ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ (Bhatkal) ನಗರದ ಹಿಂದೂ ಕಾರ್ಯಕರ್ತ ಹನುಮಾನ್ ನಗರದ ಶ್ರೀನಿವಾಸ ನಾಯ್ಕ ಅವರನ್ನು ಉತ್ತರ ಕನ್ನಡ ಜಿಲ್ಲೆಯಿಂದ ಗಡಿಪಾರು (Deportion)ಮಾಡಲು ಜಿಲ್ಲಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.
ಜಿಲ್ಲಾ ದಂಡಾಧಿಕಾರಿರವರ ನ್ಯಾಯಾಲಯದಲ್ಲಿ (court) ಏ.4ರಂದು ಮಧ್ಯಾಹ್ನ 3 ಗಂಟೆಗೆ ಪ್ರಕರಣದ ವಿಚಾರಣೆ ನಿಗದಿಪಡಿಸಲಾಗಿದೆ.
ನ್ಯಾಯಾಲಯಕ್ಕೆ ಹಾಜುರಾಗಿ ಅಥವಾ ವಕೀಲರ ಮೂಲಕ ಪೊಲೀಸ್ ಅಧೀಕ್ಷಕರ ವರದಿಯಲ್ಲಿನ ಆಪಾದನೆಗೆ ಸಮಜಾಯಿಷಿ ನೀಡುವಂತೆ ಜಿಲ್ಲಾ ದಂಡಾಧಿಕಾರಿಗಳು ಹೊರಡಿಸಿದ ನೋಟಿಸ್ ನಲ್ಲಿ ಸೂಚಿಸಲಾಗಿದೆ.
ಶ್ರೀನಿವಾಸ ನಾಯ್ಕ ಯಾರು? ಈತನ ಮೇಲೆ ಇರುವ ಆರೋಪ ಏನು?
ಭಟ್ಕಳ ಶಹರದ ಹನುಮಾನ ನಗರ ನಿವಾಸಿಯಾಗಿರುವ ಶ್ರೀನಿವಾಸ ನಾಯ್ಕ ಹಿಂದೂ ಪರ ಸಂಘಟನೆಗಳ ಸಕ್ರಿಯ ಕಾರ್ಯಕರ್ತನಾಗಿದ್ದಾನೆ.
ಭಟ್ಕಳದ ಹಿಂದೂ ಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ಇವರು ಇತ್ತೀಚೆಗೆ ನಡೆದ ತೆಂಗಿನಗುಂಡಿ ಧ್ವಜ ಗಲಾಟೆಯಲ್ಲಿ ಮುಂಚೂಣಿಯಲ್ಲಿದ್ದರು.
ಇದನ್ನೂ ಓದಿ:-Bhatkal|ಸಂಸದ ಹೆಗಡೆ ಸೇರಿ 21 ಜನರ ಮೇಲೆ ಪ್ರಕರಣ ದಾಖಲು ಕಾರಣ ಏನು?
ಭಟ್ಕಳದಲ್ಲಿ 2017 ರ ಪುರಸಭೆಯ ಅಂಗಡಿ ತೆರವು ಕಾರ್ಯಾಚರಣೆ ವಿರುದ್ಧ ನಡೆದ ಪ್ರತಿಭಟನೆ ಸಂದರ್ಭ ಗಲಾಟೆ ಸಹಿತ ಐದು ಕ್ರಿಮಿನಲ್ ಪ್ರಕರಣಗಳು ಭಟ್ಕಳ ಠಾಣೆಯಲ್ಲಿ ಇವರ ವಿರುದ್ಧ ದಾಖಲಾಗಿವೆ.
ಗಡಿಪಾರಿಗೇಕೆ ಶಿಪಾರಸ್ಸು?
ಮೊನ್ನೆ ನಡೆದ ತೆಂಗಿನ ಗುಂಡಿ ಧ್ವಜ ಗಲಾಟೆ ಸೇರಿದಂತೆ ಹಲವು ಸಂಘರ್ಷಗಳಲ್ಲಿ ಈತ ಸಕ್ರಿಯ ಭಾಗವಹಿಸಿದ್ದು ಪ್ರಚೋಧನಕಾರಿ ಮಾತುಗಳು,ಗಲಾಟೆ ಮಾಡಿರುವ ಕುರಿತು ಪೊಲೀಸ್ ಇಲಾಖೆ ವರದಿ ಸಿದ್ದಪಡಿಸಿದೆ.
ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗವಹಿಸದಂತೆ ಹಲವಾರು ಬಾರಿ ಎಚ್ಚರಿಕೆ ನೀಡಿ ಸೂಚಿಸಿದ್ದಾಗ್ಯೂ ಪ್ರಯೋಜನವಾಗಿಲ್ಲ, ಭಟ್ಕಳ ಮತೀಯವಾಗಿ ಸೂಕ್ಷ್ಮ ಪ್ರದೇಶವಾಗಿದ್ದರಿಂದ ಇವರ ಕಾನೂನು ಬಾಹಿರ ಚಟುವಟಿಕೆಯಿಂದ
ಮುಂದಿನ ದಿನಗಳಲ್ಲಿ ಕೋಮು ಗಲಭೆಯಂತಹ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ.
ಇದನ್ನೂ ಓದಿ:-ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ|ಭಟ್ಕಳದಲ್ಲಿ NIA ದಾಳಿ
ಇವರ ಕೃತ್ಯದಿಂದ ಭಟ್ಕಳ ನಗರದಾದ್ಯಂತ ಭಯದ ವಾತಾವರಣ ಸೃಷ್ಟಿಯಾಗಿದೆ. ಸಾರ್ವಜನಿಕ ಹಿತ ದೃಷ್ಟಿಯಿಂದ, ಸಮಾಜದ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ, ಸಮಾಜದಲ್ಲಿ ರೌಡಿ ಚಟುವಟಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಇವರನ್ನು ಉತ್ತರ ಕನ್ನಡ ಜಿಲ್ಲೆಗೆ ಪ್ರವೇಶಿಸದಂತೆ ಒಂದು ವರ್ಷ ಕಾಲ ಗಡಿಪಾರು ಮಾಡುವಂತೆ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ರವರು ಜಿಲ್ಲಾಧಿಕಾರಿಗೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಶ್ರೀನಿವಾಸ ನಾಯ್ಕ ಅವರನ್ನು ಗಡಿಪಾರು ಮಾಡುವ ಬಗ್ಗೆ ಕಳೆದ ಮಾ.18 ರಂದು ಜಿಲ್ಲಾಧಿಕಾರಿಯವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು.
ಅದರ ಮರುದಿನವೇ ಮಾ.19ರಂದು ಜಿಲ್ಲಾಧಿಕಾರಿಯವರು ಶ್ರೀನಿವಾಸ ನಾಯ್ಕರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಪ್ರಸ್ತಾವನೆಯಲ್ಲಿ ತಿಳಿಸಿರುವಂತೆ ಶ್ರೀನಿವಾಸ ನಾಯ್ಕ ವಿರುದ್ಧ ಐದು ಕ್ರಮಿನಲ್ ಪ್ರಕರಣ ದಾಖಲಾಗಿದ್ದವು. ಈ ಪೈಕಿ ಮೂರರಲ್ಲಿ ಖುಲಾಸೆಯಾಗಿದ್ದಾರೆ. ಒಂದು ಪ್ರಕರಣ ನ್ಯಾಯಾಲಯದಲ್ಲಿದ್ದರೆ, ಇನ್ನೊಂದು ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಇದಲ್ಲದೆ ನಾಲ್ಕು ಬಾರಿ ಪ್ರತಿಬಂಧಕ ಕಾನೂನಿನಡಿ ತಹಶೀಲ್ದಾರರು ಕ್ರಮ ಕೈಗೊಂಡಿದ್ದಾರೆ.
ಸದ್ಯ ಚುನಾವಣೆ ಪ್ರಕ್ರಿಯೆ ಹಿನ್ನಲೆಯಲ್ಲಿ ಜಿಲ್ಲೆಯ ಹಲವು ಭಾಗದಲ್ಲಿನ ರೌಡಿ ಶೀಟರ್, ಗಲಭೆ ಎಬ್ಬಿಸುವವರ ಕುರಿತು ಪೊಲೀಸ್ ಇಲಾಖೆ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಕೆ ಮಾಡಿದ್ದು ಇದೀಗ ಇದೇ ಮೊದಲ ಬಾರಿ ಭಟ್ಕಳದ ಹಿಂದೂಪರ ಹೋರಾಟಗಾರನನ್ನು ಗಡಿಪಾರಿಗೆ ಆದೇಶ ಮಾಡಿರುವುದು ಭಟ್ಕಳದಲ್ಲಿ ಹಿಂದೂಪರ ಕಾರ್ಯಕರ್ತರಲ್ಲಿ ಆಕ್ರೋಶ ಬುಗಿಲೇಳುವಂತೆ ಮಾಡಿದೆ.






