ಉತ್ತರ ಕನ್ನಡ (uttara kannada)ಜಿಲ್ಲೆಯ ಪ್ರಮುಖ ಸುದ್ದಿಗಳ ಜೊತೆ ಸ್ಥಳೀಯ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿವೆ ಮಾಹಿತಿ .ವಿವರ ನೋಡಿ.

ಬೈಕ್ ಮತ್ತು ಲಾರಿ ಮುಖಾಮುಖಿ ಡಿಕ್ಕಿ -ಸವಾರ ಸಾವು.
ಕುಮಟಾ:- ಕಂಟೇನರ್ ಲಾರಿ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವುಕಂಡ ಘಟನೆ ಕುಮಟಾದ ಎಲ್.ಐ.ಸಿ ಕಚೇರಿ ಬಳಿ ನಡೆದಿದೆ.
ವಿವೇಕ್ ಶೆಟ್ಟಿ (45) ಮೃತ ದುರ್ದೈವಿಯಾಗಿದ್ದು ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ, ಡಿಜೆ ಬಳಕೆಗೆ ಅವಕಾಶವಿಲ್ಲ: ಜಿಲ್ಲಾಧಿಕಾರಿ.

ಕಾರವಾರ: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪರಿಸರ ಮಾಲಿನ್ಯ ಹಾಗೂ ಶಬ್ಧಮಾಲಿನ್ಯ ತಡೆಯುವ ಉದ್ದೇಶದಿಂದ ಜಿಲ್ಲೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ. ಗಣೇಶ ವಿಸರ್ಜನೆ ಮೆರವಣಿಗೆ ಸೇರಿದಂತೆ ಯಾವುದೇ ಸಂದರ್ಭದಲ್ಲೂ ಡಿಜೆ ಬಳಕೆಗೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.
ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾರ್ವಜನಿಕರು ಮಣ್ಣಿನಿಂದ ಹಾಗೂ ರಾಸಾಯನಿಕ ರಹಿತ ಬಣ್ಣಗಳಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನೇ ಪ್ರತಿಷ್ಠಾಪಿಸಬೇಕು. ಜಲಮೂಲಗಳು ಕಲುಷಿತವಾಗುವುದನ್ನು ತಡೆಯಲು ಮೂರ್ತಿಗಳನ್ನು ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿದ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ತಾತ್ಕಾಲಿಕವಾಗಿ ನಿರ್ಮಿಸಿರುವ ಕೃತಕ ಹೊಂಡಗಳಲ್ಲಿ ಮಾತ್ರ ವಿಸರ್ಜಿಸಬೇಕು ಎಂದು ಸೂಚಿಸಿದರು.
ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಧ್ವನಿವರ್ಧಕ ಬಳಕೆಗೆ ಸಂಪೂರ್ಣ ನಿಷೇಧವಿದ್ದು, ನಿಗದಿತ ಅವಧಿಯಲ್ಲಿ ಶಬ್ಧಮಾಲಿನ್ಯವಾಗದಂತೆ ಧ್ವನಿವರ್ಧಕ ಬಳಸಬೇಕು. ಗಣೇಶ ವಿಸರ್ಜನೆ ಮೆರವಣಿಗೆ ಸೇರಿದಂತೆ ಯಾವುದೇ ಸ್ಥಳದಲ್ಲಿ ಡಿಜೆ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.ಇದನ್ನೂ ಓದಿ:-Karwar|ಕಾರವಾರ-ಇಳೆಕಲ್ ರಾಜ್ಯ ಹೆದ್ದಾರಿಯಲ್ಲಿ ಭಾರೀ ವಾಹನಕ್ಕೆ ನಿರ್ಬಂಧ – ಜಿಲ್ಲಾಧಿಕಾರಿ
ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಪೊಲೀಸ್ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಂದ ಅಗತ್ಯ ಪೂರ್ವಾನುಮತಿ ಪಡೆಯಬೇಕು. ಪ್ರತಿಷ್ಠಾಪನಾ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಿ, ಸ್ವಯಂಸೇವಕರನ್ನು ನಿಯೋಜಿಸಬೇಕು. ಪ್ರಸಾದ ಹಾಗೂ ಕುಡಿಯುವ ನೀರು ವಿತರಣೆಯಲ್ಲಿ ಸ್ವಚ್ಛತೆ ಕಾಪಾಡುವಂತೆ ಆಯೋಜಕರಿಗೆ ಸೂಚಿಸಬೇಕು. ಅನುಮತಿಗಳನ್ನು ಸರಳವಾಗಿ ಒದಗಿಸಲು ಸಿಂಗಲ್ ವಿಂಡೋ ವ್ಯವಸ್ಥೆ ಮೂಲಕ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಗಣೇಶ ಪೆಂಡಾಲ್‌ಗಳಲ್ಲಿ ವಿದ್ಯುತ್ ಹಾಗೂ ಅಗ್ನಿ ಸುರಕ್ಷತಾ ಕ್ರಮಗಳನ್ನು ಹೆಸ್ಕಾಂ ಮತ್ತು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಪರಿಶೀಲಿಸಬೇಕು. ಹಬ್ಬದ ಸಂದರ್ಭದಲ್ಲಿ ಈಗಾಗಲೇ ಅನುಮತಿ ಪಡೆದವರು ನಿಗದಿತ ಸ್ಥಳಗಳಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದರು.ಇದನ್ನೂ ಓದಿ:-Uttara kannada | ಸೆ.2 ಮತ್ತು 3 ರಂದು ಈ ತಾಲೂಕಿನಲ್ಲಿ ಕರೆಂಟ್ ಇರಲ್ಲ
