Uttara kannada | ಆಗಷ್ಟ್ 29 ರ ಇಂದಿನ ಪ್ರಮುಖ ಸುದ್ದಿಗಳೇನು? ಫಟಾ ಫಟ್ ಸುದ್ದಿ ಇಲ್ಲಿದೆ.

ಶಿರಸಿಯಲ್ಲಿ ಅಂತರ್ ಜಿಲ್ಲಾ ಗೋಕಳ್ಳರ ಬಂಧನ.

ಶಿರಸಿ (sirsi)ತಾಲೂಕಿನ ಹುಲೇಕಲ್‌ನಲ್ಲಿ ಆಕಳು ಹಾಗೂ ಕರುಗಳನ್ನು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ್ ಜಿಲ್ಲಾ ದನ ಕಳ್ಳರ ಗ್ಯಾಂಗ್‌ನ ಮೂವರು ಆರೋಪಿಗಳನ್ನು ಶಿರಸಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದ ಟಿಪ್ಪುನಗರದ ಮೊಹಮ್ಮದ್ ಅಯಾಜ್ ಅಲಿಯಾಸ್ ಅಂಡು (23), ಶಿವಮೊಗ್ಗದ ಹೊಳ್ಳೂರಿನ ಮೊಹಮ್ಮದ್ ಇಸ್ಮಾಯಿಲ್ (36) ಹಾಗೂ ಶಿವಮೊಗ್ಗದ ಸೂಳೆಬೈಲಿನ ಅಬ್ದುಲ್ ಅಜೀಜ್ (35) ಬಂಧಿತರು.
ಆ.12ರಂದು ರಾತ್ರಿ ಹುಲೇಕಲ್‌ನಲ್ಲಿ ಅಪರಿಚಿತ ಇಬ್ಬರು ವ್ಯಕ್ತಿಗಳು ಕಾಲ್ನಡಿಗೆಯಲ್ಲಿ ಬಂದು ಆಕಳು ಹಾಗೂ ಕರುಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಆರೋಪಿಗಳ ಪತ್ತೆ ಹಾಗೂ ಜಾನುವಾರುಗಳ ರಕ್ಷಣೆಗೆ ಪೊಲೀಸ್ ಅಧೀಕ್ಷಕರ ಸೂಚನೆಯಂತೆ ಎರಡು ತಂಡಗಳನ್ನು ರಚಿಸಿ ತನಿಖೆ ಕೈಗೊಂಡಿದ್ದರು. ತನಿಖೆಯ ವೇಳೆ ಜಾನುವಾರು ಕಳ್ಳತನದ ಗ್ಯಾಂಗ್ ಪತ್ತೆಯಾಗಿದ್ದು, ಶಿವಮೊಗ್ಗ ಮೂಲದ ಮೂವರನ್ನು ಬಂಧಿಸಲಾಗಿದೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಸುಮಾರು 3 ಲಕ್ಷ ರೂ. ಮೌಲ್ಯದ ಮಹೀಂದ್ರಾ ಎಕ್ಸ್‌ಯುವಿ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಪತ್ತೆ ಕಾರ್ಯ ಮುಂದುವರಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ. ಕೃಷ್ಣಮೂರ್ತಿ, ಡಿವೈಎಸ್‌ಪಿ ಗೀತಾ ಪಾಟೀಲ್ ಮಾರ್ಗದರ್ಶನದಲ್ಲಿ ಶಿರಸಿ ಗ್ರಾಮೀಣ ಠಾಣೆಯ ಪೊಲೀಸ್ ನಿರೀಕ್ಷಕ ರಮೇಶ ಹೂಗಾರ ನೇತೃತ್ವದಲ್ಲಿ
ಪಿಎಸ್‌ಐ ಸಂತೋಷಕುಮಾರ ಎಂ., ತನಿಖಾ ಪಿ.ಎಸ್.ಐ ಅಶೋಕ ರಾಠೋಡ, ಎಎಸ್‌ಐ ಪ್ರದೀಪ ರೇವಣಕರ, ಮಹಾಂತೇಶ್ ಬಾರಕೇರ್, ಬಸವರಾಜ್ ಹಗರಿ, ಕೋಟೇಶ ನಾಗರವಳ್ಳಿ, ಅರುಣಕುಮಾರ.ವಿ, ವೆಂಕಟ್ರಮಣ ನಾಯ್ಕ, ದಾವಲ್ ಸಾಬ್ ಕುಂದಿ, ಮಾರುತಿ ಗೌಡ, ಸಂದೀಪ ನಿಂಬಾಯಿ, ಗಣಪತಿ ನಾಯ್ಕ, ಭರತ್.ಎನ್.ಜೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಕಾರವಾರದ ಭದ್ರಾ ಹೋಟಲ್ ಬಳಿ ಚಾಕು ಹಿಡಿದು ಹೊಡೆದಾಟ -ದೂರು ದಾಖಲು.
