ಬೆಂ ಗಳೂರು: ಪ್ರಸಕ್ತ ವರ್ಷ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. ಈ ಬಗ್ಗೆ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಅವರು ಗುರುವಾರ ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ರಾಜ್ಯವು ಪ್ರಸ್ತುತ ಸಾಲಿನಲ್ಲಿ ತೀವ್ರ ಸ್ವರೂಪದ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, 1976ರ ನಂತರ ಇದೇ ಮೊದಲ ಬಾರಿಗೆ ಇಂತಹ ಭೀಕರ ಬರಗಾಲ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ 101 ತಾಲೂಕುಗಳನ್ನು ‘ಬರಪೀಡಿತ’ ಎಂದು ಘೋಷಿಸಲಾಗಿದೆ. 89 ತಾಲೂಕುಗಳನ್ನು ತೀವ್ರ ಬರ ಹಾಗೂ 12 ತಾಲೂಕುಗಳನ್ನು ಸಾಧಾರಣ ಬರ ಎಂದು ವರ್ಗೀಕರಿಸಲಾಗಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ:-Gokarna|ಗೋಕರ್ಣದಲ್ಲಿ ಮಹಿಳೆಯರೊಂದಿಗೆ ಪರಸ್ಪರ ವಿವಾಹ|ಏನಿದು ವಿಶೇಷ?
ಈ 12 ಸಾಧಾರಣ ಬರಪೀಡಿತ ತಾಲೂಕುಗಳ ಪೈಕಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಹಾಗೂ ಯಲ್ಲಾಪುರ ತಾಲೂಕುಗಳು ಒಳಗೊಂಡಿದೆ.
ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಮಳೆ ಪ್ರಮಾಣ ಕಡಿಮೆಯಾಗಿದ್ದು, ಹಲವು ಜಿಲ್ಲೆಗಳ ತಾಲೂಕುಗಳಲ್ಲಿ ಬರದ ಪರಿಸ್ಥಿತಿ ಉಂಟಾಗಿದೆ. ಜೂನ್ 1ರಿಂದ ಆಗಸ್ಟ್ 26ರವರೆಗೆ ರಾಜ್ಯದಲ್ಲಿ ವಾಡಿಕೆಯ 666 ಮಿ.ಮೀ. ಮಳೆಗೆ ಬದಲಾಗಿ 465 ಮಿ.ಮೀ. ಮಳೆಯಾಗಿದ್ದು, ಶೇ.30ರಷ್ಟು ಮಳೆ ಕೊರತೆ ದಾಖಲಾಗಿದೆ.
ಉತ್ತರ ಕನ್ನಡ (uttara kannada)ಜಿಲ್ಲೆಯಲ್ಲಿಯೂ ಮಳೆ (rain) ಕೊರತೆಯ ಪರಿಣಾಮ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಜಿಲ್ಲೆಯ ಮುಂಡಗೋಡ ಮತ್ತು ಯಲ್ಲಾಪುರ ತಾಲೂಕುಗಳನ್ನು ಸರ್ಕಾರದ ಪಟ್ಟಿಯಲ್ಲಿ ಸಾಧಾರಣ ಬರಪೀಡಿತ ತಾಲೂಕುಗಳಾಗಿ ಗುರುತಿಸಲಾಗಿದೆ.
ಕೇಂದ್ರ ಸರ್ಕಾರದ ಬರ ಕೈಪಿಡಿ-2020ರ ಮಾರ್ಗಸೂಚಿಯನ್ವಯ ಮಳೆ ಕೊರತೆ, ಬೆಳೆಗಳ ಸ್ಥಿತಿಗತಿ, ಮಣ್ಣಿನ ತೇವಾಂಶ ಸೇರಿದಂತೆ ವಿವಿಧ ಮಾನದಂಡಗಳನ್ನು ಆಧರಿಸಿ ಬರಪೀಡಿತ ತಾಲೂಕುಗಳನ್ನು ಗುರುತಿಸಲಾಗಿದೆ.
ಬರಪೀಡಿತ ತಾಲೂಕುಗಳ ಬೆಳೆ ಹಾನಿ ಹಾಗೂ ರೈತರ ಸಂಕಷ್ಟಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಇದನ್ನೂ ಓದಿ:-Karnataka SIR| ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ಯಾ? – ಜಸ್ಟ್ 10 ಸೆಕೆಂಡ್‌ನಲ್ಲಿ ಚೆಕ್ ಮಾಡಿ
ಇದೇ ವೇಳೆ, ಮಳೆ ಕೊರತೆಯಿಂದ ಬಿತ್ತನೆ ಮಾಡಲು ಸಾಧ್ಯವಾಗದ ರೈತರಿಗೆ ‘ಬಿತ್ತನೆ ತಡೆ’ ವಿಶೇಷ ಅವಕಾಶದಡಿ ಬೆಳೆ ವಿಮೆ ಪರಿಹಾರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಬೆಳೆ ವಿಮೆಗೆ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸರ್ಕಾರ ಮನವಿ ಮಾಡಿದೆ.
