
Uttara kannada |ಗೋಕರ್ಣ, ಸ್ವರ್ಣವಲ್ಲಿಯಲ್ಲಿ ದೀಪೋತ್ಸವ- ವಿಡಿಯೋ ನೋಡಿ
ಕಾರವಾರ :- ಉತ್ತರ ಕನ್ನಡ (uttara kannada )ಜಿಲ್ಲೆಯ ಕುಮಟಾ ತಾಲೂಕಿನ ಪುರಾಣ ಪ್ರಸಿದ್ಧ ಗೋಕರ್ಣದಲ್ಲಿ ಮಹಾಬಲೇಶ್ವರ ದೇವಾಲಯದ ತ್ರಿಪುರಾಖ್ಯ ದೀಪೋತ್ಸವ ವನ್ನು ವಿಜೃಂಭಣೆಯಿಂದ ನೇರವೇರಿಸಲಾಯಿತು.
ಇದರ ಪ್ರಯುಕ್ತ ಮಧ್ಯಾಹ್ನ ಮಂದಿರದಲ್ಲಿ ಲಕ್ಷಬಿಲ್ವಾರ್ಚನೆ, ಬಿಲ್ಚಾರ್ಚನಾ ಹವನ ನೈಮಿತ್ತಕ ಬಲಿ ನಡಯಿತು. ಬಳಿಕ ಇಲ್ಲಿಂದ ಮೂರು ಕಿ.ಮೀ. ದೂರದಲ್ಲಿ ಭೀಮಕೊಂಡಕ್ಕೆ ತೆರಳಿ ಭೀಮೇಶ್ವರ ಮತ್ತು ಜನಾರ್ಧನ ಸನ್ನಿದಿಯಲ್ಲಿ ದಾತ್ರಿ ಹೋಮ ಮತ್ತಿತರ ದೈವಿಕ ಕಾರ್ಯ ನೆರವೇರಿತು. ಈ ಭಾಗದ ಹಾಲಕ್ಕಿ ಸಮಾಜದವರು ದೇವರಿಗೆ ಫಲ ಸಮರ್ಪಿಸಿದರು. ನಂತರ ಇಲ್ಲಿಯೆ ಅಡುಗೆ ತಯಾರಿಸಿ ದೇವರಿಗೆ ವಿಶೇಷ ವಡೆ, ಪಾಯಸ ನೈವೇದ್ಯ ಮಾಡಿ ನಂತರ ಭಕ್ತರಿಗೆ ಪ್ರಸಾದ ಭೋಜನ ನೀಡುವುದರೊಂದಿಗೆ ವನಭೋಜನ ನೆರವೇರಿತು. ಸಂಜೆ ಶ್ರೀದೇವರ ಉತ್ಸವ ಕೋಟಿತೀರ್ಥಕಟ್ಟೆಯ ಪಟ್ಟೆ ವಿನಾಯಕ ಮಂದಿರ, ವಾದಿರಾಜ ಮಠ, ಹನುಮಂತೇಶ್ವರ ದೇವಾಲಯಕ್ಕೆ ಆಗಮಿಸಿ ರಾಜೋಪಚಾರ ಪೂಜೆ ಸ್ವೀಕರಿಸಿ ರಥಬೀದಿಯ ವೆಂಕಟ್ರಮಣ ದೇವಾಲಯದ ಬಳಿ ಬಂದ ಉತ್ಸವ ಇಲ್ಲಿಂದ ಬೆಳ್ಳಿರಥದಲ್ಲಿ ಶ್ರೀದೇವರು ಮಂದಿರಕ್ಕೆ ಮರಳಿತು. ಉತ್ಸವ ಪ್ರವೇಶವಾಗುತ್ತಿರುವಂತೆ ಮಂದಿರದ ಸುತ್ತ ಹಾಗೂ ಶಿಖರಕ್ಕೆ ಹಣತೆಯಿಂದ ದೀಪ ಬೆಳಗುವುದರೊಂದಿಗೆ ಲಕ್ಷ ದೀಪೋತ್ಸವ ನೆರವೇರಿತು.ರಾತ್ರಿ ಕೋಟಿತೀರ್ಥದಲ್ಲಿ ಜಲಾಯನ ಉತ್ಸವ, ತೆಪ್ಪೋತ್ಸವ ಹಾಗೂ ರಥಬೀದಿಯಲ್ಲಿ ರಥೋತ್ಸವ ಜರುಗಿತು. ಅರ್ಚಕ ವೇ. ಗುರು ಹಿರೇ ಪೂಜಾ ಕೈಂಕರ್ಯ ನೆರವೇರಿಸಿದರು. ಈ ವೇಳೆ ಮಂದಿರದ ಮೇಲಸ್ತುವಾರಿ ಸಮಿತಿ ಸದಸ್ಯರು, ವ್ಯವಸ್ಥಾಪಕರು ಸಿಬ್ಬಂದಿ ಊರಿನ ಜನರು ಸೇರಿದಂತೆ ರಾಜ್ಯ ಮತ್ತು ಹೊರರಾಜ್ಯದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ರಾವಣನಿಂದ ಪರಶಿವನ ಆತ್ಮಲಿಂಗವನ್ನ ಪಡೆದ ವಟುರೂಪಿ ಗಣೇಶ ಭೂಮಿಯಲ್ಲಿ ಇಟ್ಟು ರಾವಣ ಗರ್ವಭಂಗಮಾಡಿದ ಕ್ಷೇತ್ರ ಮಹಿಮೆ ತಿಳಿಸುವ ದೃಶ್ಯ ಭಕ್ತರ ಗಮನ ಸೆಳೆಯಿತು. ಮಂದಿರವನ್ನ ಹೂವಿನಿಂದ ಅಲಂಕರಿಸಲಾಗಿತ್ತು.