ಕಾರವಾರ(karwar) ನಗರದ ಕೋಡಿಬಾಗದ ಭದ್ರಾ ಹೋಟೆಲ್ ಬಳಿ ಮಧ್ಯರಾತ್ರಿ ನಡೆದ ಯುವಕರ ನಡುವಿನ ಗಲಾಟೆ ಇದೀಗ ಕಾರವಾರದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಹಳೆಯ ವೈಷಮ್ಯದ ಕಿಡಿಯಿಂದ ಆರಂಭವಾದ ಮಾತಿನ ಚಕಮಕಿ ಕೆಲವೇ ಕ್ಷಣಗಳಲ್ಲಿ ಹಲ್ಲೆ, ಚಾಕು ದಾಳಿಯ ಯತ್ನ ಹಾಗೂ ಪರಸ್ಪರ ಆರೋಪ-ಪ್ರತ್ಯಾರೋಪದ ಮಟ್ಟಿಗೆ ತಲುಪಿದೆ. ಆದರೆ ಈ ಪ್ರಕರಣದ ಅತ್ಯಂತ ಕುತೂಹಲಕಾರಿ ಅಂಶವೆಂದರೆ, ಎರಡೂ ಕಡೆಯವರು ಎದುರಾಳಿ ಗುಂಪೇ ಚಾಕುವಿನಿಂದ ಕುತ್ತಿಗೆಗೆ ಇರಿಯಲು ಯತ್ನಿಸಿದೆ ಎಂದು ಆರೋಪಿಸಿರುವುದು.
ಘಟನೆಗೆ ಸಂಬಂಧಿಸಿದಂತೆ ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ಎರಡೂ ಗುಂಪುಗಳ ವಿರುದ್ಧ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಆ. 28ರ ಮಧ್ಯರಾತ್ರಿ ಭದ್ರಾ ಹೋಟೆಲ್ ಬಳಿ ನಿಜವಾಗಿ ಏನಾಯಿತು ಎಂಬ ಪ್ರಶ್ನೆಗೆ ಇದೀಗ ಪೊಲೀಸ್ ತನಿಖೆಯೇ ಉತ್ತರ ನೀಡಬೇಕಿದೆ.
ಇದನ್ನೂ ಓದಿ:-Karwar |300 ಕೋಟಿ ವಂಚನೆ ಪ್ರಕರಣ- ಕಾರವಾರದಲ್ಲಿ ಇಡಿ ದಾಳಿ
ಕೋಡಿಬಾಗದ ಸಾಯಿಕಟ್ಟಾ ನಿವಾಸಿ ವೈಭವ ಕುಡ್ತಲಕರ್ (19) ನೀಡಿರುವ ದೂರಿನ ಪ್ರಕಾರ, ಆತ ತನ್ನ ಸ್ನೇಹಿತರಾದ ವೇದ ವಿನಯ್ ಪಾವಸ್ಕರ್, ಗೌತಮ್ ಬಾಬು ಮೋಗೇರ, ನಿಖಿಲ್ ಶ್ಯಾಮಸುಂದರ್ ಹಾಗೂ ವಿಜೇತ ಬಾಬು ಮೋಗೇರ ಅವರೊಂದಿಗೆ ಗೋವಾಕ್ಕೆ ತೆರಳಿ ಪಾರ್ಟಿ ಮುಗಿಸಿಕೊಂಡು ಕಾರವಾರಕ್ಕೆ ಮರಳಿದ್ದ. ಬಳಿಕ ಭದ್ರಾ ಹೋಟೆಲ್ ಬಳಿ ತನ್ನ ಸ್ನೇಹಿತ ಹಾಗೂ ಹೋಟೆಲ್ ಸಿಬ್ಬಂದಿ ಅಭಿಷೇಕ ಮೇಸ್ತಾ ಜೊತೆ ಮಾತನಾಡುತ್ತಿದ್ದಾಗ ಓಂಕಾರ ಮತ್ತು ಕಾರ್ತಿಕ ಮಂಜುನಾಥ ಕಟ್ಟಿಮನಿ ಅಲ್ಲಿಗೆ ಬಂದಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಹಳೆಯ ಜಗಳದ ವಿಚಾರವೇ ಮತ್ತೆ ಮುಂದಕ್ಕೆ ಬಂದಿದ್ದು, ಕಾರ್ತಿಕ ಅಭಿಷೇಕ ಮೇಸ್ತಾ ಜೊತೆ ವಾಗ್ವಾದ ನಡೆಸಿದ್ದಾನೆ ಎನ್ನಲಾಗಿದೆ. ಮಾತಿಗೆ ಮಾತು ಬೆಳೆದಂತೆ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಅವಾಚ್ಯ ಶಬ್ದಗಳ ವಿನಿಮಯದ ನಂತರ ಗಲಾಟೆ ತೀವ್ರ ಸ್ವರೂಪ ಪಡೆದಿದೆ ಎಂದು ವೈಭವ ಆರೋಪಿಸಿದ್ದಾನೆ.
