
ಕಾರವಾರ:- ಸ್ಪರ್ಧಾತ್ಮಕ ಪರೀಕ್ಷೆ , (competitive exam )ದಿನ ಆಸಕ್ತಿ ಇರುವ ಬಡ ವಿದ್ಯಾರ್ಥಿಗಳಿಗಾಗಿ ರಾಜ್ಯದಲ್ಲೇ ಮೊದಲ 24 ಘಂಟೆ ಕಾರ್ಯ ನಿರ್ವಹಿಸುವ ಸಾರ್ವಜನಿಕ ಗ್ರಂಥಾಲಯವನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಪ್ರಾರಂಭಿಸಲಾಗಿದೆ.
ಹೌದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಬಡ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಹಾಯ ಆಗಲಿ ಎಂದು ಸಾರ್ವಜನಿಕ ಗ್ರಂಥಾಲಯವನ್ನು 24 ಘಂಟೆಗಳ ಕಾಲವೂ ತೆರೆದಿಡಲು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ರವರು ಆದೇಶ ಮಾಡಿದ್ದು ಇದೀಗ ಬಡ ವಿದ್ಯಾರ್ಥಿಗಳು ಗ್ರಂಥಾಲಯದಲ್ಲೇ ದಿನವಿಡೀ ಜ್ಞಾನಾರ್ಜನೆ ಮಾಡಬಹುದಾಗಿದೆ.

ರಾಜ್ಯದಲ್ಲೇ ಇದೇ ಮೊದಲಬಾರಿ ಈ ಪ್ರಯತ್ನಕ್ಕೆ ಕಾರವಾರದಲ್ಲಿ ಜಿಲ್ಲಾಡಳಿತ ಮುನ್ನುಡಿ ಬರೆದಿದೆ. ಸಾರ್ವಜನಿಕ ಗ್ರಂಥಾಲಯ ಇದೀಗ ಸರ್ಕಾರಿ ರಜೆ ಹೊರತುಪಡಿಸಿ ದಿನದ 24 ತಾಸುಗಳು ಕಾರ್ಯ ನಿರ್ವಹಿಸುತಿದ್ದು ಇದಕ್ಕಾಗಿ ಹೊರ ಗುತ್ತಿಗೆಯ ಸಿಬ್ಬಂದಿಗಳನ್ನು ಸಹ ನೇಮಕ ಮಾಡಲಾಗಿದೆ.
ಬಡ ವಿದ್ಯಾರ್ಥಿಗಳು ಓದಿನ ಜೊತೆ ಕೆಲಸಕ್ಕೆ ಹೋಗುತ್ತಾರೆ. ರಾತ್ರಿವೇಳೆ ಸಮಯ ಸಿಗುತ್ತದೆಯಾದರೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಪುಸ್ತಕಗಳನ್ನು ಕೊಂಡುಕೊಂಡು ತಯಾರಿ ನಡೆಸುವುದು ಕಷ್ಟಕರ ಹೀಗಾಗಿ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಇದೀಗ 24 ತಾಸುಗಳು ಸಾರ್ವಜನಿಕ ಗ್ರಂಥಾಲಯ ತೆರೆದಿದ್ದು, 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿ ದಿನ ರಾತ್ರಿ ಒಂದು ಘಂಟೆಯವರೆಗೂ ಗ್ರಂಥಾಲಯಕ್ಕೆ ಆಗಮಿಸಿ ಜ್ಞಾನಾರ್ಜನೆಯಲ್ಲಿ ತಲ್ಲೀನರಾಗುತಿದ್ದಾರೆ. ಬೆಳಗ್ಗೆ ಕೆಲಸಕ್ಕೆ ಹೋಗಿ ಸಂಜೆ ನಂತರ ಬಿಡುವು ಸಿಕ್ಕಾಗ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಓದಲು ಸಮಯ ಸಿಗುತ್ತಿದೆ ,ಆದ್ರೆ ನಮಗೆ ಬೇಕಾದ ಪುಸ್ತಕ ಕೊಂಡುಕೊಳ್ಳುವುದೇ ಕಷ್ಟ. ಇದೀಗ ಗ್ರಂಥಾಲಯ ದಿನವಿಡೀ ತೆರದಿರುವುದರಿಂದ ಸಾಕಷ್ಟು ಅನುಕೂಲ ಆಗಿದೆ ನಮಗೆ ಬೇಕಾದ ಪುಸ್ತಕಗಳು ಸಹ ಇಲ್ಲಿಯೇ ಸಿಗೋದ್ರಿದಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಹಾಯ ಆಗಿದೆ ಎನ್ನುತ್ತಾರೆ ಗ್ರಂಥಾಲಯ ಬಳಕೆ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿ ಸಂದೇಶ್ ನಾಯಕ್.

ಸದ್ಯ ರಾಜ್ಯದಲ್ಲೇ ಮೊದಲ 24 ತಾಸುಗಳೂ ತೆರದಿರುವ ಜಿಲ್ಲಾ ಗ್ರಂಥಾಲಯ ಕಾರವಾರದ ಸಾರ್ವಜನಿಕ ಗ್ರಂಥಾಲಯವಾಗಿದ್ದು ವಿದ್ಯಾರ್ಥಿಗಳು ಎಲ್ಲಿಯವರೆಗೆ ರಾತ್ರಿಇಡೀ ಓದಲು ಗ್ರಂಥಾಲಯಕ್ಕೆ ಆಗಮಿಸುತ್ತಾರೋ ಅಲ್ಲಿಯವರೆಗೆ ತೆರದಿಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಇದರಿಂದ ಬಡ ವಿದ್ಯಾರ್ಥಿಗಳಿಗೆ ಸಹಾಯ ಆಗಲಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್.
ಒಟ್ಟಿನಲ್ಲಿ ನಿಗದಿ ಸಮಯದ ನಂತರವೂ ಸಾರ್ವಜನಿಕ ಗ್ರಂಥಾಲಯ ತೆರದಿರುವುದರಿಂದ ಅದೆಷ್ಟೋ ವಿದ್ಯಾರ್ಥಿಗಳಿಗೆ ಅನುಕೂಲ ಆಗುತಿದ್ದು ರಾಜ್ಯಾದ್ಯಂತ ಈ ರೀತಿ ಅವಕಾಶ ಮಾಡಿಕೊಟ್ಟರೇ ಅನುಕೂಲ ಆಗಲಿದೆ ಎನ್ನುತ್ತಾರೆ ಇದರ ಬಳಕೆ ಮಾಡಿದವರು.






