
ಕಾರವಾರ: ಬಿಜೆಪಿ ಉಚ್ಛಾಟಿತ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಅವರು ಕಾರವಾರದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಿಬಿಐ, ಇಡಿ ಹಾಗೂ ಚುನಾವಣಾ ಆಯೋಗ ಸೇರಿದಂತೆ ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
“ಬಿಜೆಪಿಯವರು ಸಿಬಿಐ, ಇಡಿ, ಎಲೆಕ್ಷನ್ ಕಮಿಷನ್ ಎಲ್ಲವನ್ನೂ ಕಿಸೆಯಲ್ಲಿ ಇಟ್ಟುಕೊಂಡು ಕೆಲಸ ಮಾಡಿಕೊಂಡು ಹೋದರೆ, ಎಲ್ಲವೂ ಕಾಂಗ್ರೆಸ್ ಮೇಲೆಯೇ ದಬ್ಬಾಳಿಕೆಯಾಗುತ್ತದೆ. ಸತೀಶ್ ಸೈಲ್, ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್‌ನ ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರ ಮೇಲೆ ರೇಡ್‌ಗಳು ನಡೆಯುತ್ತವೆ” ಎಂದು ಹೆಬ್ಬಾರ್ ಹೇಳಿದ್ದಾರೆ. ಇದನ್ನೂ ಓದಿ:-Shivaram hebbar: ಬಿಜೆಪಿ ನಾಯಕರ ಗುಟ್ಟು ಬಿಚ್ಚಿಡುವ ಎಚ್ಚರಿಕೆ ಕೊಟ್ಟ ಹೆಬ್ಬಾರ್ ಏನಂದ್ರು?
ಬಿಜೆಪಿಗೆ ಸೇರುವವರ ವಿರುದ್ಧದ ಪ್ರಕರಣಗಳು ನಂತರ ಬದಲಾಗುತ್ತವೆ ಎಂಬ ಆರೋಪವನ್ನೂ ಮಾಡಿದ ಅವರು, “ಬಿಜೆಪಿಗರು ಬಾಕಿ ಎಲ್ಲರೂ ದೇಶದಲ್ಲಿ ಹರಿಶ್ಚಂದ್ರರು, ಕಾಂಗ್ರೆಸ್‌ನವರು ಮಾತ್ರ ಕಳ್ಳರು ಎನ್ನುವ ರೀತಿಯಾಗಿದೆ. ಯಾರೆಲ್ಲಾ ಬಿಜೆಪಿಗೆ ಹೋಗುತ್ತಾರೋ ಅವರನ್ನು ವಾಷಿಂಗ್ ಮಿಷನ್‌ಗೆ ಹಾಕಿದರೆ ಎಲ್ಲವೂ ಕ್ಲೀನ್ ಆಗುತ್ತದೆ. ನನ್ನನ್ನೂ ವಾಷಿಂಗ್ ಮಿಷನ್‌ನಲ್ಲಿ ಹಾಕಿದ್ದರು” ಎಂದು ವ್ಯಂಗ್ಯವಾಡಿದರು.
ಕೇಂದ್ರ ಸರ್ಕಾರಿ ನೌಕರರ ಹೋರಾಟದ ವಿರುದ್ಧವೂ ಅಸಮಾಧಾನ
ದೇಶದಲ್ಲಿ ಬರಗಾಲ ಹಾಗೂ ಅತಿವೃಷ್ಟಿಯಂತಹ ಪರಿಸ್ಥಿತಿ ಎದುರಾಗಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರಿ ನೌಕರರು ತಮ್ಮ ಬೇಡಿಕೆಗಳಿಗಾಗಿ ಹೋರಾಟ ನಡೆಸುವುದು ಸರಿಯಲ್ಲ ಎಂದು ಹೆಬ್ಬಾರ್ ಅಭಿಪ್ರಾಯಪಟ್ಟರು.
“ದೇವರು ರೈತರಿಗಿಂತ ನಿಮ್ಮನ್ನು ಸುಖದಲ್ಲಿ ಇಟ್ಟಿದ್ದಾನೆ. ಇಂತಹ ಸಂದರ್ಭದಲ್ಲಿ ನಿಮ್ಮ ಹೋರಾಟಕ್ಕೆ ಒಂದು ವರ್ಷ ವಿರಾಮ ನೀಡಿ. ನಾಡಿನ ರೈತರ ಬಗ್ಗೆ ಯೋಚನೆ ಮಾಡಿ, ಮಾನವೀಯತೆಯಿಂದ ನಡೆದುಕೊಳ್ಳಿ. ದೇಶ ಹಾಗೂ ರಾಜ್ಯ ಸಂಕಷ್ಟದಲ್ಲಿದೆ” ಎಂದು ಅವರು ಹೇಳಿದರು.
ಕಸ್ತೂರಿ ರಂಗನ್ ವರದಿ ವಿಚಾರ
ಕಸ್ತೂರಿ ರಂಗನ್ ವರದಿ ವಿಚಾರದಲ್ಲಿಯೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಹೆಬ್ಬಾರ್ ಆಗ್ರಹಿಸಿದರು.
“ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ಏಳು ಬಾರಿ ತಿರಸ್ಕರಿಸಿದೆ. ಈ ವಿಚಾರವನ್ನು ಕೇಂದ್ರದಲ್ಲಿ ಚರ್ಚಿಸಿ ಜಿಲ್ಲೆಯ ಜನರಿಗೆ ನ್ಯಾಯ ಕೊಡಿಸಬೇಕು” ಎಂದು ಹೇಳಿದರು.ಇದನ್ನೂ ಓದಿ:-Karwar | ಅರಗಾ ಬಳಿ ಭೀಕರ ಅಪಘಾತ –ರಸ್ತೆಯಲ್ಲೇ ಹೊತ್ತಿ ಉರಿದ ವಾಹನ ,ಸವಾರ ಸಾವು
ಸಂಸದರು ಖಾಲಿ ಡಬ್ಬಿ ಹಾಗೂ ಚೊಂಬು ಹಿಡಿದು ಪಂಚಾಯಿತಿ ಮುಂದೆ ಕುಳಿತು ಪ್ರತಿಭಟನೆ ಮಾಡುತ್ತಿರುವುದನ್ನು ಉಲ್ಲೇಖಿಸಿದ ಹೆಬ್ಬಾರ್, ಚುನಾವಣೆಗೂ ಮುನ್ನ ಬಿಜೆಪಿಯವರಿಗೆ ಈ ವಿಚಾರದಲ್ಲಿ ಯಾವುದೇ ಶ್ರಮ ಇರಲಿಲ್ಲ ಎಂದು ಟೀಕಿಸಿದರು.
“ಈಗ ಇಲ್ಲಿ ಶ್ರಮ ಹಾಳು ಮಾಡಬೇಡಿ. ದೆಹಲಿಗೆ ಹೋಗಿ ಪಾರ್ಲಿಮೆಂಟ್‌ನ ಗೋಡೆಗೆ ಹಣೆ ಜಪ್ಪಿಕೊಳ್ಳಿ. ಅಲ್ಲಿ ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಜಿಲ್ಲೆಯ ಜನರಿಗೆ ನ್ಯಾಯ ಕೊಡಿಸಿ” ಎಂದು ಹೆಬ್ಬಾರ್ ಆಗ್ರಹಿಸಿದರು.