ಪಿಒಪಿ ಗಣೇಶ ಮೂರ್ತಿಗಳ ನಿಷೇಧ ಹಾಗೂ ವಿಸರ್ಜನೆ ನಿಯಮಗಳ ಕುರಿತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವಚ್ಛತಾ ವಾಹನಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಪ್ಲಾಸ್ಟಿಕ್, ಜಲ, ಪರಿಸರ ಹಾಗೂ ಶಬ್ಧ ಮಾಲಿನ್ಯ ಮುಕ್ತವಾಗಿ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸುವಂತೆ ಜಿಲ್ಲೆಯ ಜನತೆಗೆ ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಭಟ್ಕಳ ವಿಭಾಗದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಣು ಗುಪ್ತಾ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿ.ಪಂ. ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್, ಜಿಲ್ಲಾ ಪರಿಸರ ಅಧಿಕಾರಿ ಡಾ. ಗಣಪತಿ ಹೆಗಡೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ವರ್ಚುವಲ್ ಮೂಲಕ ವಿವಿಧ ವಿಭಾಗಗಳ ಡಿವೈಎಸ್ಪಿಗಳು, ತಹಸೀಲ್ದಾರ್‌ಗಳು ಹಾಗೂ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಭಾಗವಹಿಸಿದ್ದರು.
ಸೆ.3ರಂದು ಗೋಕರ್ಣ–ಕಾರವಾರ ಚಲೋ: ಮಾರಕ ಯೋಜನೆಗಳ ವಿರುದ್ಧ ಕರಾವಳಿ ಉಳಿಸಿ ಜಾಗೃತಿ ಅಭಿಯಾನ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಹಾಗೂ ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿರುವ ಯೋಜನೆಗಳ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 3ರಂದು ಗುರುವಾರ “ಕರಾವಳಿ ಉಳಿಸಿ ಜಾಗೃತಿ ಅಭಿಯಾನ” ಹಮ್ಮಿಕೊಳ್ಳಲಾಗಿದೆ.
ಗೋಕರ್ಣದಿಂದ ಕಾರವಾರದವರೆಗೆ ನಡೆಯಲಿರುವ ಈ ಜಾಗೃತಿ ಅಭಿಯಾನವು ಸೊಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಪೂಜ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯಲಿದೆ.
ಉತ್ತರ ಕನ್ನಡ ಜಿಲ್ಲೆಯ ಹಿತಾಸಕ್ತಿ, ಪರಿಸರ, ನದಿಗಳು ಹಾಗೂ ಕರಾವಳಿ ಪ್ರದೇಶದ ಸಂರಕ್ಷಣೆಯ ದೃಷ್ಟಿಯಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಸೆಪ್ಟೆಂಬರ್ 3ರಂದು ತಮ್ಮ ದೈನಂದಿನ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ, ಅಭಿಯಾನಕ್ಕೆ ಕೈಜೋಡಿಸುವ ಮೂಲಕ ಕರಾವಳಿ ಹಾಗೂ ಜಿಲ್ಲೆಯ ರಕ್ಷಣೆಗೆ ಪ್ರತಿಯೊಬ್ಬರೂ ಬೆಂಬಲ ನೀಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
“ಕರಾವಳಿ ಉಳಿಸಿ – ಪರಿಸರ ರಕ್ಷಿಸಿ – ಉತ್ತರ ಕನ್ನಡ ಉಳಿಸಿ” ಎಂಬ ಸಂದೇಶದೊಂದಿಗೆ ಈ ಜಾಗೃತಿ ಅಭಿಯಾನ ನಡೆಯಲಿದೆ.

ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ.
