Ration: ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ ಇಲಾಖೆಯಿಂದ ಸಿಹಿ ಸುದ್ದಿ
ರಾಜ್ಯದ ಪಡಿತರ ಚೀಟಿದಾರರಿಗೆ ಅನುಕೂಲ ಆಗುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಇನ್ಮುಂದೆ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಪ್ರತಿದಿನ ಬೆಳಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೆ ಕಡ್ಡಾಯವಾಗಿ ತೆರೆದಿರಬೇಕು. ಈ ಅವಧಿಯಲ್ಲಿ ಫಲಾನುಭವಿಗಳಿಗೆ ಪಡಿತರ ವಿತರಣೆ ಮಾಡಬೇಕೆಂದು ಇಲಾಖೆಯ ಆಯುಕ್ತರು ಕಟ್ಟಿನಿಟ್ಟಿನ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ:-Ration card :ಉಚಿತ ಪಡಿತರ ರದ್ದು : ನಿಯಮ ಬದಲಿಸಿದ ಕೇಂದ್ರ ಸರ್ಕಾರ
ಜುಲೈ-2026ರ ಅನ್ನಭಾಗ್ಯ ಅಕ್ಕಿ ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿ ವಿತರಣೆ ಮಾಡಿವ ಅಕ್ಕಿಯನ್ನು ಫಲಾನುಭವಿಗಳಿಗೆ ಯಾವುದೇ ವಿಳಂಬ ಆಗದಂತೆ ತಲುಪಿಸುವ ಉದ್ದೇಶದಿಂದ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ. ರಾಜ್ಯದ ಕೆಲವೆಡೆ ನ್ಯಾಯಬೆಲೆ ಅಂಗಡಿ ಮಾಲೀಕರು ಸಗಟು ಮಳಿಗೆಗಳಿಂದ ಆಹಾರ ಧಾನ್ಯವನ್ನು ಸಂಪೂರ್ಣವಾಗಿ ಪಡೆದುಕೊಂಡಿದ್ದರೂ ಪಡಿತರ ವಿತರಣೆಯನ್ನು ತಕ್ಷಣ ಆರಂಭಿಸದೆ ವಿಳಂಬ ಮಾಡಲಾಗುತ್ತಿದೆ. ಇದು ಇಲಾಖೆಯ ಗಮನಕ್ಕೆ ಬಂದಿದ್ದು, ಎಲ್ಲಾ ಆಹಾರಧಾನ್ಯ ಬಂದ ಬಳಿಕವೇ ವಿತರಣೆ ಆರಂಭಿಸುತ್ತಿರುವ ಪ್ರಕರಣಗಳೂ ವರದಿ ಆಗಿವೆ.
ಪಡಿತರ ವಿತರಣೆ ಸಮಯ ವಿಸ್ತರಣೆ.
ಯಾವ ಪ್ರಮಾಣದ ಆಹಾರಧಾನ್ಯ ಲಭ್ಯ ಆಗುತ್ತದೆಯೋ ಅದನ್ನು ತಕ್ಷಣವೇ ಫಲಾನುಭವಿಗಳಿಗೆ ವಿತರಣೆ ಮಾಡಬೇಕು. ಎಲ್ಲಾ ದಾಸ್ತಾನು ಬರುವವರೆಗೆ ಕಾಯಬಾರದು ಎಂದು ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಜುಲೈ ತಿಂಗಳ ಆಹಾರಧಾನ್ಯ ಹಾಗೂ ಅನ್ನಭಾಗ್ಯ ಅಕ್ಕಿಯ ವಿತರಣೆಯನ್ನು ಜುಲೈ 31ರೊಳಗೆ ಪೂರ್ಣಗೊಳಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಆದ್ದರಿಂದ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕಾರ್ಯನಿರ್ವಹಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಲಾಗಿದೆ.
