ಶಿವಮೊಗ್ಗ (06 ಸೆಪ್ಟೆಂಬರ್2026):- ತೀರ್ಥಹಳ್ಳಿ (Thirthahalli)ತಾಲೂಕಿನ ಕುಡುಮಲ್ಲಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆರ್ಥಿಕ ಅವ್ಯವಹಾರದ ಆರೋಪ ಕೇಳಿಬಂದ ಬೆನ್ನಲ್ಲೇ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮದನ್ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಆತಂಕ ಮತ್ತು ಹಲವು ಅನುಮಾನಗಳಿಗೆ ಕಾರಣವಾಗಿದೆ.ಇದನ್ನೂ ಓದಿ:-PDO ಮನೆಯಲ್ಲಿ ಹಾಡು ಹಗಲೇ ₹1.38 ಕೋಟಿ ಚಿನ್ನಾಭರಣ,₹86 ನಗದು ಕಳ್ಳತನ.
ನಾಪತ್ತೆಯಾಗಿರುವ ಮದನ್ ಅವರಿಗೆ ಸೇರಿದ ಕಾರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಬಳ್ಳಿ–ಶಿವಪುರ ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕಾಡಿನಲ್ಲಿ ಪತ್ತೆಯಾದ ಕಾರು
ತೀರ್ಥಹಳ್ಳಿಯ ತಮ್ಮ ಮನೆಯಿಂದ ಕಾರಿನಲ್ಲಿ ಹೊರಟಿದ್ದ ಮದನ್ ಅವರು ವಾಪಸ್ ಮನೆಗೆ ಬಂದಿರಲಿಲ್ಲ ಎಂದು ತಿಳಿದುಬಂದಿದೆ. ಕುಟುಂಬಸ್ಥರು ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿದೆ.
ಈ ನಡುವೆ ಜಂಬಳ್ಳಿ–ಶಿವಪುರ ಅರಣ್ಯ ಪ್ರದೇಶದಲ್ಲಿ ಕಾರೊಂದು ಪತ್ತೆಯಾಗಿದ್ದು, ಪರಿಶೀಲನೆ ನಡೆಸಿದ ವೇಳೆ ಅದು ಕುಡುಮಲ್ಲಿಗೆ ಸೊಸೈಟಿಯ ಸಿಇಒ ಮದನ್ ಅವರಿಗೆ ಸೇರಿದ್ದ ಕಾರು ಎಂಬುದು ದೃಢಪಟ್ಟಿದೆ.
ಇದನ್ನೂ ಓದಿ:-Shivamogga | ಗೋಡೌನ್‌ನಲ್ಲಿದ್ದ ಒಣ ಅಡಿಕೆ ಕಳ್ಳತನ ಪ್ರಕರಣ- ಐವರ ಬಂಧನ
ಕಾರಿನಲ್ಲೇ ಕೀ ಇದ್ದು, ಮದನ್ ಅವರ ಮೊಬೈಲ್ ಫೋನ್ ಹಾಗೂ ಸೊಸೈಟಿಗೆ ಸಂಬಂಧಿಸಿದ ಕೆಲವು ಮಹತ್ವದ ಲೆಕ್ಕಪತ್ರಗಳು ಪತ್ತೆಯಾಗಿವೆ .ಅಲ್ಲದೆ, ಆರ್ಥಿಕ ಅವ್ಯವಹಾರ ಹಾಗೂ ತಮಗೆ ಆಗುತ್ತಿದ್ದ ಒತ್ತಡಕ್ಕೆ ಸಂಬಂಧಿಸಿದಂತೆ ಪತ್ರವೊಂದನ್ನು ಬರೆದು ಕಾರಿನಲ್ಲಿಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
25 ಲಕ್ಷ ರೂ. ವ್ಯತ್ಯಾಸದ ಆರೋಪ
ಕೆಲ ತಿಂಗಳ ಹಿಂದೆ ಕುಡುಮಲ್ಲಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಭ್ರಷ್ಟಾಚಾರ ಹಾಗೂ ಆರ್ಥಿಕ ಅವ್ಯವಹಾರ ನಡೆದಿರುವ ಆರೋಪಗಳು ಕೇಳಿಬಂದಿದ್ದವು.
