Uttara kannada : 37 ಗ್ರಾಮಗಳಲ್ಲಿ ಶೂನ್ಯ ಜನಸಂಖ್ಯೆ- ಗ್ರಾಮ ತೊರೆಯುತ್ತಿರುವ ಜನರು

37 villages in Uttara Kannada district record zero population 37 villages in Uttara Kannada district record zero population
37 villages in Uttara Kannada district record zero population
Kannadavani WhatsApp image
ಪ್ರತಿ ದಿನದ ಸುದ್ದಿ ಓದಲು ನಮ್ಮ ವಾಟ್ಸ್ ಅಪ್ ಗ್ರೂಪ್ ಸೇರಲು ಫೋಟೋ ದ ಮೇಲೆ ಕ್ಲಿಕ್ ಮಾಡಿ

ಕಾರವಾರ: ಪಶ್ಚಿಮ ಘಟ್ಟ ಹಾಗೂ ಕರಾವಳಿ ಪ್ರದೇಶವನ್ನು ಹೊಂದಿರುವ ಉತ್ತರ ಕನ್ನಡ (uttara kannada) ಜಿಲ್ಲೆಯಲ್ಲಿ ಹಲವು ಗ್ರಾಮಗಳು ಹಂತ ಹಂತವಾಗಿ ಜನವಸತಿ ಕಳೆದುಕೊಳ್ಳುತ್ತಿರುವ ಆತಂಕಕಾರಿ ಬೆಳವಣಿಗೆ ಬೆಳಕಿಗೆ ಬಂದಿದೆ. ಜಿಲ್ಲೆಯ ವಿವಿಧ ತಾಲೂಕುಗಳ 37 ಗ್ರಾಮಗಳಲ್ಲಿ ಶೂನ್ಯ ಜನಸಂಖ್ಯೆ ದಾಖಲಾಗಿದ್ದು, ಈ ಗ್ರಾಮಗಳಲ್ಲಿ ಜನರು ಏಕೆ ವಾಸಿಸುತ್ತಿಲ್ಲ ಎಂಬುದರ ಕುರಿತು ಇದೀಗ ಜಿಲ್ಲಾ ಪಂಚಾಯತ್ತಿ ಯಿಂದ ಅಧ್ಯಯನಕ್ಕೆ ಮುಂದಾಗಿದೆ.

37 ಗ್ರಾಮಗಳಲ್ಲಿ ಶೂನ್ಯ ಜನಸಂಖ್ಯೆ.

ಉತ್ತರ ಕನ್ನಡ ಜಿಲ್ಲೆ ಸುಮಾರು 10,581 ಚದರ ಕಿಲೋಮೀಟರ್ ಭೌಗೋಳಿಕ ಪ್ರದೇಶ ಹೊಂದಿದ್ದು, ಸುಮಾರು 8,500 ಚದರ ಕಿಲೋಮೀಟರ್ ಅರಣ್ಯ ಪ್ರದೇಶವಿದೆ. 14 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಜಿಲ್ಲೆಯಲ್ಲಿ ಕೈಗಾ ಅಣುಸ್ಥಾವರ, ಜಲವಿದ್ಯುತ್ ಯೋಜನೆಗಳು, ಅಣೆಕಟ್ಟುಗಳು, ರಕ್ಷಿತ ಅರಣ್ಯ ಪ್ರದೇಶಗಳು ಹಾಗೂ ನೌಕಾನೆಲೆಯಂತಹ ಪ್ರಮುಖ ಯೋಜನೆಗಳಿವೆ.

ಆದರೆ ಜಿಲ್ಲೆಯ ಹಲವು ದೂರದ ಹಾಗೂ ಅರಣ್ಯ ಪ್ರದೇಶಗಳಲ್ಲಿರುವ ಗ್ರಾಮಗಳಲ್ಲಿ ಇಂದಿಗೂ ರಸ್ತೆ, ವಿದ್ಯುತ್, ಸಾರಿಗೆ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಇದರ ಪರಿಣಾಮವಾಗಿ ಉದ್ಯೋಗ ಮತ್ತು ಉತ್ತಮ ಜೀವನಕ್ಕಾಗಿ ಹಲವು ಕುಟುಂಬಗಳು ಗ್ರಾಮಗಳನ್ನು ತೊರೆದು ಬೇರೆ ಪ್ರದೇಶಗಳಿಗೆ ವಲಸೆ ಹೋಗಿರುವುದು ಕಂಡುಬಂದಿದೆ.ಇದನ್ನೂ ಓದಿ:-Uttara Kannada | ಸಚಿವ ಸಂಪುಟ ಸಭೆಯಲ್ಲಿ ಉತ್ತರ ಕನ್ನಡಕ್ಕೆ ಸಿಕ್ಕ ಪ್ರಮುಖ ಯೋಜನೆಗಳೇನು?