ಜಿಲ್ಲೆಗಳ ಜಂಟಿ ಹಾಗೂ ಉಪನಿರ್ದೇಶಕರು ತಮ್ಮ ವ್ಯಾಪ್ತಿಯ ಎಲ್ಲಾ ನ್ಯಾಯಬೆಲೆ ಅಂಗಡಿಗಳು ನಿಗದಿತ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕು. ಆಹಾರ ನಿರೀಕ್ಷಕರು ನಿಯಮಿತವಾಗಿ ಮೇಲ್ವಿಚಾರಣೆ ನಡೆಸಿ, ಅರ್ಹ ಪಡಿತರ ಚೀಟಿದಾರರಿಗೆ ಸಂಪೂರ್ಣ ಆಹಾರಧಾನ್ಯ ವಿತರಣೆ ಆಗುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಇಲಾಖೆ ಆದೇಶ ಹೊರಡಿಸಿದೆ.
ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆ
ಸರ್ಕಾರದ ಆದೇಶವನ್ನು ಉಲ್ಲಂಘಿಸಿ ನಿಗದಿತ ಸಮಯದಲ್ಲಿ ಅಂಗಡಿ ತೆರೆಯದಿದ್ದರೆ ಅಥವಾ ಪಡಿತರ ವಿತರಣೆಯಲ್ಲಿ ಅನಗತ್ಯ ವಿಳಂಬ ಆದ್ರೆ, ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿ ವಿತರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.
ಬಿಪಿಎಲ್ ಕಾರ್ಡ್ ಕಳೆದುಕೊಂಡವರಿಗೆ ಗುಡ್ ನ್ಯೂಸ್
ರಾಜ್ಯದಲ್ಲಿ ಸರ್ಕಾರವು ಇತ್ತೀಚೆಗಷ್ಟೇ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಡೆದ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸುವ ಕಾರ್ಯಕ್ಕೆ ಮುಂದಾಗಿತ್ತು. ಇದೇ ವೇಳೆ ಅರ್ಹರ ಬಳಿಯ ಈ ಪಡಿತರ ಚೀಟಿಗಳನ್ನು ರದ್ದುಪಡಿಸಿ ಎಪಿಎಲ್‌ಗೆ ವರ್ಗಾವಣೆ ಮಾಡಲಾಗಿದೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಆಗ ಸರ್ಕಾರ ಯಾರೆಲ್ಲಾ ಅರ್ಹರ ಬಳಿಯ BPL ಕಾರ್ಡ್ ರದ್ದಾಗಿವೆಯೋ ಅವರು ಮತ್ತೆ ಅರ್ಜಿ ಸಲ್ಲಿಕೆ ಮಾಡಿ ವಾಪಾಸ್ ಪಡೆಯಬಹುದು ಎಂದು ನೆಮ್ಮದಿಯ ಸುದ್ದಿ ನೀಡಿತ್ತು.
ಅದರಂತೆಯೇ ಅರ್ಹರು ಅರ್ಜಿ ಸಲ್ಲಿಕೆ ಮಾಡಿ ಮತ್ತೆ ಬಿಪಿಎಲ್ ಕಾರ್ಡ್‌ಗಳನ್ನು ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದರ ಬೆನ್ನಲ್ಲೇ ಇದೀಗ ಅನಾರೋಗ್ಯಕ್ಕೆ ಒಳಗಾದವರಿಗೆ ಬೇಗನೇ ಕಾರ್ಡ್ ವಿತರಣೆ ಮಾಡುವಂತೆ ಕಟ್ಟಿನಿಟ್ಟಿನ ಸೂಚನೆಯನ್ನು ಕೂಡ ನೀಡಲಾಗಿತ್ತು. ಅನಾರೋಗ್ಯ ಪೀಡಿತರಿಗೆ ಯಾವುದೇ ವಿಳಂಬ ಆಗದಂತೆ 15 ದಿನಗಳ ಒಳಗಾಗಿ ಕಾರ್ಡ್ ವಿತರಣೆ ಮಾಡುವಂತೆ ಸರ್ಕಾರವು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ.
