BREAKING NEWS
Search

ಮುಖ್ಯಮಂತ್ರಿಗಳು ಭ್ರಷ್ಟಾಚಾರದ ವಿರುದ್ಧ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳದಿದ್ದರೇ ಉಪವಾಸ ಸತ್ಯಾಗ್ರಹದ ಎಚ್ಚರಿಕೆ: ಚರಕ ಪ್ರಸನ್ನ.

351

ವರದಿ:- ರವಿ ಸಾಗರ.

ಸಾಗರ(ಶಿವಮೊಗ್ಗ),:- :ಪ್ರಸ್ತುತ ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ಒಳಗುದ್ದಿನಂತೆ ವ್ಯಾಪಿಸಿದೆ. ಇದನ್ನು ಆಡಳಿತದ ಮುಖ್ಯ ಮಂತ್ರಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಮೂಲಕ ಅಂತ್ಯ ಹಾಡದಿದ್ದರೇ ಉಪ ವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಪ್ರಸಿದ್ಧ ರಂಗಕರ್ಮಿ ಚರಕ ಪ್ರಸನ್ನ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಸಾಗರದ ಪ್ರೆಸ್‌ಟ್ರಸ್ಟ್ ಆಫ್ ಸಾಗರ ಮತ್ತು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿ ಯಿಂದ ಏರ್ಪಡಿಸಿದ್ದ ಪ್ರಸ್ತುತ ವ್ಯವಸ್ಥೆಯ ವೈಪರೀತ್ಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

1990 ರ ಆಸುಪಾಸಿನಲ್ಲಿ ದೇಶದಲ್ಲಿ ಸಾಲ ವಿಪರೀತ ವಾಗಿ ಒಂದು ರೀತಿಯಲ್ಲಿ ದೇಶವೇ ದಿವಾಳಿ ಆಗುವ ಸನ್ನಿವೇಶದಲ್ಲಿ, ಸರ್ಕಾರ ಮತ್ತು ಆರ್ಥಿಕ ತಜ್ಞರು ಆರ್ಥಿಕ ಸುಧಾರಣಾ ಕ್ರಮದ ಪ್ರಸ್ತಾಪ ವನ್ನು ಇಟ್ಟರು. ದೇಶದ ಆರ್ಥಿಕತೆಯನ್ನು ಅಭಿವೃದ್ಧಿ ಪಥಕ್ಕೆ ತೆಗೆದುಕೊಂಡು ಹೋಗಲು ಯಾವ ಸಂಗತಿ ಗಳು ಅಡ್ಡ ಬರುತ್ತಿವೆಯೋ ಅಂಥ ಕ್ಷೇತ್ರಗಳಲ್ಲಿ ಸುಧಾರಣೆ ತರುವ ಪ್ರಯತ್ನ ಆರಂಭ ಗೊಂಡಿತು.

ದುರಂತ ಆಗಿದ್ದೇನೆಂದರೆ ಸುಧಾರಣಾ ಕಾರ್ಯಕ್ರಮವನ್ನು ಬೃಹತ್ ಕೈಗಾರಿಕೆಗಳ ಬಗ್ಗೆ ಬೃಹತ್ ಕೈಗಾರಿಕೋದ್ಯಮಿಗಳ ಬಗ್ಗೆ ಮತ್ತು ನಗರಗಳ ಬಗ್ಗೆ ಜಾರಿಗೊಳಿಸಿದರೇ ಹೊರತೂ ಗ್ರಾಮೀಣ ಕ್ಷೇತ್ರ, ಕೃಷಿ ಕ್ಷೇತ್ರ ಮತ್ತು ಕೈ ಉತ್ಪನ್ನಗಳ ಕ್ಷೇತ್ರಗಳ ಬಗ್ಗೆ ಜಾರಿಗೊಳಿಸಿಲ್ಲ. ಇದಕ್ಕೆ ಕಾರಣ ಅಧಿಕಾರಿಗಳ ಮನಸ್ಥಿತಿ.

