ಮಂತ್ರಾಲಯದಲ್ಲಿ ರಾಯರ 355ನೇ ಆರಾಧನೆ: ಇಂದು ಮಧ್ಯಾರಾಧನೆ ಸಂಭ್ರಮ, ಚಿನ್ನದ ರಥೋತ್ಸವ -ವಿಡಿಯೋ ನೋಡಿ.
ರಾಯಚೂರು: ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಮಂತ್ರಾಲಯದಲ್ಲಿ ಇಂದು ಮಧ್ಯಾರಾಧನೆ ಸಂಭ್ರಮದಿಂದ ನಡೆಯುತ್ತಿದೆ. ರಾಯರು ಸಶರೀರರಾಗಿ ವೃಂದಾವನಸ್ಥರಾಗಿ ಇಂದಿಗೆ 355 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಠದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತಿದೆ.
ಮಧ್ಯಾರಾಧನೆ ಅಂಗವಾಗಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳಿಂದ ರಾಯರ ವೃಂದಾವನಕ್ಕೆ ವಿಶೇಷ ಮಹಾಪಂಚಾಮೃತ ಅಭಿಷೇಕ ನೆರವೇರಿಸಲಾಗುತ್ತಿದೆ. ಪ್ರತಿನಿತ್ಯ ನಡೆಯುವ ಪಂಚಾಮೃತ ಅಭಿಷೇಕಕ್ಕಿಂತ ಸುಮಾರು ಹತ್ತು ಪಟ್ಟು ಹೆಚ್ಚು ಪ್ರಮಾಣದಲ್ಲಿ ವಿವಿಧ ಪದಾರ್ಥಗಳನ್ನು ಬಳಸಿ ಈ ವಿಶೇಷ ಅಭಿಷೇಕ ನಡೆಯಲಿದೆ.
ಹಾಲು, ಮೊಸರು, ತುಪ್ಪ, ಜೇನಿನಿಂದ ಅಭಿಷೇಕ.
ಮಹಾಪಂಚಾಮೃತ ಅಭಿಷೇಕದಲ್ಲಿ ಹಾಲು, ಮೊಸರು, ತುಪ್ಪ, ಜೇನು, ವಿವಿಧ ಹಣ್ಣುಗಳು, ಗೋಡಂಬಿ, ಒಣದ್ರಾಕ್ಷಿ ಸೇರಿದಂತೆ ಹಲವು ಪದಾರ್ಥಗಳನ್ನು ಬಳಸಲಾಗುತ್ತಿದೆ. ರಾಯರ ವೃಂದಾವನದ ನಾಲ್ಕು ದಿಕ್ಕುಗಳಿಗೂ ಅಭಿಷೇಕ ನಡೆಯುವುದು ಇಂದಿನ ವಿಶೇಷವಾಗಿದೆ.
ಅಭಿಷೇಕದ ಬಳಿಕ ರಾಯರ ವೃಂದಾವನಕ್ಕೆ ಚಿನ್ನದ ಕವಚದೊಂದಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಗುತ್ತದೆ.
ಚಿನ್ನದ ರಥೋತ್ಸವ.
ಮಧ್ಯಾರಾಧನೆ ಹಿನ್ನೆಲೆಯಲ್ಲಿ ಮಠದ ಪ್ರಾಕಾರದಲ್ಲಿ ಚಿನ್ನದ ರಥೋತ್ಸವ ಕೂಡ ನಡೆಯಲಿದೆ. ರಥೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.
ಪ್ರತಿ ವರ್ಷಕ್ಕಿಂತಲೂ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಪರಿಮಳ ಪ್ರಸಾದ ತಯಾರಿಸಲಾಗಿದ್ದು, ಮಂತ್ರಾಲಯಕ್ಕೆ ಆಗಮಿಸುತ್ತಿರುವ ಲಕ್ಷಾಂತರ ಭಕ್ತರಿಗೆ ಪ್ರಸಾದ ವಿತರಿಸಲು ವ್ಯವಸ್ಥೆ ಮಾಡಲಾಗಿದೆ.
ಮಧ್ಯಾರಾಧನೆ ಹಿನ್ನೆಲೆಯಲ್ಲಿ ಮಂತ್ರಾಲಯದಲ್ಲಿ ಭಕ್ತರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿದ್ದು, ಮಠದ ಆವರಣದಲ್ಲಿ ವಿಶೇಷ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಭಕ್ತರು ರಾಯರ ದರ್ಶನ ಪಡೆದು ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ.