ಕಾರವಾರ: ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ಅದರ ಅಧೀನದ ವಿವಿಧ ನಿಗಮಗಳ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಅರಿವು ಶೈಕ್ಷಣಿಕ ಸಾಲ (ಹೊಸದು ಹಾಗೂ ನವೀಕರಣ), ಸ್ವಾವಲಂಬಿ ಸಾರಥಿ ಯೋಜನೆ, ಬ್ಯಾಂಕುಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಯೋಜನೆ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು.ಇದನ್ನೂ ಓದಿ:-Karnataka |ಮಳೆ ಕೊರತೆ ರಾಜ್ಯದ 101 ತಾಲೂಕು ಬರ ಪೀಡಿತ- ಉತ್ತರ ಕನ್ನಡದ 2 ತಾಲೂಕುಗಳು ಸಾಧಾರಣ ಬರಪೀಡಿತ !
ಇದರೊಂದಿಗೆ ಮರಾಠಾ ನಿಗಮದ ಮಿಲಿಟ್ರಿ ಹೊಟೇಲ್ ಯೋಜನೆ, ವೀರಶೈವ ಲಿಂಗಾಯತ ನಿಗಮದ ವಿಭೂತಿ ಘಟಕ ನಿರ್ಮಾಣ ಯೋಜನೆ, ಡಿ. ದೇವರಾಜ ಅರಸು ನಿಗಮದ ಹೊಲಿಗೆ ಯಂತ್ರ ವಿತರಣೆ ಯೋಜನೆ ಹಾಗೂ ಸ್ವಾತಂತ್ರ್ಯ ಅಮೃತ ಮುನ್ನಡೆ ಯೋಜನೆಗಳಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ.
ಅರ್ಹ ಅಭ್ಯರ್ಥಿಗಳು ಸೆ. 30ರೊಳಗಾಗಿ ಸೇವಾ ಸಿಂಧು ಪೋರ್ಟಲ್ ಮೂಲಕ ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಸ್ವಾತಂತ್ರ್ಯ ಅಮೃತ ಮುನ್ನಡೆ ಯೋಜನೆಗೆ ಕೌಶಲ್ಯ ಕರ್ನಾಟಕ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಬೇಕು.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಅರ್ಜಿಯ ಪ್ರತಿ ಹಾಗೂ ಅಗತ್ಯ ದಾಖಲೆಗಳನ್ನು ಜಿಲ್ಲಾ ವ್ಯವಸ್ಥಾಪಕರು, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಹೈ ಚರ್ಚ್ ಹತ್ತಿರ, ಕಾರವಾರ ಕಚೇರಿಗೆ ಸಲ್ಲಿಸಬೇಕು.
ಸೂಚನೆ: 2024-25 ಹಾಗೂ 2025-26ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯದೆ ಇರುವ ಫಲಾನುಭವಿಗಳು ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.
ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ ಅಥವಾ ಸಹಾಯವಾಣಿ 08382-223229, 080-22374832 ಹಾಗೂ 8050770004 ಸಂಪರ್ಕಿಸಬಹುದು ಎಂದು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ.
ಶಿರಸಿ ನಗರದಾದ್ಯಂತ ಹಾಗು ಗ್ರಾಮೀಣ ಪ್ರದೇಶಗಳಾದ ಬನವಾಸಿ,ಸುಗಾವಿ,ದೇವನಳ್ಳಿ,ಚಿಪಗಿ,ಮಾರಿಗದ್ದೆ,ಕೇಂಗ್ರೆ,ವಾನಳ್ಳಿ ಹುಲೆಕಲ್, ಸಾಲ್ಕಣಿ,ಸಂಪಖಂಡ ಹಾಗೂ ತಾರಗೋಡ ಭಾಗದಲ್ಲಿ ಸೆ.3 ರ ಗುರುವಾರ ವಿದ್ಯುತ್ ವ್ಯತ್ಯೆಯಯಾಗಲಿದೆ ಎಂದು ಹೆಸ್ಕಾಂ ಅಧಿಕಾರಿಗಳು ಪ್ರಕಟಣೆ ನೀಡಿದ್ದಾರೆ.
ಐ.ಸಿ.ಐ.ಸಿ.ಐ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ಸಂದರ್ಶನ.
ಕಾರವಾರ ಯೋಜನಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಪದವಿ ಹೊಂದಿದ ಅಭ್ಯರ್ಥಿಗಳಿಗೆ ಖಾಸಗಿ ಕಂಪನಿಯಾದ ಐ.ಸಿ.ಐ.ಸಿ.ಐ ಬ್ಯಾಂಕ್ ನಲ್ಲಿ ಖಾಲಿ ಇರುವ ಸೇಲ್ಸ್ ಮತ್ತು ರಿಲೇಶನ್ ಶಿಪ್ ಮ್ಯಾನೇಜರ್ ಹುದ್ದೆಗೆ ಸೆ.5 ರಂದು ನೇರ ಸಂದರ್ಶನವನ್ನು ಯೋಜನಾ ವಿನಿಮಯ ಕಚೇರಿ, ಶ್ರೀಮತಿ ಪ್ರೇಮಾಬಾಯಿ ರಾಯ್ಕರ ಬಿಲ್ಡಿಂಗ್, ಪಂಚಾಬ್ ನ್ಯಾಶನಲ್ ಬ್ಯಾಂಕ್ ಹತ್ತಿರ, ಸಿವಿಲ್ ಕೋರ್ಟ್ ರಸ್ತೆ, ಕಾರವಾರದಲ್ಲಿ ಆಯೋಜಿಲಾಗಿದೆ.
