Dandeli | ಪ್ರವಾಸಿಗನ ಒಂದು ಧ್ವನಿಗೆ ಓಡೋಡಿ ಬಂತು ಮೊಸಳೆ -ಕೊನೆಗಾಗಿದ್ದೇನು? ವಿಡಿಯೋ ನೋಡಿ.
Dandeli : ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ (dandeli)ತಾಲೂಕಿನ ಪ್ರಸಿದ್ಧ ಮೊಸಳೆ ಪಾರ್ಕ್ ನಲ್ಲಿ ಮೊಸಳೆ ಯೊಂದು ವ್ಯಕ್ತಿಯ ಧ್ವನಿಗೆ ಪ್ರತಿಕ್ರಿಯಿಸಿ ನದಿಯಿಂದ ದಡ ದತ್ತ ಬಂದ ಅಪರೂಪದ ದೃಶ್ಯ ಪ್ರವಾಸಿಗರ ಗಮನ ಸೆಳೆದಿದೆ.ದಾಂಡೇಲಿಯ ಮೊಸಳೆ ಪಾರ್ಕ್‌ಗೆ ಪ್ರತಿದಿನ ನೂರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದು, ಇಲ್ಲಿನ ಮೊಸಳೆಗಳನ್ನು ವೀಕ್ಷಿಸುವುದು ಪ್ರವಾಸಿಗರಿಗೆ ವಿಶೇಷ ಆಕರ್ಷಣೀಯ ಕೇಂದ್ರವಾಗಿದೆ.ಹುಬ್ಬಳ್ಳಿ ಭಾಗದಿಂದ ಬಂದಿದ್ದ ಇಬ್ಬರು ಪ್ರವಾಸಿಗರು ಮೊಸಳೆಗಳನ್ನು ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ, ಮೊಸಳೆಯನ್ನು ಆಕರ್ಷಿಸುವ ರೀತಿಯಲ್ಲಿ ಧ್ವನಿ ಮಾಡಿದ್ದಾರೆ. ಈ ವೇಳೆ ನದಿಯ ದೂರದ ಭಾಗದಲ್ಲಿದ್ದ ಮೊಸಳೆಯೊಂದು ಆ ಧ್ವನಿಯನ್ನು ಕೇಳಿ ನದಿಯ ದಡದತ್ತ ವೇಗವಾಗಿ ಬಂದಿದ್ದು ಈ ಅಪರೂಪದ ದೃಶ್ಯವನ್ನು ಮೊಸಳೆ ಪಾರ್ಕ್‌ನ ಸ್ಥಳೀಯರಾದ ನಾಗರಾಜ್ ಪಾಟೀಲ್ ಎಂಬುವವರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಮೊಸಳೆಯೊಂದು ಧ್ವನಿಗೆ ಪ್ರತಿಕ್ರಿಯಿಸಿ ದಡದತ್ತ ಬರುತ್ತಿರುವ ದೃಶ್ಯ ಇದೀಗ ವೈರಲ್ ಆಗಿದೆ.
ಎಚ್ಚರ ತಪ್ಪಿದರೇ ಆಪತ್ತು!
ದಾಂಡೇಲಿಯ ಮೊಸಳೆ ಪಾರ್ಕ ನಲ್ಲಿ ಈ ಹಿಂದೆ ನದಿಯ ತ್ಯಾಜ್ಯ ತಿಂದು ಬದುಕುತಿದ್ದ ಮೊಸಳೆ ಆಗಾಗ ಮನುಷ್ಯರ ಮೇಲೆಕೂಡ ದಾಳಿ ಮಾಡುತ್ತಿದೆ. ಕೆಲವೊಮ್ಮೆ ಅರಣ್ಯ ಇಲಾಖೆ ಅಳವಡಿಸಿದ ಕಬ್ಬಿಣದ ಸಲಾಕೆಗಳನ್ನ ದಾಟಿ ಬಡಾವಣೆಗೆ ಸಹ ಬಂದ ಉದಾಹರಣೆಗಳಿವೆ. ಇತ್ತೀಚಿಗೆ ಪ್ರವಾಸಿಗರು ಹಾಗೂ ಸ್ಥಳೀಯರು ಮೊಸಳೆಗೆ ಮಾಂಸದ ಆಹಾರ ಸಹ ನೀಡುತಿದ್ದಾರೆ.ಆದರೇ ಮೊಸಳೆಗಳು ಇದೀಗ ಹೆಚ್ಚಾಗಿದ್ದು ಆಹಾರ ಅರಸಿ ಎಲ್ಲೆಂದರಲ್ಲಿ ಬರುತ್ತಿದೆ. ಹೀಗಾಗಿ ವಿಚಿತ್ರ ಧ್ವನಿ ಮಾಡಿ ಮೊಸಳೆ ಬರುವಂತೆ ಮಾಡಿದ ಪ್ರವಾಸಿಗನಿಗೆ ಸ್ಥಳೀಯರು ಬುದ್ದಿ ಹೇಳಿ ಕಳುಹಿಸಿದ್ದಾರೆ. ಕೆಲವು ಪ್ರವಾಸಿಗರು ಮೊಸಳೆ ನೋಡುವ ನೆಪದಲ್ಲಿ ಅವುಗಳಿಗೆ ಅಹಾರ ಹಾಕುವುದು ,ವಿಡಿಯೋ ಮಾಡುವುದನ್ನ ಮಾಡುತಿದ್ದಾರೆ. ಅರಣ್ಯ ಇಲಾಖೆ ಸೂಚನಾ ಫಲಕ ಹಾಕಿದ್ರೂ ಜನ ನದಿ ತಡದಲ್ಲಿ ಹೋಗಿ ಮೊಸಳೆಗಳ ಫೋಟೋ ,ವಿಡಿಯೋ ತೆಗೆಯುತಿದ್ದಾರೆ.ಇನ್ನು ಅಡ್ವೇಂಚರ್ಸ್ ನ ಕೆಲವರು ಈ ಮೊಸಳೆಗಳ ವಿಡಿಯೋ ಮಾಡಿ ದಾಂಡೇಲಿ ಗೆ ಪ್ರವಾಸಿವರಿಗೆ ಆಹ್ವಾನ ನೀಡುತಿದ್ದಾರೆ.ಒಂದುವೇಳೆ ಹೀಗೆ ಮೊಸಳೆ ವಿಡಿಯೋ ನೋಡಿ ಬರುವ ಜನ ನದಿಗೆ ಇಳಿದು ಅಪಾಯ ತಂದುಕೊಳ್ಳುವ ಸಾಧ್ಯತೆಗಳಿದ್ದು ಎಚ್ಚರ ವಹಿಸಬೇಕಿದೆ.