ಈ ವೇಳೆ ಕಾರ್ತಿಕ ಚಾಕುವಿನಿಂದ ತನ್ನ ಕುತ್ತಿಗೆಗೆ ಇರಿಯಲು ಯತ್ನಿಸಿದ್ದಾನೆ ಎಂದು ವೈಭವ ಗಂಭೀರ ಆರೋಪ ಮಾಡಿದ್ದಾನೆ. ದಾಳಿಯಿಂದ ತಪ್ಪಿಸಿಕೊಳ್ಳಲು ಕೈ ಅಡ್ಡಹಾಕಿದಾಗ ಚಾಕು ಎಡಗೈ ತೋರು ಬೆರಳಿಗೆ ತಾಗಿ ಗಾಯವಾಗಿದೆ ಎಂದು ಆತ ದೂರಿನಲ್ಲಿ ತಿಳಿಸಿದ್ದಾನೆ. ನಂತರ ಕಾರ್ತಿಕ ಸ್ಥಳದಿಂದ ತೆರಳಿದ್ದಾನೆ ಎನ್ನಲಾಗಿದೆ.
ಆದರೆ ಇದೇ ಘಟನೆಯ ಕುರಿತು ಕಾರ್ತಿಕ ಮಂಜುನಾಥ ಕಟ್ಟಿಮನಿ ನೀಡಿರುವ ದೂರು ಸಂಪೂರ್ಣವಾಗಿ ಬೇರೆಯದ್ದೇ ಚಿತ್ರಣವನ್ನು ಮುಂದಿಡುತ್ತದೆ.
ಕಾರ್ತಿಕನ ಹೇಳಿಕೆಯ ಪ್ರಕಾರ, ಹಿಂದೆ ನಡೆದ ಗಲಾಟೆಯ ದ್ವೇಷದಿಂದ ಅಭಿಷೇಕ ಮೇಸ್ತಾ ಹಾಗೂ ಆತನ ಸ್ನೇಹಿತರಾದ ವೈಭವ ಉಲ್ಲಾಸ ಕುಡ್ತಲಕರ್, ವೇದ ವಿನಯ್ ಪಾವಸ್ಕರ್, ನಿಖಿಲ್ ಶ್ಯಾಮಸುಂದರ ಗೋಕರ್ಣ, ಗೌತಮ್ ಬಾಬು ಮೋಗೇರ ಹಾಗೂ ವಿಜೇತ ಬಾಬು ಮೋಗೇರ ಸೇರಿಕೊಂಡು ತನ್ನ ಮೋಟಾರ್ ಸೈಕಲ್ ಅಡ್ಡಗಟ್ಟಿ ಜಗಳಕ್ಕೆ ಮುಂದಾಗಿದ್ದಾರೆ.