ಜಿಲ್ಲೆಯ ವರದಿಯಲ್ಲಿ ಏನಿತ್ತು?

ಮುಂಗಾರು ಹಂಗಾಮಿನ ಪ್ರಗತಿ ಹಾಗೂ ಜಿಲ್ಲೆಯಲ್ಲಿನ ಮಳೆ ಪರಿಸ್ಥಿತಿಯನ್ನು ಗಮನಿಸಿದಾಗ, 2026 ರ ಜೂನ್ 1 ರಿಂದ ಆಗಸ್ಟ್ 14 ರವರೆಗೆ ಜಿಲ್ಲೆಯಲ್ಲಿ 1692.1 ಮಿ.ಮೀ. ಮಳೆ ದಾಖಲಾಗಿದ್ದು, ಸಾಮಾನ್ಯ ಮಳೆಯೊಂದಿಗೆ ಹೋಲಿಸಿದರೆ ಶೇ.-19 ರಷ್ಟು ಕೊರತೆ ದಾಖಲಾಗಿದೆ.
ಜೂನ್ 1 ರಿಂದ ಆಗಸ್ಟ್ 14 ರವರೆಗೆ ಜಿಲ್ಲೆಯಲ್ಲಿ ಮಾನವ ಜೀವಹಾನಿ ಸಂಭವಿಸಿಲ್ಲ. ಈ ಅವಧಿಯಲ್ಲಿ 3 ಜಾನುವಾರುಗಳ ಸಾವಿಗೆ ಪರಿಹಾರ ವಿತರಿಸಲಾಗಿದೆ. 16 ಮನೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, ರೂ 19.2 ಲಕ್ಷ ಪರಿಹಾರ, 140 ಮನೆಗಳು ಭಾಗಶಃ ಹಾನಿಗೊಳಗಾಗಿವೆ ರೂ 8.77 ಲಕ್ಷ ಪರಿಹಾರ ವಿತರಿಸಲಾಗಿರುತ್ತದೆ. ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ 1.57 ಹೆಕ್ಟೇರ್ ಪ್ರದೇಶದಲ್ಲಿ ಹಾನಿ ದಾಖಲಾಗಿದೆ. ಹಾನಿಗೊಳಗಾದ ಕುಟುಂಬಗಳು ಹಾಗೂ ರೈತರಿಗೆ ಸರ್ಕಾರದ ನಿಯಮಾನುಸಾರ ಪರಿಹಾರ ಒದಗಿಸುವ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಮೂಲಸೌಕರ್ಯ ಹಾನಿ.
ದಿನಾಂಕ 01.04.2026 ರಿಂದ 14.08.2026 ವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ ರಾಜ್ಯ ಹೆದ್ದಾರಿಗಳ 110.70 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆಗಳು 142.57 ಕಿ.ಮೀ, ಹಾಗೂ ಗ್ರಾಮೀಣ ರಸ್ತೆಗಳ 382.80 ಕಿ.ಮೀ. ಹಾನಿಯಾಗಿರುತ್ತದೆ. ಅಲ್ಲದೆ PWD ವ್ಯಾಪ್ತಿಯ 10 ಸೇತುವೆ/ಕಲ್ವರ್ಟ್ ಹಾಗೂ PRED(ಪಂಚಾಯತ್ ರಾಜ್ ಇಂಜಿನಿಯರಿಂಗ್ ಡಿವಿಸನ್ ) ವ್ಯಾಪ್ತಿಯ 47 ಸೇತುವೆ/ಕಲ್ವರ್ಟ್ ಹಾನಿಯಾಗಿರುತ್ತದೆ. ಇತರೆ ಮೂಲಸೌಕರ್ಯಗಳಲ್ಲಿ 91 ಶಾಲಾ ಕಟ್ಟಡಗಳು, 3 PHC ಗಳು, 32 ಅಂಗನವಾಡಿ ಕಟ್ಟಡಗಳು, 4,253 ವಿದ್ಯುತ್ ಕಂಬಗಳು ಹಾಗೂ 39 ಟ್ರಾನ್ಸ್ಫಾರ್ಮ‌್ರಗಳು ಹಾನಿಗೊಳಗಾಗಿದ್ದು, 42 ಸಣ್ಣ ನೀರಾವರಿ ಟ್ಯಾಂಕ್‌ಗಳು ರಚನೆಗಳಿಗೆ ಹಾನಿಯಾಗಿದೆ. ಒಟ್ಟಾರೆ ಹಾನಿಯ ವಿವರಗಳನ್ನು NDRF ಮಾರ್ಗಸೂಚಿಗಳಂತೆ ದಾಖಲಿಸಿ, ಅಗತ್ಯ ಪರಿಹಾರ ಮತ್ತು ಪುನರ್‌ನಿರ್ಮಾಣ ಕ್ರಮಗಳನ್ನು ಕೈಗೊಳ್ಳಲಾಗುವುದು.
