ್.ಐ ಸ್ಕ್ಯಾನಿಂಗ್ ಯಂತ್ರ ಒದಗಿಸಲಾಗುವುದು. ಈಗಾಗಲೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ ಎಂದರು.
ಸಂಸ್ಥೆಯ ಗವರ್ನಿಂಗ್ ಕೌನ್ಸಿಲ್ ರಚನೆ ಸರಿಯಾಗಿಲ್ಲ. ಎಸ್.ಸಿ, ಎಸ್.ಟಿ ವಿದ್ಯಾರ್ಥಿಗಳಿಗೆ ಸೌಲಭ್ಯಗಳು ತಲುಪುತ್ತಿಲ್ಲ ಎಂಬ ದೂರುಗಳಿವೆ. ಟೆಂಡರ್ ಪ್ರಕ್ರಿಯೆ ಸೇರಿದಂತೆ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಶಾಸಕ ಸತೀಶ ಸೈಲ್ ಆಕ್ಷೇಪಿಸಿದರು.
ಟೆಂಡರ್ ಪ್ರಕ್ರಿಯೆ ಕುರಿತು ಮಾಹಿತಿ ನೀಡದ ನಿರ್ದೇಶಕ, ಆಡಳಿತಾಧಿಕಾರಿಯನ್ನು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತರಾಟೆ ತೆಗೆದುಕೊಂಡರು. ಇನ್ನು ಡೀನ್ ಎದುರು ಸಮಸ್ಯೆ ಹೇಳಿಕೊಳ್ಳಲು ಹಿಂಜರಿಯುವ ಕ್ರಿಮ್ಸ್ ಸಂಸ್ಥೆಯ ವೈದ್ಯರು ತಮ್ಮ ದೂರುಗಳನ್ನು ಇಮೇಲ್ ಮೂಲಕ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಸಭೆಯಲ್ಲಿ ಕ್ರಿಮ್ಸ್ ನಿರ್ದೇಶಕ ಡಾ.ಗಜಾನನ ನಾಯಕ, ಆಡಳಿತಾಧಿಕಾರಿ ಟಿ.ಸಿ.ಹಾದಿಮನಿ, ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತಲಕರ್, ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗೀಸ್ ಸಭೆ ಯಲ್ಲಿ ಭಾಗಿಯಾಗಿದ್ದರು.
ಇನ್ನು ಮೆಡಿಕಲ್ ಕಾಲೇಜಿನ ಅವ್ಯವಸ್ಥೆ ವೆಷ್ಟಿತ್ತೆಂದರೇ ಜಿಲ್ಲಾ ಆರೋಗ್ಯಾಧಿಕಾರಿಗಳಿಗೂ ಸಹ ಸಭೆಯ ಮಾಹಿತಿವನೀಡಿಲ್ಲ. ಹಲವು ಅಧಿಕಾರಿಗಳಿಗೆ ಮಾಹಿತಿ ಇಲ್ಲದೇ ಸಭೆಗೆ ಗೈರಾದ್ದು ಕಂಡುಬಂದಿತ್ತು.
ಇನ್ನಾದರೂ ಅಂಕು ಡೊಂಕಿನ ಆಡಳಿತ ನಡೆಸುತ್ತಿರುವ ಮೆಡಿಕಲ್ ಕಾಲೇಜಿನ ಅಷ್ಟ ಶನಿಗಳು ತೊಲಗುತ್ತಾರಾ ಅಥವಾ ಬಿಸಿ ನೋಟು ಕೊಟ್ಟು ಎಲ್ಲಾ ತಣ್ಣಗೆ ಮಾಡಿ ಮತ್ತೆ ಕೂರುತ್ತಾರ ಎಂಬುದು ಮಾತ್ರ ಯಕ್ಷ ಪ್ರಶ್ನೆಯಾಗಿದ್ದು, ಸಚಿವರೇ ಹೇಳಿದಂತೆ ನಮ್ಮ ಬಳಿ ದುಡ್ಡಿಲ್ಲ ,ತಲೆ ಇದೆ ಸರಿ ಮಾಡುತ್ತೇನೆ ಎನ್ನುವ ಇವರು ಮೆಡಿಕಲ್ ಕಾಲೇಜನ್ನು ಸರಿಪಡಿಸಿ ಇಲ್ಲಿನ ಬ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತಾರ ಎಂಬುದನ್ನು ಕಾದು ನೋಡಬೇಕಿದೆ.