Advertisement

ಯಾವೆಲ್ಲ ತಾಲೂಕುಗಳಲ್ಲಿ ಗ್ರಾಮಗಳು ಖಾಲಿಯಾಗಿವೆ?

ಜಿಲ್ಲೆಯ ಕಾರವಾರ, ಅಂಕೋಲಾ, ಶಿರಸಿ, ಹೊನ್ನಾವರ, ಯಲ್ಲಾಪುರ, ಹಳಿಯಾಳ, ಜೋಯಿಡಾ, ದಾಂಡೇಲಿ ಹಾಗೂ ಮುಂಡಗೋಡು ತಾಲೂಕುಗಳ ಹಲವು ಗ್ರಾಮಗಳಲ್ಲಿ ಜನವಸತಿ ಇಲ್ಲದಿರುವುದು ದಾಖಲಾಗಿದೆ. ಇದನ್ನೂ ಓದಿ:-Uttara kannada| ಕೈಕೊಟ್ಟ ವಾಡಿಕೆ ಮಳೆ-600 ಮಿಮೀ ಮಳೆ ಕೊರತೆ; ಬತ್ತುತ್ತಿದೆ ಬೇಡ್ತಿ ನದಿ, ಒಣಗುತ್ತಿದೆ ಭತ್ತ !

ಕಾರವಾರ ತಾಲೂಕಿನ ಮಲ್ಲಾಪುರದ ದೇವಕಾರು, ಅಂಕೋಲಾ ತಾಲೂಕಿನ ಅಗಸೂರಿನ ಕಂಚಿನಮೂಲೆ, ಹಟ್ಟಿಕೇರಿಯ ಶಿಕ್ಲಿಗುಳಿ, ನೆಲ್ಲೂರು, ಕಂಚಿನಬೈಲ್, ಹೊನ್ನಾವರ ತಾಲೂಕಿನ ನವಿಲಗೋಣದ ಕಾಕುರ್ವೆ, ಶಿರಸಿ ತಾಲೂಕಿನ ಯಡಳ್ಳಿಯ ಕಲಕಾಯಿ, ಯಲ್ಲಾಪುರ ತಾಲೂಕಿನ ಮದನೂರಿನ ಬಂಕಸಾಳ ಸೇರಿದಂತೆ ಹಲವು ಗ್ರಾಮಗಳು ಈ ಪಟ್ಟಿಯಲ್ಲಿವೆ.

ಮುಂಡಗೋಡು (mundgod)ತಾಲೂಕಿನ ಸಾಲಗಾಂವ್‌ನ ಬೇಚಾರಕ, ಪಾಳದ ಇಂಗಳಕ, ಹುಡೇಲಕೊಪ್ಪ, ಯಡೋಗಾದ ಚನ್ನಾಪುರ, ಬಬಲಿಕೊಪ್ಪ, ಹರ​ವಳ್ಳಿ, ತಟ್ಟಿಗೇರಿಯ ಮಾವಿನಕೊಪ್ಪ, ಬೇಗೂರು, ಅರ್ಲವಾಡದ ಮಂಡಕಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಶೂನ್ಯ ಜನಸಂಖ್ಯೆ ದಾಖಲಾಗಿದೆ.

ಹಳಿಯಾಳ ತಾಲೂಕಿನ ಮಿಂಚೊಳ್ಳಿ, ಚಿಮನಳ್ಳಿ, ಮಾಲವಾಡ, ಮಲವಡಿ, ಟೆಕ್ಕರಬಾಸಾಪುರ, ಮಾಚಾಪುರ, ಚಿನಗಿನಕೊಪ್ಪ ಹಾಗೂ ಅಂಬಡಗ ಸೇರಿದಂತೆ ಹಲವು ಗ್ರಾಮಗಳಲ್ಲೂ ಇದೇ ಪರಿಸ್ಥಿತಿ ಇದೆ.

