Shirur| ಗುಡ್ಡ ಕುಸಿತ ದುರಂತ -ಎರಡು ವರ್ಷದ ನಂತರ ಮಣ್ಣು ತೆಗೆಯುವ ಕಾರ್ಯಾಚರಣೆಗೆ ಸಿದ್ದತೆ!
ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರಿನಲ್ಲಿ 2024 ರ ಜುಲೈ ನಲ್ಲಿ ಭೀಕರ ಗುಡ್ಡ ಕುಸಿತ ದುರಂತದಲ್ಲಿ 11 ಜನ ಸಾವುಕಂಡಿದ್ದರು . ಈವರೆಗೂ ಓರ್ವನ ಶವವನ್ನು ತೆಗೆಯಲು ಸಾಧ್ಯವಾಗದೇ ಕೋಟಿಗಟ್ಟಲೇ ಖರ್ಚುಮಾಡಿ ಕೊನೆಗೆ ಕೇರಳದ ಅರ್ಜುನ್ ಶವವನ್ನು ಹೊರತೆಗೆದು ಕಾರ್ಯಾಚರಣೆಯನ್ನೇ ನಿಲ್ಲಿಸಲಾಗಿತ್ತು.
Shirur :ಗುಡ್ಡ ಕುಸಿತದಲ್ಲಿ ಮಾಲೀಕನನ್ನು ಕಳೆದುಕೊಂಡು ಅನಾಥವಾಗಿದ್ದ ಶ್ವಾನ ಮ್ಯಾರಥಾನ್ ನಲ್ಲಿ ಓಟ :ಬೆಳ್ಳಿ ಪದಕ
ಇನ್ನು ಶಿರೂರಿನ (shirur)ರಾಷ್ಟ್ರೀಯ ಹೆದ್ದಾರಿ 66 ರ ಮೇಲ್ಭಾಗದ ಗುಡ್ಡದ ಮಣ್ಣು ಕುಸಿದು ರಸ್ತೆ ಗಲ್ಲದೇ ಪಕ್ಕದ ಗಂಗಾವಳಿ ನದಿಗೂ ಬಿದ್ದು,ನದಿಯಲ್ಲಿ ದೊಡ್ಡ ಪ್ರಮಾಣದ ಮಣ್ಣು ಶೇಕಡಣೆಯಾಗಿ ಚಿಕ್ಕ ದ್ವೀಪವೇ ನಿರ್ಮಾಣವಾಗಿತ್ತು. ಇನ್ನು ಬರುವ ಮಳೆಗಾಲದಲ್ಲಿ ಈ ಮಣ್ಣಿನಿಂದ ಅಕ್ಕ ಪಕ್ಕದ ಹಳ್ಳಿಯಲ್ಲಿ ಕೃತಕ ಪ್ರವಾಹ ಸೃಷ್ಟಿಯಾಗುವ ಆತಂಕ ಮೂಡಿತ್ತು. ಹೀಗಾಗಿ ಸ್ಥಳೀಯ ಜನರು ಈ ಮಣ್ಣನ್ನು ತೆರವು ಮಾಡುವಂತೆ ಆಗ್ರಹಿಸಿದ್ದರು.
ಇನ್ನು ರಸ್ತೆಯಲ್ಲಿ ಬಿದ್ದ ಮಣ್ಣು ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರೂ ,ರಸ್ತೆಯ ಒಂದು ಭಾಗದಲ್ಲಿ ಮಣ್ಣು ತೆಗೆದು ಗುಡ್ಡದ ಭಾಗದಲ್ಲಿ ಮಣ್ಣು ತೆಗೆಯದೇ ಬಿಡಲಾಗಿತ್ತು. ತಡೆಗೋಡೆ ನಿರ್ಮಿಸುವುದಾಗಿ ಹೇಳಿದ್ದ ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಈವರೆಗೂ ಕಾಮಗಾರಿ ಪ್ರಾರಂಭ ಮಾಡಲೇ ಇಲ್ಲ. ಇನ್ನು ಟೆಂಡರ್ ಕರೆದರೂ ಗುತ್ತಿಗೆದಾರರು ಬಿಡ್ ಮಾಡದ ಹಿನ್ನಲೆಯಲ್ಲಿ ಕಾಮಗಾರಿಗೆ ಚಾಲನೆ ದೊರೆತಿರಲಿಲ್ಲ.
ಸರ್ವೆ ಕಾರ್ಯ ಪ್ರಾರಂಭ