ಮಾತಿನ ಚಕಮಕಿ ಹಲ್ಲೆಗೆ ತಿರುಗಿದ್ದು, ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಕಾರ್ತಿಕ ಆರೋಪಿಸಿದ್ದಾನೆ. ಇಲ್ಲಿಯೂ ಪ್ರಕರಣಕ್ಕೆ ಅಚ್ಚರಿಯ ತಿರುವು ಸಿಕ್ಕಿದ್ದು, ವೈಭವನೇ ಚಾಕುವಿನಿಂದ ತನ್ನ ಕುತ್ತಿಗೆಗೆ ಇರಿಯಲು ಯತ್ನಿಸಿದ್ದಾನೆ ಎಂದು ಕಾರ್ತಿಕ ಪ್ರತಿಯಾಗಿ ಗಂಭೀರ ಆರೋಪ ಮಾಡಿದ್ದಾನೆ.
ಚಾಕು ದಾಳಿಯಿಂದ ತಪ್ಪಿಸಿಕೊಳ್ಳಲು ಕೈಯಿಂದ ತಡೆಯುವ ವೇಳೆ ಎಡ ಅಂಗೈ ಮತ್ತು ಬೆರಳುಗಳಿಗೆ ಗಾಯವಾಗಿದೆ ಎಂದು ಆತ ದೂರಿನಲ್ಲಿ ತಿಳಿಸಿದ್ದಾನೆ. ಜೊತೆಗೆ ತಲೆ, ಕಿವಿಯ ಸಮೀಪ, ಕೆನ್ನೆ, ಕುತ್ತಿಗೆ ಹಾಗೂ ಬಲಗಣ್ಣಿನ ಭಾಗದಲ್ಲಿಯೂ ಗಾಯಗಳಾಗಿವೆ ಎಂದು ಹೇಳಲಾಗಿದೆ. ಗಾಯಗೊಂಡ ಕಾರ್ತಿಕನನ್ನು ಆತನ ತಂದೆ ಮತ್ತು ಸ್ನೇಹಿತ ಓಂಕಾರ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ ಎನ್ನಲಾಗಿದೆ.
ಹೀಗಾಗಿ ಒಂದೇ ರಾತ್ರಿ, ಒಂದೇ ಸ್ಥಳದಲ್ಲಿ ನಡೆದ ಗಲಾಟೆಯ ಕುರಿತು ಎರಡು ಕಡೆಯಿಂದಲೂ ಪರಸ್ಪರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಮೊದಲು ಜಗಳ ಆರಂಭಿಸಿದವರು ಯಾರು? ಚಾಕು ಯಾರ ಕೈಯಲ್ಲಿತ್ತು? ದಾಳಿಗೆ ಯತ್ನಿಸಿದವರು ಯಾರು? ಗಾಯಗಳು ಹೇಗೆ ಸಂಭವಿಸಿದವು? ಎಂಬ ಹಲವು ಪ್ರಶ್ನೆಗಳು ಇದೀಗ ತನಿಖೆಯ ಕೇಂದ್ರಬಿಂದುವಾಗಿವೆ.
ಹಳೆಯ ವೈಷಮ್ಯದಿಂದ ಹೊತ್ತಿಕೊಂಡ ಗಲಾಟೆ ಮಧ್ಯರಾತ್ರಿ ಹೈಡ್ರಾಮಾವಾಗಿ ಮಾರ್ಪಟ್ಟಿದ್ದು, ಎರಡೂ ಕಡೆಯ ದೂರುಗಳ ಆಧಾರದ ಮೇಲೆ ಕಾರವಾರ ಶಹರ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭದ್ರಾ ಹೋಟೆಲ್ ಬಳಿ ನಡೆದ ಆ ರಾತ್ರಿ ಗಲಾಟೆಯ ಅಸಲಿ ಸತ್ಯ ಏನು ಎಂಬುದು ಪೊಲೀಸ್ ತನಿಖೆ ಮುಂದುವರಿದಂತೆ ಮಾತ್ರ ಸ್ಪಷ್ಟವಾಗಬೇಕಿದೆ.
ಯಲ್ಲಾಪುರ | ಅರಬೈಲ್ ಘಟ್ಟದಲ್ಲಿ ಕೆಎಸ್‌ಆರ್‌ಟಿಸಿ ಬಸ್–ಮಿನಿ ಬಸ್ ಡಿಕ್ಕಿ: 10ಕ್ಕೂ ಹೆಚ್ಚು ಮಂದಿಗೆ ಗಾಯ

ಯಲ್ಲಾಪುರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ (ಹೆದ್ದಾರಿ 52) ಅರಬೈಲ್ ಘಟ್ಟ ಪ್ರದೇಶದ ಕಡಿದಾದ ತಿರುವಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಮಿನಿ ಬಸ್ ನಡುವೆ ರಸ್ತೆ ಅಪಘಾತ ಸಂಭವಿಸಿದ್ದು, ಸುಮಾರು 10 ಮಂದಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಓರ್ವ ಮಹಿಳೆಯ ಕೈ ಮೂಳೆ ಮುರಿದಿದೆ.
