ಶಿವಮೊಗ್ಗ(07ಸೆಪ್ಟೆಂಬರ್ 2026) ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಲು ತೆರಳಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಶಿವಮೊಗ್ಗದಲ್ಲಿ (shivamogga) ಸೋಮವಾರ ಬೆಳ್ಳಂಬೆಳಿಗ್ಗೆ ನಡೆದಿದೆ.
ಗುಂಡೇಟಿಗೆ ಒಳಗಾದ ಆರೋಪಿಯನ್ನು ಉಮೇಶ್ ನಾಯ್ಕ್ (27) ಎಂದು ಗುರುತಿಸಲಾಗಿದೆ. ಶಿವಮೊಗ್ಗದ ಎನ್.ಆರ್.ಪುರ ರಸ್ತೆಯ ಲಿಂಗಾಪುರ ಸಮೀಪ ಈ ಘಟನೆ ನಡೆದಿದೆ.
ನಿನ್ನೆ ಸಂಜೆ ಶಿವಮೊಗ್ಗದ ರಾಮಿನಕೊಪ್ಪದಲ್ಲಿ ರೌಡಿಶೀಟರ್ ಕಿರಣ್ @ ಕುಳ್ಳಿ ಕಿರಣ್ ಎಂಬುವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಸಂಬಂಧ 3ರಿಂದ 4 ಮಂದಿ ದುಷ್ಕರ್ಮಿಗಳ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ:-Shivamogga | ಗೋಡೌನ್‌ನಲ್ಲಿದ್ದ ಒಣ ಅಡಿಕೆ ಕಳ್ಳತನ ಪ್ರಕರಣ- ಐವರ ಬಂಧನ
ಕಿರಣ್ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ತುಂಗಾನಗರ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಲಿಂಗಾಪುರ ಸಮೀಪ ಆರೋಪಿ ಉಮೇಶ್ ನಾಯ್ಕ್‌ನನ್ನು ಬಂಧಿಸಲು ಪೊಲೀಸರು ತೆರಳಿದ್ದರು.
ಬಂಧನಕ್ಕೆ ಮುಂದಾದ ವೇಳೆ ಆರೋಪಿ ಉಮೇಶ್ ನಾಯ್ಕ್ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿ ಪೊಲೀಸ್ ಸಿಬ್ಬಂದಿ ತಮ್ಮಣ್ಣ ಜಂಬಗಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆ.
ಈ ವೇಳೆ ತುಂಗಾನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗುರುರಾಜ್ ಕರ್ಕಿ ಅವರು ಹಲ್ಲೆ ಮಾಡದಂತೆ ಆರೋಪಿಗೆ ಎಚ್ಚರಿಕೆ ನೀಡಿದ್ದಾರೆ. ಆದರೂ ಆರೋಪಿ ಎಚ್ಚರಿಕೆಯನ್ನು ಧಿಕ್ಕರಿಸಿ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆಗೆ ಮುಂದಾದ ಹಿನ್ನೆಲೆಯಲ್ಲಿ, ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆದರೂ ಆರೋಪಿ ಪೊಲೀಸರ ಸೂಚನೆಯನ್ನು ಪಾಲಿಸದೆ ಹಲ್ಲೆಗೆ ಮುಂದಾದ ಹಿನ್ನೆಲೆ, ಇನ್ಸ್‌ಪೆಕ್ಟರ್ ಗುರುರಾಜ್ ಕರ್ಕಿ ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಬಳಿಕ ಗಾಯಗೊಂಡ ಉಮೇಶ್ ನಾಯ್ಕ್‌ನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಂಡೇಟಿನಿಂದ ಗಾಯಗೊಂಡ ಆರೋಪಿ ಉಮೇಶ್ ನಾಯ್ಕ್‌ಗೆ ಶಿವಮೊಗ್ಗದ (shivamogga) ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಆರೋಪಿಯ ಹಲ್ಲೆಯಿಂದ ಗಾಯಗೊಂಡ ಪೊಲೀಸ್ ಸಿಬ್ಬಂದಿ ತಮ್ಮಣ್ಣ ಜಂಬಗಿ ಅವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಿರಣ್ @ ಕುಳ್ಳಿ ಕಿರಣ್ ಕೊಲೆ ಪ್ರಕರಣ ಹಾಗೂ ಪೊಲೀಸ್ ಸಿಬ್ಬಂದಿಯ ಮೇಲಿನ ಹಲ್ಲೆ ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.