ರೈತರಿಗೆ ಅಗತ್ಯವಿರುವ ರಸಗೊಬ್ಬರಗಳ ಸಮರ್ಪಕ ದಾಸ್ತಾನು ಲಭ್ಯವಿದ್ದು, ಒಟ್ಟು 29,766 ಮೆಟ್ರಿಕ್ ಟನ್ ದಾಸ್ತಾನು ಪೈಕಿ 19,666 ಮೆಟ್ರಿಕ್ ಟನ್ ರಸಗೊಬ್ಬರವನ್ನು ವಿತರಿಸಲಾಗಿದೆ. ರೈತರಿಗೆ ಅಗತ್ಯವಾದ ಬೀಜ, ರಸಗೊಬ್ಬರ ಹಾಗೂ ಇತರ ಕೃಷಿ ಪರಿಕರಗಳು ಸಕಾಲದಲ್ಲಿ ಲಭ್ಯವಾಗುವಂತೆ ಸಂಬಂಧಪಟ್ಟ ಇಲಾಖೆಗಳು ಕ್ರಮವಹಿಸುತ್ತಿವೆ.
ಜಿಲ್ಲೆಯಲ್ಲಿನ ಕೆರೆಗಳ ನೀರಿನ ಸ್ಥಿತಿ ಗತಿ.
ಜಲಸಂಪನ್ಮೂಲಗಳ ಸಂರಕ್ಷಣೆ ಹಾಗೂ ಮಳೆನೀರಿನ ಸಮರ್ಪಕ ಬಳಕೆಯ ದೃಷ್ಟಿಯಿಂದ ಜಿಲ್ಲೆಯ ಕೆರೆಗಳ ಸ್ಥಿತಿಯನ್ನೂ ನಿರಂತರವಾಗಿ ಪರಿಶೀಲಿಸಲಾಗುತ್ತಿದೆ.
ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯ 91 ಕೆರೆಗಳಲ್ಲಿ 39 ಕೆರೆಗಳು ಶೇ.51 ರಿಂದ 99 ರಷ್ಟು ಹಾಗೂ 19 ಕೆರೆಗಳು ಸಂಪೂರ್ಣ ಭರ್ತಿಯಾಗಿವೆ. ಗ್ರಾಮ ಪಂಚಾಯತ್ ವ್ಯಾಪ್ತಿಯ 1,920 ಕೆರೆಗಳಲ್ಲಿ 280 ಕೆರೆಗಳು ಪೂರ್ಣ ಭರ್ತಿಯಾಗಿದ್ದು, 1145 ಕೆರೆಗಳು ಶೇ.51 ರಿಂದ 99 ರಷ್ಟು ಭರ್ತಿಯಾಗಿವೆ.
ಮೇವು ಲಭ್ಯತೆ.
21 ನೇ ಜಾನುವಾರು ಗಣತಿಯ ಪ್ರಕಾರ, ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 3.07 ಲಕ್ಷ ದೊಡ್ಡ ಜಾನುವಾರುಗಳು (ದನಗಳು ಮತ್ತು ಎಮ್ಮೆಗಳು) ಹಾಗೂ 0.25 ಲಕ್ಷ ಸಣ್ಣ ಜಾನುವಾರುಗಳು (ಕುರಿ ಮತ್ತು ಮೇಕೆಗಳು) ಇವೆ.
ಪ್ರಸ್ತುತ ಜಿಲ್ಲೆಯಲ್ಲಿ 5.14 ಲಕ್ಷ ಟನ್ ಮೇವು ಲಭ್ಯವಿದ್ದು, ಮುಂದಿನ 36 ವಾರಗಳ ಅವಧಿಗೆ ಸಾಕಾಗುವಷ್ಟು ಮೇವು ದಾಸ್ತಾನು ಇದೆ. ಜಾನುವಾರುಗಳಿಗೆ ಯಾವುದೇ ಮೇವು ಕೊರತೆ ಉಂಟಾಗದಂತೆ ಜಿಲ್ಲಾಡಳಿತವು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ.