ಅರಬೈಲ್ ಘಟ್ಟದ ಕಡಿದಾದ ತಿರುವಿನಲ್ಲಿ ಮಿನಿ ಬಸ್ ಅತಿ ವೇಗವಾಗಿ ಬಂದಿದ್ದು, ಚಾಲಕನ ನಿಯಂತ್ರಣ ತಪ್ಪಿ ಮುನ್ನುಗ್ಗಿದೆ ಎನ್ನಲಾಗಿದೆ. ಈ ವೇಳೆ ಎದುರಿನಿಂದ ಕೆಎಸ್‌ಆರ್‌ಟಿಸಿ ಬಸ್ ಬರುತ್ತಿತ್ತು.
ಮಿನಿ ಬಸ್ ನಿಯಂತ್ರಣ ತಪ್ಪಿರುವುದನ್ನು ಗಮನಿಸಿದ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಸಮಯಪ್ರಜ್ಞೆ ಮೆರೆದು ದೊಡ್ಡ ಅಪಘಾತ ತಪ್ಪಿಸಲು ಬಸ್ ಅನ್ನು ರಸ್ತೆ ಬದಿಯ ಗುಡ್ಡದತ್ತ ತಿರುಗಿಸಿದ್ದಾರೆ. ಈ ವೇಳೆ ಮಿನಿ ಬಸ್ ಕೆಎಸ್‌ಆರ್‌ಟಿಸಿ ಬಸ್‌ನ ಹಿಂಭಾಗಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ:-Yallapur |ಮೊಬೈಲ್ ,ಹಣ ಕಳೆದುಕೊಂಡು ಕಾಡಿನಲ್ಲಿ ಅಲೆದ ವಿದೇಶಿಗನಿಗೆ ಯಲ್ಲಾಪುರ ಪೊಲೀಸರ ನೆರವು.
ಡಿಕ್ಕಿಯ ಪರಿಣಾಮ ಎರಡೂ ವಾಹನಗಳು ಭಾಗಶಃ ಜಖಂಗೊಂಡಿದ್ದು, ಸುಮಾರು 10 ಮಂದಿ ಗಾಯಗೊಂಡಿದ್ದಾರೆ. ಓರ್ವ ಮಹಿಳೆಯ ಕೈ ಮೂಳೆ ಮುರಿದಿದ್ದು, ಗಾಯಾಳುಗಳನ್ನು ಸ್ಥಳೀಯರ ನೆರವಿನಿಂದ ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಚಾಲಕನ ಸಮಯೋಚಿತ ಹಾಗೂ ಎಚ್ಚರಿಕೆಯ ಕ್ರಮದಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಅಪಘಾತದ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ರಸ್ತೆಯಲ್ಲಿ ಅಡ್ಡಲಾಗಿ ನಿಂತಿದ್ದ ಎರಡೂ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಘಟನೆ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕಾರವಾರ ಮೆಡಿಕಲ್ ಕಾಲೇಜಿಗೆ ಮಾಜಿ CM ‘ರಾಮಕೃಷ್ಣ ಹೆಗಡೆ’ ಹೆಸರು: ಡಿ.ಕೆ.ಶಿವಕುಮಾರ್ ಘೋಷಣೆ.

ಕಾರವಾರ: ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಸ್ಮರಣೆಯನ್ನು ಶಾಶ್ವತವಾಗಿಸಲು ಉತ್ತರ ಕನ್ನಡ ಜಿಲ್ಲೆಯ ಕಾರವಾರ ವೈದ್ಯಕೀಯ ಕಾಲೇಜಿಗೆ (Karwar Medical College) ರಾಮಕೃಷ್ಣ ಹೆಗಡೆ ಅವರ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶನಿವಾರ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರೊಂದಿಗೆ ಉದ್ಘಾಟನೆಗೊಂಡ ರಾಮಕೃಷ್ಣ ಹೆಗಡೆಯವರ ಜನ್ಮಶತಾಬ್ದಿ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ರಿಮ್ಸ್ ಸೇರಿದಂತೆ, ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆಯ ಪ್ರಮುಖ ರಸ್ತೆಯೊಂದಕ್ಕೂ ಹೆಗಡೆಯವರ ಹೆಸರಿಡಲಾಗುವುದು ಎಂದು ಅವರು ತಿಳಿಸಿದರು.
