Shivamogga | ಉಡಾನ್ 6.0 ಯೋಜನೆಗೆ ಶಿವಮೊಗ್ಗ ವಿಮಾನ ನಿಲ್ದಾಣ ಸೇರ್ಪಡೆ; ಫೆಬ್ರವರಿ ಅಥವಾ ಮಾರ್ಚ್ನಲ್ಲಿ ವಿಮಾನ ಹಾರಾಟ ಪುನರಾರಂಭ?
ಶಿವಮೊಗ್ಗ: ಶಿವಮೊಗ್ಗ (shivamogga)ವಿಮಾನ ನಿಲ್ದಾಣದಿಂದ ಸ್ಥಗಿತಗೊಂಡಿರುವ ವಿಮಾನಯಾನ ಸೇವೆ ಮತ್ತೆ ಆರಂಭವಾಗುವ ನಿರೀಕ್ಷೆ ಮೂಡಿದೆ. ಕೇಂದ್ರ ಸರ್ಕಾರದ ಉಡಾನ್ 6.0 ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಸೇರ್ಪಡೆ ಮಾಡಲಾಗಿದೆ. ಫೆಬ್ರವರಿ ಅಥವಾ ಮಾರ್ಚ್ ವೇಳೆಗೆ ವಿಮಾನ ಸೇವೆ ಪುನರಾರಂಭವಾಗುವ ಸಾಧ್ಯತೆಯಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.Shivamogga |ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ ಹೆಸರು ಬರೆದು, ನಿದ್ರೆ ಮಾತ್ರೆಗಳನ್ನು ನುಂಗಿದ ಮಹಿಳೆ
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ವಿಮಾನ ನಿಲ್ದಾಣದ ವಿಮಾನಯಾನ ಸೇವೆ ಪುನರಾರಂಭಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡರು.
ಉಡಾನ್ 6.0 ಯೋಜನೆಯಡಿ ಟೆಂಡರ್
ಕೇಂದ್ರ ಸರ್ಕಾರದ ಉಡಾನ್ 6.0 ಯೋಜನೆಯಡಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಟೆಂಡರ್ ಕರೆಯಲಾಗಿದೆ. ಡಿಸೆಂಬರ್ 31ರವರೆಗೆ ವಿಮಾನಯಾನ ಸಂಸ್ಥೆಗಳು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿದೆ. ಈ ಬಾರಿ ನಿರ್ದಿಷ್ಟ ಮಾರ್ಗಗಳ ನಿರ್ಬಂಧವಿಲ್ಲ. ವಿಮಾನಯಾನ ಸಂಸ್ಥೆಗಳು ತಮ್ಮ ಆಯ್ಕೆಯ ಯಾವುದೇ ಮಾರ್ಗದಲ್ಲಿ ಶಿವಮೊಗ್ಗದಿಂದ ವಿಮಾನ ಸೇವೆ ಆರಂಭಿಸಬಹುದಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡಲಿದೆ ಎಂದು ರಾಘವೇಂದ್ರ ತಿಳಿಸಿದರು.
ಈಗಾಗಲೇ ಮೂರು ಪ್ರಮುಖ ವಿಮಾನಯಾನ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಬೆಂಗಳೂರು, ಹೈದರಾಬಾದ್ಗೆ ತಾತ್ಕಾಲಿಕ ವಿಮಾನ ಸೇವೆಗೆ ಮನವಿ
ಉಡಾನ್ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ವಿಮಾನ ಸೇವೆ ಆರಂಭವಾಗಲು ಫೆಬ್ರವರಿ ಅಥವಾ ಮಾರ್ಚ್ವರೆಗೆ ಸಮಯ ಹಿಡಿಯುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮಧ್ಯಂತರ ಮೂರು-ನಾಲ್ಕು ತಿಂಗಳ ಅವಧಿಗೆ ಶಿವಮೊಗ್ಗದಿಂದ ಬೆಂಗಳೂರು ಹಾಗೂ ಹೈದರಾಬಾದ್ಗೆ ತಾತ್ಕಾಲಿಕ ವಿಮಾನ ಸೇವೆ ಒದಗಿಸಲು ರಾಜ್ಯ ಸರ್ಕಾರ ನೆರವು ನೀಡಬೇಕು ಎಂದು ಸಂಸದರು ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರ ತನ್ನ ವಯಬಿಲಿಟಿ ಗ್ಯಾಪ್ ಫಂಡಿಂಗ್ (VGF) ಯೋಜನೆಯಡಿ ವಿಮಾನಯಾನ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಸೇವೆ ಪುನರಾರಂಭಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಮುಂದಿನ ಐದು ವರ್ಷ ವಿಮಾನ ಸೇವೆಗೆ ಆತಂಕವಿಲ್ಲ!
ಈ ಹಿಂದೆ ಉಡಾನ್ ಒಪ್ಪಂದ ಮುಕ್ತಾಯಗೊಂಡ ಬಳಿಕ ಕಮರ್ಷಿಯಲ್ ಬ್ರೇಕ್ ನಿಯಮದಿಂದಾಗಿ ವಿಮಾನಯಾನ ಸೇವೆಯಲ್ಲಿ ವ್ಯತ್ಯಯ ಉಂಟಾಗುತ್ತಿತ್ತು. ಆದರೆ ಈ ಬಾರಿ ಅಂತಹ ಯಾವುದೇ ತೊಡಕು ಇರುವುದಿಲ್ಲ. ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಮುಂದಿನ ಐದು ವರ್ಷಗಳ ಕಾಲ ನಿರಂತರವಾಗಿ ವಿಮಾನ ಸೇವೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಒಟ್ಟಿನಲ್ಲಿ, ಉಡಾನ್ 6.0 ಯೋಜನೆಯಡಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹೊಸ ವಿಮಾನಯಾನ ಸಂಸ್ಥೆಗಳು ಲಭ್ಯವಾದರೆ ಮಲೆನಾಡು ಭಾಗದ ಜನರಿಗೆ ಬೆಂಗಳೂರು, ಹೈದರಾಬಾದ್ ಸೇರಿದಂತೆ ವಿವಿಧ ನಗರಗಳಿಗೆ ಪ್ರಯಾಣಿಸಲು ಅನುಕೂಲವಾಗಲಿದೆ. ಇದೀಗ ವಿಮಾನಯಾನ ಸೇವೆ ಪುನರಾರಂಭದ ನಿರೀಕ್ಷೆಯಲ್ಲಿ ಶಿವಮೊಗ್ಗ ಜಿಲ್ಲೆಯ ಜನರಿದ್ದಾರೆ.