ಇದು ಅವಸಾನಕ್ಕೆ ತಿರುಗುವ ಕ್ಷೇತ್ರಗಳು ಎಂಬ ಮನಸ್ಥಿತಿ ಆಧಿಕಾರಿಗಳಿಗೆ ಮತ್ತು ಆರ್ಥಿಕ ತಜ್ಞರಿಗೆ ಇತ್ತು. ಇದರಿಂದ ಈ ಕ್ಷೇತ್ರ ಗಳು ನಿರ್ಲಕ್ಷ್ಯಕ್ಕೊಳಗಾದವು ಎಂದರು.

ನಮ್ಮ ದೇಶದ ಆರ್ಥಿಕತೆಯ ಬಹುದೊಡ್ಡ ಪಾಲಾದ ಇಡೀ ಗ್ರಾಮೀಣ ಕ್ಷೇತ್ರಕ್ಕೆ, ಸಣ್ಣ ಕೈಗಾರಿಕೆಗಳ ಕ್ಷೇತ್ರಕ್ಕೆ ಸರ್ಕಾರ ಸಬ್ಸಿಡಿ ಕೊಡುತ್ತಿದ್ದೇವೆ ಎಂದು ಹೇಳುತ್ತಿವೆ.

ಇದು ಆರ್ಥಿಕತೆ ಯನ್ನು ಬೆಳೆಸುವುದಕ್ಕಿಂತ ಹೆಚ್ಚಾಗಿ ನಮ್ಮ ದೇಶವನ್ನು ಅಧೋಗತಿಗೆ ತೆಗೆದುಕೊಂಡು ಹೋಗುವ ಕ್ರಮವಾಗಿದೆ.

ಕಳೆದ 15 ವರ್ಷಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದ ಶ್ರೀಮಂತರಲ್ಲಿ, ಇವತ್ತು ನಾಲ್ಕಾರು ಮಂದಿ ಇದ್ದಾರೆ. ಈ ರೀತಿಯ ವಿಪರೀತ ವ್ಯತ್ಯಾಸವನ್ನು ಈಗ ಕಾಣುತ್ತಿ ದ್ದೇವೆ ಎಂದು ಅವರು ವಿಶ್ಲೇಷಿಸಿದರು.

ನಾಡಿನ ಗ್ರಾಮೀಣ ಕುಶಲ ಕ್ಷೇತ್ರಗಳನ್ನು ಈ ರೀತಿ ನಿರ್ಲಕ್ಷ್ಯಿಸುತ್ತಿರುವುದು ಗಾಂಧಿಜೀ ಆಶಯಕ್ಕೆ ವಿರುದ್ಧ ನಡೆ

ನಮ್ಮ ಕರ್ನಾಟಕ ಸರ್ಕಾರದೊಳಗೇ ಇರುವ ಭ್ರಷ್ಟಾಚಾರಕ್ಕೆ ಪ್ರಚೋದನೆ ಮಾಡಬಲ್ಲ ಕೆಲವು ಸಂಗತಿಗಳನ್ನು ಅವರು ಉಲ್ಲೇಖಿಸಿದ ಅವರು ಇದಕ್ಕೆ ಇವತ್ತಿನ ಸರ್ಕಾರವನ್ನೋ ಅಥವಾ ಹಿಂದಿನ ಸರ್ಕಾರಕ್ಕೆ ಬೊಟ್ಟು ಮಾಡಿ ತೋರಿಸಲ್ಲ. ಸಿದ್ದರಾಮಯ್ಯ, ಯಡಿಯೂರಪ್ಪ,ಬೊಮ್ಮಾಯಿ ವಿರುದ್ಧದ ಪ್ರತಿಕ್ರಿಯೆಯಲ್ಲ.

ಈ ಅವ್ಯವಸ್ಥೆ ನಮ್ಮಲ್ಲಿ ಹಲವು ವರ್ಷಗಳಿಂದ ನಡೆದು ಕೊಂಡು ಬರುತ್ತಿದೆ. ಇಂತಹ ಸಂಸ್ಥೆಗಳಿಗೆ ಸರ್ಕಾರ ಸಣ್ಣ ಪುಟ್ಟ ಸಹಾಯ ಮಾಡುತ್ತದೆ. ಇದಕ್ಕೆ ಮೊದಲು ನಾವು ಮಾಡಬೇಕಾದ ಎಲ್ಲ ಅರ್ಜಿ ಗಳನ್ನು, ದಾಖಲೆಗಳನ್ನು ಕೊಟ್ಟಿರುತ್ತೇವೆ.

