ಕಾರವಾರ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಪ್ರಸಿದ್ಧ ಕುಂಭೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ವಿಶ್ವೇಶ್ವರ ಭಟ್ ಕೊಲೆಗೈದ ಪ್ರಕರಣದಲ್ಲಿ ಮೂವರು ಅಪರಾಧಿಗಳಿಗೆ ಅಪರಾಧ ಸಾಬೀತಾದ ಹಿನ್ನಲೆಯಲ್ಲಿ ಕಾರವಾರ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
ಕುಮಟಾ (kumta) ತಾಲೂಕಿನ ಮೂರೂರು ಕುಂಭೇಶ್ವರ ದೇವಾಲಯದ ಅರ್ಚಕರಾಗಿದ್ದ ವಿಶ್ವೇಶ್ವರ ಭಟ್ ರನ್ನು ಪೂಜೆಯ ಕಾರಣ ಹೇಳಿ ಕರೆದೊಯ್ದು ಭೀಕರವಾಗಿ ಹತ್ಯೆಗೈಯಲಾಗಿತ್ತು. ಅಲ್ಲದೇ ಅವರ ಶವವನ್ನು ತೋಟದಲ್ಲೇ ಹೂತುಹಾಕಿದ್ದರು.2018ರ ಅಕ್ಟೋಬರ್ 16ರಂದು ನಡೆದಿದ್ದ ಕೊಲೆ ಪ್ರಕರಣ ಕುರಿತು ಸುದೀರ್ಘ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಬಿ. ಅವರು, ಕೃತ್ಯವೆಸಗಿದ ಮೂವರು ಅಪರಾಧಿಗಳಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಇದನ್ನೂ ಓದಿ:-Kumta | ಬಸ್ ಹತ್ತುವ ವೇಳೆ ಮಹಿಳೆಯ ಮಾಂಗಲ್ಯ ಸರ ಕಳವು – ಇಬ್ಬರು ಆರೋಪಿಗಳ ಬಂಧನ
ಕುಮಟಾದ ಕೂಜಳ್ಳಿ ಗ್ರಾಮದ ಮೆಣಸಿನಕೆರೆಯ ಮಂಜುನಾಥ ಈಶ್ವರ ಹೆಗಡೆ, ಶಿರಸಿ ಸೋಮನಹಳ್ಳಿಯ ಹರೀಶ ಸುಬ್ರಾಯ ಹೆಗಡೆ ಮತ್ತು ಸೊರಬ ಮೂಲದ ಧನಂಜಯ ಚಂದ್ರಶೇಖರ್ ನಾಯ್ಕ ಶಿಕ್ಷೆಗೆ ಗುರಿಯಾದ ಅಪರಾಧಿಗಳಾಗಿದ್ದಾರೆ.
2018ರ ಅಕ್ಟೋಬರ್ 16ರಂದು ಭೂಮಿಯ ಪೂಜೆ ಮಾಡಿಕೊಡುವಂತೆ ಅರ್ಚಕರನ್ನು ಕರೆದೊಯ್ದಿದ್ದ ಆರೋಪಿಗಳು, ಕೂಜಳ್ಳಿಯ ಮಂಜುನಾಥ ಹೆಗಡೆಗೆ ಸೇರಿದ ತೋಟದಲ್ಲೇ ಮಾರಕಾಸ್ತ್ರಗಳಿಂದ ಹೊಡೆದು, ಕೊಲೆ ಮಾಡಿದ್ದರು. ಬಳಿಕ ಶವವನ್ನು ಅಲ್ಲಿಯೇ ಗುಂಡಿ ತೋಡಿ ಮುಚ್ಚಿ, ಅವರ ಬೈಕನ್ನು ಸಮೀಪದ ಬಾವಿಗೆ ಎಸೆದು ಪರಾರಿಯಾಗಿದ್ದರು.ಪತಿ ಕಾಣೆಯಾದ ಬಗ್ಗೆ ವಿಶ್ವೇಶ್ವರ ಭಟ್ ಅವರ ಪತ್ನಿ ಸರಸ್ವತಿ ಭಟ್ ನೀಡಿದ ದೂರಿನ ಮೇರೆಗೆ ತನಿಖೆಗಿಳಿದ ಕುಮಟಾ ಠಾಣೆ ಸಿಪಿಐ ಸಂತೋಷ್ ಶೆಟ್ಟಿ ಹಾಗೂ ಪಿಎಸ್ಐ ಸಂಪತ್ ಅವರ ತಂಡ, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದರು. ನಂತರ ತೋಟದಲ್ಲಿ ಹೂತಿಟ್ಟಿದ್ದ ಶವವನ್ನು ಹೊರತೆಗೆದು ಶವಪರೀಕ್ಷೆ ನಡೆಸಿ, ಕೊಲೆಯನ್ನು ಬಯಲಿಗೆಳೆದಿದ್ದರು.
ವಿಚಾರಣೆ ವೇಳೆ ಸರ್ಕಾರದ ಪರವಾಗಿ ಎಪಿಪಿ ತನುಜಾ ಹೊಸಪಟ್ಟಣ ಅವರು ಸಾಕ್ಷ್ಯಾಧಾರಗಳ ಸಹಿತ ವಾದ ಮಂಡಿಸಿದ್ದರು. ಪ್ರಾಸಿಕ್ಯೂಷನ್ ಒಟ್ಟು 62 ಸಾಕ್ಷಿಗಳನ್ನು, 177 ನಿರ್ಣಾಯಕ ದಾಖಲೆಗಳನ್ನು ಹಾಗೂ 15 ಮುದ್ದೆಮಾಲುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಸಿಸಿಟಿವಿ ದೃಶ್ಯಾವಳಿ, ಸಾಂದರ್ಭಿಕ ಸಾಕ್ಷ್ಯಗಳು ಹಾಗೂ ವಿಧಿವಿಜ್ಞಾನ ವರದಿಗಳ ಆಧಾರದ ಮೇಲೆ ಆರೋಪಿಗಳ ಮೇಲಿನ ಕೊಲೆ ಕೃತ್ಯ ಸಾಬೀತಾದ ಕಾರಣ ಅಪರಾಧಿಗಳಿಗೆ ಕಾರವಾರ(karwar) ಜಿಲ್ಲಾ ಮತ್ತು ಸತ್ರಾ ನ್ಯಾಯಾಲಯದ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