ಈ ಸಂದರ್ಶನದಲ್ಲಿ 18 ರಿಂದ 25 ವರ್ಷದ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಉದ್ಯೋಗದ ಸ್ಥಳ ಉತ್ತರ ಕನ್ನಡ ಜಿಲ್ಲೆ, ಹುಬ್ಬಳ್ಳಿ, ಬೆಳಗಾವಿ. ಆಸಕ್ತ ಅಭ್ಯರ್ಥಿಗಳು ರೆಸ್ಯೂಮ್ ಪ್ರತಿಯೊಂದಿಗೆ, ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಯೋಜನಾ ವಿನಿಮಯ ಕಚೇರಿಗೆ ಖುದ್ದಾಗಿ ಅಥವಾ ಮೊ. ಸಂಖ್ಯೆ 8310044796 ಅಥವಾ ಕಚೇರಿ ದೂ.ಸಂಖ್ಯೆ 08382-226386 ಗೆ ಸಂಪರ್ಕಿಸುವಂತೆ ಕಾರವಾರ ಯೋಜನಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ
ಕಾರವಾರ, :- ಅಂಕೋಲಾ ತಾಲೂಕಿನ ಬೆಳಸೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಖಾಲಿ ಇರುವ ಭೌತಶಾಸ್ತç ಹಾಗೂ ರಾಸಾಯನಶಾಸ್ತç ತಲಾ 1 ಹುದ್ದೆಗೆ ಎಂ.ಎಸ್.ಸಿ, ಬಿ.ಎಡ್ ವಿದ್ಯಾರ್ಹತೆ ಹೊಂದಿದ ಅರ್ಹ ಅಭ್ಯರ್ಥಿಗಳಿಂದ ಗೌರವ ಧನ ರೂ.18,150 ಆಧಾರದ ಮೇಲೆ ಅತಿಥಿ ಉಪನ್ಯಾಸಕರ ಹುದ್ದೆಗೆ ನೇಮಿಸಿಕೊಳ್ಳಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ತಮ್ಮ ಪರಿಚಯ ಮತ್ತು ದಾಖಲಾತಿಗಳೊಂದಿಗೆ ಅಂಕೋಲಾ ತಾಲೂಕಿನ ಬೆಳಸೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜನ್ನು ಸಂಪರ್ಕಿಸಲು ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜು, ಬೆಳಸೆ ದೂ.ಸಂ: 9480022044 ನ್ನು ಸಂಪರ್ಕಿಸುವAತೆ ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜವಾಹರ ನವೋದಯ ವಿದ್ಯಾಲಯ : ಖಾಲಿ ಸ್ಥಾನಗಳ ಭರ್ತಿ ಕುರಿತು ಪ್ರಕಟಣೆ.
ಕಾರವಾರ:- ಜವಾಹರ ನವೋದಯ ವಿದ್ಯಾಲಯದಲ್ಲಿ 2027-28ನೇ ಸಾಲಿಗೆ ಖಾಲಿ ಇರುವ ಸ್ಥಾನಗಳಿಗೆ 9 ಹಾಗೂ 11 ನೇ ತರಗತಿ (ವಿಜ್ಞಾನ ಮತ್ತು ವಾಣಿಜ್ಯ) ಪ್ರವೇಶ ಪಡೆಯಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
9ನೇ ತರಗತಿ ಪ್ರವೇಶ ಬಯಸುವ ಅಭ್ಯರ್ಥಿಗಳು ವೆಬ್ ಸೈಟ್: https://cbseitms.nic.in/2026/nvsix9 ನಲ್ಲಿ ಹಾಗೂ 11 ನೇ ತರಗತಿ ಪ್ರವೇಶ ಬಯಸುವ ಅಭ್ಯರ್ಥಿಗಳು ವೆಬ್‌ಸೈಟ್: https://cbseitms.nic.in/2026/nvsxi_11 ಮೂಲಕ ಸೆ.30 ಅರ್ಜಿ ರೊಳಗಾಗಿ ಅರ್ಜಿ ಸಲ್ಲಿಸಬೇಕು
ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 9483017625,9741393669, 08301-200200 ನ್ನು ಸಂಪರ್ಕಿಸುವAತೆ ಮಳಗಿ, ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
