
Karwar | ದಿಶಾ ಸಭೆಯಲ್ಲಿ ವಂದೇ ಮಾತರಂ ಗೀತೆ ಹಾಡುವ ವೇಳೆ ಗೊಂದಲ; ಪೂರ್ಣ ಗೀತೆ ಹಾಡಲು ತಡವರಿಸಿದ ಸಂಸದ ಕಾಗೇರಿ
ವಿಡಿಯೋ ನೋಡಿ:-
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ (karwar) ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಭೆಯ ಆರಂಭದಲ್ಲಿ ವಂದೇ ಮಾತರಂ ಗೀತೆ ಹಾಡುವ ವೇಳೆ ಗೊಂದಲ ಉಂಟಾದ ಘಟನೆ ನಡೆದಿದೆ.
ರಾಜ್ಯ ಸರ್ಕಾರದ ನಿಯಮದಂತೆ ವಂದೇ ಮಾತರಂ ಗೀತೆಯ ಎರಡು ಪ್ಯಾರಗಳನ್ನು ಹಾಡಲಾಯಿತು. ಆದರೆ ಎರಡು ಪ್ಯಾರಗಳು ಮುಗಿದ ಬಳಿಕ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮುಂದಿನ ಪ್ಯಾರವನ್ನೂ ಹಾಡಲು ಮುಂದಾದರು. ಈ ವೇಳೆ ಗೀತೆಯನ್ನು ಮುಂದುವರಿಸಲು ತಡವರಿಸಿದ ಅವರು, ಸಭೆಯ ನಾಮನಿರ್ದೇಶಿತ ಸದಸ್ಯರಿಗೆ ಹಾಡುವಂತೆ ಸೂಚನೆ ನೀಡಿದರು.
ಆದರೆ ಪೂರ್ಣ ಗೀತೆಯನ್ನು ಹಾಡಲು ಸಾಧ್ಯವಾಗದೆ ಅರ್ಧದಲ್ಲೇ ಗೀತೆಯನ್ನು ಮೊಟಕುಗೊಳಿಸಲಾಯಿತು. ಬಳಿಕ ಅಧಿಕಾರಿಗಳಿಗೆ ಕಿವಿಮಾತು ಹೇಳಿದ ಸಂಸದ ಕಾಗೇರಿ, ತಾವು ಸಂಸದರಾಗಿರುವವರೆಗೂ ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಬೇಕೆಂದು ಬಯಸುವುದಾಗಿ ತಿಳಿಸಿದರು.
ಅಲ್ಲದೆ, ಅಧಿಕಾರಿಗಳು ಹಾಗೂ ಸಭೆಯ ಸದಸ್ಯರು ಕೂಡ ಪೂರ್ಣ ಗೀತೆ ಹಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡುವುದಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.