ಇದನ್ನು ಮುಖ್ಯಮಂತ್ರಿ ಅಥವಾ ಸಂಬಂಧಿಸಿದ ಇಲಾಖೆ ಮಂಜೂರು ಮಾಡಿ ಖಜಾನೆಯಿಂದ ಬಿಡುಗಡೆ ಮಾಡುತ್ತದೆ. ಬಿಡುಗಡೆಯಾದ ನಂತರ ಆಯಾ ಜಿಲ್ಲೆಯ ಉಪನಿರ್ದೇಶಕರು ಅದನ್ನು ಸಂಸ್ಥೆಯ ಕಾರ್ಯದರ್ಶಿಯ ಜೊತೆ ಜಾಯಿಂಟ್ ಅಕೌಂಟ್ ನಲ್ಲಿಡುತ್ತದೆ. ಯಾಕೆ ಹೀಗೆ ಎಂದರೆ ಇಲ್ಲಾ ಸಾರ್, ವಿಪರೀತ ಭ್ರಷ್ಟಾಚಾರ ಇದೆ. ಹಾಗಾಗಿ ಹೀಗೆ ಇಡುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಾರೆ ಎನ್ನುತ್ತಾರೆ ಎಂದ ಅವರು, ವ್ಯವಸ್ಥೆಯ ಅವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಖಜಾನೆಯಿಂದ ಹಣ ಬಿಡುಗಡೆಯಾಗಲು ಇಲ್ಲ ಸಲ್ಲದ ದಾಖಲೆ ಕೊಡಿ ಎಂದು ಅಧಿಕಾರಿಗಳು ಸತಾಯಿಸುತ್ತಾರೆ. ಇಂಥ ಪ್ರಕರಣವನ್ನು ಹಲವು ದಶಕಗಳಿಂದ ನಾನು ನೋಡುತಿದ್ದೇನೆ.

ಚರಕ ಸಂಸ್ಥೆ ಇಡೀ ದೇಶದಲ್ಲಿ ನೈಸರ್ಗಿಕ ಬಣ್ಣಗಾರಿ ಕೆಯಲ್ಲಿ ಹೆಸರುಪಡೆದಿದೆ. ಇದಕ್ಕೆ ಹೆಚ್ಚು ಪ್ರೋತ್ಸಾಹ ಕೊಡುತ್ತೇವೆ ಎಂದು ಆಗಿನ ಕಾರ್ಯದರ್ಶಿ ಅಮರನಾಥ್, ಅಡಿಕೆ ಚೊಗರಿ ನಿಂದ ನೀವು ಮಾಡುತ್ತಿದ್ದೀರಿ. ನಾವೂ ನಿಮಗೆ ಸಹಯೋಗ, ಸಹಾಯ ಮಾಡುತ್ತೇವೆ. ಇದರ ಲಾಭ ಬೇರೆಯವರಿಗೂ ಸಿಗಲಿ ಎಂದು ಸಹಾಯಧನ ಮಂಜೂರು ಮಾಡಿದರು. ಆದರೆ ಇದು ಮಾರ್ಚ್ ಅಂತ್ಯಕ್ಕೆ ಪಾಸಾಗುತ್ತಿರಲಿಲ್ಲ. ಈ ರೀತಿ ಐದಾರು ವರ್ಷ ನಡೆಯಿತು.

ಕೊನೆಗೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಉಪವಾಸ ಸತ್ಯಾಗ್ರಹಕ್ಕೆ ಕುಳಿತೆ. ಮಂಜೂರು ಪತ್ರ ಬರುತ್ತದೆ. ಆದರೆ ಹಣ ಸಿಗುವುದಿಲ್ಲ. ಹಣ ಮಂಜೂರಾಗಿದೆ ಎಂದು ಕೆಲಸ ಮಾಡಿಸುತ್ತಿದ್ದೇವೆ. ಆದರೆ ನಿಮ್ಮಿಂದ ಹಣ ಬರುತ್ತಿಲ್ಲ ಎಂದು ಉಪವಾಸ ಮಾಡಿದೆ.

