ಮುಚ್ಚಿದ ಬಾಗಿಲು ಪತ್ರಕರ್ತರ ಪ್ರತಿಭಟನೆ; ಪ್ರತ್ಯೇಕ ಮಾತುಕತೆಯ ಉದ್ದೇಶ ಬಹಿರಂಗಪಡಿಸಲು ಆಗ್ರಹ
ಹಳಿಯಾಳ: ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ನಡೆಯಬೇಕಿದ್ದ ಸಭೆಗೂ ಮುನ್ನ ವಿವಿಐಪಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಪ್ರತ್ಯೇಕ ಮಾತುಕತೆಯ ವರದಿಗೆ ತೆರಳಿದ ಮಾಧ್ಯಮ ಪ್ರತಿನಿಧಿಗಳನ್ನು ಪೊಲೀಸರ ನೆರವಿನಿಂದ ಹೊರಹಾಕಲಾದ ಘಟನೆ ಜರುಗಿದೆ. ಘಟನೆಯನ್ನು ಖಂಡಿಸಿ ಹಳಿಯಾಳ ಪತ್ರಕರ್ತರ ಸಂಘದವರು ಖಂಡಿಸಿ ಬಳಿಕ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯನ್ನು ಬಹಿಷ್ಕರಿಸಿ ಪ್ರತಿಭಟಿಸಿದರು.
ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರೊಂದಿಗೆ ರೈತರು ಹಾಗೂ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳ ಸಭೆಯನ್ನು ಮಧ್ಯಾಹ್ನ 12 ಗಂಟೆಗೆ ನಿಗದಿಪಡಿಸಲಾಗಿತ್ತು. ಅದರಂತೆ ರೈತರು ಮತ್ತು ಮಾಧ್ಯಮದವರು ಆಗಮಿಸಿ ಕಾಯುತ್ತಿದ್ದರು. ಆದರೆ ಮಧ್ಯಾಹ್ನ 2.30 ರ ವರೆಗೂ ಜಿಲ್ಲಾಧಿಕಾರಿಗಳು ಸಭೆಗೆ ಆಗಮಿಸದ ಹಿನ್ನೆಲೆಯಲ್ಲಿ ಮಾಹಿತಿ ಕಲೆಹಾಕಿದಾಗ, ವಿವಿಐಪಿ ಪ್ರವಾಸಿ ಮಂದಿರದಲ್ಲಿ ಸ್ಥಳೀಯ ಅಧಿಕಾರಿಗಳು, ಆಯ್ದ ಕೆಲ ರೈತರು ಹಾಗೂ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಯುತ್ತಿರುವ ವಿಚಾರ ತಿಳಿದುಬಂದಿತು ಎಂದು ಪತ್ರಕರ್ತರು ತಿಳಿಸಿದ್ದಾರೆ.
ವರದಿಗಾಗಿ ಸ್ಥಳಕ್ಕೆ ತೆರಳಿದಾಗ ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಿ ಚರ್ಚೆ ನಡೆಸಲಾಗುತ್ತಿತ್ತು. ಒಳಪ್ರವೇಶಿಸಲು ಮುಂದಾದ ಮಾಧ್ಯಮದವರಿಗೆ ಫೋಟೊ ಹಾಗೂ ವಿಡಿಯೊ ಚಿತ್ರೀಕರಣಕ್ಕೆ ಅವಕಾಶ ನೀಡದೆ, ಪೊಲೀಸ್ ಬಲದೊಂದಿಗೆ ಕೆಲ ಪತ್ರಿಕಾ ಪ್ರತಿನಿಧಿಗಳನ್ನು ಅವಮಾನಕರವಾಗಿ ಹೊರಹಾಕಲಾಯಿತು ಎಂದು ಪತ್ರಕರ್ತರು ಆರೋಪಿಸಿದ್ದಾರೆ.
ಈ ಕ್ರಮಕ್ಕೆ ಮಾಧ್ಯಮದವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಪ್ರವಾಸಿ ಮಂದಿರದಲ್ಲಿನ ಮಾತುಕತೆಯನ್ನು ತರಾತುರಿಯಲ್ಲಿ ಮೊಟಕುಗೊಳಿಸಿ, ಅಲ್ಲಿದ್ದವರು ತಹಶೀಲ್ದಾರ್ ಕಚೇರಿಯ ಸಭಾಂಗಣಕ್ಕೆ ತೆರಳಿದರು ಎಂದು ಅವರು ವಿವರಿಸಿದ್ದಾರೆ.
ಘಟನೆ ನಡೆದರೂ ಜಿಲ್ಲಾಧಿಕಾರಿಗಳು ಸೇರಿದಂತೆ ಸ್ಥಳದಲ್ಲಿದ್ದ ಅಧಿಕಾರಿಗಳು ಹಾಗೂ ರೈತ ಪ್ರತಿನಿಧಿಗಳು ಸ್ಪಂದಿಸದೆ ತೆರಳಿದ್ದು ಪತ್ರಕರ್ತರ ಅಸಮಾಧಾನಕ್ಕೆ ಕಾರಣವಾಯಿತು. ಇದನ್ನು ಖಂಡಿಸಿ ಸಭೆಯ ವರದಿಗಾರಿಕೆಯನ್ನು ಬಹಿಷ್ಕರಿಸಿದ ಪತ್ರಕರ್ತರು, ನಂತರದ ಮಾತುಕತೆಗೂ ಮುಂದಾಗದೆ ತಮ್ಮ ವಿರೋಧ ವ್ಯಕ್ತಪಡಿಸಿದರು.
ಎಲ್ಲ ರೈತರ ಸಮ್ಮುಖದಲ್ಲಿ ನಡೆಯಬೇಕಿದ್ದ ಸಭೆಗೂ ಮುನ್ನ ಆಯ್ದ ಕೆಲವರೊಂದಿಗೆ ಮುಚ್ಚಿದ ಬಾಗಿಲ ಹಿಂದೆ ಚರ್ಚೆ ನಡೆಸಿದ್ದೇಕೆ ಎಂಬ ಪ್ರಶ್ನೆ ರೈತರಲ್ಲಿ ಮೂಡಿದೆ. ಪ್ರತ್ಯೇಕ ಮಾತುಕತೆಯ ಉದ್ದೇಶ ಹಾಗೂ ಚರ್ಚೆಯ ವಿವರಗಳನ್ನು ಬಹಿರಂಗಪಡಿಸಿ, ರೈತರಲ್ಲಿ ಉಂಟಾಗಿರುವ ಗೊಂದಲ ಮತ್ತು ಅನುಮಾನಗಳನ್ನು ನಿವಾರಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.