ಗಂಗಾವಳಿ ನದಿಯಲ್ಲಿ ಶೇಖರಣೆಗೊಂಡಿರುವ ಶಿರೂರು ಗುಡ್ಡದ ಮಣ್ಣು ತೆರವಿಗೆ ಬ್ಯಾತಿ ಮೆಟ್ರಿಕ್ ಸರ್ವೇ (Bathymetric Survey) ಕಾರ್ಯ ಆರಂಭಿಸಲಾಗಿದೆ.
ಇಂದು ಮಂಗಳವಾರ ಬಂದರು ಇಲಾಖೆಯ ಇಂಜಿನಿಯರ್ ರಾಜ್ ಕುಮಾರ್ , ಜಿಲ್ಲಾಧಿಕಾರಿ ಕಚೇರಿಯ ಪ್ರಾಕೃತಿಕ ವಿಕೋಪ ವಿಭಾಗದ ಸಹಾಯಕ ನಿರ್ದೇಶಕ ಪ್ರಶಾಂತ್ ಈ ಬ್ಯಾತಿ ಮೆಟ್ರಿಕ್ ಸರ್ವೆ ಕಾರ್ಯದಲ್ಲಿ ಭಾಗವಹಿಸಿದ್ದರು. ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಅಗತ್ಯ ಯಂತ್ರೋಪಕರಣಗಳ ನೆರವಿನಿಂದ ನದಿಯಲ್ಲಿನ ಮಣ್ಣು ತೆರವು ಕಾರ್ಯ ಆರಂಭಗೊಳ್ಳಲಿದೆ.
ಏನಿದು ಬ್ಯಾತಿ ಮೆಟ್ರಿಕ್ ಸರ್ವೇ?
ಬ್ಯಾತಿ ಮೆಟ್ರಿಕ್ ಸರ್ವೆ’ (Bathymetric Survey) ಎಂದರೇ ನೀರಿನ ಆಳ ಅಳೆಯುವುದು ಮತ್ತು ಜಲಸಮೂಹದ ತಳಭಾಗದ ನಕ್ಷೆಯನ್ನು ತಯಾರಿಸುವುದು. ನದಿ, ಸರೋವರ, ಸಮುದ್ರ ಅಥವಾ ಅಣೆಕಟ್ಟಿನ ನೀರು ನಿಂತ ಪ್ರದೇಶಗಳ ಆಳವನ್ನು ನಿಖರವಾಗಿ ಗುರುತಿಸಲು ಇದನ್ನು ಬಳಸಲಾಗುತ್ತದೆ. ನೀರಿನ ತಳಭಾಗವು ಯಾವ ರೀತಿಯಾಗಿದೆ ಬಂಡೆಗಳು, ಹಳ್ಳಗಳು, ಹೂಳು ತುಂಬಿದ ಪ್ರದೇಶಗಳು ಎಂದು ತಿಳಿಯಲು ಇದು ಸಹಾಯ ಮಾಡುತ್ತದೆ.

ಇದನ್ನು ಶಬ್ದದ ಅಲೆಗಳನ್ನು ಬಳಸಿ (ಸೋನಾರ್ Sonar) ನೀರಿನ ಆಳವನ್ನು ಲೆಕ್ಕಹಾಕಲಾಗುತ್ತದೆ. ಅಲ್ಲದೇ ಲಿಡಾರ್ (Lidar) ಮತ್ತು ಜಿಪಿಎಸ್ (GPS) ಮೂಲಕ ಲೇಸರ್ ಕಿರಣಗಳು ಮತ್ತು ಉಪಗ್ರಹ ತಂತ್ರಜ್ಞಾನದ ಮೂಲಕ ನಿಖರವಾದ ಸ್ಥಳ ಮತ್ತು ಅಳತೆಯನ್ನು ಬಳಸಿ ನಿರ್ಧರಿಸಲಾಗುತ್ತದೆ.
4 .34 ಕೋಟಿ ಹಣ ಬಿಡುಗಡೆ

ಸಧ್ಯ ಗಂಗಾವಳಿ ನದಿಯಲ್ಲಿ ಶಿರೂರು ಗುಡ್ಡದ ಮಣ್ಣು ತೆಗೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ₹2 ಕೋಟಿ ಹಾಗೂ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ₹2.35 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಒಟ್ಟು ₹4.34 ಕೋಟಿ ಹಣದಿಂದ ಗಂಗಾವಳಿ ನದಿಯಲ್ಲಿ ಬಿದ್ದ ಮಣ್ಣನ್ನು ತೆಗೆಯಲು ಸಿದ್ದತೆ ಮಾಡಿಕೊಳ್ಳಲಾಗಿದೆ.