ಅತ್ಯುತ್ತಮ ಪಂಚಾಯಿತಿಗೆ ‘ರಾಮಕೃಷ್ಣ ಹೆಗಡೆ ಪ್ರಶಸ್ತಿ’
ಗ್ರಾಮೀಣಾಡಳಿತಕ್ಕೆ ಹೆಗಡೆಯವರು ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಿದ ಸಿಎಂ, ಪ್ರತಿ ವರ್ಷ ಹೆಗಡೆಯವರ ಜನ್ಮದಿನದಂದು ಅತ್ಯುತ್ತಮ ಸಾಧನೆ ಮಾಡಿದ ಪಂಚಾಯಿತಿಗೆ ‘ರಾಮಕೃಷ್ಣ ಹೆಗಡೆ ಅತ್ಯುತ್ತಮ ಪಂಚಾಯಿತಿ ಪ್ರಶಸ್ತಿ’ ನೀಡುವ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರೊಂದಿಗೆ ಚರ್ಚಿಸಿ ಯೋಜನೆ ರೂಪಿಸಲು ಸೂಚಿಸಲಾಗಿದೆ ಎಂದರು. ಕರ್ನಾಟಕದಲ್ಲಿ ಅವರು ಜಾರಿಗೆ ತಂದ ಪಂಚಾಯತ್ ರಾಜ್ ವ್ಯವಸ್ಥೆಯ ಪ್ರಯೋಗಗಳು ಇಡೀ ದೇಶಕ್ಕೆ ಮಾದರಿಯಾದವು ಹಾಗೂ ರಾಜೀವ್ ಗಾಂಧಿ ಸರ್ಕಾರದ ಅವಧಿಯಲ್ಲಿ 73ನೇ ಮತ್ತು 74ನೇ ಸಂವಿಧಾನ ತಿದ್ದುಪಡಿಗಳಿಗೆ ಪ್ರೇರಣೆಯಾದವು ಎಂದು ಅವರು ನೆನಪಿಸಿಕೊಂಡರು.
ನಾಯಕರನ್ನು ಬೆಳೆಸಿದ ನಾಯಕ; ಮೌಲ್ಯಾಧಾರಿತ ರಾಜಕಾರಣ
”ರಾಮಕೃಷ್ಣ ಹೆಗಡೆ ಕೇವಲ ಅಧಿಕಾರ ನಡೆಸಿದ ನಾಯಕರಲ್ಲ, ಅವರು ಪಂಚಾಯಿತಿಯಿಂದ ಹಿಡಿದು ಪಾರ್ಲಿಮೆಂಟ್ ವರೆಗೆ ಹೊಸ ನಾಯಕತ್ವವನ್ನು ಕಟ್ಟಿದವರು. ನಾಯಕನ ಕೆಲಸ ಕೇವಲ ಅನುಯಾಯಿಗಳನ್ನು ಸೃಷ್ಟಿಸುವುದಲ್ಲ, ಬದಲಾಗಿ ಮತ್ತಷ್ಟು ನಾಯಕರನ್ನು ಬೆಳೆಸುವುದು. ಇದೇ ಹೆಗಡೆಯವರ ಮೂಲ ಮಂತ್ರವಾಗಿತ್ತು,” ಎಂದು ಡಿ.ಕೆ. ಶಿವಕುಮಾರ್ ಬಣ್ಣಿಸಿದರು.
ಹೆಗಡೆಯವರ ರಾಜಕೀಯ ಗರಡಿಯಲ್ಲಿ ಬೆಳೆದ ಸಿದ್ದರಾಮಯ್ಯ, ಆರ್.ವಿ. ದೇಶಪಾಂಡೆ, ಬಸವರಾಜ ರಾಯರೆಡ್ಡಿ, ಬಿ.ಎಲ್. ಶಂಕರ್ ಮುಂತಾದ ನಾಯಕರು ಇಂದು ವಿವಿಧ ಪಕ್ಷಗಳಲ್ಲಿದ್ದಾರೆ. ಅವರು ಜಾತಿ ಆಧಾರಿತ ರಾಜಕಾರಣಕ್ಕೆ ಸೀಮಿತರಾಗದೆ ಮೌಲ್ಯಾಧಾರಿತ ರಾಜಕಾರಣ ಹಾಗೂ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ್ದರು ಎಂದು ಹೇಳಿದರು.