ಜಲಾಶಯಗಳ ಸ್ಥಿತಿ
ಜಿಲ್ಲೆಯ ಪ್ರಮುಖ ಜಲಾಶಯಗಳಲ್ಲಿ ಸಮರ್ಪಕ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು, ಪ್ರಸ್ತುತ ಗೇರುಸೊಪ್ಪಾ ಜಲಾಶಯದಲ್ಲಿ 49.6 ಅಡಿ, ಕೊಡಸಳ್ಳಿ ಜಲಾಶಯದಲ್ಲಿ ಶೇ.70.77 ಮೀ, ಕದ್ರಾ ಜಲಾಶಯದಲ್ಲಿ 30.37 ಅಡಿ ಹಾಗೂ ಸೂಪಾ ಜಲಾಶಯದಲ್ಲಿ 546.42 ಅಡಿಯಷ್ಟು ನೀರಿನ ಸಂಗ್ರಹವಾಗಿರುತ್ತದೆ.
ಜಿಲ್ಲೆಯಲ್ಲಿನ ಬರ ಪರಿಸ್ಥಿತಿ
2026-27ನೇ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಹಾಗೂ ಯಲ್ಲಾಪುರ ತಾಲ್ಲೂಕುಗಳಲ್ಲಿ ಶೇ.60 ಕ್ಕಿಂತ ಹೆಚ್ಚು ಮಳೆಯ ಕೊರತೆ ದಾಖಲಾಗಿದ್ದು, ಮಳೆ ಕೊರತೆಯಿಂದ ಬರ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಕಂಡುಬಂದಿದೆ. ಪರಿಸ್ಥಿತಿಯನ್ನು ಜಿಲ್ಲಾಡಳಿತವು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ.
ಬರ ಪರಿಸ್ಥಿತಿಯ ವಾಸ್ತವಿಕ ಸ್ಥಿತಿಯನ್ನು ಪರಿಶೀಲಿಸಲು “Ground Truthing” ಕಾರ್ಯವನ್ನು ಕೈಗೊಳ್ಳಲಾಗಿದ್ದು, ಪ್ರಸ್ತುತ ಪ್ರಗತಿಯಲ್ಲಿದೆ. ಸ್ಥಳ ಪರಿಶೀಲನೆಯ ಮೂಲಕ ಕೃಷಿ, ಬೆಳೆ ಪರಿಸ್ಥಿತಿ, ಕುಡಿಯುವ ನೀರು ಹಾಗೂ ಜಾನುವಾರುಗಳ ಸ್ಥಿತಿಗತಿಗಳ ಮಾಹಿತಿಯನ್ನು ಸಂಗ್ರಹಿಸಿ, ವರದಿಯ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.
ಕುಡಿಯುವ ನೀರಿನ ವ್ಯವಸ್ಥೆ.
ಕುಡಿಯುವ ನೀರಿನ ಲಭ್ಯತೆಯ ದೃಷ್ಟಿಯಿಂದ ಜಿಲ್ಲೆಯ 138 ಗ್ರಾಮ ಪಂಚಾಯತ್‌ಗಳಲ್ಲಿ ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಸಾಧ್ಯತೆಯ ಗ್ರಾಮ ಪಂಚಾಯತ್‌ಗಳಾಗಿ ಗುರುತಿಸಲಾಗಿದೆ. ಪ್ರಸ್ತುತ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ.
ಇದನ್ನೂ ಓದಿ:-Rain damage| ಮಳೆ ಅಬ್ಬರ ಮಾವಿನ ಮರ ಬಿದ್ದು ಏಳು ಬೈಕ್ ಜಕಂ, ಆಕಳು ಸಾವು
ಅಗತ್ಯ ಸಂದರ್ಭದಲ್ಲಿ ತಕ್ಷಣ ನೀರು ಪೂರೈಕೆ ಮಾಡಲು ಜಿಲ್ಲೆಯಲ್ಲಿ 72 ಖಾಸಗಿ ಕೊಳವೆಬಾವಿಗಳನ್ನು ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಯಾವುದೇ ಗ್ರಾಮದಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಮುಂದುವರಿಸಲಾಗುತ್ತಿದೆ.
ಕೃಷಿ ಕ್ಷೇತ್ರದ ಪ್ರಗತಿ
2026-27 ರ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 58,546 ಹೆಕ್ಟೇರ್ ಬಿತ್ತನೆ ಗುರಿಯ ಪೈಕಿ 49,494 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದೆ.