ನಂದಿ ಮಂಟಪದಲ್ಲಿ ಕಾರ್ಯನಿರ್ವಹಿಸುವ ಉಪಾಧಿ ವೆ ಗಣೇಶ ಜಂಬೆ ಹಾಗೂ ಇವರ ಶಿಷ್ಯ ರಾದ ಯಲ್ಲಾಪುರದ ರಾಮಚಂದ್ರ ಭಟ್ ಹೂವಿನ ಅಲಂಕಾರದ ಸೇವೆ ನೀಡಿದ್ದರು.ಉತ್ಸವ ಬರುವ ಮುಖ್ಯ ಮಾರ್ಗ ರಥಬೀದಿ, ಕೋಟಿತೀರ್ಥಕಟ್ಟೆ ಮತ್ತಿತರ ಕಡೆಯ ನಿವಾಸಿಗಳು ಮಾವಿನ ತೋರಣ, ರಂಗೋಲಿಯಿಂದ ಅಲಂಕರಿಸಿ ದೇವರಿಗೆ ಆರತಿ ನೀಡಿ ವಂದಿಸಿದರು.
ಸ್ವರ್ಣವಲ್ಲಿಯಲ್ಲಿ ತ್ರಿಪುರಾಖ್ಯ ದೀಪೋತ್ಸವ ವಿಡಿಯೋ ನೋಡಿ.
ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಕಾರ್ತೀಕ ಹುಣ್ಣಿಮೆ ಹಿನ್ನೆಲೆಯಲ್ಲಿ ತ್ರಿಪುರಾಖ್ಯ ದೀಪೋತ್ಸವ ನಡೆಯಿತು.
ಮುಂಜಾನೆ ಲಕ್ಷ್ಮೀನೃಸಿಂಹ ಹವನ, ಆಯುತವರ್ತಿ ದೀಪೋತ್ಸವ ಹವನ ವೈದಿಕರಿಂದ ನಡೆಯಿತು. ರಾತ್ರಿ 10 ಸಾವಿರ ದೀಪಗಳ ದೀಪೋತ್ಸವ, ಪುಷ್ಪ ರಥೋತ್ಸವ, ಶ್ರೀದೇವರಿಗೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮಗಳು ನಡೆದವು.Uttara kannada| ತಾಲೂಕು ಪಂಚಾಯಿತಿ ಮೀಸಲಾತಿ ಅಂತಿಮ ಪಟ್ಟಿ ಪ್ರಕಟ; 8 ಕ್ಷೇತ್ರಗಳ ಮೀಸಲಾತಿಯಲ್ಲಿ ಬದಲಾವಣೆ
ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು, ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳು ದೀಪೋತ್ಸವಕ್ಕೆ ಚಾಲನೆ ನೀಡಿದರು. ಮಠದ ಪ್ರಾಂಗಣವು ಹಣತೆ ಬೆಳಕಿನಲ್ಲಿ ಬೆಳಗಿದವು. ಶ್ರೀಮಠದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಸತೀಶ ಹೆಗಡೆ ಹುಳಗೋಳ, ಆಡಳಿತ ಮಂಡಳಿ ಪ್ರಮುಖರು, ವೈದಿಕರು, ಶಿಷ್ಯ ಭಕ್ತರು ಇತರರು ಇದ್ದರು.