ಶಿಕ್ಷಣಕ್ಕೆ ಮುಕ್ತ ಅವಕಾಶ ಹಾಗೂ ಪ್ರಧಾನಿಯಾಗುವ ಅರ್ಹತೆ
ಕರ್ನಾಟಕದಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣದ ವಿಸ್ತರಣೆಗೆ ಹೆಗಡೆಯವರ ನೀತಿಗಳು ಭದ್ರ ಬುನಾದಿ ಹಾಕಿದವು. ಇಂದು ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯಿಂದಾಗಿ ಪ್ರತಿ ವರ್ಷ 13,940 ವೈದ್ಯರು ಹಾಗೂ 1.25 ಲಕ್ಷಕ್ಕೂ ಹೆಚ್ಚು ಎಂಜಿನಿಯರ್‌ಗಳು ಹೊರಹೊಮ್ಮುತ್ತಿದ್ದಾರೆ.
“ಅವರಿಗೆ ದೇಶದ ಪ್ರಧಾನಮಂತ್ರಿಯಾಗುವ ಅರ್ಹತೆ ಮತ್ತು ಅವಕಾಶಗಳೆರಡೂ ಇದ್ದವು, ಆದರೆ ಕೆಲವು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ,” ಎಂದ ಸಿಎಂ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ ಮಾತನ್ನು ಉಲ್ಲೇಖಿಸಿ, ಹೆಗಡೆಯವರಲ್ಲಿ ಶ್ರೀರಾಮನ ಆದರ್ಶ ಹಾಗೂ ಶ್ರೀಕೃಷ್ಣನ ಮುತ್ಸದ್ದಿತನ ಎರಡೂ ಇತ್ತು ಎಂದು ಸ್ಮರಿಸಿದರು. ನಮ್ಮ ಸರ್ಕಾರವು ಹೆಗಡೆಯವರ ತತ್ವಗಳು ಹಾಗೂ ಪಂಚಾಯತ್ ರಾಜ್ ದೃಷ್ಟಿಕೋನವನ್ನು ಮುಂದಕ್ಕೂ ಕೊಂಡೊಯ್ಯಲಿದೆ ಎಂದು ಸ್ಪಷ್ಟಪಡಿಸಿದರು
ಕಾರವಾರ | 14 ವರ್ಷದ ಬಾಲಕ ನಾಪತ್ತೆ – ಪತ್ತೆಗೆ ಪೊಲೀಸರಿಂದ ಸಾರ್ವಜನಿಕರ ನೆರವು ಕೋರಿಕೆ

ಕಾರವಾರ: ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ 14 ವರ್ಷ 11 ತಿಂಗಳ ಬಾಲಕ ಕೇಸರ ಪ್ರಶಾಂಶ ಬಂಕಾಪೂರ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಕಾರವಾರ ಪೊಲೀಸರು ಸಾರ್ವಜನಿಕರ ನೆರವು ಕೋರಿದ್ದಾರೆ.
ಕಳೆದ ಎರಡು ವರ್ಷಗಳಿಂದ ಬಾಲಕ ಕಾರವಾರದ ಬಿ.ಸಿ.ಎಂ ಹಾಸ್ಟೆಲ್‌ನಲ್ಲಿ ವಾಸ್ತವ್ಯ ಹೂಡಿ ವಿದ್ಯಾಭ್ಯಾಸ ಮಾಡುತ್ತಿದ್ದನು. ಆಗಸ್ಟ್ 27ರಂದು ಸಂಜೆ 5.30ಕ್ಕೆ ಶಾಲಾ ಸಮಯ ಮುಗಿದ ಬಳಿಕ ಹಾಸ್ಟೆಲ್‌ಗೆ ಮರಳದೆ, ಮನೆಗೂ ತೆರಳದೆ ನಾಪತ್ತೆಯಾಗಿದ್ದಾನೆ.