ಲೆಕ್ಕ ಪರಿಶೋಧನೆ ವೇಳೆ ಸುಮಾರು 25 ಲಕ್ಷ ರೂ.ಗಳಷ್ಟು ವ್ಯತ್ಯಾಸ ಕಂಡುಬಂದಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಿಇಒ ಮದನ್ ಅವರು ಹಣವನ್ನು ಮರುಪಾವತಿಸುವಂತೆ ಸಂಘದ ನಿರ್ದೇಶಕರು ಒತ್ತಡ ಹೇರಿದ್ದರು ಎಂಬ ಆರೋಪವೂ ಕೇಳಿಬಂದಿದೆ.
ಈ ಪೈಕಿ ಸುಮಾರು 6 ಲಕ್ಷ ರೂ. ಹಣವನ್ನು ಮದನ್ ಅವರು ಭರಿಸಿದ್ದರು ಎಂದು ಹೇಳಲಾಗುತ್ತಿದ್ದು, ಉಳಿದ ಮೊತ್ತವನ್ನು ಕೂಡ ಪಾವತಿಸುವಂತೆ ಒತ್ತಡವಿತ್ತು ಎಂಬ ಆರೋಪಗಳ ನಡುವೆ ಅವರು ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ವ್ಯಾಪಕ ಶೋಧ ಕಾರ್ಯಾಚರಣೆ
ನಾಪತ್ತೆ ಪ್ರಕರಣ ದಾಖಲಿಸಿಕೊಂಡಿರುವ ತೀರ್ಥಹಳ್ಳಿ ಠಾಣೆ ಪೊಲೀಸರು ಮದನ್ ಅವರ ಪತ್ತೆಗಾಗಿ ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ.
ಕಾರು ಪತ್ತೆಯಾದ ಜಂಬಳ್ಳಿ ಅರಣ್ಯ ಪ್ರದೇಶದಲ್ಲಿ ಪೊಲೀಸರು, ಮದನ್ ಅವರ ಕುಟುಂಬಸ್ಥರು, ಸ್ಥಳೀಯರು ಹಾಗೂ ಸೊಸೈಟಿಯ ಕೆಲ ನಿರ್ದೇಶಕರು ಸೇರಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಆದರೆ ಮದನ್ ಅವರು ಎಲ್ಲಿಗೆ ತೆರಳಿದ್ದಾರೆ ಎಂಬ ಬಗ್ಗೆ ಇದುವರೆಗೆ ಯಾವುದೇ ಸ್ಪಷ್ಟ ಸುಳಿವು ದೊರೆತಿಲ್ಲ.
ಸಹಕಾರ ಸಂಘದಲ್ಲಿನ ಆರ್ಥಿಕ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಕಾನೂನು ಕ್ರಮದ ಭೀತಿಯಿಂದ ಅವರು ಎಲ್ಲಿಗಾದರೂ ತೆರಳಿದ್ದಾರೆಯೇ ಅಥವಾ ಬೇರೆ ಯಾವುದಾದರೂ ಘಟನೆ ಸಂಭವಿಸಿದೆಯೇ ಎಂಬ ಕುರಿತು ಹಲವು ಪ್ರಶ್ನೆಗಳು ಉದ್ಭವಿಸಿವೆ.
ಸಿಇಒ ಮದನ್ ಪತ್ತೆಯಾದ ಬಳಿಕವಷ್ಟೇ ಈ ನಿಗೂಢ ನಾಪತ್ತೆ ಪ್ರಕರಣದ ಹಿಂದಿನ ನಿಜವಾದ ಕಾರಣ ಏನು ಎಂಬುದು ಸ್ಪಷ್ಟವಾಗಬೇಕಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