ಆಗ ಯಡಿಯೂರಪ್ಪನವರು ಪರಿಹಾರ ಮಾಡುವ ಭರವಸೆ ನೀಡಿದರು.
ಅವರು ಹಳೆಯ ಪ್ರಾಜೆಕ್ಟ್ ನೊಂದಿಗೆ ಹೊಸದಾಗಿ ಪವಿತ್ರ ವಸ್ತ್ರ ಯೋಜನೆಗೆ ಸರ್ಕಾರದ ಸಹಯೋಗದಲ್ಲಿ ₹1.50 ಕೋಟಿ ಮಂಜೂರು ಮಾಡಿದರು. ಇದರ ಮೊದಲ ಕಂತು ₹33 ಲಕ್ಷ ಸರ್ಕಾರದಿಂದ ಬಿಡುಗಡೆಯಾಯಿತು. ಆದರೆ ಈ ಹಣವನ್ನು ಜಾಯಿಂಟ್ ಅಕೌಂಟ್‌ನಲ್ಲಿಟ್ಟರು. ಇದಕ್ಕೆ ಮೂರು ವರ್ಷ ಕಾಯಿಸಿದರು.

ಯಡಿಯೂರಪ್ಪ ನವರೇ ಕೇಳಿದರೂ ಅಧಿಕಾರಿಗಳು ಸಬೂಬು ಹೇಳಿದರು. ಯಡಿಯೂರಪ್ಪನವರನ್ನೇ ಅಧಿಕಾರಿಗಳು ದಾರಿ ತಪ್ಪಿಸಿದರು.

32 ವರ್ಷದ ಹಿಂದೆ ಚರಕ ಸ್ಥಾಪಿಸಿದಾಗ ಒಂದು ನಿರ್ಧಾರ ಮಾಡಿದ್ದೆವು. ಯಾವುದೇ ಕಾರಣಕ್ಕೂ ಯಾರಿಗೂ ಲಂಚ ಕೊಡುವುದಿಲ್ಲ. ನಮ್ಮ ಹೆಣ್ಣು ಮಕ್ಕಳು ಶಿವಮೊಗ್ಗಕ್ಕೆ ಅಲೆ ಯುವುದನ್ನು ತಪ್ಪಿಸಬೇಕು ಎಂಬ ದೃಢ ನಿಲುವು ನಮ್ಮದಿತ್ತು. ಈ ಕಾರಣ ದಿಂದ ಶಿವಮೊಗ್ಗದಿಂದ ಬಂದ ಅಧಿಕಾರಿಗಳು ಅಸಮಾಧಾನದಿಂದ ನಮ್ಮಲ್ಲಿಗೆ ಬಂದು ಚೆಕ್‌ನ್ನು ಬಿಸಾಕಿ (ಒಗೆದು) ಹೋದರು. ಆದರೆ ಇದು ಈ ವರೆಗೂ ಪಾವತಿಯಾಗಿಲ್ಲ. ಹಣ ಇವತ್ತಿಗೂ ಜಾಯಿಂಟ್ ಅಕೌಂಟ್‌ನಲ್ಲಿದೆ.

ಇಂಥ ಭ್ರಷ್ಟಾಚಾರವನ್ನು ಪ್ರಚೋದಿಸುವ ವ್ಯವಸ್ಥೆ ರಾಜ್ಯ ಸರ್ಕಾರದಲ್ಲಿದೆ. ಇದಕ್ಕೆ ಅಂತ್ಯ ಹಾಡಬೇಕು ಎಂದರು. ಇದು ಯಾರಿಗೂ ಹೆಸರು ತರುವ ಕೆಲಸವಲ್ಲ. ಇದು ಒಂದು ರೀತಿಯ ಒಳಗುದ್ದಿನ ತಂತ್ರ
ದೊಡ್ಡ ಉದ್ದಿಮೆಗಳಿಗೆ ಇವರೇ ಅಧಿಕಾರಿಗಳು ಉದ್ದಿಮೆದಾರರ ಮನೆಗೆ ಹೋಗಿ ಕೋಟ್ಯಾಂತರ ರೂ. ಚೆಕ್ ಕೊಟ್ಟು ಬರುತ್ತಾರೆ. ದೊಡ್ಡ ಉದ್ದಿಮೆದಾರರ ಹಣವನ್ನು ಯಾಕೇ ಜಾಂಯಿಂಟ್ ಅಕೌಂಟ್‌ನಲ್ಲಿ ಇಡುವುದಿಲ್ಲ..? ಸಣ್ಣ ಉದ್ದಿಮೆ ದಾರರಲ್ಲಿ ನಮ್ಮಲ್ಲಿ ಎಲ್ಲ ದಾಖಲೆಗಳಿಗೆ. ಸರ್ಕಾರದ ಹಣ ಸದುಪಯೋಗ ಪಡಿಸಿ ಕೊಳ್ಳದಿದ್ದರೆ ಶಿಕ್ಷೆ ಕೊಡುವ ಅಧಿಕಾರವಿದೆ ಎಂದೆ. ಆದರೆ ನಮಗೆ ಈ ಜಾಯಿಂಟ್ ಅಕೌಂಟ್‌ನ ಹುನ್ನಾರ ಯಾಕೆ ಎಂದು ಪ್ರಶ್ನಿಸಿದೆ.