ಬಾಲಕನ ಚಹರೆ
ನಾಪತ್ತೆಯಾಗಿರುವ ಬಾಲಕ ಸುಮಾರು 5.2 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹಾಗೂ ದುಂಡು ಮುಖ ಹೊಂದಿದ್ದಾನೆ. ಕನ್ನಡ ಭಾಷೆ ಮಾತನಾಡುತ್ತಾನೆ.
ಬಾಲಕ ನಾಪತ್ತೆಯಾದ ಸಂದರ್ಭದಲ್ಲಿ ಬಿಳಿ ಬಣ್ಣದ ಶರ್ಟ್ ಹಾಗೂ ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ಇದ್ದರೆ ಪೊಲೀಸರಿಗೆ ತಿಳಿಸಿ
ಬಾಲಕನ ಕುರಿತು ಯಾವುದೇ ಮಾಹಿತಿ ಲಭ್ಯವಾದಲ್ಲಿ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಕಾರವಾರ ಮಹಿಳಾ ಪೊಲೀಸ್ ಠಾಣೆ ಮನವಿ ಮಾಡಿದೆ.
ಮಾಹಿತಿ ದೊರೆತಲ್ಲಿ ಕಾರವಾರ ಪೊಲೀಸ್ ಕಂಟ್ರೋಲ್ ರೂಂ – 9480805200, ಕಾರವಾರ ಮಹಿಳಾ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ – 8277987514 ಅಥವಾ ಮಹಿಳಾ ಠಾಣೆಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ – 8277987555 ಅವರನ್ನು ಸಂಪರ್ಕಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ಕೋರಲಾಗಿದೆ.
ಗಂಗಾವಳಿಯ ಸೌಹಾರ್ದತೆಯ ಕೊಂಡಿ ಇಸ್ಮಾಯಿಲ್ ಸಾಬ್ ನಿಧನ.

ಕುಮಟಾ ; ತಾಲ್ಲೂಕಿನ ಗಂಗಾವಳಿ ಗ್ರಾಮದ ಪ್ರಖ್ಯಾತ ಪಟಾಕಿ ತಯಾರಕರಾದ ಅಂಕೋಲಾ ಫೈರ್ ವರ್ಕ್ಸ್ ಮಾಲಕ ಇಸ್ಮಾಯಿಲ್ ಸಾಬ್ (74), ಶನಿವಾರ ನಿಧನ ಹೊಂದಿದರು.
ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.
ಸರ್ವ ಧರ್ಮಿಯರ ಹಬ್ಬ ಹರಿದಿನಗಳಲ್ಲಿ ಪಟಾಕಿ ತಯಾರಿಸಿ ಹಬ್ಬಕ್ಕೆ ಇನ್ನಷ್ಟು ಮೆರುಗು ನೀಡುತ್ತಿದ್ದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುವ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ಇವರು ಬಣ್ಣ ಬಣ್ಣದ ಪಟಾಕಿ ತಯಾರಿಸಿ ರಾವಣನ ಪ್ರತಿಕೃತಿಯನ್ನು ಪಟಾಕಿಯಿಂದಲೇ ಸುಡುವ ಮೂಲಕ ನೆರೆದಿದ್ದ ಸಾವಿರಾರು ಜನರಿಗೆ ಮನರಂಜನೆ ದೊರಕುತ್ತಿತ್ತು.
ಈ ಮೂಲಕ ಸಾಕಷ್ಟು ಪ್ರಶಸ್ತಿಗಳು ಇವರಿಗೆ ಲಭಿಸಿವೆ.
ಇಸ್ಮಾಯಿಲ್ ಸಾಬ್ ನಿಧನದ ಸುದ್ದಿಯಿಂದಾಗಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಈ ಮೂಲಕ ಸೌಹಾರ್ದತೆಯ ಕೊಂಡಿಯೊಂದು ಕಳಚಿದೆ.
ಮೃತರಿಗೆ ಕಾಂಗ್ರೇಸ್ ಅಲ್ಪಸಂಖ್ಯಾತ ರಾಜ್ಯ ಕಾರ್ಯದರ್ಶಿ ಹನೀಫ್ ಸೇರಿದಂತೆ ಮೂವರು ಪುತ್ರರು,ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಬಿಟ್ಟು ಅಗಲಿದ್ದಾರೆ.