ಜೋಯಿಡಾ ತಾಲೂಕಿನ ಅಟ್ಲೆ, ಪ್ರಧಾನಿಯ ಸನ್ಮಗ, ಕಲಂಖಂಡ, ಕವಳೆ, ಶಿರೋಲಿ ಹಾಗೂ ಗವನೆ, ದಾಂಡೇಲಿ ತಾಲೂಕಿನ ಹೊಸಕುಂಬಾರಕೊಪ್ಪ, ಕಾಳಗಿನಟ್ಟಿ, ಅಜಗರ್ಣಿ, ಸಿಂಗಟಗೇರಿ ಹಾಗೂ ಅಂಬಿಕಾ ನಗರದ ಗುತ್ತಿ ಗ್ರಾಮಗಳಲ್ಲೂ ಜನವಸತಿ ಇಲ್ಲದಿರುವುದು ಜಿಲ್ಲಾಡಳಿತದ ದಾಖಲೆಗಳಲ್ಲಿ ಕಂಡುಬಂದಿದೆ.ಇದನ್ನೂ ಓದಿ:-Joida |ಮೂಢನಂಬಿಕೆ ಭಯಕ್ಕೆ ಗ್ರಾಮ ತೊರೆದ ಗೌಳಿ ಕುಟುಂಬಗಳು-ಇಡೀ ಗ್ರಾಮಗಳೇ ಖಾಲಿ !

ಗ್ರಾಮ ತೊರೆಯಲು ಕಾರಣವೇನು?

ಜನರು ತಮ್ಮ ಮೂಲ ಗ್ರಾಮಗಳನ್ನು ತೊರೆಯಲು ಹಲವು ಕಾರಣಗಳಿವೆ ಎನ್ನಲಾಗುತ್ತಿದೆ. ಪ್ರಮುಖವಾಗಿ ಉದ್ಯೋಗದ ಕೊರತೆ, ಮೂಲಭೂತ ಸೌಕರ್ಯಗಳ ಅಭಾವ, ಸಾರಿಗೆ ಸಮಸ್ಯೆ ಹಾಗೂ ಅರಣ್ಯ ಪ್ರದೇಶದಲ್ಲಿನ ನಿರ್ಬಂಧಗಳು ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.ಇದನ್ನೂ ಓದಿ:-Uttara kannada-ಎರಡೂವರೆ ವರ್ಷದಲ್ಲಿ ₹26 ಕೋಟಿಗೂ ಹೆಚ್ಚು ದೋಚಿದ ಸೈಬರ್ ವಂಚಕರು

ಇದರ ಜೊತೆಗೆ ರಕ್ಷಿತ ಅರಣ್ಯ ಪ್ರದೇಶಗಳ ಘೋಷಣೆ, ಕೈಗಾ ಅಣುಸ್ಥಾವರ, ಜಲವಿದ್ಯುತ್ ಯೋಜನೆಗಳು ಹಾಗೂ ಇತರ ಅಭಿವೃದ್ಧಿ ಯೋಜನೆಗಳಿಂದ ಉಂಟಾದ ಸಮಸ್ಯೆಗಳೂ ಕೆಲವು ಗ್ರಾಮಗಳ ಜನವಸತಿ ಮೇಲೆ ಪರಿಣಾಮ ಬೀರಿದೆ.

ಜಿಲ್ಲೆಯ ಗಡಿ ಭಾಗದ ಕೆಲವು ಗ್ರಾಮಗಳ ಜನರು ಉದ್ಯೋಗಕ್ಕಾಗಿ ನೆರೆಯ ಗೋವಾ ಸೇರಿದಂತೆ ಇತರ ಪ್ರದೇಶಗಳನ್ನು ಅವಲಂಬಿಸಿರುವುದರಿಂದ, ವರ್ಷದಲ್ಲಿ ಕೆಲವೇ ಬಾರಿ ತಮ್ಮ ಮೂಲ ಗ್ರಾಮಗಳಿಗೆ ಮರಳುವ ಪರಿಸ್ಥಿತಿಯೂ ಇದೆ.

ಕಾರಣ ಪತ್ತೆಗೆ ಜಿಲ್ಲಾ ಪಂಚಾಯತ್ ನಿಂದ  ಅಧ್ಯಯನ.