ಈ ಅವ್ಯವಸ್ಥೆಯನ್ನು ನಿವಾರಿಸಲು ಭ್ರಷ್ಟಾಚಾರ ಮಾಡುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ ಎಂದವರು ಆಗ್ರಹಿಸಿದರು. ನಾವು ನಿಮಗೆ (ಸರ್ಕಾ ರಕ್ಕೆ)2 ತಿಂಗಳ ಸಮಯ ಕೊಡುತ್ತೇವೆ, ಚರಕ ಸರ್ಕಾರದ ಯಾವುದೇ ಸಹಾಯವಿಲ್ಲದೇ ಲಾಭದಲ್ಲಿ ನಡೆಯುತ್ತಿದೆ. ಸಂಕಟದ ನಡುವೆಯೂ ಲಾಭದಲ್ಲಿ ನಡೆಯುತ್ತಿದ್ದೇವೆ. ಸಂಘಕ್ಕೆ ಸಿಗಬೇಕಾದ ಯಾವುದೇ ಅನುದಾನ ಸಿಕ್ಕಿಲ್ಲ. ಈ ಬಾರಿ ಭ್ರಷ್ಟಾಚಾರದ ವಿರುದ್ಧ ನ್ಯಾಯಕ್ಕಾಗಿ ಉಪವಾಸ ಸತ್ಯಾಗ್ರಹ ಕೂರುತ್ತೇನೆ ಎಂದು ಅವರು ಎಚ್ಚರಿಸಿದರು.

ಕೋವಿಡ್ ಸಂದರ್ಭದಲ್ಲಿ ₹ 2 ಸಾವಿರ ಹಂಚಿದ್ದೇವೆ ಎಂದು ಸರ್ಕಾರ ಹೇಳುತ್ತದೆ. ಆದರೆ ಶೇ.50 ರಷ್ಟು ಜನರಿಗೆ ಅದು ತಲುಪಿಲ್ಲ.

ನೇಕಾರರಿಗೆ ವೈಯಕ್ತಿಕ ಸಹಾಯ ಬೇಡ. ಬದಲಾಗಿ ದುಡಿಮೆಗೆ ಶ್ರಮಕ್ಕೆ ಪ್ರೋತ್ಸಾಹ ,ನೇಕಾರರ ಉದ್ದಿ ಮೆಗೆ ಸಹಕಾರ ಬೇಕು. ಕಳೆದ ಒಂದು ವರ್ಷದಲ್ಲಿ ನೂಲಿನ ಬೆಲೆ ಶೇ 7೦ ರಷ್ಟು ಹೆಚ್ಚಾಗಿದೆ. ಈ ಹಂತದಲ್ಲಿ ಸರ್ಕಾರ ಏನೂ ಮಾಡದಿದ್ದರೆ ಯಾವ ಕೈಗಾರಿಕೆ ಉಳಿಯುತ್ತದೆ ಎಂದವರು ಪ್ರಶ್ನಿಸಿದರು.

ಖಾದಿ ಬಟ್ಟೆಗೆ ಶೇ. 5 ರಷ್ಟು ಜಿಎಸ್‌ಟಿ ಹಾಕಿದ್ದಾರೆ. ಬ್ರಿಟಿಷರ ಕಾಲದಲ್ಲೂ ಖಾದಿಗೆ, ಕೈ ಉತ್ಪನ್ನಕ್ಕೆ ತೆರಿಗೆ ಇರಲಿಲ್ಲ. ಇಷ್ಟು ಅಸಹಕಾರ ತೋರಿದರೆ ಸಣ್ಣ ಕೈಗಾರಿಕೆಗಳು ಉಳಿಯುವುದಾದರೂ ಹೇಗೆ ಎಂದರು.

ರಾಷ್ಟ್ರಧ್ವಜಕ್ಕೆ ವಿದೇಶಿ ಬಟ್ಟೆ ಸಲ್ಲದು :

ವಿದೇಶಿ ಬಟ್ಟೆಯ ರಾಷ್ಟ್ರ ಧ್ವಜದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಷ್ಟ್ರ ಧ್ವಜ ಖಾದಿ ಬಟ್ಟೆಯೇ ಆಗ ಬೇಕು. ಇದರಿಂದ ಗ್ರಾಮೀಣ ಕ್ಷೇತ್ರದ ಉದ್ದಿಮೆ ಬೆಳೆಯುತ್ತದೆ.

ಮನೆ ಮನೆ ಮೇಲೆ ಬಾವುಟ ಹಾರಿಸುವುದು ಒಳ್ಳೆಯ ಯೋಚನೆ. ಆದರೆ ವಿದೇಶಿ ವಸ್ತುವಿನಿಂದ ಬಾವುಟ ಮಾಡಿದರು. ಇದು ಖಾದಿ ಯಾಗಿರಬೇಕೆಂದು ಯಾರೂ ಯೋಚಿಸಲಿಲ್ಲ ಎಂದು ದೂರಿದರು.

ಖಾದಿ ಗ್ರಾಮೀಣ ಕ್ಷೇತ್ರವನ್ನು ಪ್ರತಿಧಿಸುತ್ತದೆ. ವಾಸ್ತವವನ್ನು ಹಾಳು ಮಾಡಿದ್ದಲ್ಲದೇ ದೇಶದ ಸಂಕೇತವನ್ನೂ ಹಾಳು ಮಾಡಿದರು.ಹರ್ ಘರ್ ತಿರಂಗ ಘೋಷಣೆ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಹುಟ್ಟಿರುವುದು.ಆದರೇ ಈಗ ಮೋದಿಯವರು ಸೃಷ್ಟಿಸಿದ ಘೋಷಣೆ ಎಂದು ಬಹಳ ಜನ ಹೇಳುವಂತಾಗಿದೆ ಎಂದರು.

ನೈತಿಕ ಶಕ್ತಿಯಾಗಬೇಕು :

ರಾಹುಲ್ ಗಾಂಧಿ ಹೆಸರಿನಲ್ಲಿ ಅವರು ರಾಹುಲ್ ತೆಗೆದು ಗಾಂಧಿಯಾಗಿ ರೂಪುಗೊಳ್ಳಬೇಕು. ಧರ್ಮ ವನ್ನು ಬೇರೆ ರೀತಿಯಲ್ಲಿ ನೋಡಿದಾಗ ಭಾರತವನ್ನು ಜೋಡಿಸಲು ಸಾಧ್ಯ ಎಂದರು.

ಅಧಿಕಾರ ರಾಜಕಾರಣ ದಿಂದ ಹೊರಗುಳಿಯಬೇಕು. ಕಾಂಗ್ರೆಸ್ ಪಕ್ಷಕ್ಕೆ ಒಂದು ನೈತಿಕ ಶಕ್ತಿಯಾಗಬೇಕು. ಆಗ ಎಲ್ಲರೂ ಸರಿಹೋಗುತ್ತಾರೆ, ಗಾಂಧಿ ಎಂಬ ನೈತಿಕ ಶಕ್ತಿ ಇದ್ದುದರಿಂದ ಸ್ವಾತಂತ್ರ್ಯ ಹೋರಾಟ ಯಶಸ್ವಿ ಯಾಯಿತು , ಬಿಜೆಪಿಯಲ್ಲಿ ರಾಮನನ್ನು ಪ್ರತ್ಯೇಕಿಸುವ ಸಂಸ್ಕೃತಿಯಿದೆ. ಹನುಮನನ್ನು ಉದ್ರೇಕಕಾರಿ ಯಾಗಿ ಚಿತ್ರಿಸುತ್ತಾರೆ.ನಮಗೆ ರಾಮ,ಲಕ್ಷ್ಮಣ,ಸೀತೆ,ಹನುಮಂತ ಒಟ್ಟಾಗಿರುವ ಸಂಸ್ಕೃತಿ ಬೇಕು ಎನ್ನುವ ಮೂಲಕ ವಿವಿಧತೆ ಯಲ್ಲಿ ಏಕತೆಯಿಂದ ಭಾರತ ವನ್ನು ನಿರಂತರ ಸದೃಡ ಶಕ್ತಿಯುತ ಸಮೃದ್ಧ ದೇಶ ವನ್ನಾಗಿಸುವ ಚಿಂತನೆ ಅಗತ್ಯ.

ಸಹಕಾರಿ ವ್ಯವಸ್ಥೆಗೆ ಕಿರುಕುಳ!

ಸಹಕಾರಿ ವ್ಯವಸ್ಥೆಯನ್ನು ಕರ್ನಾಟಕದಲ್ಲಿ ಅತ್ಯಂತ ಕೆಟ್ಟ ಸ್ಥಿತಿಯತ್ತ ಅಧಿಕಾರಿಶಾಹಿಗಳು ತಳ್ಳುತ್ತಿದ್ದಾರೆ.ಸಹಕಾರಿ ಸಂಸ್ಥೆಯವರನ್ನು ಕಿರುಕುಳ ನೀಡಿ ಬಾಗಿಲು ಮುಚ್ಚುವಂತೆ ಮಾಡುತ್ತಿದ್ದಾರೆ.

ಸಹಕಾರಿಗೆ ಉತ್ತೇಜನ ನೀಡುವ ಮೂಲಕ ದೇಶಿ ವ್ಯವಸ್ಥೆ ಬೆಳವಣಿಗೆಗೆ ಪ್ರೋತ್ಸಾಹಿಸಬೇಕು.ಕೇರಳ ಮತ್ತು ಆಂದ್ರದಲ್ಲಿ ಸಹಕಾರಿ ವ್ಯವಸ್ಥೆಯನ್ನು ಗಟ್ಟಿಗೊಳಿಸಿ ದ್ದಾರೆ.

ಸರ್ಕಾರದ ಪ್ರೋತ್ಸಾಹ ಸಹಕಾರ ಉತ್ತಮವಾಗಿದೆ ಎಂದು ಉದಾಹರಣೆ ಸಹಿತ ವಿವರಿಸಿದರು.ಕೇರಳದಲ್ಲಿ ನೇಕಾರರಿಗೆ ನರೇಗಾ ಯೋಜನೆಯಲ್ಲಿ ಒಬ್ಬರಿಗೆ ದಿನಕ್ಕೆ ₹700ಗಳ ಆಧಾಯ ಕಲ್ಪಿಸಿ ಕೊಡು ತ್ತಿದ್ದಾರೆ.

ಕರ್ನಾಟಕದಲ್ಲಿ ಕೊರೋನಾ ನೆಪದಲ್ಲಿ ₹2000 ಸಹಾಯಧನ ಕೆಲವರಿಗೆ ಮಾತ್ರ ಸಿಕ್ಕಿದೆ ಎಂದು ಹೇಳಿದರು.

ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎಚ್.ವಿ.ರಾಮಚಂದ್ರರಾವ್, ಕಾರ್ಯದರ್ಶಿ ಎಸ್.ವಿ. ಹಿತಕರ ಜೈನ್, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ್ ಹೆಗಡೆ ಗುಂಡೂಮನೆ, ಕಾರ್ಯದರ್ಶಿ ಗಣಪತಿ ಶಿರಳಗಿ, ಟ್ರಸ್ಟ್ ನ ಎ.ಡಿ.ರಾಮ ಚಂದ್ರ ಭಟ್, ಚರಕ ಸಂಸ್ಥೆಯ ಗೌರಮ್ಮ,ಪತ್ರಕರ್ತರುಗಳಾದ ಆರ್.ಎನ್.ವೆಂಕಟಗಿರಿ, ಯೋಗೀಶ್ ಜಿ.ಭಟ್ ,ಎಂ.ರಾಘವೇಂದ್ರ, ಧರ್ಮರಾಜ್ ,ರವಿ, ಎನ್. ರಮೇಶ್ ಮತ್ತಿತರರು ಉಪಸ್ಥಿತರಿದ್ದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!