Uttara Kannada Jilla Panchayat CEO
Uttara Kannada Jilla Panchayat CEO

37 ಗ್ರಾಮಗಳಲ್ಲಿ ಶೂನ್ಯ ಜನಸಂಖ್ಯೆ ದಾಖಲಾಗಿರುವ ಹಿನ್ನೆಲೆಯಲ್ಲಿ, ಜನರು ಗ್ರಾಮ ತೊರೆಯಲು ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಜಿಲ್ಲಾ ಪಂಚಾಯತ್ ಇದೀಗ ಅಧ್ಯಯನ ನಡೆಸಲು ಮುಂದಾಗಿದೆ.

ಈ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳ ಸ್ಥಿತಿ, ಉದ್ಯೋಗಾವಕಾಶಗಳು, ಅರಣ್ಯ ನಿಯಮಗಳು, ಅಭಿವೃದ್ಧಿ ಯೋಜನೆಗಳ ಪರಿಣಾಮ ಹಾಗೂ ಜನರ ವಲಸೆಗೆ ಕಾರಣವಾಗಿರುವ ಇತರ ಅಂಶಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತದೆ.ಕಾರಣ ಏನು ಎಂಬ ಪತ್ತೆಗೆ ಅಧ್ಯಯನ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ. ದಿಲೀಷ್ ಸಸಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಅಭಿವೃದ್ಧಿಯ ನಡುವೆಯೇ ಖಾಲಿಯಾಗುತ್ತಿರುವ ಗ್ರಾಮಗಳು.

ಉತ್ತರ ಕನ್ನಡದ 37 ಗ್ರಾಮಗಳಲ್ಲಿ ಶೂನ್ಯ ಜನಸಂಖ್ಯೆ ದಾಖಲಾಗಿರುವ ಖಾಲಿ ಗ್ರಾಮಗಳ ಚಿತ್ರ
ಜೋಯಿಡಾ ಭಾಗದಲ್ಲಿ ಕಾಲಿಯಾದ ಗ್ರಾಮದ ಚಿತ್ರ

ಒಂದೆಡೆ ಪ್ರವಾಸೋದ್ಯಮ, ಕೈಗಾರಿಕೆ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳ ಮೂಲಕ ಉತ್ತರ ಕನ್ನಡ ಜಿಲ್ಲೆ ಅಭಿವೃದ್ಧಿಯತ್ತ ಸಾಗುತ್ತಿದ್ದರೆ, ಮತ್ತೊಂದೆಡೆ ಜಿಲ್ಲೆಯ ಹಲವು ಗ್ರಾಮಗಳು ಜನವಸತಿ ಕಳೆದುಕೊಳ್ಳುತ್ತಿರುವುದು ಆತಂಕ ಮೂಡಿಸಿದೆ.

ವಿಶೇಷವಾಗಿ ಹಳಿಯಾಳ ಮತ್ತು ಮುಂಡಗೋಡು ಭಾಗದಲ್ಲಿ ಹೆಚ್ಚಿನ ಗ್ರಾಮಗಳು ಖಾಲಿಯಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಸಿ.ಇ.ಓ ದಿಲೀಷ್ ಸಸಿ ಮಾಹಿತಿ ನೀಡಿದ್ದಾರೆ.

ಮೂಲಭೂತ ಸೌಕರ್ಯ, ಉದ್ಯೋಗ ಮತ್ತು ಅಭಿವೃದ್ಧಿಯ ಕೊರತೆಯಿಂದ ಜನರು ಗ್ರಾಮ ತೊರೆಯುತ್ತಿದ್ದಾರೆಯೇ? ಅಥವಾ ಅರಣ್ಯ ನಿಯಮಗಳು ಮತ್ತು ವಿವಿಧ ಯೋಜನೆಗಳ ಪರಿಣಾಮವೇ ಜನವಲಸೆಗೆ ಕಾರಣವಾಗಿದೆಯೇ? ಎಂಬ ಪ್ರಶ್ನೆ ಇದೀಗ ಎದುರಾಗಿದೆ.

ಜಿಲ್ಲಾ ಪಂಚಾಯತ್ ನಡೆಸಲಿರುವ ಅಧ್ಯಯನದ ಬಳಿಕವೇ ಉತ್ತರ ಕನ್ನಡದ ಈ ‘ಶೂನ್ಯ ಜನಸಂಖ್ಯೆ’ ಗ್ರಾಮಗಳ ನೈಜ ಕಾರಣ ಮತ್ತಷ್ಟು ಸ್ಪಷ್ಟವಾಗಲಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement